ಶುಕ್ರವಾರ, ಜೂನ್ 5, 2020
27 °C

ಬಿಬಿಎಂಪಿ ಬಜೆಟ್‌: ಚುನಾವಣೆಯತ್ತ ಚಿತ್ತ ಗೌಣವಾದ ನಗರ ‘ಆರೋಗ್ಯ’

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಕೌನ್ಸಿಲ್‌ನ ಕೊನೆಯ ಬಜೆಟ್‌ (2020–21) ಮಂಡನೆಯಾಗಿದೆ. ಬಿಬಿಎಂಪಿಯ ಈಗಿನ ಕೌನ್ಸಿಲ್‌ ಅವಧಿ ಇದೇ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಅಕ್ಟೋಬರ್‌ ಒಳಗಾಗಿ ಹೊಸ ಕೌನ್ಸಿಲ್‌ ರಚನೆಯಾಗಬೇಕಿದೆ. ಹೀಗಾಗಿ, ಬಜೆಟ್‌ ದೃ‌ಷ್ಟಿ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿದೆ. ದೆಹಲಿ ಮಾದರಿಯಲ್ಲಿ 2.5 ಲಕ್ಷ ಮನೆಗಳಿಗೆ ಪ್ರತೀ ತಿಂಗಳು ತಲಾ ಹತ್ತು ಸಾವಿರ ಲೀಟರ್‌ ಉಚಿತ ನೀರು ಪೂರೈಸುವುದು, ‘ಬಿ’ ಖಾತೆಗಳನ್ನೆಲ್ಲ ‘ಎ’ ಖಾತೆಗಳನ್ನಾಗಿ ಪರಿವರ್ತನೆ ಮಾಡುವುದು... ಇವೇ ಮೊದಲಾದ ಪ್ರಮುಖ ಯೋಜನೆಗಳ ಉದ್ದೇಶವನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.

ಕರ್ನಾಟಕ ಪೌರಾಡಳಿತ ಕಾಯ್ದೆಯ ಪ್ರಕಾರ, ಸಾರ್ವಜನಿಕ ಆರೋಗ್ಯ ರಕ್ಷಣೆಯು ಸ್ಥಳೀಯ ಆಡಳಿತದ ಪ್ರಮುಖ ಹೊಣೆಗಳಲ್ಲೊಂದು. ಕೊರೊನಾ ಸೋಂಕಿನ ಅಟಾಟೋಪ ಹೆಚ್ಚಿರುವ ಬೆಂಗಳೂರು ಸಹ ರಾಜ್ಯದ ‘ಹಾಟ್‌ ಸ್ಪಾಟ್‌’ಗಳಲ್ಲಿ ಒಂದಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ಗಂಡಾಂತರ ತಂದೊಡ್ಡಿರುವ ಈ ವೈರಾಣುವಿನ ವಿರುದ್ಧದ ಹೋರಾಟಕ್ಕೆ ಪೂರಕವಾದ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಬಿಬಿಎಂಪಿಗೆ ಇದಕ್ಕಿಂತ ದೊಡ್ಡ ಹೊಣೆಗಾರಿಕೆ ಬೇರೊಂದು ಇದ್ದಿರಲಾರದು. ಆದರೆ, ವಾರ್ಡ್‌ಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಲ್ಲಿ ಕಡಿತ ಮಾಡಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹49.5 ಕೋಟಿ ನೀಡುವುದಷ್ಟೇ ಕೊರೊನಾ ವಿರುದ್ಧದ ಹೋರಾಟ ಎಂದು ಬಿಬಿಎಂಪಿ ಆಡಳಿತಗಾರರು ಭಾವಿಸಿದಂತಿದೆ! ಲಕ್ಷಾಂತರ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರಿತಪಿಸುವಂತಹ ಸ್ಥಿತಿ ಎದುರಿಸುತ್ತಿರುವಾಗ ಅವರ ಸಮಸ್ಯೆಗೆ ವಾರ್ಡ್‌ ಮಟ್ಟದಲ್ಲೇ ನೆರವಾಗುವ ಕಾರ್ಯಕ್ರಮಗಳನ್ನು ರೂಪಿಸಬಹುದಿತ್ತು. ಆದರೆ, ಆಡಳಿತಗಾರರಿಗೆ ಅದರ ಅಗತ್ಯ ಮನವರಿಕೆಯಾದಂತಿಲ್ಲ. ₹10,899 ಕೋಟಿ ಗಾತ್ರದ ಬಜೆಟ್‌ನಲ್ಲಿ ಆರೋಗ್ಯ ವಿಭಾಗಕ್ಕೆ ಬರೀ ₹131 ಕೋಟಿ ಮೀಸಲಿಡಲಾಗಿದೆ. ಒಂದು ಆಸ್ಪತ್ರೆ ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಅನುದಾನ ಮೀಸಲಿಟ್ಟಿದ್ದು ಹೊರತುಪಡಿಸಿದರೆ, ಪಾಲಿಕೆಯ ಆಸ್ಪತ್ರೆಗಳ ಮತ್ತು ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ಪ್ರಕಟಿಸದಿರುವುದು ದುರದೃಷ್ಟಕರ. 

ಪ್ರತೀ ತಿಂಗಳು 10 ಸಾವಿರ ಲೀಟರ್‌ಗಳಿಗಿಂತ ಕಡಿಮೆ ನೀರು ಬಳಸುವ ಗೃಹಬಳಕೆ ಸಂಪರ್ಕಗಳಿಗೆ ಉಚಿತವಾಗಿ ನೀರು ಪೂರೈಸುವುದಕ್ಕೆ ₹43 ಕೋಟಿ ತೆಗೆದಿರಿಸಿರುವುದು, ಬಿಬಿಎಂಪಿಯ ಆಡಳಿತ ಪಕ್ಷದ ಗಮನವೆಲ್ಲ ಮುಂಬರುವ ಚುನಾವಣೆ ಮೇಲೆ ನೆಟ್ಟಿದೆ ಎಂಬುದಕ್ಕೆ ನಿದರ್ಶನ. ಮಳೆನೀರು ಸಂಗ್ರಹ ಕಡ್ಡಾಯಗೊಳಿಸಿ ವರ್ಷಗಳೇ ಉರುಳಿವೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮಳೆನೀರು ಸಂಗ್ರಹದ ಅಗತ್ಯ ಮತ್ತು ಅದರ ಕುರಿತು ಕಾಳಜಿ ಹೆಚ್ಚಿಸುವಂತಹ ಯಾವುದೇ ಕಾರ್ಯಕ್ರಮ ಈ ಬಜೆಟ್‌ನಲ್ಲಿ ಇಲ್ಲ.

ಬಿಬಿಎಂಪಿ ಕೌನ್ಸಿಲ್‌ನಲ್ಲಿ ಬಜೆಟ್‌ ಅಂಗೀಕಾರಗೊಂಡು, ಸರ್ಕಾರದಿಂದ ಅನುಮೋದನೆ ಪಡೆಯಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಆ ಬಳಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿಗುವುದು ಮೂರರಿಂದ ನಾಲ್ಕು ತಿಂಗಳ ಕಾಲಾವಕಾಶ. ಆದರೂ ನಗರದ ಎಂಟು ರಸ್ತೆಗಳಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸಲು ₹10 ಕೋಟಿ, ವೃತ್ತಗಳು ಮತ್ತು ಜಂಕ್ಷನ್‌ಗಳನ್ನು ಅಂದಗೊಳಿಸಲು ₹15 ಕೋಟಿ ಮೀಸಲಿಡಲಾಗಿದೆ. ನಮ್ಮನ್ನು ಆಳುವ ಮಂದಿಯ ಆದ್ಯತೆಗಳು ಹೀಗಿವೆ!

ಬಿಬಿಎಂಪಿಯ ಶಾಲಾ– ಕಾಲೇಜುಗಳಲ್ಲಿ ‘ಸ್ಮಾರ್ಟ್‌ ಶಿಕ್ಷಣ’ ಕಾರ್ಯಕ್ರಮಕ್ಕೆ ₹7 ಕೋಟಿ ಅನುದಾನ ಒದಗಿಸಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಡೆ. ಆದರೆ, ಬಿಬಿಎಂಪಿ ಶಾಲೆಗಳಲ್ಲಿ ಸುಧಾರಿತ ಶಿಕ್ಷಣಕ್ಕಾಗಿ ಕಳೆದ ವರ್ಷ ಜಾರಿಗೊಳಿಸಿದ್ದ ‘ಬಿಬಿಎಂಪಿ ರೋಶನಿ’ಯಂತೆ ಈ ಕಾರ್ಯಕ್ರಮವೂ ದಾರಿತಪ್ಪಲು ಅವಕಾಶ ನೀಡಬಾರದು. ಕಲ್ಯಾಣ ಕಾರ್ಯಕ್ರಮಗಳಡಿ ಪೌರಕಾರ್ಮಿಕರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಬಾರಿಯೂ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬ ದೂರು ಇರುವುದರಿಂದ ನ್ಯೂನತೆಗಳನ್ನು ಸರಿಪಡಿಸುವ ಕಡೆ ಬಿಬಿಎಂಪಿ ಆಡಳಿತ ಗಮನ ಕೊಡಬೇಕು.

ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹುಟ್ಟುವ ಹೆಣ್ಣುಮಗುವಿನ ಹೆಸರಿನಲ್ಲಿ ₹1 ಲಕ್ಷ ಬಾಂಡ್‌ ನೀಡುವ ‘ಮಹಾಲಕ್ಷ್ಮಿ’ ಕಾರ್ಯಕ್ರಮಕ್ಕೆ ಅನುದಾನ ಒದಗಿಸಿಲ್ಲ. ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೂ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಿಲ್ಲ. ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧ ದನಿ ಎತ್ತಿದ್ದರು. ಈಗ ಚುಕ್ಕಾಣಿ ಅವರ ಕೈಯಲ್ಲಿದೆ. ಅವರ ವಿರುದ್ಧವೂ ಇದೇ ಆರೋಪ ಕೇಳಿಬಂದಿರುವುದು ವಿಪರ್ಯಾಸ. 15ನೇ ಹಣಕಾಸು ಆಯೋಗದ ₹558 ಕೋಟಿ ಅನುದಾನದಲ್ಲಿ ₹500 ಕೋಟಿಗೂ ಹೆಚ್ಚು ಅನುದಾನವನ್ನು ಆಡಳಿತ ಪಕ್ಷದವರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗಲಿದೆ ಎಂಬ ಆರೋಪ ಕೇಳಿಬಂದಿದ್ದು, ಅದರಲ್ಲಿ ಹುರುಳಿಲ್ಲದೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.