ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ರಾಷ್ಟ್ರೀಯ ಪೌರತ್ವದುಡುಕಿನ ನಡೆ ಸಲ್ಲದು

Last Updated 31 ಜುಲೈ 2018, 19:30 IST
ಅಕ್ಷರ ಗಾತ್ರ

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಎರಡನೆಯ ಮತ್ತು ಅಂತಿಮ ಕರಡು ಪ್ರಕಟವಾಗಿದೆ. 40.07 ಲಕ್ಷ ಜನರ ಹೆಸರು ಈ ಪಟ್ಟಿಯಲ್ಲಿ ಸೇರಿಲ್ಲ. ಪರಿಣಾಮವಾಗಿ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳು ಭುಗಿಲೇಳುವ ಸುಳಿವನ್ನು ಕಾಣಲಾಗಿದೆ. ಭಯ, ಅನಿಶ್ಚಯತೆ, ಕಳವಳ, ಸಂದೇಹಗಳು ತಲೆಯೆತ್ತಿವೆ. ಅಸ್ಸಾಂ ರಾಜ್ಯದಲ್ಲಿನ ಎಲ್ಲ ಭಾರತೀಯ ಪೌರರ ಹೆಸರುಗಳು, ವಿಳಾಸಗಳು ಹಾಗೂ ಭಾವಚಿತ್ರಗಳನ್ನು ಈ ಕರಡು ಒಳಗೊಂಡಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಸಮಿತಿಯೊಂದು ಈ ಪೌರರನ್ನು ಗುರುತಿಸಿತ್ತು. 1971ರ ಮಾರ್ಚ್ 24ಕ್ಕೆ ಮುನ್ನ ಅಸ್ಸಾಂನಲ್ಲಿ ವಾಸವಿದ್ದವರನ್ನು ಪೌರರೆಂದು ಗುರುತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅಸ್ಸಾಂ ಒಡಂಬಡಿಕೆಯಲ್ಲಿ ಒಪ್ಪಿತವಾಗಿದ್ದ ತೇದಿಯಿದು. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಉಳ್ಳ ಏಕೈಕ ರಾಜ್ಯ ಅಸ್ಸಾಂ. ಪೂರ್ವ ಪಾಕಿಸ್ತಾನದಿಂದ 1951ರಲ್ಲಿ ಭಾರೀ ವಲಸೆ ಜರುಗಿದ ಸಂದರ್ಭದಲ್ಲಿ ಮೊದಲ ಎನ್‌ಆರ್‌ಸಿ ತಯಾರಿಸಲಾಗಿತ್ತು. ಅಂದಿನ ದಿನಗಳಲ್ಲಿಯೂ ಅಕ್ರಮ ವಲಸೆ ಅಸ್ಸಾಮಿನ ಬಹುದೊಡ್ಡ ವಿವಾದಾಸ್ಪದ ವಿಷಯ ಆಗಿತ್ತು. ಎನ್‌ಆರ್‌ಸಿ ಮತ್ತು ಅಕ್ರಮ ವಲಸೆಗಾರರ ಪ್ರಶ್ನೆಯು ರಾಜ್ಯದಲ್ಲಿ ರಾಜಕೀಯ ಬೆಂಕಿ ಹಚ್ಚಿ ದಶಕಗಳೇ ಉರುಳಿವೆ. ಈ ವಿಷಯ ಕುರಿತು ಚಳವಳಿ ನಡೆಸಿದ ಅಖಿಲ ಭಾರತ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಅಕ್ರಮ ವಲಸೆಗಾರರನ್ನು ಗುರುತಿಸಿ ಅವರವರ ದೇಶಗಳಿಗೆ ವಾಪಸು ಕಳಿಸಲಾಗುವುದು ಎಂಬ ಆಶ್ವಾಸನೆ ನೀಡುವ ಒಪ್ಪಂದವೊಂದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ 1985ರಲ್ಲಿ ನಡೆದಿತ್ತು. 2005ರ ತನಕ ಈ ದಿಸೆಯಲ್ಲಿ ಯಾವುದೇ ಕ್ರಮ ಜರುಗಲಿಲ್ಲ. ಆಳುವ ಪಕ್ಷಗಳು ಮತ್ತು ಪ್ರತಿಪಕ್ಷಗಳ ನಡುವಣ ರಾಜಕೀಯದ ಗ್ರಾಸವಾಯಿತು ಈ ವಿಷಯ. 2015ರ ತನಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೈ ಕಟ್ಟಿ ಕುಳಿತಿತು. ಈ ನಡುವೆ ಬೋಡೋ ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂಗಾಳಿ ಮುಸ್ಲಿಮರು ಮತ್ತು ಆದಿವಾಸಿಗಳ ನಡುವೆ ದ್ವೇಷದ ಘರ್ಷಣೆಗಳು ಜರುಗಿ ಸಾಕಷ್ಟು ಸಂಖ್ಯೆಯ ಜೀವಗಳು ಬಲಿಯಾದವು. ಎನ್‌ಆರ್‌ಸಿ ಪರಿಷ್ಕರಣೆಗೆ ಕಾಲಮಿತಿ ಗೊತ್ತುಪಡಿಸಿ ಸುಪ್ರೀಂ ಕೋರ್ಟ್ 2015ರಲ್ಲಿ ಆದೇಶ ನೀಡಿತು. 2016ರಲ್ಲಿ ಅಸ್ಸಾಂ ಅಧಿಕಾರ ಸೂತ್ರ ಬಿಜೆಪಿ ವಶವಾಯಿತು. ಪರಿಷ್ಕರಣೆಯ ಕೆಲಸ ಚುರುಕಾಯಿತು. ಸುಪ್ರೀಂ ಕೋರ್ಟ್ ಚಾವಟಿ ಝಳಪಿಸಿದ ನಂತರ ಇದೇ ಜುಲೈ 30ರಂದು ಪರಿಷ್ಕರಣೆಯ ಕೆಲಸ ಪೂರ್ಣಗೊಂಡಿತು. ಪೌರತ್ವಕ್ಕಾಗಿ ಮನವಿ ಸಲ್ಲಿಸಿ ಒಟ್ಟು 3.29 ಅರ್ಜಿಗಳು ಬಂದಿದ್ದವು. ಸುಮಾರು 40 ಲಕ್ಷ ಮಂದಿ ಪೌರತ್ವ ಯಾದಿಯಿಂದ ಹೊರಗುಳಿದಿದ್ದಾರೆ. ಇವರ ಗತಿ ಏನು ಎಂಬ ಕಳವಳ ವ್ಯಕ್ತವಾಗುತ್ತಿದೆ. ಆದರೆ ಹೊರಗುಳಿದಿರುವವರು ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಅರ್ಜಿಗಳ ವಿಚಾರಣೆ ನಡೆಸಿ, ದಾಖಲೆ ದಸ್ತಾವೇಜುಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ಆ ನಂತರವೂ ಹೊರಗುಳಿಯುವವರ ಭವಿಷ್ಯವೇನು? ಸೆರೆವಾಸದ ಶಿಬಿರಗಳಿಗೆ ನೂಕುವುದೇ ಅಥವಾ ದೇಶದಿಂದ ಹೊರ ಹಾಕುವುದೇ?

ಅನ್ನ, ನೀರು ಮತ್ತು ಜಮೀನಿನಂತಹ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನಡೆದಿರುವ ಈ ಮಾನವ ಸಂಘರ್ಷ ಕೇವಲ ಅಸ್ಸಾಮ್‌ಗೆ ಸೀಮಿತ ಅಲ್ಲ. ಹೊಸ ನೆಲ, ಹೊಸ ಸೂರನ್ನು ನಿತ್ಯ ಅರಸತೊಡಗಿರುವ ನಿರಾಶ್ರಿತರ ಸಂಖ್ಯೆ ಜಗತ್ತಿನಾದ್ಯಂತ ಕೋಟಿಗಳ ಸಂಖ್ಯೆ ಮುಟ್ಟಿದೆ. ನಿರಾಶ್ರಿತರನ್ನು ನೋಡುವ ಬಗೆ ಬದಲಾಗುತ್ತಿರುವ ಇಂದಿನ ದಿನಮಾನದಲ್ಲಿ ಲಕ್ಷಾಂತರ ಮಂದಿಯನ್ನು ದೇಶದಿಂದ ಹೊರಹಾಕುವುದು ಸುಲಭ ಅಲ್ಲ. ಈ ಕ್ರಮ ರಾಷ್ಟ್ರೀಯ- ಅಂತರರಾಷ್ಟ್ರೀಯ ಸಾಧಕ ಬಾಧಕಗಳಿಂದ ಹೊರತಲ್ಲ.
ತಮ್ಮ ಜಮೀನು ಉದ್ಯೋಗಗಳನ್ನು ಬಾಂಗ್ಲಾದೇಶಿ ವಲಸೆಗಾರರು ಕಿತ್ತುಕೊಂಡು ತಮ್ಮ ಸಂಸ್ಕೃತಿಯನ್ನು ಅಳಿಸಿ ಹಾಕುತ್ತಾರೆಂಬ ಭಯ ಅಸ್ಸಾಮಿ ಜನರನ್ನು ದೀರ್ಘಕಾಲದಿಂದ ಕಾಡಿದೆ. ಭಾವನೆಗಳನ್ನು ಮಾನ್ಯ ಮಾಡಬೇಕೆಂಬಲ್ಲಿ ಎರಡು ಮಾತಿಲ್ಲ. ಆದರೆ ಮೂಲಭೂತವಾಗಿ ಇದೊಂದು ಮಾನವೀಯ ಸಮಸ್ಯೆ ಎಂಬುದನ್ನು ಮರೆಯುವಂತಿಲ್ಲ. ಯಾವುದೇ ದುಡುಕಿನ ನಡೆಯು ಧರ್ಮಾಂಧತೆ ಮತ್ತು ಜನಾಂಗೀಯ ಕಲಹಗಳಿಗೆ ದಾರಿ ಮಾಡಿಕೊಟ್ಟೀತು. ವಲಸೆಯ ಐತಿಹಾಸಿಕ ವಾಸ್ತವಗಳನ್ನು ಪರಿಗಣಿಸಿ ನ್ಯಾಯಯುತ ಪರಿಹಾರ ರೂಪಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT