ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ಆಡಳಿತ ವ್ಯವಸ್ಥೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಿ

Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್‌ಗಳು ದೊಡ್ಡ ಮೊತ್ತದ ನಷ್ಟಕ್ಕೆ ಗುರಿಯಾಗಿರುವುದು ಕಳವಳಕಾರಿಯಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐನ ನಿವ್ವಳ ನಷ್ಟ ₹4,876 ಕೋಟಿಗೆ ತಲುಪಿದೆ. ವಸೂಲಾಗದ ಸಾಲದ (ಎನ್‌ಪಿಎ) ಮೊತ್ತದಿಂದಾಗಬಹುದಾದ ಭವಿಷ್ಯದ ನಷ್ಟ ತಗ್ಗಿಸುವ ಉದ್ದೇಶದಿಂದ ಬ್ಯಾಂಕ್‌ಗಳು ತಮ್ಮ ಲಾಭದಲ್ಲಿನ ಬಹುತೇಕ ಪಾಲನ್ನು ಪ್ರತ್ಯೇಕವಾಗಿ ತೆಗೆದಿರಿಸುತ್ತಿವೆ. ಇದು ಅವುಗಳ ಲಾಭವನ್ನು ಕಬಳಿಸುತ್ತಿವೆ ಎಂಬುದೂ ನಿಜ. ಅಮೆರಿಕ, ಜರ್ಮನಿ, ಚೀನಾಗಳಲ್ಲಿ ಎನ್‌ಪಿಎ ಪ್ರಮಾಣ ಶೇ 2ರಷ್ಟಿದೆ. ಆದರೆ, ಈ ವರ್ಷಾಂತ್ಯದಲ್ಲಿ ನಮ್ಮಲ್ಲಿ ಇದು ಶೇ 12.2ರಷ್ಟಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟಾರೆ ಬ್ಯಾಂಕಿಂಗ್‌ ಕ್ಷೇತ್ರದ ಹಣಕಾಸು ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಎನ್‌ಪಿಎ ಸಮಸ್ಯೆ ಹೊಸದಲ್ಲ. 2015ರಲ್ಲಿ ಶೇ 4.6ರಷ್ಟಿದ್ದ ಇದು, ನಂತರದ ವರ್ಷಗಳಲ್ಲಿ ಏರಿಕೆಯ ಹಾದಿಯಲ್ಲಿಯೇ ಇದೆ. ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಉದಾರ ಸಾಲ ನೀತಿಯ ಫಲವಾಗಿಯೇ ಇದು ಬೆಟ್ಟದಂತೆ ಬೆಳೆಯುತ್ತಿದೆ ಎಂದೂ ಆರೋಪಿಸಲಾಗುತ್ತಿದೆ. ಬ್ಯಾಂಕಿಂಗ್‌ ಬಿಕ್ಕಟ್ಟಿನ ವಿಚಾರದಲ್ಲೂ ರಾಜಕೀಯ ಬೆರೆಸುವುದು ಸಲ್ಲದು. ರಘುರಾಂ ರಾಜನ್‌ ಅವರು ಆರ್‌ಬಿಐ ಗವರ್ನರ್‌ ಆಗಿದ್ದ ಸಂದರ್ಭದಲ್ಲಿ ಎನ್‌ಪಿಎ ಮಾಹಿತಿ ಹೆಚ್ಚಿನ ಪ್ರಚಾರ ಪಡೆದುಕೊಂಡಿತು ಎಂಬುದನ್ನು ಸ್ಮರಿಸಬೇಕು.

ಬ್ಯಾಂಕ್‌ಗಳ ನಷ್ಟದ ಹೊಣೆ ತಗ್ಗಿಸಿ ಅವುಗಳ ಹಣಕಾಸು ಪರಿಸ್ಥಿತಿ ಸುಧಾರಿಸಲು ಕೈಗೊಂಡ ಕ್ರಮಗಳು ಫಲ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಆಕ್ರಮಣಕಾರಿ ನೀತಿಯ ಅನುಸಾರ ಸಾಲ ವಿತರಿಸುವ ಧೋರಣೆಯ ಬದಲಿಗೆ ವಿವೇಕಯುತ ಎಚ್ಚರಿಕೆಯ ನಡೆಯನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳುತ್ತಿವೆ. ಈ ಬಿಕ್ಕಟ್ಟಿನಿಂದ ಹೊರ ಬರಲು ಅವು ಸ್ಪಂದಿಸುತ್ತಿವೆ ಎಂಬುದು ಸಮಾಧಾನಕರ. ಸಾಲಗಾರರನ್ನು ಗುರುತಿಸಿ ವಸೂಲಿಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಲ ಮಂಜೂರಾತಿಯಲ್ಲಿ ಜಾಗರೂಕತೆಯಷ್ಟೇ ಅಲ್ಲ, ದಿವಾಳಿ ಸಂಹಿತೆ (ಐಬಿಸಿ) ಅನ್ವಯಿಸುವ ಪ್ರಕ್ರಿಯೆಯೂ ಚುರುಕುಗೊಂಡಿದೆ. ಇದರಿಂದ ಎನ್‌ಪಿಎ ಹೊರೆ ₹ 1 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 37 ಸಾವಿರ ಕೋಟಿ ವಸೂಲಿಯಾಗಿದೆ. ಹಿಂದಿನ ವರ್ಷಕ್ಕಿಂತ ಇದು ಶೇ 49ರಷ್ಟು ಹೆಚ್ಚಾಗಿದೆ. ಕಂಪನಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದ 2.29 ಲಕ್ಷ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲದಲ್ಲಿನ ವಂಚನೆ ತಡೆಗೆ ಜಾಗ್ರತೆ ವಹಿಸಲಾಗಿದೆ. ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಲು ಸರ್ಕಾರ ₹ 2.11 ಲಕ್ಷ ಕೋಟಿ ನೆರವು ನೀಡುತ್ತಿರುವುದು ಮತ್ತೊಂದು ಸಕಾರಾತ್ಮಕ ನಡೆ. ಇನ್ನೊಂದೆಡೆ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವೂ ಶೇ 9.6ರಿಂದ ಶೇ 11.5ಕ್ಕೆ ಏರಿಕೆಯಾಗಿದೆ. ಬ್ಯಾಂಕ್‌ಗಳ ಪ್ರಮುಖ ವರಮಾನ ಮೂಲವಾಗಿರುವ ನಿವ್ವಳ ಬಡ್ಡಿ ಲಾಭವು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಶೇ 24ರಷ್ಟು ಏರಿಕೆ ಕಂಡಿದೆ. ವರ್ಷಾಂತ್ಯದ ಹೊತ್ತಿಗೆ ಬ್ಯಾಂಕ್‌ಗಳು ಮತ್ತೆ ಲಾಭದ ಹಾದಿಗೆ ಮರಳುವ ಬಗ್ಗೆ ಆಶಾವಾದ ಕಂಡುಬರುತ್ತಿರುವುದು ಉತ್ತೇಜನಕಾರಿ. ಹೊಸ ಸಾಲಗಳಲ್ಲಿ ಎನ್‌ಪಿಎ ಪ್ರಮಾಣ ತಗ್ಗಿರುವುದು ಸಮಾಧಾನಕರ. ಸಂಪತ್ತು ಪುನರ್‌ರಚನಾ ಅಥವಾ ನಿರ್ವಹಣಾ ಕಂಪನಿ ಸ್ಥಾಪಿಸಲು ಸುನಿಲ್‌ ಮೆಹ್ತಾ ಸಮಿತಿಯು ಶಿಫಾರಸು ಮಾಡಿರುವುದನ್ನು ಸರ್ಕಾರ ಜಾರಿಗೆ ತರಬೇಕಾಗಿದೆ. ಆರ್‌ಬಿಐನ ನಿರ್ಬಂಧಿತ ಕ್ರಮಗಳಿಂದಲೂ ಅನೇಕ ಬ್ಯಾಂಕ್‌ಗಳು ಕ್ರಮೇಣ ಹೊರ ಬರುತ್ತಿವೆ. ಎನ್‌ಪಿಎ ಸಮಸ್ಯೆಯನ್ನು ಮುಂಚಿತವಾಗಿಯೇ ಅಂದಾಜು ಮಾಡಿ, ಸಾಲ ವಸೂಲಿಗೆ ವಿಳಂಬ ಮಾಡದಿರುವಂತಹ ಸುಧಾರಣಾ ಕ್ರಮಗಳನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕು. ಬ್ಯಾಂಕಿಂಗ್ ನಾಯಕತ್ವ ಹಾಗೂ ಆಡಳಿತದ ಸಮಸ್ಯೆಗಳಿಗೆ ಚುರುಕು ಮುಟ್ಟಿಸಿ ಸುಧಾರಣೆ ತರಬೇಕಾದುದು ಇಲ್ಲಿ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT