ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅದಾನಿ ಸಮೂಹದ ಮೇಲೆ ಆರೋಪ: ಸೂಕ್ತ ತನಿಖೆ ಅನಿವಾರ್ಯ

Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಅಮೆರಿಕದ ನ್ಯೂಯಾರ್ಕ್‌ನ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ವರದಿಯೊಂದನ್ನು ಬಿಡುಗಡೆ ಮಾಡಿದ ನಂತರದಲ್ಲಿ ಭಾರತದ ಷೇರುಪೇಟೆಗಳಲ್ಲಿ ಬುಧವಾರ ಹಾಗೂ ಶುಕ್ರವಾರ ಕಂಡುಬಂದ ಕುಸಿತವು ಹಣಕಾಸು ಮಾರುಕಟ್ಟೆ ವ್ಯವಸ್ಥೆಯಲ್ಲಿನ ಅಪಾಯಗಳನ್ನು ಹಾಗೂ ಅವು ಬಾಹ್ಯ ಪ್ರಭಾವಗಳಿಗೆ ಹೇಗೆ ಬಾಗಬಲ್ಲವು ಎಂಬುದನ್ನು ತೋರಿಸಿದೆ. ಹಿಂಡನ್‌ಬರ್ಗ್‌ ರಿಸರ್ಚ್‌ ಪ್ರಕಟಿಸಿರುವ ವರದಿಯು ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಬಗ್ಗೆ ಟೀಕೆಗಳನ್ನು, ಆರೋಪಗಳನ್ನು ಮಾಡಿದೆ. ಆದರೆ, ಈ ವರದಿ ಬಹಿರಂಗವಾದ ನಂತರದಲ್ಲಿ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರುಮೌಲ್ಯ ಮಾತ್ರವಲ್ಲದೆ, ದೇಶದ ಷೇರುಪೇಟೆಗಳಲ್ಲಿ ನೋಂದಾಯಿತವಾಗಿರುವ ಇತರ ಕೆಲವು ಕಂಪನಿಗಳ ಷೇರುಮೌಲ್ಯ ಕೂಡ ಕುಸಿದಿದೆ. ಎರಡು ದಿನಗಳ ವಹಿವಾಟಿನಲ್ಲಿ ಷೇರುಪೇಟೆಯು ಶೇಕಡ 3ರಷ್ಟು ಕುಸಿಯಿತು. ಷೇರುಪೇಟೆ ಸೂಚ್ಯಂಕಗಳು ಇಷ್ಟು ಕುಸಿದಿದ್ದಕ್ಕೆ ಒಂದು ಮುಖ್ಯ ಕಾರಣ ಈ ವರದಿ ಎಂಬುದು ಸ್ಪಷ್ಟ. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ ಭಾರಿ ಕುಸಿತ ಕಂಡಿತು. ಅಲ್ಲದೆ, ಅದಾನಿ ಸಮೂಹಕ್ಕೆ ಸಾಲ ನೀಡಿರುವ, ಸಮೂಹದಲ್ಲಿ ಹೂಡಿಕೆ ಮಾಡಿರುವ ಎಸ್‌ಬಿಐ ಹಾಗೂ ಎಲ್‌ಐಸಿಯಂತಹ ಕಂಪನಿಗಳ ಷೇರುಮೌಲ್ಯ ಕೂಡ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ. ವರದಿಯ ಪರಿಣಾಮವು ದೇಶದ ಷೇರುಪೇಟೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ, ಅದಾನಿ ಸಮೂಹದ ಕಂಪನಿಗಳು ಸಕ್ರಿಯವಾಗಿರುವ ಇತರ ಹಲವು ವಲಯಗಳ ಮೇಲೆಯೂ ಇದು ಪರಿಣಾಮ ಉಂಟುಮಾಡಬಹುದು.

ಅದಾನಿ ಸಮೂಹವು ‘ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ಲಜ್ಜೆಯಿಲ್ಲದೆ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಆರೋಪ ಮಾಡಿದೆ. ಸಮೂಹವು ಶೆಲ್ ಕಂಪನಿಗಳ ಮೂಲಕ, ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ಸಾಗರದಾಚೆಯ ನಾಡುಗಳನ್ನು ‘ಸರಿಯಲ್ಲದ ರೀತಿಯಲ್ಲಿ’ ಬಳಸಿಕೊಂಡಿದೆ ಎಂದು ಕೂಡ ಅದು ಆರೋಪಿಸಿದೆ. ಅದಾನಿ ಸಮೂಹಕ್ಕೆ ಸೇರಿದ, ಷೇರುಪೇಟೆ ನೋಂದಾಯಿತ ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಇಡೀ ಸಮೂಹದ ಹಣಕಾಸಿನ ಸ್ಥಿತಿ ಅಪಾಯದಲ್ಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. ‘ತಪ್ಪು ಮಾಹಿತಿ, ಆಧಾರವಿಲ್ಲದ ಹಾಗೂ ವಿಶ್ವಾಸಾರ್ಹವಲ್ಲದ ಮಾಹಿತಿಯನ್ನು ಕೆಟ್ಟ ಉದ್ದೇಶದಿಂದ ಒಗ್ಗೂಡಿಸಿ ಈ ವರದಿ ಸಿದ್ಧಪಡಿಸಲಾಗಿದೆ’ ಎಂದು ಈ ವರದಿಯ ಬಗ್ಗೆ ಅದಾನಿ ಸಮೂಹ ಪ್ರತಿಕ್ರಿಯಿಸಿದೆ. ಸಮೂಹದ ಪ್ರಮುಖ ಕಂಪನಿಯಾಗಿರುವ ಅದಾನಿ ಎಂಟರ್‌‍ಪ್ರೈಸಸ್‌ನ ಷೇರು ಮಾರಾಟ ಪ್ರಕ್ರಿಯೆಯ (ಎಫ್‌ಪಿಒ) ಸಂದರ್ಭದಲ್ಲಿ ಬಿಡುಗಡೆ ಆಗಿರುವ ವರದಿಯು ‘ಕೆಡುಕು ಉಂಟುಮಾಡುವ ಉದ್ದೇಶ ಹೊಂದಿದೆ’ ಎಂದು ಕೂಡ ಸಮೂಹ ಹೇಳಿದೆ. ವರದಿ ಬಿಡುಗಡೆ ಆಗಿರುವ ಸಂದರ್ಭವು ಎಫ್‌ಪಿಒ ಪ್ರಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಆದರೆ ಇದನ್ನೇ ಆಧಾರವಾಗಿ ಇರಿಸಿಕೊಂಡು ವರದಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗದು. ಅದಾನಿ ಸಮೂಹದ ಕುರಿತು ಕಳವಳಗಳು ವ್ಯಕ್ತವಾಗಿರುವುದು ಇದೇ ಮೊದಲೇನೂ ಅಲ್ಲ. ಹಣಕಾಸು ವಲಯದಲ್ಲಿ ಹೆಸರು ಸಂಪಾದಿಸಿರುವ ಕ್ರೆಡಿಟ್‌ಸೈಟ್ಸ್‌ ಸಂಸ್ಥೆಯು ಕೆಲವು ತಿಂಗಳ ಹಿಂದೆ, ‘ಸಮೂಹದ ಸಾಲ ಹೆಚ್ಚಿನ ಮಟ್ಟದಲ್ಲಿದೆ’ ಎಂದು ಹೇಳಿತ್ತು. ಖಾಸಗಿ ಮ್ಯೂಚುವಲ್‌ ಫಂಡ್‌ ಕಂಪನಿಗಳು ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿಲ್ಲ. ಆದರೆ, ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಂಗಸಂಸ್ಥೆಗಳು ಅದಾನಿ ಸಮೂಹದ ಕಂಪನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿವೆ. ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿಯುತ್ತಿದ್ದ ಹೊತ್ತಿನಲ್ಲಿಯೂ ಎಲ್‌ಐಸಿ, ಸಮೂಹದ ಕಂಪನಿಯಲ್ಲಿ ಹೂಡಿಕೆ ಹೆಚ್ಚಿಸಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಮಾಡಿರುವ ಆರೋಪಗಳ ಕುರಿತು ಗಂಭೀರ ತನಿಖೆ ಆಗಬೇಕು. ಆರೋಪಗಳಲ್ಲಿ ಹುರುಳಿದೆಯೇ ಎಂಬ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಯಬೇಕು. ಅದಾನಿ ಸಮೂಹದ ಪ್ರವರ್ತಕರ ಕುಟುಂಬವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತಿರವಾಗಿದೆ ಎಂಬ ವರದಿಗಳು ಇವೆ. ಸಮೂಹವು ಈಚಿನ ಕೆಲವು ವರ್ಷಗಳಲ್ಲಿ ಅಸಾಧಾರಣ ಬೆಳವಣಿಗೆ ಕಂಡಿರುವುದಕ್ಕೂ, ಈ ಸಂಬಂಧಕ್ಕೂ ನಂಟು ಇದೆ ಎಂಬ ಮಾತು ಕೂಡ ಇದೆ. ಆದರೆ ಇವೆಲ್ಲ ತನಿಖೆಯ ಮೇಲೆ ಪ್ರಭಾವ ಬೀರಬಾರದು. ಇದು ಹೂಡಿಕೆದಾರರ ಹಣ ಹಾಗೂ ಎಲ್‌ಐಸಿ ಮತ್ತು ಎಸ್‌ಬಿಐನಂತಹ ಕಂಪನಿಗಳಲ್ಲಿ ಇರುವ ಸಾರ್ವಜನಿಕರ ಹಣಕ್ಕೆ ಸಂಬಂಧಿಸಿದ ವಿಚಾರ. ಅದಾನಿ ಸಮೂಹಕ್ಕೆ ನೆರವು ಒದಗಿಸಲು ಈ ಸಂಸ್ಥೆಗಳನ್ನು ಬಳಸಿಕೊಳ್ಳಬಾರದು. ವಾಣಿಜ್ಯ ವಹಿವಾಟಿನ ಸಂದರ್ಭದಲ್ಲಿ ಪಾಲನೆಯಾಗುವ ನೀತಿ–ನಿಯಮಗಳು, ಕಾರ್ಪೊರೇಟ್ ನಿಯಮಗಳು ಹಾಗೂ ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ಪ್ರಶ್ನೆ ಕೂಡ ಈ ಪ್ರಕರಣದಲ್ಲಿದೆ. ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ಹೇಗೆ ನಡೆದುಕೊಳ್ಳುತ್ತವೆ ಎಂಬುದು ದೇಶದ ಪ್ರತಿಷ್ಠೆಯ ಮೇಲೆಯೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT