ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬೆಂಗಳೂರಿನ ಕಸದ ಸಮಸ್ಯೆಗೆ ಇಂದೋರ್‌ ಆದೀತೆ ಬೆಳಕಿಂಡಿ?

Last Updated 29 ಜನವರಿ 2020, 6:19 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಇಂದೋರ್‌ನಲ್ಲಿನ ಕಸ ವಿಲೇವಾರಿ ಮಾದರಿಯನ್ನು ಅನುಸರಿಸಿ ಬೆಂಗಳೂರಿನ ಜಕ್ಕೂರು ಮತ್ತು ಜೋಗುಪಾಳ್ಯ ವಾರ್ಡ್‌ಗಳಲ್ಲಿ ರಾತ್ರಿ ವೇಳೆ ಕಸ ಸಂಗ್ರಹಿಸುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಾಯೋಗಿಕ ವ್ಯವಸ್ಥೆ ಕುತೂಹಲಕರವಾಗಿದೆ. ಸದ್ಯದಲ್ಲೇ ಮತ್ತೆ ಮೂರು ವಾರ್ಡ್‌ಗಳಲ್ಲಿ ಇದೇ ರೀತಿ ಕಸ ಸಂಗ್ರಹ ಕಾರ್ಯ ಆರಂಭಿಸಲು ಪಾಲಿಕೆ ಉದ್ದೇಶಿಸಿದೆ. ಒಂದೂವರೆ ತಿಂಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆ ಯಶಸ್ವಿಯಾದಲ್ಲಿ ಮಹಾನಗರದ ಕಸ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ಸುಧಾರಣೆಯ ಬೆಳಕಿಂಡಿಯೊಂದು ತೆರೆದುಕೊಳ್ಳಲಿದೆ.

ರಾತ್ರಿವೇಳೆ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಇಂದೋರ್‌ನ ಐವರು ತಜ್ಞರ ತಂಡ ಐದು ವಾರ್ಡ್‌ಗಳಲ್ಲಿ ಅಧ್ಯಯನ ನಡೆಸಿದ್ದು, ಆ ವಾರ್ಡ್‌ಗಳಲ್ಲಿ ಸಂಗ್ರಹವಾಗುವ ಕಸದ ಪ್ರಮಾಣ, ಮನೆಗಳಿಂದ ಸಂಗ್ರಹಿಸುವ ಕಸ, ಕಟ್ಟಡ ತ್ಯಾಜ್ಯದ ವಿಲೇವಾರಿ ಹೇಗೆ ನಡೆಯುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಗಳಿವೆಯೇ ಎನ್ನುವ ಮಾಹಿತಿ ಸಂಗ್ರಹಿಸಿದೆ. ಆ ಅಧ್ಯಯನದ ಆಧಾರದ ಮೇಲೆ ಮೂಲ ಸೌಕರ್ಯಗಳನ್ನು ಅಂದಾಜು ಮಾಡಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಎಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗಿದೆ ಎನ್ನುವ ಮಾಹಿತಿಯು ಜಿಪಿಎಸ್‌ ಮೂಲಕ ದೊರೆಯಲಿದ್ದು, ಪ್ರಮುಖ ಕಸದ ರಾಶಿಗಳನ್ನು ಇರುಳಿನಲ್ಲಿಯೇ ತೆರವುಗೊಳಿಸಲಾಗುವುದು.

ಬೆಳಗಿನ ವೇಳೆಯಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು ಈಗಿರುವ ರೂಢಿ. ರಾಜಧಾನಿಯ ಬಹಳಷ್ಟು ನಾಗರಿಕರಿಗೆ ಬೆಳಿಗ್ಗೆ ವಾಯುವಿಹಾರದ ಸಮಯ. ಅದು ಶಾಲಾ–ಕಾಲೇಜು ವಿದ್ಯಾರ್ಥಿಗಳು ರಸ್ತೆಗಿಳಿಯುವ ಸಮಯವೂ ಹೌದು. ಇಂಥ ಸಮಯದಲ್ಲಿ ರಸ್ತೆಗಳನ್ನು ಗುಡಿಸುವುದರಿಂದ ಉಂಟಾಗುವ ದೂಳು ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಪೌರಕಾರ್ಮಿಕರು ಕಾರ್ಯನಿರ್ವಹಿಸಲು ಕೂಡ ಬೆಳಗಿನ ಸಮಯ ಪ್ರಶಸ್ತ
ವಾದುದಲ್ಲ. ಜನಸಂದಣಿ ಮತ್ತು ವಾಹನಸಂದಣಿಯ ನಡುವೆಯೇ ರಸ್ತೆಗಳನ್ನು ಸ್ವಚ್ಛಗೊಳಿಸುವ ಮತ್ತು ಕಸ ಸಂಗ್ರಹಿಸುವ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಜನ– ವಾಹನ ಸಂಚಾರ ವಿರಳವಾಗಿರುವ ರಾತ್ರಿಯಲ್ಲಿ ಬೀದಿಗಳನ್ನು ಗುಡಿಸುವುದು ಸುಲಭ. ಟ್ರಾಫಿಕ್‌ ಇಲ್ಲದಿರುವುದರಿಂದ ಕಸದ ವಾಹನಗಳು ಓಡಾಡಲಿಕ್ಕೂ ಅನುಕೂಲ. ಒಟ್ಟಿನಲ್ಲಿ ರಾತ್ರಿ ವೇಳೆ ರಸ್ತೆಗಳ ಸ್ವಚ್ಛತಾಕಾರ್ಯ ಮತ್ತು ಕಸ ವಿಲೇವಾರಿ ನಡೆಯುವುದು ಸಾರ್ವಜನಿಕರು ಮತ್ತು ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹ.

ಇಂದೋರ್‌ನಲ್ಲಿನ ಕಸ ವಿಲೇವಾರಿ ವ್ಯವಸ್ಥೆಯು ದೇಶದಲ್ಲೇ ಮಾದರಿಯೆನಿಸಿದೆ. ಕೆಲವು ವರ್ಷಗಳ ಹಿಂದೆ ಅಲ್ಲಿಯೂ ಬೆಂಗಳೂರಿನಲ್ಲಿ ಇರುವಂತಹುದೇ ಅವ್ಯವಸ್ಥೆಯಿತ್ತು. 2015ರಲ್ಲಿ ಆರಂಭವಾದ, ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯ ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ಬಂದುದರಿಂದ ಇಂದೋರ್‌ ಈಗ ದೇಶದ ಗಮನಸೆಳೆದಿದೆ. ಅಲ್ಲಿ ಪ್ಲಾಸ್ಟಿಕ್‌ ನಿಷೇಧವುಪರಿಣಾಮಕಾರಿಯಾಗಿ ಜಾರಿಗೊಂಡಿದ್ದು, ಸಂಗ್ರಹಗೊಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಜೈವಿಕ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸುವಲ್ಲಿಯೂ ಇಂದೋರ್‌ ನಗರಾಡಳಿತ ಯಶಸ್ವಿಯಾಗಿದೆ. ಅಂತಹುದೇ ಫಲಿತಾಂಶವನ್ನು ಬೆಂಗಳೂರಿನಲ್ಲೂಸಾಧ್ಯವಾಗಿಸುವುದಕ್ಕೆ ದೊಡ್ಡ ಆಂದೋಲನವೇ ನಡೆಯಬೇಕು. ವಿಸ್ತಾರ ಹಾಗೂ ಜನಸಂಖ್ಯೆಯಲ್ಲಿ ಇಂದೋರ್‌ಗಿಂತಲೂ ಬೆಂಗಳೂರು ದೊಡ್ಡದಾಗಿರುವುದೂ ಪಾಲಿಕೆಗೆ ಸವಾಲಾಗಿ ಪರಿಣಮಿಸಲಿದೆ.

ರಾತ್ರಿವೇಳೆ, ಪೌರಕಾರ್ಮಿಕರ ಸುರಕ್ಷತೆಗೆ ಒತ್ತು ನೀಡುವ ಬಗೆಗೂ ಪಾಲಿಕೆ ಗಮನ ನೀಡಬೇಕು. ಈ ಮೊದಲೂ ದೇಶದ ವಿವಿಧ ನಗರಗಳು ಹಾಗೂ ವಿದೇಶಗಳಲ್ಲಿನ ಮಾದರಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದವು. ಇದರಿಂದ ಒಂದಷ್ಟು ಪ್ರಜಾಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ವಿದೇಶ ಪ್ರವಾಸ ಭಾಗ್ಯ ದೊರೆತಿದ್ದು ಹಾಗೂ ಸಾರ್ವಜನಿಕರ ತೆರಿಗೆಯ ಹಣ ಖರ್ಚಾಗಿದ್ದು ಬಿಟ್ಟರೆ, ಬೇರೆ ಯಾವ ಅನುಕೂಲವೂ ಆಗಲಿಲ್ಲ. ಆ ವೈಫಲ್ಯವು ಇಂದೋರ್‌ ಮಾದರಿಯ ಅನುಷ್ಠಾನದಲ್ಲಿಯೂ ಆಗದಿರುವಂತೆ ಪಾಲಿಕೆಯ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಸದಿಂದಾಗಿ ಉಸಿರುಗಟ್ಟಿರುವ ನಗರಕ್ಕೆ ಹೊಸ ಗಾಳಿ– ಬೆಳಕು ತರುವ ನಿಟ್ಟಿನಲ್ಲಿ ಪಕ್ಷಾತೀತ ಪ್ರಯತ್ನಗಳು ನಡೆಯುವುದು ಅಗತ್ಯವಾಗಿದ್ದು, ‘ಸ್ವಚ್ಛ ಬೆಂಗಳೂರು’ ಆಂದೋಲನದಲ್ಲಿ ಸಾರ್ವಜನಿಕರನ್ನೂ ಸಕ್ರಿಯವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT