ಗುರುವಾರ , ಜೂನ್ 24, 2021
25 °C

ಸಂಪಾದಕೀಯ | ಚಾಮರಾಜನಗರದ ದುರಂತ: ಹೈಕೋರ್ಟ್‌ ಕಣ್ಗಾವಲಿನ ತನಿಖೆಯೇ ಮುಂದುವರಿಯಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಈ ತಿಂಗಳ 3ರಂದು ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 23 ಮಂದಿ ಸೇರಿದಂತೆ ಆ ಜಿಲ್ಲೆಯಲ್ಲಿ 24 ಮಂದಿ ಕೋವಿಡ್‌ ರೋಗಿಗಳು ಒಂದೇ ದಿನ ಮೃತಪಟ್ಟಿರುವುದಕ್ಕೆ ಆಮ್ಲಜನಕದ ಕೊರತೆಯೇ ಕಾರಣ ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ. ಆರಂಭಿಕ ಹಂತದಲ್ಲೇ ಹೊರಬಂದಿರುವ ವಿಡಿಯೊ ದೃಶ್ಯಾವಳಿಗಳು ಅಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಉದ್ಭವಿಸಿದ್ದ ಶೋಚನೀಯ ಸ್ಥಿತಿಯನ್ನು ತೆರೆದಿಟ್ಟಿವೆ.

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಡಳಿತಗಳ ಉನ್ನತ ಮಟ್ಟದ ಅಧಿಕಾರಿಗಳ ನಡುವೆ ವಾಟ್ಸ್‌ಆ್ಯಪ್‌ನಲ್ಲಿ ನಡೆದಿರುವ ಸಂಭಾಷಣೆಗಳ ವಿವರಗಳು, ಇಬ್ಬರೂ ಜಿಲ್ಲಾಧಿಕಾರಿಗಳು ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿಕೊಂಡಿರುವುದು ಕೂಡ ಆಮ್ಲಜನಕದ ಕೊರತೆಯನ್ನೇ ಕೇಂದ್ರೀಕರಿಸಿವೆ. ಈ ದುರ್ಘಟನೆಯ ಕುರಿತು ಏಕಕಾಲಕ್ಕೆ ಐದು ತನಿಖೆಗಳು ಪ್ರಗತಿಯಲ್ಲಿವೆ. ಘಟನೆ ನಡೆದ ತಕ್ಷಣವೇ ಐಎಎಸ್‌ ಅಧಿಕಾರಿ ಶಿವಯೋಗಿ ಸಿ. ಕಳಸದ ನೇತೃತ್ವದಲ್ಲಿ ಪ್ರಾಥಮಿಕ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ರಾಜ್ಯ ಮಾನವ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಆರೋಗ್ಯ ಇಲಾಖೆಯು ಆಂತರಿಕ ತನಿಖೆ ಕೈಗೆತ್ತಿಕೊಂಡಿದೆ. ಸಂವಿಧಾನದ 226ನೇ ವಿಧಿಯಡಿ ದತ್ತವಾಗಿರುವ ಅಧಿಕಾರ ಚಲಾಯಿಸಿ ಮಧ್ಯಪ್ರವೇಶ ಮಾಡಿರುವ ಹೈಕೋರ್ಟ್‌, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಸ್ತುವಾರಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎನ್‌. ವೇಣುಗೋಪಾಲ ಗೌಡ ಮತ್ತು ಕೆ.ಎನ್‌. ಕೇಶವ ನಾರಾಯಣ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ನೇಮಿಸಿದೆ. ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿತ್ತು. ಹೈಕೋರ್ಟ್‌ನ ಮಧ್ಯಪ್ರವೇಶದ ಸುಳಿವು ಅರಿಯುತ್ತಲೇ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಆದೇಶ ಹೊರಡಿಸಿದೆ.

ಗಂಭೀರ ಸ್ವರೂಪದ ಆರೋಪಗಳುಳ್ಳ ಪ್ರಕರಣಗಳು ಎದುರಾದ ಸಂದರ್ಭದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ತನಿಖೆಗೆ ಆದೇಶಿಸಿ ವಿವಾದವನ್ನು ತಣ್ಣಗಾಗಿಸಲು ಯತ್ನಿಸುವುದು ಭಾರತದಲ್ಲಿ ಹೊಸದೇನೂ ಅಲ್ಲ. ಆಡಳಿತದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳೂ ಅಂತಹ ಪ್ರಯತ್ನ ಮಾಡುತ್ತಲೇ ಬಂದಿವೆ. ಚಾಮರಾಜನಗರ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕವೂ ರಾಜ್ಯ ಸರ್ಕಾರ ತರಾತುರಿಯಲ್ಲಿ ಆಯೋಗವೊಂದನ್ನು ನೇಮಿಸಿದೆ. ಇದರಿಂದಾಗಿ ತನಿಖಾ ವರದಿಗಳಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ ದುರ್ಘಟನೆಗೆ ಕಾರಣರಾದವರು ಸುಲಭವಾಗಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಬಹುದೆಂಬ ಆತಂಕ ಕಾನೂನು ತಜ್ಞರ ವಲಯದಿಂದಲೇ ಕೇಳಿಬರುತ್ತಿದೆ.

ಚಾಮರಾಜನಗರದಲ್ಲಿ ನಡೆದಿರುವ ದುರಂತವು ಸಾಮಾನ್ಯ ಪ್ರಕರಣವಲ್ಲ. ‘ಕೋವಿಡ್‌ ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಲ್ಲಿ ಅಂತಹ ದುರ್ಘಟನೆಗೆ ಕಾರಣರಾದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಮಾನವ ಹತ್ಯೆಯ ಆರೋಪ ಹೊರಿಸಬೇಕು’ ಎಂದು ಅಲಹಾಬಾದ್‌ ಹೈಕೋರ್ಟ್‌ ಇಂತಹುದೇ ಪ್ರಕರಣವೊಂದರಲ್ಲಿ ಇತ್ತೀಚೆಗೆ ಹೇಳಿದೆ.

ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿಡ್‌ ರೋಗಿಗಳ ಚಿಕಿತ್ಸಾ ವ್ಯವಸ್ಥೆ, ರಾಜ್ಯ ಸರ್ಕಾರದ ಸಿದ್ಧತೆ, ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಆರೋಗ್ಯ ಸಚಿವರ ಮೇಲಿನ ಕರ್ತವ್ಯಲೋಪದ ಆರೋಪ ಸೇರಿದಂತೆ ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕಿದೆ. ಹೈಕೋರ್ಟ್‌ ಮಧ್ಯಪ್ರವೇಶದ ಕಾರಣದಿಂದ ತಾನು ತನಿಖೆಯನ್ನು ಸ್ಥಗಿತಗೊಳಿಸುವುದಾಗಿ ಮಾನವ ಹಕ್ಕುಗಳ ಆಯೋಗ ಪ್ರಕಟಿಸಿದೆ. ಪ್ರಕರಣ ವಿಚಾರಣೆಗೆ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ಆಯೋಗವೊಂದನ್ನು ನೇಮಕ ಮಾಡಿರುವುದಕ್ಕೆ ಹೈಕೋರ್ಟ್‌ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರದ ನಡವಳಿಕೆಯು ಶಿಷ್ಟಾಚಾರವನ್ನು ಮೀರಿದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ತರಾತುರಿಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿರುವ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಂಶಯ ಎದ್ದಿದೆ. ಅದು ಮತ್ತಷ್ಟು ಬಲಗೊಳ್ಳುವುದಕ್ಕೆ ಆಸ್ಪದ ನೀಡಬಾರದು. ತಪ್ಪುಗಳನ್ನು ಮುಚ್ಚಿಡುವುದು ಮತ್ತು ತಪ್ಪಿತಸ್ಥರನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬಾರದು. ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ ದಾಖಲೆಗಳನ್ನು ಪರಿಶೀಲಿಸಿ ಮಂಗಳವಾರ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಐಎಎಸ್‌ ಅಧಿಕಾರಿ ನೇತೃತ್ವದಲ್ಲಿ ಆರಂಭಿಸಿದ್ದ ತನಿಖೆಯ ಆಧಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ವಾಗ್ದಾನ ನೀಡಿರುವುದು ಸ್ವಾಗತಾರ್ಹ. ದುರ್ಘಟನೆಗೆ ಸಂಬಂಧಿಸಿದಂತೆ ಸ್ಥಳ ತನಿಖೆ, ಮೃತರ ಸಂಬಂಧಿಕರ ಹೇಳಿಕೆ ದಾಖಲಿಸುವುದು, ವೈದ್ಯಕೀಯ ಆಯಾಮದ ತನಿಖೆ ಸೇರಿದಂತೆ ಬಾಕಿ ಇರುವ ಎಲ್ಲ ಪ್ರಕ್ರಿಯೆಗಳು ಹೈಕೋರ್ಟ್ ನೇಮಿಸಿದ ಸಮಿತಿಯ ಮೂಲಕವೇ ನಡೆಯುವುದು ಸೂಕ್ತ.

ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿ, ಲೋಪವನ್ನು ಪತ್ತೆ ಮಾಡುವ ಮೂಲಕ ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸುವುದನ್ನು ತಡೆಯುವುದಕ್ಕೆ ಸರ್ಕಾರ ಮುಂದಾಗಬೇಕು. ಕಾನೂನು ತಜ್ಞರ ಪ್ರಕಾರ, ನ್ಯಾಯಾಂಗ ತನಿಖೆಗೆ ಆಯೋಗ ರಚಿಸಿರುವ ಸರ್ಕಾರದ ತೀರ್ಮಾನಕ್ಕೆ ತಡೆ ನೀಡುವ ಅಥವಾ ಆಯೋಗದ ವರದಿಯನ್ನು ಪರಾಮರ್ಶಿಸುವ ಅಧಿಕಾರ ಹೈಕೋರ್ಟ್‌ಗೆ ಇದೆ. ಅಂತಹ ಬೆಳವಣಿಗೆಗಳಿಂದ ಮುಜುಗರಕ್ಕೀಡಾಗುವ ಬದಲಿಗೆ ಹೈಕೋರ್ಟ್‌ ಕಣ್ಗಾವಲಿನ ತನಿಖೆಗೆ ಸಹಕಾರ ನೀಡುವುದು ಜನಸ್ನೇಹಿಯಾದ ಕ್ರಮವೂ ಆಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು