ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ‘ಕ್ಯಾಪಿಟಲ್‌’ ಮೇಲೆ ಆಕ್ರಮಣ ಪ್ರಜಾಪ್ರಭುತ್ವಕ್ಕೆ ಬಿದ್ದ ಹೊಡೆತ

Last Updated 8 ಜನವರಿ 2021, 19:30 IST
ಅಕ್ಷರ ಗಾತ್ರ

ಅತಿಕ್ರಮಣಕಾರರನ್ನು ನಾಲ್ಕು ತಾಸುಗಳಲ್ಲಿ ತೆರವು ಮಾಡಲಾಗಿದೆ. ಆದರೆ, ಈ ವಿದ್ಯಮಾನ ಉಂಟುಮಾಡಿರುವ ಗಾಯ ಮಾಯಲು ದೀರ್ಘ ಕಾಲ ಬೇಕಾಗಬಹುದು.

ಜಗತ್ತಿನಲ್ಲಿ ಈಗ ಇರುವ ಆಡಳಿತ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯುತ್ತಮವಾದುದು. ಒಬ್ಬ ವ್ಯಕ್ತಿಯ ಇಷ್ಟಾನಿಷ್ಟಗಳು, ಚಪಲಗಳಿಗೆ ಪ್ರಜಾಪ್ರಭುತ್ವವು ತಲೆ ಬಾಗುವುದಿಲ್ಲ ಮತ್ತು ಬಾಗಬಾರದು. ಅಮೆರಿಕದ ಸಂಸತ್ತಿನ (ಕ್ಯಾ‍ಪಿಟಲ್‌) ಮೇಲೆ ಸಾವಿರಾರು ಜನರಿದ್ದ ಗುಂಪು ಬುಧವಾರ ನಡೆಸಿದ ಆಕ್ರಮಣವು ಜಗತ್ತಿಗೆ ಆಘಾತವುಂಟು ಮಾಡಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಈ ದಾಳಿಗೆ ಕುಮ್ಮಕ್ಕು ನೀಡಿದ ವ್ಯಕ್ತಿ ಎನ್ನುವುದು ಘಟನೆಯ ತೀವ್ರತೆಯನ್ನು ಹೆಚ್ಚಿಸಿದೆ. ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಅವರು ಎಲೆಕ್ಟೊರಲ್‌ ಮತಗಳು ಮತ್ತು ಜನರ ಮತಗಳು ಎರಡರಲ್ಲಿಯೂ ಸೋತಿದ್ದಾರೆ. ಆದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ, ತಮಗೆ ವಂಚನೆಯಾಗಿದೆ ಎಂದು ಮತ ಎಣಿಕೆ ಆರಂಭವಾದಾಗಿನಿಂದಲೇ ಅವರು ಹೇಳಲು ಆರಂಭಿಸಿದ್ದರು. ನಂತರದ ದಿನಗಳಲ್ಲಿ ಈ ಆರೋಪವನ್ನು ಅವರು ನೂರಾರು ಬಾರಿ ಪುನರುಚ್ಚರಿಸಿದ್ದಾರೆ; ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವಾಗಿಸಬಹುದು ಎಂದು ಅವರು ನಂಬಿದಂತೆ ಕಾಣಿಸುತ್ತದೆ. ಈ ಆರೋಪವು ಸತ್ಯವಾಗದೇ ಹೋದರೂ ಟ್ರಂಪ್‌ ಅವರ ಬೆಂಬಲಿಗರು ಅದನ್ನೇ ನಿಜವೆಂದು ನಂಬಿದ್ದಾರೆ ಎಂಬುದನ್ನು ಬುಧವಾರದ ದಾಳಿಯು ಸೂಚಿಸುತ್ತದೆ. ತಮಗೆ ಹಿನ್ನಡೆ ಆಗಿರುವ ರಾಜ್ಯಗಳ ಫಲಿತಾಂಶದ ಮರುಪರಿಶೀಲನೆಗೆ ಆದೇಶಿಸುವಂತೆ ಉಪಾಧ್ಯಕ್ಷ ಮತ್ತು ಸೆನೆಟ್‌ ಸಭಾಪತಿ ಮೈಕ್‌ ಪೆನ್ಸ್‌ ಅವರನ್ನು ಟ್ರಂಪ್‌ ಕೋರಿದ್ದರು. ಆದರೆ, ಪೆನ್ಸ್ ಇದನ್ನು ತಿರಸ್ಕರಿಸಿದರು. ಬಳಿಕ, ತಮ್ಮ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್‌, ‘ಕ್ಯಾಪಿಟಲ್‌’ಗೆ ಮುತ್ತಿಗೆ ಹಾಕಿ, ಪೆನ್ಸ್‌ ಮತ್ತು ಇತರ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವಂತೆ ಕುಮ್ಮಕ್ಕು ನೀಡಿದರು. ಅದಾದ ಬಳಿಕವೇ ಆಯುಧಗಳನ್ನು ಹಿಡಿದ ಉನ್ಮತ್ತ ಗುಂಪು ಕ್ಯಾಪಿಟಲ್‌ಗೆ ನುಗ್ಗಿದೆ. ಚುನಾವಣೆಯಲ್ಲಿ ಜೋ ಬೈಡನ್‌ ಅವರ ಗೆಲುವನ್ನು ದೃಢೀಕರಿಸುವ ಪ್ರಕ್ರಿಯೆ ಆಗ ಸಂಸತ್ತಿನಲ್ಲಿ ನಡೆಯುತ್ತಿತ್ತು. ಯಾವುದೇ ರೀತಿಯಲ್ಲಿ ಆ ಪ್ರಕ್ರಿಯೆಯನ್ನು ತಡೆಯುವುದು ಎಂದರೆ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಯತ್ನಿಸುವುದು ಎಂದೇ ಅರ್ಥ.

ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರವನ್ನು ತಮ್ಮ ಕೈಯಲ್ಲಿಯೇ ಉಳಿಸಿಕೊಳ್ಳಲು ಟ್ರಂಪ್‌ ಬಯಸಿದ್ದರೇ ಎಂಬ ಗಂಭೀರ ಪ್ರಶ್ನೆ ಈಗ ಜಗತ್ತಿನ ಮುಂದೆ ಇದೆ. ಈ ಹಿಂದಿನ ಘಟನಾವಳಿಗಳನ್ನು ಗಮನಿಸಿದರೆ ಅಂತಹ ಅನುಮಾನಕ್ಕೆ ಪುಷ್ಟಿ ದೊರೆಯುತ್ತದೆ. ಕನ್ಸಾಸ್‌, ನೆವಾಡಾ, ನ್ಯೂ ಮೆಕ್ಸಿಕೊ, ಮಿನ್ನೆಸೋಟ, ಕೊಲೆರಾಡೊ ರಾಜ್ಯಗಳಲ್ಲಿಯೂ ಶಾಸಕಾಂಗ ಕಚೇರಿಯ ಮೇಲೆ ಟ್ರಂಪ್‌ ಬೆಂಬಲಿಗರ ಆಕ್ರಮಣ ನಡೆದಿದೆ. ಸೇನೆಯನ್ನು ರಾಜಕೀಯಕ್ಕೆ ಎಳೆದು ತರಬಾರದು ಎಂದು ಅಮೆರಿಕದ ರಕ್ಷಣಾ ಇಲಾಖೆಯ ಹಲವು ಮಾಜಿ ಕಾರ್ಯದರ್ಶಿಗಳು ಇತ್ತೀಚೆಗೆ ಟ್ರಂಪ್‌ ಅವರಿಗೆ ಹೇಳಿದ್ದರು. ಕ್ಷಿಪ್ರಕ್ರಾಂತಿಯ ಸುಳಿವುಗಳು ಅಲ್ಲಿ ಇಲ್ಲಿ ಹೀಗೆ ಕಾಣಿಸಿದ್ದು ಹೌದು. ಜಗತ್ತಿನ ಅತ್ಯಂತ ಪ್ರಭಾವಿ ದೇಶದ ಅಧ್ಯಕ್ಷರೇ ಈ ರೀತಿ ವರ್ತಿಸುವುದು ಬಹಳ ಅಪಾಯಕಾರಿ. ಈ ತಿಂಗಳ 20ರವರೆಗೆ ಟ್ರಂಪ್‌ ಅವರೇ ಅಧ್ಯಕ್ಷರಾಗಿ ಇರುತ್ತಾರೆ. ಅವರ ಕೈಯಲ್ಲಿ ಅಪಾರವಾದ ಅಧಿಕಾರವೂ ಇರುತ್ತದೆ. ತೀವ್ರ ಅಧಿಕಾರದಾಹದ ವ್ಯಕ್ತಿ ಪ್ರಜಾಪ್ರಭುತ್ವಕ್ಕೆ ಲಾಯಕ್ಕಲ್ಲ ಮತ್ತು ಅಂಥವರು ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಎಷ್ಟು ಕೆಳಮಟ್ಟಕ್ಕಾದರೂ ಇಳಿಯಬಹುದು. ಹಾಗಾಗಿಯೇ, ಅವರನ್ನು ವಜಾ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿವೆ. ಬುಧವಾರದ ಅತಿಕ್ರಮಣವು ಪೊಲೀಸ್‌ ವೈಫಲ್ಯಕ್ಕೂ ಕನ್ನಡಿ ಹಿಡಿದಿದೆ. ಟ್ರಂಪ್‌ ಅವರ ನಾಲ್ಕು ವರ್ಷದ ಆಳ್ವಿಕೆಯು ಆ ದೇಶವನ್ನು ಜನಾಂಗೀಯ ನೆಲೆಯಲ್ಲಿ ವಿಭಜಿಸಿದೆ ಎಂಬ ಆರೋಪ ಇದೆ. ತಮ್ಮ ಪರವಾಗಿ ಅಂಧ ಬೆಂಬಲಿಗ ಪಡೆಯೊಂದು ರೂಪುಗೊಳ್ಳುವಂತೆಯೂ ಅವರು ಮಾಡಿದ್ದಾರೆ ಎಂಬುದನ್ನು ಕ್ಯಾಪಿಟಲ್‌ ಮೇಲಿನ ದಾಳಿಯು ನಿರೂಪಿಸಿದೆ. ಜನಾಂಗೀಯ ಅಥವಾ ಇನ್ನಾವುದೇ ಭಾವುಕ ನೆಲೆಯಲ್ಲಿ ದೇಶವೊಂದು ಸೀಳಿ ಹೋದರೆ, ಆ ದೇಶದ ಭವಿಷ್ಯವು ಮಸುಕು ಎಂಬ ಪಾಠಗಳು ಇತಿಹಾಸದಲ್ಲಿ ಇವೆ. ಅತಿಕ್ರಮಣಕಾರರನ್ನು ನಾಲ್ಕು ತಾಸುಗಳಲ್ಲಿ ತೆರವು ಮಾಡಲಾಗಿದೆ. ಆದರೆ, ಇದು ಉಂಟು ಮಾಡಿರುವ ಗಾಯ ಮಾಯಲು ದೀರ್ಘ ಕಾಲ ಬೇಕಾಗಬಹುದು. ಟ್ರಂಪ್‌ ಅವರು ಹಾಕಿರುವ ಪ್ರತ್ಯೇಕತೆಯ ರೇಖೆಯನ್ನು ಅಳಿಸಿ ಹಾಕಿ, ಸಂಸತ್ತಿನ ಮೇಲೆಯೇ ದಾಳಿಗೆ ನಿಂತವರನ್ನು ಕೂಡ ಮುಖ್ಯವಾಹಿನಿಗೆ ತರುವ ಗುರುತರ ಹೊಣೆಗಾರಿಕೆ ಮುಂದಿನ ಅಧ್ಯಕ್ಷ ಬೈಡನ್‌ ಅವರ ಮೇಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಅತ್ಯಂತ ಹಳೆಯ ಪ್ರಜಾಪ‍್ರಭುತ್ವ ವ್ಯವಸ್ಥೆಯನ್ನು ಜತನದಿಂದ ಕಾಯ್ದುಕೊಳ್ಳುವುದು ಇಂದಿನ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT