ಗುರುವಾರ , ನವೆಂಬರ್ 26, 2020
19 °C

ಸಂಪಾದಕೀಯ: ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಉದಾಸೀನ ಧೋರಣೆ ಸಲ್ಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕ್‌ ಸಿಬ್ಬಂದಿ ನೇಮಕಾತಿಗಾಗಿ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಈ ಬಾರಿಯೂ ಕನ್ನಡದ ಅಭ್ಯರ್ಥಿಗಳಿಗೆ ದೊರೆಯುತ್ತಿಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಬೇಕು ಎನ್ನುವ ಒತ್ತಾಯಕ್ಕೆ ಮತ್ತೆ ಬೆಲೆ ಸಿಕ್ಕಿಲ್ಲ. 2020–21ನೇ ಸಾಲಿನಲ್ಲಿ ಬ್ಯಾಂಕ್‌ ಸಿಬ್ಬಂದಿಯ ನೇಮಕಾತಿಗಾಗಿ ಐಬಿಪಿಎಸ್, ನವೆಂಬರ್‌ 28ರಂದು ಮುಖ್ಯ ಪರೀಕ್ಷೆಯನ್ನು ನಡೆಸುತ್ತಿದೆ. ಪೂರ್ವಭಾವಿ ಪರೀಕ್ಷೆಯ ಸಂದರ್ಭದಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆಗಳನ್ನು ಬರೆಯುವುದಕ್ಕೆ ಮಾತ್ರ ಅವಕಾಶವಿತ್ತು. ಅದನ್ನು ವಿರೋಧಿಸಿದ್ದ ಭಾಷಾ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು, ಮುಖ್ಯ ಪರೀಕ್ಷೆಯಲ್ಲಾದರೂ ಹಿಂದಿಯೇತರ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದವು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಹಲವು ವರ್ಷಗಳಿಂದ ಒತ್ತಡ ಹೇರುತ್ತಲೇ ಇವೆ. ಈ ಒತ್ತಾಯಕ್ಕೆ ಸ್ಪಂದಿಸಿ, 2019ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. ಈ ಅವಕಾಶವು ರಾಷ್ಟ್ರೀಕೃತ ಬ್ಯಾಂಕ್‌ಗಳ ಪರೀಕ್ಷೆಗಳಿಗೂ ಇರಬೇಕು ಎಂದು ಭಾಷಾ ಸಂಘಟನೆಗಳು ಒತ್ತಾಯಿಸಿದ್ದವು. ಸ್ಥಳೀಯ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ, ಆ ಭಾಷೆಗಳಲ್ಲಿ ಮಾತನಾಡಬಲ್ಲ ಸಿಬ್ಬಂದಿಯ ತಂಡವನ್ನು ಸಿದ್ಧಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಚೆಗೆ ಬ್ಯಾಂಕುಗಳಿಗೆ ಸೂಚನೆ ನೀಡಿದ್ದರು. ಯಾವುದೇ ಬ್ಯಾಂಕ್‌ನ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿತುಕೊಳ್ಳದೇ ಇದ್ದರೆ, ಆ ಬ್ಯಾಂಕ್‌ ‘ನಾವು ಭಾರತದಾದ್ಯಂತ ಶಾಖೆಗಳನ್ನು ಹೊಂದಿದ್ದೇವೆ’ ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದೂ ಅವರು ಹೇಳಿದ್ದರು. ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ದೊರಕಿಸಿಕೊಟ್ಟಿದ್ದರೆ ಅವರ ಕಾಳಜಿಗೆ ಹೆಚ್ಚು ತೂಕ ಬರುತ್ತಿತ್ತು. ಮುಖ್ಯ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲು ಐಬಿಪಿಎಸ್ ಸಿದ್ಧತೆ ನಡೆಸುವ ಮೂಲಕ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಹುಮ್ಮಸ್ಸಿನಲ್ಲಿದ್ದವರನ್ನು ನಿರಾಶೆಗೊಳಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಷ್ಟೇ ನಡೆಸುವುದರಿಂದ, ಹಿಂದಿಯೇತರ ಭಾಷೆಗಳ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧೆಯಲ್ಲಿ ಸಮಾನ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ. ಇಂಗ್ಲಿಷ್, ಹಿಂದಿ ಭಾಷಿಕರಲ್ಲದವರ ಪ್ರತಿಭೆಯ ಪ್ರಯೋಜನ ರಾಷ್ಟ್ರಕ್ಕೆ ಸಿಗದಂತೆ ಮಾಡುತ್ತದೆ. ಗಣಿತ, ಸಾಮಾನ್ಯಜ್ಞಾನ ವಿಷಯಗಳಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳು, ತಮ್ಮದಲ್ಲದ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಬೇಕಾದ ಒತ್ತಡವು ಅವರ ಫಲಿತಾಂಶದ ಮೇಲೆ ಸಹಜವಾಗಿ ಪರಿಣಾಮ ಬೀರುತ್ತದೆ. ಹಿಂದಿ ಮತ್ತು ಇಂಗ್ಲಿಷ್‌ ಗುಮ್ಮಗಳ ಕಾರಣದಿಂದಾಗಿ ಸಾವಿರಾರು ಪ್ರತಿಭಾವಂತ ತರುಣ ತರುಣಿಯರು ಕೇಂದ್ರ ಸರ್ಕಾರದ ಉದ್ಯೋಗಗಳಿಂದ ವಂಚಿತರಾಗುತ್ತಾರೆ. ಬ್ಯಾಂಕಿಂಗ್‌ ಮತ್ತು ವಿಮಾ ಕ್ಷೇತ್ರಗಳಲ್ಲಿ ಹಿಂದಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಾರ್ವಜನಿಕ ವ್ಯವಹಾರಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬ್ಯಾಂಕುಗಳು ಸೇರಿದಂತೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡೇತರರೇ ತುಂಬಿಕೊಂಡಾಗ, ಹಿಂದಿ ಅಥವಾ ಇಂಗ್ಲಿಷ್‌ ಗೊತ್ತಿಲ್ಲದ ಗ್ರಾಹಕರು ಹಿಂಜರಿಕೆಗೆ ಒಳಗಾಗುವ ಸಾಧ್ಯತೆಯಿದೆ. ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಅವಕಾಶವನ್ನು ಒದಗಿಸುವುದರಿಂದ ಪ್ರತಿಭಾವಂತರಿಗೆ ಸಮಾನ ಸ್ಪರ್ಧೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸಲು ಅವಕಾಶವೂ ಇಲ್ಲ. ಆದರೆ, ಕೆಲವು ರಾಜಕಾರಣಿಗಳ ಪೊಳ್ಳು ಪ್ರತಿಷ್ಠೆ ಹಾಗೂ ಹಿಂದಿಯ ವ್ಯಸನದಿಂದಾಗಿ ಹಿಂದಿಯೇತರ ಭಾಷೆಗಳು ಕಡೆಗಣನೆಗೊಳಗಾಗುತ್ತಿವೆ. ಇದು ಭಾಷೆಗೆ ಸಂಬಂಧಿಸಿದ ಭಾವುಕ ಸಂಗತಿಯಷ್ಟೇ ಅಲ್ಲ; ದೇಶದ ಬಹುತ್ವ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆಯೂ ಹೌದು. ಬ್ಯಾಂಕಿಂಗ್‌, ವಿಮೆ ಸೇರಿದಂತೆ ಅಖಿಲ ಭಾರತ ಮಟ್ಟದ ಎಲ್ಲ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲೂ ನಡೆಯುವಂತಾಗಲು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ತರಬೇಕು. ರಾಜ್ಯದ ಎಲ್ಲ ಸಂಸದರು ಪಕ್ಷಭೇದ ಮೀರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು