ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಜಿಡಿಪಿ ಸಮೃದ್ಧ ಬೆಳವಣಿಗೆಯ ಜೊತೆಗೆ ಹಲವು ಸಮಸ್ಯೆಗಳೂ ಇವೆ

Published 4 ಜೂನ್ 2024, 0:29 IST
Last Updated 4 ಜೂನ್ 2024, 0:29 IST
ಅಕ್ಷರ ಗಾತ್ರ

ಕಳೆದ ಆರ್ಥಿಕ ವರ್ಷದಲ್ಲಿ (2023–24) ಭಾರತದ ಆರ್ಥಿಕತೆಯು ಶೇಕಡ 8.2ರಷ್ಟು ಸಮೃದ್ಧವಾದ ಬೆಳವಣಿಗೆ ದಾಖಲಿಸಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಈ ಹಿಂದೆ ಮಾಡಿದ್ದ ಅಂದಾಜು ಮತ್ತು ಈ ಹಿಂದಿನ ನಿರೀಕ್ಷೆಗಳಿಗೆ ಅನುಗುಣವಾಗಿಯೇ ಆರ್ಥಿಕ ಬೆಳವಣಿಗೆ ದಾಖಲಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಶೇ 7ರಷ್ಟು ಬೆಳವಣಿಗೆಯನ್ನು ಅಂದಾಜಿಸಿದ್ದರೆ, ಎನ್‌ಎಸ್‌ಒ ಶೇ 7.6ರಷ್ಟು ಬೆಳವಣಿಗೆ ಆಗಬಹುದು ಎಂಬ ಮುನ್ನೋಟವನ್ನು ಕೊಟ್ಟಿತ್ತು. ಕೊನೆಯ ತ್ರೈಮಾಸಿಕದಲ್ಲಿ ಶೇ 5.9ರಷ್ಟು ಬೆಳವಣಿಗೆ ಮಾತ್ರ ಸಾಧ್ಯ ಎಂದು ಎನ್‌ಎಸ್‌ಒ ಅಂದಾಜಿಸಿತ್ತು. ಆದರೆ, ನಾಲ್ಕನೇ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಬೆಳವಣಿಗೆ ಸಾಧ್ಯವಾಗಿದ್ದರಿಂದ ಇಡೀ ವರ್ಷದ ಸರಾಸರಿ ಬೆಳವಣಿಗೆ ಏರಿಕೆಯಾಗುವುದು ಸಾಧ್ಯವಾಗಿದೆ. ಈ ಮಟ್ಟದ ಬೆಳವಣಿಗೆಯಿಂದಾಗಿ ದೇಶವು ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ ಮುಂಚೂಣಿ ಸಾಲಿನಲ್ಲಿ ನಿಲ್ಲುವುದು ಸಾಧ್ಯವಾಗಿದೆ. ಶೇ 7ಕ್ಕಿಂತ ಹೆಚ್ಚಿನ ಬೆಳವಣಿಗೆಯು ಸತತ ಮೂರು ವರ್ಷ ಸಾಧ್ಯವಾಗಿದೆ. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಮೌಲ್ಯವು ₹ 173.82 ಲಕ್ಷ ಕೋಟಿಯಷ್ಟಾಗಿದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಮೊತ್ತವು ₹ 160.71 ಲಕ್ಷ ಕೋಟಿಯಷ್ಟಾಗಿತ್ತು. ಒಟ್ಟು ಮೌಲ್ಯವರ್ಧನೆಯ (ಜಿವಿಎ) ಬೆಳವಣಿಗೆಯು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.3ರಷ್ಟಿದ್ದರೆ, ಇಡೀ ವರ್ಷದಲ್ಲಿ ಶೇ 7.2ರಷ್ಟಾಗಿದೆ. 

ದತ್ತಾಂಶವನ್ನು ಪ್ರತ್ಯೇಕಗೊಳಿಸಿ ನೋಡಿದರೆ, ಆರ್ಥಿಕತೆ, ಅದರ ಶಕ್ತಿ ಮತ್ತು ಸಮಸ್ಯೆಗಳ ಹೆಚ್ಚು ಸಮರ್ಪಕವಾದ ಚಿತ್ರಣ ದೊರಕುತ್ತದೆ. ತಯಾರಿಕಾ ಕ್ಷೇತ್ರವು ಉತ್ತಮ ಬೆಳವಣಿಗೆ ದಾಖಲಿಸಿದೆ. ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಸ್ವಲ್ಪ ಕಡಿಮೆಯಾದರೂ ಶೇ 10ರವರೆಗೆ ಬೆಳವಣಿಗೆ ದಾಖಲಿಸಿದೆ. ನಿರ್ಮಾಣ ಚಟುವಟಿಕೆ, ಸಿಮೆಂಟ್‌ ಮತ್ತು ಉಕ್ಕು ಬಳಕೆ ಉತ್ತಮವಾಗಿದೆ. ಆದರೆ, ಹೆಚ್ಚು ಉದ್ಯೋಗ ಸೃಷ್ಟಿಸುವ ಚಿಲ್ಲರೆ ವ್ಯಾಪಾರ, ಹೋಟೆಲ್‌ ಮತ್ತು ಸಾರಿಗೆಯ ಬೆಳವಣಿಗೆ ಮಂದಗತಿಯಲ್ಲಿದೆ. ಕೃಷಿಯ ಬೆಳವಣಿಗೆಯು ಈ ಹಿಂದಿನ ತ್ರೈಮಾಸಿಕಗಳ ರೀತಿಯಲ್ಲಿ ಕಳಪೆಯಾಗಿಯೇ ಇದೆ. ನಾಲ್ಕನೇ
ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಶೇ 0.6ರಷ್ಟು ಮಾತ್ರ. ಮೂರನೇ ತ್ರೈಮಾಸಿಕದಲ್ಲಿ ಶೇ 0.4ರಷ್ಟು ದಾಖಲಾಗಿತ್ತು. ಕಳೆದ ವರ್ಷ ದೇಶದ ಬಹುಭಾಗಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಇದಕ್ಕೆ ಮುಖ್ಯವಾದ ಕಾರಣ. 

ದತ್ತಾಂಶವನ್ನು ಹೆಚ್ಚು ವಿವರವಾಗಿ ಗಮನಿಸಬೇಕಾದ ಅಗತ್ಯ ಇದೆ. ಹಾಗೆ ಮಾಡಿದಾಗ, ಆರ್ಥಿಕತೆಯ ಶಕ್ತಿಯ ಜೊತೆಗೆ, ಹೆಚ್ಚು ಗಮನ ಹರಿಸಬೇಕಾದ ವಲಯಗಳೂ ಗಮನಕ್ಕೆ ಬರುತ್ತವೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ 20ರಷ್ಟು ಭಾರಿ ಏರಿಕೆ ಮತ್ತು ಸಹಾಯಧನ ಪಾವತಿಯು ಕಡಿಮೆ ಆಗಿರುವುದು ಜಿಡಿಪಿ ಬೆಳವಣಿಗೆ ಏರಿಕೆಯ ಹಿಂದಿನ ಮುಖ್ಯ ಕಾರಣ. ಜಿಡಿಪಿ ಮತ್ತು ಜಿವಿಎ ಮಧ್ಯೆ ಸಮತೋಲನ ಇಲ್ಲದಿರುವುದು ಇದನ್ನೇ ಸೂಚಿಸುತ್ತದೆ. ಲೋಕಸಭೆಗೆ 2019ರಲ್ಲಿ ಚುನಾವಣೆ ನಡೆಯುವುದಕ್ಕೆ ಮುಂಚೆಯೂ ಜಿಡಿಪಿ ಬೆಳವಣಿಗೆಯಲ್ಲಿ ಇದೇ ಪ್ರವೃತ್ತಿ ದಾಖಲಾಗಿತ್ತು ಎಂಬುದನ್ನೂ ಗಮನಿಸಬೇಕು. ಹೂಡಿಕೆಯ ಏರಿಕೆಯು ಆರೋಗ್ಯಕರ ಗತಿಯಲ್ಲಿಯೇ ಇದೆ; ಆದರೆ, ಗ್ರಾಹಕ ಬಳಕೆ ವಸ್ತುಗಳಿಗಾಗಿ ಮಾಡುವ ವೆಚ್ಚದ ಬೆಳವಣಿಗೆಯು ಕಳವಳಕಾರಿ ಮಟ್ಟದಲ್ಲಿ ಇದೆ ಎಂಬುದು ಆರ್ಥಿಕತೆಯ ದೊಡ್ಡ ಸಮಸ್ಯೆಯಾಗಿದೆ. 2023–24ರಲ್ಲಿ ಈ ದರವು ಶೇ 4ರಷ್ಟು ಇತ್ತು. ಇದು 12 ವರ್ಷಗಳಲ್ಲಿಯೇ ಕನಿಷ್ಠ. ಉದ್ಯೋಗದ ಸ್ಥಿತಿಗತಿ, ಗ್ರಾಮೀಣ ಪ್ರದೇಶದಲ್ಲಿ ಆದಾಯ ಕಡಿಮೆಯಾಗಿರುವುದು, ಬೇಡಿಕೆ ಕುಸಿತ, ಹಣದುಬ್ಬರದ ಒತ್ತಡಗಳು ಎಲ್ಲವನ್ನೂ ಇದು ಪ್ರತಿಫಲಿಸುತ್ತದೆ. ಮುಂದಿನ ದಿನಗಳಲ್ಲಿ ಅರ್ಥಿಕತೆಯು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಮುಂಗಾರು ಮಳೆ ಮತ್ತು ಕೇಂದ್ರ ಸರ್ಕಾರದ ಬಜೆಟ್‌ ನಿರ್ಧರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT