ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ ಪದಗ್ರಹಣ: ಸಮಚಿತ್ತದ ನಾಯಕತ್ವ ಅಮೆರಿಕಕ್ಕಷ್ಟೇ ಅಲ್ಲ ಇಡೀ ಜಗತ್ತಿನ ಅಗತ್ಯ

Last Updated 21 ಜನವರಿ 2021, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧಿಕಾರ ಕೇಂದ್ರಕ್ಕೆ ಜೋ ಬೈಡನ್‌ ಆಗಮನ ಮತ್ತು ಡೊನಾಲ್ಡ್‌ ಟ್ರಂಪ್ ನಿರ್ಗಮನ ಆ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಮಹತ್ವದ ವಿದ್ಯಮಾನ. ಅಮೆರಿಕ ಅತ್ಯಂತ ಕಷ್ಟದಲ್ಲಿರುವ ಸಂದರ್ಭದಲ್ಲಿ ಬೈಡನ್‌ ಅವರು ಅಧ್ಯಕ್ಷರಾಗಿದ್ದಾರೆ. ಅವರ ಮುಂದೆ ಈಗ ಇರುವುದು ಸವಾಲುಗಳು ಮಾತ್ರ ಎಂದರೂ ಉತ್ಪ್ರೇಕ್ಷೆ ಏನಲ್ಲ. ನಾಲ್ಕು ವರ್ಷಗಳಲ್ಲಿ ಟ್ರಂಪ್‌ ಕೈಗೊಂಡ ಹಲವು ನಿರ್ಧಾರಗಳು ಅಮೆರಿಕ ಮತ್ತು ಜಗತ್ತಿಗೆ ಮಾರಕವಾಗಿದ್ದವು ಎಂದು ನಂಬಿರುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಇದೆ. ಆರ್ಥಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ಮಾನವೀಯ ನೆಲೆಯಲ್ಲಿ ಅತ್ಯಂತ ಹಾನಿಕರವಾದ ತೀರ್ಮಾನಗಳನ್ನು ಅವರು ತೆಗೆದುಕೊಂಡಿದ್ದಾರೆ. ಜಗತ್ತನ್ನು ಕಾಡಿದ ಕೋವಿಡ್‌ ಪಿಡುಗಿನ ವಿಚಾರದಲ್ಲಿಯೂ ಟ್ರಂಪ್‌ ತೋರಿದ ಅಸಡ್ಡೆಗೆ ಬೆಲೆ ತೆತ್ತವರು ಅಲ್ಲಿನ ಜನ. ಅತ್ಯಂತ ಮುಂದುವರಿದ ದೇಶಗಳಲ್ಲಿ ಒಂದಾಗಿರುವ ಅಮೆರಿಕದಲ್ಲಿ ಅತಿ ಹೆಚ್ಚು ಜನರು (ನಾಲ್ಕು ಲಕ್ಷಕ್ಕೂ ಹೆಚ್ಚು) ಈ ಪಿಡುಗಿನಿಂದ ಜೀವ ಕಳೆದುಕೊಂಡಿದ್ದಾರೆ. ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಳ್ಳುವುದೇ ಕೋವಿಡ್‌ ಹರಡುವಿಕೆ ತಡೆಯ ಮೂಲಮಂತ್ರ ಎಂದು ಇಡೀ ಜಗತ್ತು ಪಠಿಸುತ್ತಿದ್ದಾಗ ಟ್ರಂಪ್‌ ಅವರು ಈ ಎರಡನ್ನೂ ಪಾಲಿಸದೆ ನಿರ್ಲಕ್ಷ್ಯ ತೋರಿದ್ದರು. ಕೋವಿಡ್‌ನಿಂದ ತತ್ತರಿಸಿದ್ದ ದೇಶದ ಆರ್ಥಿಕತೆ ಕುಸಿದುಬಿತ್ತು. ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿತು. ‘ಅಮೆರಿಕದ ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು, ಕಪ್ಪು ವರ್ಣೀಯರು, ಲೈಂಗಿಕ ಅಲ್ಪಸಂಖ್ಯಾತರು, ಮೂಲ ನಿವಾಸಿಗಳು ಎಲ್ಲರ ವಿರುದ್ಧ ಬಹುಸಂಖ್ಯಾತ ಬಿಳಿಯರನ್ನು ಎತ್ತಿಕಟ್ಟುವ ಕೆಲಸವನ್ನು ಟ್ರಂಪ್‌ ಮಾಡಿದ್ದಾರೆ; ಸಾಮಾಜಿಕ ವಿಭಜನೆಯೇ ಅವರ ಗುರಿಯಾಗಿತ್ತು’ ಎಂಬುದು ಅವರ ಮೇಲಿನ ಬಹುದೊಡ್ಡ ಆರೋಪಗಳಲ್ಲಿ ಒಂದು. ಉತ್ತರಾಧಿಕಾರಿಯ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಹಾಜರಾಗದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೃಣದಂತೆ ಟ್ರಂಪ್‌ ಕಂಡಿರುವುದು ಶೋಭೆ ತರುವ ವಿಚಾರವೇನೂ ಅಲ್ಲ. ಎರಡು ವಾರಗಳ ಹಿಂದೆ, ಟ್ರಂಪ್‌ ಕುಮ್ಮಕ್ಕಿನಂತೆ ಅವರ ಬೆಂಬಲಿಗರು ‘ಕ್ಯಾಪಿಟಲ್‌’ನಲ್ಲಿ (ಸಂಸತ್‌ ಭವನ) ಹುಚ್ಚೆದ್ದು ಕುಣಿದು, ಹಿಂಸೆಗಿಳಿದಿದ್ದರು. ಅದೇ ಸ್ಥಳದಲ್ಲಿ ನಿಂತು ಬೈಡನ್‌ ಅವರು ‘ಎಲ್ಲರನ್ನೂ ಒಟ್ಟುಗೂಡಿಸುವ, ಉಪಶಮನದ ಕೆಲಸ ಆಗಬೇಕಿದೆ’ ಎಂದು ಹೇಳಿರುವುದು ಅರ್ಥಪೂರ್ಣ ಎನಿಸುತ್ತದೆ. ಸಾರ್ವಜನಿಕ ಆಡಳಿತದಲ್ಲಿ ಸುದೀರ್ಘ ಅನುಭವ ಇರುವ ನಿಜವಾದ ನಾಯಕನ ಪ್ರಾಮಾಣಿಕ ಮಾತಿನಂತೆ ಅದು ಧ್ವನಿಸುತ್ತಿದೆ.

ಹಲವು ದಶಕಗಳಿಂದ ಜಗತ್ತಿನ ನಾಯಕನ ಸ್ಥಾನದಲ್ಲಿರುವ ಅಮೆರಿಕದ ಅಧ್ಯಕ್ಷರ ನಿರ್ಧಾರಗಳಿಗೆ ಸಮಚಿತ್ತದ ನಾಯಕತ್ವದ ಗಟ್ಟಿತನ ಇಲ್ಲದೇ ಹೋದರೆ ಏನಾಗುತ್ತದೆ ಎಂಬುದು ಈಗ ಕಣ್ಣ ಮುಂದೆ ಇದೆ. ಜಗತ್ತಿನ ಅತ್ಯಂತ ಪ್ರಭಾವಿ ದೇಶದ ಅಧ್ಯಕ್ಷನೇ ತನ್ನ ದೇಶದ ಪ್ರಜಾಪ್ರಭುತ್ವವನ್ನು ಗಂಡಾಂತರಕ್ಕೆ ಈಡು ಮಾಡುವ ಮಟ್ಟಕ್ಕೆ ಹೋದುದನ್ನು ಮಾನಸಿಕ ಸಮಸ್ಥಿತಿ ಎಂದು ಈಗಿನ ಸನ್ನಿವೇಶದಲ್ಲಿ ಹೇಳುವುದು ಕಷ್ಟ. ಟ್ರಂಪ್‌ ಅವರು ಕೈಗೊಂಡ ಹತ್ತಾರು ನಿರ್ಧಾರಗಳಿಗೆ ತಡೆಯೊಡ್ಡುವ 17 ಅಧ್ಯಕ್ಷೀಯ ಆದೇಶಗಳಿಗೆ ಬೈಡನ್‌ ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ಸಹಿ ಮಾಡಿದ್ದಾರೆ. ‘ಮುಂದಿರುವ ಬಿಕ್ಕಟ್ಟುಗಳನ್ನು ನಿರ್ವಹಿಸುವ ವಿಚಾರದಲ್ಲಿ ವಿಳಂಬ ಮಾಡಲು ಸಮಯವೇ ಇಲ್ಲ’ ಎನ್ನುವ ಮೂಲಕ ತಮ್ಮ ಮುಂದಿರುವ ತುರ್ತು ಏನು ಎಂಬುದನ್ನು ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದು, ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳ ಜನರಿಗೆ ವಲಸೆ ನಿಷೇಧ, ಇತರ ದೇಶಗಳ ಜನರ ವಲಸೆಗೆ ನಿರ್ಬಂಧ, ಪ್ಯಾರಿಸ್‌ ಒಪ್ಪಂದಕ್ಕೆ ನಕಾರ, ಪರಿಸರ ರಕ್ಷಣೆ ವಿಚಾರದಲ್ಲಿ ಅಸಹಿಷ್ಣುತೆಯಂತಹ ಹಲವು ನಿರ್ಧಾರ
ಗಳನ್ನು ಬೈಡನ್‌ ರದ್ದು ಮಾಡಿದ್ದಾರೆ. ಮಾನವೀಯವಾದ, ಅಂತಃಕರಣದಿಂದ ಕೂಡಿದ, ಪ್ರಜಾಸತ್ತಾತ್ಮಕವಾದ ಹೊಸ ಯುಗವೊಂದು ಆರಂಭವಾಗಲಿದೆ ಎಂಬ ಸೂಚನೆಯನ್ನು ಮೊದಲ ದಿನವೇ ಬೈಡನ್‌ ರವಾನಿಸಿದ್ದಾರೆ. ‘ಅಮೆರಿಕವೇ ಮೊದಲು’ ಎಂದು ಪ್ರತಿಪಾದಿಸುತ್ತಿದ್ದ ಟ್ರಂಪ್‌ಗೆ ಜಗತ್ತಿನ ಇತರ ದೇಶಗಳನ್ನು ಮಾನವೀಯವಾಗಿ ಕಾಣುವುದು ಸಾಧ್ಯವೇ ಆಗಿರಲಿಲ್ಲ. ಹಾಗಾಗಿ, ಬೈಡನ್‌ ಅವರ ಆಗಮನವು ಜಾಗತಿಕ ಮಟ್ಟದಲ್ಲಿಯೂ ನಿರೀಕ್ಷೆಗಳಿಗೆ ಕಾರಣವಾಗಿದೆ. ಮಹಿಳೆಯೊಬ್ಬರು ಇದೇ ಮೊದಲಿಗೆ ಅಮೆರಿಕದ ಉಪಾಧ್ಯಕ್ಷರಾಗಿದ್ದಾರೆ ಎಂಬುದೂ ದೊಡ್ಡ ಮೈಲಿಗಲ್ಲು. ಭಾರತ ಮತ್ತು ಆಫ್ರಿಕಾಗಳೆರಡರಲ್ಲೂ ಬೇರುಗಳನ್ನು ಹೊಂದಿರುವ, ಮಾನವ ಹಕ್ಕುಗಳ ಪ್ರತಿಪಾದಕಿ ಕಮಲಾ ಹ್ಯಾರಿಸ್‌ ಅವರು ಬೈಡನ್‌ ಜತೆಗೆ ಉಪಾಧ್ಯಕ್ಷೆಯಾಗಿ ಇದ್ದಾರೆ ಎಂಬುದೇ ಅಮೆರಿಕ ಮತ್ತು ಜಗತ್ತಿನ ಜನರಿಗೆ ಬಹುದೊಡ್ಡ ಸಂದೇಶ. ಡೆಮಾಕ್ರಟಿಕ್‌ ಪಕ್ಷದ ಉದಾರವಾದಿ ನೀತಿಯ ಬೆಳಕು ಮತ್ತು ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ಗಾಢ ಅನುಭವಗಳು ಈಗ ಇರುವ ಸವಾಲುಗಳನ್ನು ನಿಭಾಯಿಸುವಲ್ಲಿ ಬೈಡನ್‌ ಅವರಿಗೆ ದೊಡ್ಡ ನೆರವು ನೀಡಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT