ಗುರುವಾರ , ಫೆಬ್ರವರಿ 25, 2021
28 °C

ವಾಟ್ಸ್‌ಆ್ಯಪ್ ಹುಟ್ಟುಹಾಕಿದ ಚರ್ಚೆ: ನೈತಿಕ ನಿಲುವೊಂದನ್ನು ನಿರೀಕ್ಷಿಸೋಣವೇ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಮೊಬೈಲ್‌ ದೂರವಾಣಿ ಮೂಲಕ ನಡೆಯುವ ಸಂಭಾಷಣೆಗಳಲ್ಲಿ ಗೋಪ್ಯತೆಯನ್ನು ಕಾಯ್ದುಕೊಳ್ಳುವುದು ಕಷ್ಟಕರ, ಸಂಭಾಷಣೆಗಳನ್ನು ಇತರರು ಕದ್ದಾಲಿಸುವ ಸಾಧ್ಯತೆ ಇದ್ದೇ ಇದೆ. ಸ್ಥಿರ ಹಾಗೂ ಮೊಬೈಲ್‌ ದೂರವಾಣಿ ಮೂಲಕ ನಡೆದ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಿದ ಹಲವು ನಿದರ್ಶನಗಳು ಈಗಾಗಲೇ ಸಾರ್ವಜನಿಕರ ಎದುರು ಇವೆ. ಸಂಭಾಷಣೆಗಳಲ್ಲಿನ ಗೋಪ್ಯತೆಯನ್ನು ಕಾಯ್ದುಕೊಳ್ಳಬೇಕು, ಕಿರು ಸಂದೇಶಗಳ (ಎಸ್‌ಎಂಎಸ್‌) ಮೂಲಕ ನಡೆಯುವ ಮಾತುಕತೆಗಳು ಇತರರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ, ಖಾಸಗಿತನವನ್ನು ಬಯಸುವ ವ್ಯಕ್ತಿಗಳು ವಾಟ್ಸ್‌ಆ್ಯಪ್‌ ಮೊರೆ ಹೋದರು. ವಾಟ್ಸ್‌ಆ್ಯಪ್‌ ತನ್ನ ಮೂಲಕ ನಡೆಯುವ ಎಲ್ಲ ಸಂಭಾಷಣೆಗಳು ಹಾಗೂ ರವಾನೆ ಆಗುವ ಎಲ್ಲ ಸಂದೇಶಗಳು ಅತ್ಯಂತ ಗೋಪ್ಯವಾಗಿರುತ್ತವೆ; ಆ ಸಂಭಾಷಣೆ ಅಥವಾ ಸಂದೇಶಗಳು ಮೂರನೆಯ ವ್ಯಕ್ತಿಗೆ ಸೋರಿಕೆ ಆಗುವ ಸಾಧ್ಯತೆಯೇ ಇಲ್ಲ ಎಂಬ ವಚನ ನೀಡಿತ್ತು. ಆದರೆ, ಇಂದು ವಾಟ್ಸ್‌ಆ್ಯಪ್‌ ಮೂಲಕ ನಡೆಯುವ ಮಾತುಕತೆಗಳ ಖಾಸಗಿತನಕ್ಕೆ ರಕ್ಷಣೆ ಇಲ್ಲ ಎಂಬ ಕಳವಳದ ಕಾರಣದಿಂದಾಗಿಯೇ ಹಲವು ಬಳಕೆದಾರರು ಅದರಿಂದ ಹೊರನಡೆಯುವ ಮಾತು ಆಡಿದ್ದಾರೆ, ಗೋಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿರುವ ‘ಸಿಗ್ನಲ್‌’ನಂತಹ ಆ್ಯಪ್‌ಗಳತ್ತ ಮುಖ ಮಾಡಿದ್ದಾರೆ. ಖಾಸಗಿತನ ಕಾಪಾಡುವುದಕ್ಕೆ ಹೆಸರಾಗಿದ್ದವರ ಬಗ್ಗೆಯೇ ಇಂದು ಅದೇ ಖಾಸಗಿತನದ ಖಾತರಿಯ ವಿಚಾರವಾಗಿ ಅನುಮಾನಗಳು ಮೂಡಿರುವುದನ್ನು ವ್ಯಂಗ್ಯ ಎನ್ನಬಹುದೇ ಅಥವಾ ಇದೊಂದು ವಿಷಾದಕರ ಅಧ್ಯಾಯ ಎನ್ನಬೇಕೇ? ಈ ವಿಚಾರವಾಗಿ ವಾಟ್ಸ್‌ಆ್ಯಪ್‌ ಕಂಪನಿಯು ಈಗಾಗಲೇ ಸ್ಪಷ್ಟನೆ ನೀಡಿದೆ. ಇಬ್ಬರು ಸ್ನೇಹಿತರ ನಡುವೆ ನಡೆಯುವ ಯಾವ ಮಾತುಕತೆಗಳನ್ನೂ ಮೂರನೆಯವರು ಕದ್ದಾಲಿಸಲು, ಇಣುಕಿ ನೋಡಲು ಅವಕಾಶ ಇಲ್ಲವೇ ಇಲ್ಲ; ವ್ಯಕ್ತಿ ಹಾಗೂ ವಾಣಿಜ್ಯ ಸಂಸ್ಥೆಯ ನಡುವೆ ನಡೆಯುವ ಸಂಭಾಷಣೆಯ ಕೆಲವು ವಿವರಗಳನ್ನು ಮಾತ್ರ ಬೇರೆಯವರ ಜೊತೆ ಹಂಚಿಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ.

ಖಾಸಗಿತನವು ಭಾರತೀಯರ ಮೂಲಭೂತ ಹಕ್ಕಿನ ಒಂದು ಭಾಗ ಎಂದು ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಮೂರು ವರ್ಷಗಳು ಸಂದಿವೆ. ಸಕಾರಣಗಳು ಇಲ್ಲದೆ ಈ ಹಕ್ಕನ್ನು ಮೊಟಕುಗೊಳಿಸಲು ಯಾರಿಗೂ ಅಧಿಕಾರ ಇಲ್ಲ. ಪ್ರಭುತ್ವ ಕೂಡ ಈ ಹಕ್ಕನ್ನು ರಕ್ಷಿಸಲು ಶ್ರಮಿಸಬೇಕೇ ವಿನಾ ಖಾಸಗಿತನವನ್ನು ಕಾಪಾಡುವ ಹೊಣೆಯಿಂದ ದೂರ ಸರಿಯುವಂತಿಲ್ಲ. ಆದರೆ, ಖಾಸಗಿತನದಂತಹ ಎರಡನೆಯ ತಲೆಮಾರಿನ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಭಾರತದ ಪ್ರಭುತ್ವವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಹಿನ್ನೆಲೆಯನ್ನೇನೂ ಹೊಂದಿಲ್ಲ. ಖಾಸಗಿತನದ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆ ಕೂಡ ದೇಶದಲ್ಲಿ ಇದುವರೆಗೆ ಇಲ್ಲ. ಖಾಸಗಿತನದ ಎಲ್ಲೆಗಳು ಯಾವುವು, ಅದನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಏನು, ಹಕ್ಕಿಗೆ ಚ್ಯುತಿ ತಂದುಕೊಂಡ ವ್ಯಕ್ತಿಗೆ ಸಿಗಬೇಕಿರುವ ಪರಿಹಾರ ಏನು, ವಿದೇಶಿ ಕಂಪನಿಗಳ ಜೊತೆ ಭಾರತದ ನೆಲದಿಂದ ವ್ಯವಹರಿಸುವ ವ್ಯಕ್ತಿಯ ಖಾಸಗಿತನ ಹರಣವಾದರೆ ಅದಕ್ಕೆ ಪರಿಹಾರ ಏನು ಎಂಬ ಪ್ರಶ್ನೆಗಳಿಗೆಲ್ಲ ಆ ಕಾಯ್ದೆಯು ಉತ್ತರ ನೀಡಬೇಕು. ಖಾಸಗಿತನದ ರಕ್ಷಣೆಯ ವಿಚಾರದಲ್ಲಿ ನಾವು ಇಂದಿಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿನ ಸೆಕ್ಷನ್ 43(ಎ)ಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವಂತೆ ಕಾಣುತ್ತಿದೆ. ಆದರೆ, ಈ ಸೆಕ್ಷನ್‌ಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಪ್ರಶ್ನೆಗಳನ್ನು ಒಳಗೊಂಡಿರುವ ‘ಖಾಸಗಿತನ’ವನ್ನು ಕಾಪಾಡುವ ಶಕ್ತಿ ಇರುವಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವ ಡಿಜಿಟಲ್ ಲೋಕದಲ್ಲಿ ಭಾರತೀಯರ ಬಹುದೊಡ್ಡ ಮಿತಿ ಇದು– ಹಕ್ಕಿನ ರಕ್ಷಣೆಗೆ ಒಂದು ಪ್ರತ್ಯೇಕ ಹಾಗೂ ವಿಸ್ತೃತ ಕಾಯ್ದೆ ಇಲ್ಲದಿರುವುದು. ಖಾಸಗಿತನಕ್ಕೆ ಸಂಬಂಧಿಸಿದ ಚರ್ಚೆಯು ಪ್ರಸ್ತುತ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನ ಹೊಸ ನಿಯಮಗಳ ಸುತ್ತ ನಡೆಯುತ್ತಿದೆ. ಆದರೆ, ಖಾಸಗಿತನ ಹರಣ ಮಾಡುವ ಸಾಮರ್ಥ್ಯ ಇರುವುದು ವಾಟ್ಸ್‌ಆ್ಯಪ್‌ ಎಂಬ ಸಂದೇಶ ರವಾನೆ ಆ್ಯಪ್‌ಗೆ ಮಾತ್ರ ಅಲ್ಲ. ವಾಟ್ಸ್‌ಆ್ಯಪ್‌ ಸೇರಿದಂತೆ ಯಾವುದೇ ಒಂದು ಆ್ಯಪ್ ‌ಅನ್ನು ವ್ಯಕ್ತಿಯೊಬ್ಬ ಇಂದು ಬಳಸಬಹುದು, ಬಳಕೆಯನ್ನು ನಾಳೆ ತೊರೆಯಬಹುದು. ಇಂತಹ ಆ್ಯಪ್‌ಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವ ಗೂಗಲ್‌ನ ಪ್ಲೇಸ್ಟೋರ್‌, ಆ್ಯಪಲ್‌ನ ಆ್ಯಪ್‌ ಸ್ಟೋರ್‌ನಂತಹ ವೇದಿಕೆಗಳು ಕೂಡ ಖಾಸಗಿತನವನ್ನು ಕಾಪಾಡುವ ಬದ್ಧತೆ ಇರುವವರಿಗೆ ಮಾತ್ರ ತಮ್ಮಲ್ಲಿ ಸ್ಥಾನ ಎನ್ನುವ ನೈತಿಕ ಔನ್ನತ್ಯದ ನಿಲುವು ತಳೆಯುವುದಾದರೆ, ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು