ಶುಕ್ರವಾರ, ಜೂನ್ 5, 2020
27 °C

ಸಂಪಾದಕೀಯ | ಚೀನಾದ ದೋಷಪೂರಿತ ಕಿಟ್:‌ ಕೊರೊನಾ ತಡೆಯಲ್ಲಿ ಅಸಡ್ಡೆ ಅಕ್ಷಮ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಪಸರಿಸುವಿಕೆ ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಹೇರಿಕೆಯಾಗಿ ಸರಿಸುಮಾರು ಒಂದು ತಿಂಗಳಾಯಿತು. ಕೇಂದ್ರ ಸರ್ಕಾರವು ಲಾಕ್‌ಡೌನ್‌ ಅನ್ನು ಗಂಭೀರವಾಗಿ ಪರಿಗಣಿಸಿದೆ; ದಿಗ್ಬಂಧನಕ್ಕೆ ಸಂಬಂಧಿಸಿ ಹೊರಡಿಸಲಾದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವ ಒತ್ತಡ ಅದಕ್ಕೆ ಪುರಾವೆ. ‘ದೇಶವನ್ನು ಸ್ತಬ್ಧಗೊಳಿಸಿದ ಮಾತ್ರಕ್ಕೆ ಕೊರೊನಾ ವೈರಾಣು ಓಡಿಹೋಗುವುದಿಲ್ಲ’ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ವೈದ್ಯಕೀಯ ವಿಜ್ಞಾನಿಗಳು ಮತ್ತು ರಾಜಕೀಯ ನೇತಾರರು ಸರ್ಕಾರಕ್ಕೆ ಹೇಳುತ್ತಲೇ ಇದ್ದಾರೆ. ಈ ವಿಚಾರವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಪರೀಕ್ಷೆ ನಡೆಸುವುದು, ಸೋಂಕಿತರು, ಅವರ ಸಂಪರ್ಕಿತರನ್ನು ಪ್ರತ್ಯೇಕವಾಸದಲ್ಲಿ ಇರಿಸುವುದು ಮತ್ತು ಚಿಕಿತ್ಸೆ ನೀಡುವುದು ವೈರಾಣು ತಡೆಯುವ ದಿಸೆಯಲ್ಲಿ ಮಹತ್ವದ ಕಾರ್ಯತಂತ್ರ ಎಂಬುದು ಡಬ್ಲ್ಯುಎಚ್‌ಒ ಪ್ರತಿಪಾದನೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪರೀಕ್ಷೆ ನಡೆಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಇಟಲಿಯಲ್ಲಿ 10 ಲಕ್ಷ ಜನರಲ್ಲಿ 23 ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದರೆ, ಭಾರತದಲ್ಲಿ ಆ ಪ್ರಮಾಣ ಇತ್ತೀಚೆಗೆ 240ಕ್ಕೆ ಏರಿದೆ. ಕಡಿಮೆ ಸಂಖ್ಯೆಯ ಪರೀಕ್ಷೆಯಿಂದಾಗಿ ಸೋಂಕಿತರ ಪತ್ತೆ ಸಂಖ್ಯೆ ಕಡಿಮೆ ಇದೆ ಎಂಬ ವಾದವೂ ಇದೆ. ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಜನರಿಗಾಗಿ ಭಾರತ ಸರ್ಕಾರವು ಒಟ್ಟು ದೇಶೀ ಉತ್ಪನ್ನದ (ಜಿಡಿಪಿ) ಶೇ 0.8ರಷ್ಟನ್ನು ವ್ಯಯ ಮಾಡುವುದಾಗಿ ಈವರೆಗೆ ಘೋಷಿಸಿದೆ. ಆದರೆ, ಭಾರತಕ್ಕೆ ಹೋಲಿಸಿದರೆ, ಬಡವರು, ನಿರ್ಗತಿಕರು, ಸರ್ಕಾರದ ಕೊಡುಗೆಯ ಮೇಲಿನ ಅವಲಂಬಿತರು ಕಡಿಮೆ ಇರುವ ಜಪಾನ್‌ ದೇಶವು ಕೊರೊನಾ ಆರ್ಥಿಕ ಪ್ಯಾಕೇಜ್‌ಗೆ ಮೀಸಲಿರಿಸಿರುವ ಮೊತ್ತವು ಆ ದೇಶದ ಜಿಡಿ‍ಪಿಯ ಶೇ 20ರಷ್ಟು. ಸೋಂಕು ತಡೆ ಮತ್ತು ಜನರ ಸಂಕಷ್ಟ ನಿವಾರಣೆಗೆ ಸರ್ಕಾರ ಇನ್ನೂ ಹೆಚ್ಚಿನ ಆಸ್ಥೆ ತೋರಬೇಕಿದೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. 

ಚೀನಾದಿಂದ ತರಿಸಲಾದ ರ‍್ಯಾಪಿಡ್‌ ಟೆಸ್ಟ್‌ ಕಿಟ್‌ಗಳು ದೋಷಪೂರಿತ ಎಂಬುದು ಸೋಂಕು ತಡೆಯುವ ವಿಚಾರದಲ್ಲಿ ದೊಡ್ಡ ಹಿನ್ನಡೆ. ಹಲವು ರಾಜ್ಯಗಳು ದೂರು ಸಲ್ಲಿಸಿದ ಬಳಿಕ, ಎರಡು ದಿನಗಳ ಮಟ್ಟಿಗೆ ಈ ಕಿಟ್‌ಗಳ ಬಳಕೆ ನಿಲ್ಲಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ ಸೂಚಿಸಿದೆ. ಈ ಕಿಟ್‌ಗಳ ಪರೀಕ್ಷಾ ಫಲಿತಾಂಶದ ನಿಖರತೆಯು ಶೇ 5ರಷ್ಟು ಮಾತ್ರ ಎಂದು ರಾಜಸ್ಥಾನದ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಗಂಭೀರವಾದ ವಿಚಾರ.

‘ಚೀನಾದ ವಸ್ತುಗಳಿಗೆ ಖಾತರಿಯೇ ಇಲ್ಲ’ ಎಂಬುದು ನಮ್ಮ ದೇಶದಲ್ಲಿ ಜನರು ಸಾಮಾನ್ಯವಾಗಿ ಆಡುವ ಮಾತು. ಈ ಕಿಟ್‌ಗಳ ದೋಷ ಅದನ್ನು ಪುಷ್ಟೀಕರಿಸಿದೆ. ಕೊರೊನಾದಂತಹ ತ್ವರಿತವಾಗಿ ಮತ್ತು ವ್ಯಾಪಕವಾಗಿ ಹರಡುವ ಸೋಂಕಿನ ಪರೀಕ್ಷೆಗೆ ಸಲಕರಣೆಗಳನ್ನು ಆಮದು ಮಾಡಿಕೊಳ್ಳುವಾಗ ಸರ್ಕಾರ ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂಬ ಆಕ್ಷೇಪವನ್ನು ತಳ್ಳಿಹಾಕಲಾಗದು. ಏಕೆಂದರೆ, ಈ ಕಿಟ್‌ಗಳು ಬಳಕೆಯೋಗ್ಯವಲ್ಲ ಎಂದು ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ಈಗಾಗಲೇ ಹೇಳಿವೆ. ಆದಕಾರಣ, ಚೀನಾದಿಂದ ಕಿಟ್‌ಗಳನ್ನು ಖರೀದಿಸುವಾಗ ಅತೀವ ಜಾಗರೂಕತೆ ಬೇಕಿತ್ತು. ಭಾರತಕ್ಕೆ ಕಿಟ್‌ಗಳನ್ನು ಪೂರೈಸಿದ ಒಂದು ಕಂಪನಿಗೆ ಅಲ್ಲಿನ ಸರ್ಕಾರದ ಮಾನ್ಯತೆಯೂ ಇಲ್ಲ ಎಂಬ ಅಂಶವು ಕಳವಳಕಾರಿ.

ಸೋಂಕಿನಿಂದಾಗಿ ದೇಹದಲ್ಲಿ ಸೃಷ್ಟಿಯಾಗುವ ಪ್ರತಿಕಾಯಗಳನ್ನು ಗುರುತಿಸುವುದಕ್ಕಾಗಿ ರ‍್ಯಾಪಿಡ್‌ ಆ್ಯಂಟಿಬಾಡಿ ಪರೀಕ್ಷೆ ನಡೆಸಲಾಗುತ್ತಿದೆ. ವ್ಯಕ್ತಿಯಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಲು ಸೋಂಕು ತಗುಲಿ ಸ್ವಲ್ಪ ಸಮಯ ಬೇಕು. ಸಮುದಾಯದಲ್ಲಿ ಸೋಂಕು ಯಾವ ರೀತಿಯಲ್ಲಿ ಹರಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಹಾಗೂ ವೈರಾಣುವಿನ ಬಗ್ಗೆ ಸಂಶೋಧನೆ ನಡೆಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢಪಟ್ಟ 36 ದಿನಗಳ ಬಳಿಕವೂ ವ್ಯಕ್ತಿಯಲ್ಲಿ ವೈರಾಣು ಪತ್ತೆಯಾದ ಪ್ರಕರಣ ವರದಿಯಾಗಿದೆ. ಹಾಗಿರುವಾಗ, ಲೋಪದಿಂದ ಕೂಡಿದ ಪರೀಕ್ಷೆಯು ಸೋಂಕು ಹರಡುವಿಕೆ ತಡೆ ಪ್ರಯತ್ನವನ್ನು ಹಳಿ ತಪ್ಪಿಸಬಹುದು. ಕೊರೊನಾ ವೈರಾಣುವಿನ ಬಗ್ಗೆ ಚೀನಾಕ್ಕೆ ಹೆಚ್ಚಿನ ಅರಿವು ಇದೆ. ಹಾಗಿದ್ದೂ, ದೋಷಪೂರಿತ ಕಿಟ್‌ಗಳನ್ನು ಆ ದೇಶ ಕಳುಹಿಸಿದ್ದು ಅಕ್ಷಮ್ಯ. ಚೀನಾದ ಕಿಟ್‌ಗಳು ವಿಶ್ವಾಸಾರ್ಹವಲ್ಲ ಎಂದು ಹಲವು ದೇಶಗಳು ಹೇಳುತ್ತಿದ್ದರೂ ಆ ದೇಶದಿಂದಲೇ ಕಿಟ್‌ಗಳನ್ನು ತರಿಸಿಕೊಂಡದ್ದು ಸಮರ್ಥನೀಯ ಅಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು