ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ಯಡಿಯೂರಪ್ಪ- ಹೊಸ ಹಾದಿಯತ್ತ ಕರ್ನಾಟಕ ಬಿಜೆಪಿ

Last Updated 26 ಜುಲೈ 2021, 19:30 IST
ಅಕ್ಷರ ಗಾತ್ರ

ರಾಜ್ಯ ರಾಜಕಾರಣದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಿಂದ ಸಕ್ರಿಯರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊಳ್ಳಲಿದೆ. ತಮ್ಮ ಕಾಲೇಜು ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯರಾಗಿದ್ದರು. ಶಾಸನಸಭೆಯಲ್ಲಿ ಸ್ಥಾನ ಸಿಕ್ಕಲು ಯಡಿಯೂರಪ್ಪ 1983ರವರೆಗೆ ಕಾಯಬೇಕಾಯಿತು. ಅಲ್ಲಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಅವರು ಏರಿದ್ದಾರೆ. ‘ಸೈಕಲ್‌ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇನೆ, ಕಾರಿನಲ್ಲಿ ಓಡಾಡಲು ಸಂಪನ್ಮೂಲ ಇರಲಿಲ್ಲ’ ಎಂದು ಯಡಿಯೂರಪ್ಪ ಹಲವು ಬಾರಿ ಹೇಳಿದ್ದಾರೆ. ಅದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯ, ವಿ.ಎಸ್.ಆಚಾರ್ಯ ಮತ್ತು ಕೆಲವರಷ್ಟೇ ಆಗ ಬಿಜೆಪಿಯ ನಾಯಕರೂ ಆಗಿದ್ದರು ಕಾರ್ಯಕರ್ತರೂ ಆಗಿದ್ದರು. ಯಡಿಯೂರಪ್ಪನವರು ಕರ್ನಾಟಕದಲ್ಲಿ ಬಿಜೆಪಿಯನ್ನು ಶೂನ್ಯದಿಂದ ಕಟ್ಟಿದವರು. ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಕರ್ನಾಟಕವನ್ನು ತೆರೆದು ಕೊಟ್ಟವರೂ ಅವರೇ. ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿದ್ದ ಯಡಿಯೂರಪ್ಪ ಅವರನ್ನು ಪಕ್ಷವು ಕಡೆಗಣಿಸಿದಾಗ ಕೆರಳಿ, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿ, ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿಯುವಂತೆ ಮಾಡಿದವರಲ್ಲಿ ಯಡಿಯೂರಪ್ಪ ಪ್ರಮುಖರು. ಆ ಮೂಲಕ, ಬಿಜೆಪಿಗೆ ತಾವು ಎಷ್ಟರಮಟ್ಟಿಗೆ ಅನಿವಾರ್ಯ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಅವರು ತೋರಿದ್ದ ‘ಬಲ’ವೇ ಈಗ, ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಬಿಜೆಪಿ ಇಷ್ಟೊಂದು ತಿಣುಕಾಡಲು ಕಾರಣ ಎಂಬುದನ್ನು ಸಾರಾಸಗಟಾಗಿ ಅಲ್ಲಗಳೆಯು ವುದಕ್ಕೆ ಆಗದು. ಹೋರಾಟದ ರಾಜಕಾರಣದ ಮೂಲಕ ಜನರ ನಡುವೆ ನಾಯಕನಾಗಿ ಬೆಳೆದವರು ಯಡಿಯೂರಪ್ಪ. ಆದರೆ, ಅಧಿಕಾರಕ್ಕೆ ಏರುವುದಕ್ಕಾಗಿ ಶಾಸಕರ ಪಕ್ಷಾಂತರದಂತಹ ಕಾರ್ಯತಂತ್ರವನ್ನು ಅವರು ಹೆಣೆದದ್ದು ಅಳಿಸಲಾಗದ ಕಪ್ಪುಚುಕ್ಕೆಯಾಗಿ ಉಳಿಯಲಿದೆ. 2008ರಲ್ಲಿ ಅಧಿಕಾರಕ್ಕೆ ಏರಲು ‘ಆಪರೇಷನ್‌ ಕಮಲ’ ಎಂಬ ಈ ಕಾರ್ಯತಂತ್ರದ ಮೊರೆ ಹೋದರು; ಎರಡು ವರ್ಷಗಳ ಹಿಂದೆ ಅವರು ಅಧಿಕಾರಕ್ಕೆ ಏರುವುದಕ್ಕೆ ನೆರವಾಗಿದ್ದು ಅದೇ ಕಾರ್ಯತಂತ್ರ. ವ್ಯಾಪಕ ಟೀಕೆಗೆ ಒಳಗಾದ ಕಾರ್ಯತಂತ್ರವನ್ನು ಬಿಜೆಪಿ ಈಗ ಎಲ್ಲೆಡೆಯೂ ಬಳಸುತ್ತಿದೆ. ಬಜೆಟ್‌ ಮೂಲಕವೇ ಮಠಗಳಿಗೆ ಅನುದಾನ ಒದಗಿಸುವ ಪರಿಪಾಟಕ್ಕೆ ನಾಂದಿ ಹಾಡಿದ್ದು ಕೂಡ ಅವರೇ. ಲಿಂಗಾಯತ ಸಮುದಾಯದ ಅತ್ಯಂತ ದೊಡ್ಡ ನಾಯಕ ಅವರು ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯ ಬೇರೆ ಕೆಲವು ಮುಖಂಡರಿಗೆ ಹೋಲಿಸಿದರೆ ಯಡಿಯೂರಪ್ಪ ಉದಾರವಾದಿಯಾಗಿ ಕಾಣಿಸುತ್ತಾರೆ. ರೈತಪರ ಹೋರಾಟಗಳನ್ನು ಸಂಘಟಿಸಿದ ಹೆಗ್ಗಳಿಕೆ ಅವರ ಬೆನ್ನಿಗಿದೆ.

ಮೇಲ್ನೋಟಕ್ಕೆ ನೋಡುವಾಗ, ಎಲ್ಲವೂ ಯಡಿಯೂರಪ್ಪ ಅವರ ಪರವಾಗಿ ಇದ್ದಂತೆಯೇ ಕಾಣಿಸುತ್ತಿತ್ತು. ಸರ್ಕಾರವು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿತ್ತು, ಸಂಖ್ಯಾಬಲ ಅವರಿಗೆ ಅನುಕೂಲಕರವಾಗಿ ಇತ್ತು, ಅವರ ಕಾರ್ಯವೈಖರಿಯನ್ನು ವರಿಷ್ಠರು ಹೊಗಳಿದ್ದರು, ವಿರೋಧ ಪಕ್ಷಗಳು ಕೂಡ ಅವರ ಬಗ್ಗೆ ಮೃದು ಧೋರಣೆ ತಳೆದಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಡುವಣ ಸಂಬಂಧ ಅಷ್ಟಕ್ಕಷ್ಟೇ ಎಂಬಂತೆ ಮೊದಲಿನಿಂದಲೂ ಇತ್ತು. 2011ರಲ್ಲಿ ಯಡಿಯೂರಪ್ಪ ಅವರು ಅಧಿಕಾರ ಬಿಡಬೇಕಾಗಿ ಬಂದ ಸ್ಥಿತಿಗೂ ಈಗಿನ ಸ್ಥಿತಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ. ಭ್ರಷ್ಟಾಚಾರ ಆರೋಪ ಮತ್ತು ಸ್ವಜನಪಕ್ಷಪಾತವು ಆಗ ಅವರು ಅಧಿಕಾರದಿಂದ ಕೆಳಗೆ ಇಳಿಯಲು ಕಾರಣವಾಗಿದ್ದವು. ಮಗ ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅಂಥವರೇ ಈಗ ಆರೋಪ ಮಾಡಿದ್ದಾರೆ. ಆಳ್ವಿಕೆಯ ಶಿಷ್ಟಾಚಾರಗಳನ್ನು ಮುಖ್ಯಮಂತ್ರಿ ಪಾಲಿಸುತ್ತಿಲ್ಲ; ಅಭಿವೃದ್ಧಿ ಕೆಲಸಗಳಿಗಾಗಿ ಅನುದಾನ ಬಿಡುಗಡೆಯು ಬೇಕಾಬಿಟ್ಟಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡುವವರೆಗೆ ಪರಿಸ್ಥಿತಿ ಹದಗೆಟ್ಟಿತ್ತು.

ಮುಖ್ಯಮಂತ್ರಿಯಾಗಿದ್ದ ಅವಧಿಯುಯಡಿಯೂರಪ್ಪ‍ ಅವರಿಗೆ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. 2008ರಿಂದ 2011ರ ನಡುವಣ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ‘ಗಣಿ ಮಾಫಿಯಾ’ ಇನ್ನಿಲ್ಲದಂತೆ ಕಾಡಿತ್ತು. ಮುಖ್ಯಮಂತ್ರಿ ಹುದ್ದೆಗೆ ಏರಲು ಬೇಕಾಗಿದ್ದ ‘ಸಂಪನ್ಮೂಲ’ ಒದಗಿಸಿದ್ದ ಗುಂಪೇ ಅವರು ಕೆಳಕ್ಕೆ ಇಳಿಯುವುದಕ್ಕೂ ಕಾರಣ ಆಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಯನ್ನು ಯಡಿಯೂರಪ್ಪ ಎದುರಿಸಿದ್ದಾರೆ. ಪಕ್ಷದ ಹಿರಿಯ ಮುಖಂಡರೇ ಮುಖ್ಯಮಂತ್ರಿ ವಿರುದ್ಧ ದಿನಕ್ಕೊಂದು ಗಂಭೀರ ಆರೋಪ ಮಾಡುತ್ತಿದ್ದರೆ ವರಿಷ್ಠರು ಯಡಿಯೂರಪ್ಪ ನೆರವಿಗೆ ಬರಲಿಲ್ಲ. ವರಿಷ್ಠರ ಒತ್ತಾಸೆಯಂತೆಯೇ ಇವೆಲ್ಲ ನಡೆಯುತ್ತಿವೆ ಎಂದು ಭಾಸವಾಗಲು ಇದು ಕೂಡ ಒಂದು ಕಾರಣ. ಯಡಿಯೂರಪ್ಪ ಅವರು ಸೋಮವಾರ ಮಾಡಿದ ‘ವಿದಾಯ ಭಾಷಣ’ ಕೂಡ ವರಿಷ್ಠರ ಬಗ್ಗೆ ಇದ್ದ ಅಸಮಾಧಾನವನ್ನು ಧ್ವನಿಸಿದೆ. ಯಡಿಯೂರಪ್ಪ ಅವರ ಈ ಅವಧಿಯ ಬಹುಪಾಲು ಸಮಯವು ಕೋವಿಡ್‌–19 ಸಾಂಕ್ರಾಮಿಕ ನಿರ್ವಹಣೆಗೇ ವ್ಯಯವಾಗಿದೆ. ಲಾಕ್‌ಡೌನ್‌ನಿಂದಾಗಿ ವರಮಾನಕ್ಕೆ ಬಿದ್ದ ಏಟು ಅವರ ಕೈಕಟ್ಟಿ ಹಾಕಿದ್ದು ಕೂಡ ಹೌದು. ಅದೇನೇ ಇರಲಿ, ಹೃದಯವಂತ ರಾಜಕಾರಣಿ ಎಂಬ ಹೆಸರಿಗೆ ಹತ್ತಿರವಾಗಿರುವಂತೆ ಅವರು ನಡೆದುಕೊಂಡಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳನ್ನೂ ಸೇರಿಸಿ ಯಾರೊಬ್ಬರ ಬಗ್ಗೆಯೂ ಅವರಲ್ಲಿ ಸೇಡಿನ ಭಾವನೆ ಕಾಣಿಸಿಲ್ಲ. ಸುಮ್ಮನೆ ವಿರಮಿಸುವ ಜಾಯಮಾನ ಯಡಿಯೂರಪ್ಪ ಅವರದ್ದಲ್ಲ. ಪಕ್ಷಕ್ಕಾಗಿ ಇನ್ನೂ ಹಲವು ವರ್ಷ ಕೆಲಸ ಮಾಡುವ ಶಕ್ತಿ ಇದೆ ಎಂದೂ ಅವರು ಹೇಳಿದ್ದಾರೆ. ಹಾಗಾಗಿ, ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರದ ಸ್ಥಿರತೆ ಅಥವಾ ಅಸ್ಥಿರತೆಯು ಯಡಿಯೂರಪ್ಪ ಅವರ ಮನಃಸ್ಥಿತಿಯನ್ನು ಅವಲಂಬಿಸಿರುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT