ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್‌ ಫಂಡ್ಸ್‌ ತಿದ್ದುಪಡಿ ಮಸೂದೆ ವಂಚನೆಗೆ ಬೀಳಲಿ ಕಡಿವಾಣ

ಚಿಟ್‌ ಫಂಡ್‌ ವಹಿವಾಟು ಸುಗಮಗೊಳಿಸುವ ತಿದ್ದುಪಡಿ ಮಸೂದೆಯಿಂದಾಗಿ ಬಡವರ ಹಣ ಲೂಟಿ ಮಾಡುವವರ ವಂಚನೆಗೆ ಕಡಿವಾಣ ಬೀಳಲಿ. ***
Last Updated 21 ನವೆಂಬರ್ 2019, 20:26 IST
ಅಕ್ಷರ ಗಾತ್ರ

ಚಿಟ್‌ ಫಂಡ್‌ ವಲಯದ ಕ್ರಮಬದ್ಧ ಬೆಳವಣಿಗೆಗೆ ಅನುವಾಗಿಸುವ ಮತ್ತು ಇದರ ವರ್ಚಸ್ಸಿಗೆ ಇತ್ತೀಚಿನ ವರ್ಷಗಳಲ್ಲಿ ಮೆತ್ತಿಕೊಂಡಿರುವ ಕಳಂಕ ತೊಳೆಯುವ ಪ್ರಧಾನ ಉದ್ದೇಶದ ‘ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆ– 2019’ಕ್ಕೆ ಲೋಕಸಭೆಯ ಅಂಕಿತ ಬಿದ್ದಿದೆ. ಚಿಟ್‌ ಫಂಡ್‌ ವಹಿವಾಟನ್ನು ಸರಳಗೊಳಿಸುವ ಮತ್ತು ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವ ಆಶಯವೂ ಇದರ ಹಿಂದೆ ಇದೆ. ಇದರಿಂದಾಗಿ, ವಹಿವಾಟಿನಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಉತ್ತರದಾಯಿತ್ವವೂ ಬರಲಿದೆ. ವ್ಯವಹಾರದಲ್ಲಿನ ಅಡಚಣೆಗಳು ಕೂಡ ನಿವಾರಣೆ ಆಗಲಿವೆ. ಚಿಟ್‌ ಫಂಡ್‌ ವಹಿವಾಟಿನ ಮಿತಿ ಹೆಚ್ಚಿಸುವುದೂ ಸೇರಿದಂತೆ ಹಲವಾರು ರಚನಾತ್ಮಕ ಬದಲಾವಣೆಗಳನ್ನು ಈ ಮಸೂದೆ ಒಳಗೊಂಡಿದೆ.

ಕಾನೂನುಬಾಹಿರ ವಹಿವಾಟಿಗೂ ಚಿಟ್‌ ಫಂಡ್‌ಗೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವಂತಹ ಪಾರಿಭಾಷಿಕಗಳು ಬಳಕೆಗೆ ಬರಲಿವೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಹೆಚ್ಚು ತೆರೆದುಕೊಳ್ಳದ ಬಡವರು ಚಿಟ್‌ ಫಂಡ್‌ ವಹಿವಾಟಿನಲ್ಲಿ ಹಣ ತೊಡಗಿಸುವುದು ಹೆಚ್ಚು. ಉಳಿತಾಯದ ಮಾರ್ಗವಾಗಿ ಮತ್ತು ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಹಣಕಾಸಿನ ನೆರವು ದೊರೆಯುತ್ತದೆ ಎಂಬ ಕಾರಣಕ್ಕೆ ಈ ವರ್ಗದ ಜನರಲ್ಲಿ ಚಿಟ್‌ ಫಂಡ್‌ ಹೆಚ್ಚು ಜನಪ್ರಿಯ. ಈ ಬಗೆಯ ವಹಿವಾಟು ಕಾನೂನಿನ ಚೌಕಟ್ಟಿನಡಿಯೇ ನಡೆಯುತ್ತಿದೆ. ನಿಯಂತ್ರಣಕ್ಕೆ ಒಳಪಡದ ವಂಚನೆ ಉದ್ದೇಶದ ಠೇವಣಿ ಯೋಜನೆಗಳೊಂದಿಗೆ ಇದನ್ನು ಹೋಲಿಸುವಂತಿಲ್ಲ. ಆದರೆ, ನೋಂದಣಿಯಾಗದ ಕಾರಣಕ್ಕೇ ನಿಯಂತ್ರಣಕ್ಕೆ ಒಳಪಡದ ಚಿಟ್‌ ಫಂಡ್‌ ಸಂಸ್ಥೆಗಳ ಸಂಖ್ಯೆಯೇ ಹೆಚ್ಚಿಗೆ ಇರುವುದು ಆತಂಕಕಾರಿ ವಿದ್ಯಮಾನ. ಗ್ರಾಮೀಣ ಆರ್ಥಿಕತೆಯಲ್ಲಿ ಚಿಟ್‌ ಫಂಡ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ವಹಿವಾಟಿನಲ್ಲಿ ವಂಚನೆಗೂ ವಿಪುಲ ಅವಕಾಶಗಳಿವೆ. ಹೀಗಾಗಿ ಹಣ ತೊಡಗಿಸುವ ಮುಗ್ಧ ಜನರ ಹಿತರಕ್ಷಣೆಗೆ ಕಾನೂನು ಬಿಗಿಗೊಳಿಸುವ ಅಗತ್ಯ ಇತ್ತು.

ಇತ್ತೀಚಿನ ವರ್ಷಗಳಲ್ಲಿ ಈ ವಹಿವಾಟಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ದೊಡ್ಡ ವಂಚನೆ ಪ್ರಕರಣಗಳು ಬಯಲಾಗಿವೆ. ಶಾರದಾ ಗ್ರೂಪ್‌, ರೋಸ್‌ ವ್ಯಾಲಿ ಹಗರಣಗಳಲ್ಲಿಮುಗ್ಧರು ದೊಡ್ಡ ಮಟ್ಟದಲ್ಲಿ ವಂಚನೆಗೆ ಒಳಗಾಗಿದ್ದಾರೆ. ಇವು, ಭಾರಿ ಪ್ರಮಾಣದ ಲಾಭದ ಆಸೆ ತೋರಿಸಿ ಜನರ ಹಣ ಲೂಟಿ ಮಾಡಿ ಬಾಗಿಲು ಹಾಕಿವೆ. ಗ್ರಾಮೀಣ ಪ್ರದೇಶದವರು ಮತ್ತು ಬಡವರ ದುಡಿಮೆಯ ಕೋಟ್ಯಂತರ ಹಣ ಈ ವಂಚಕರ ಪಾಲಾಗಿದೆ. ಕಳಂಕಿತ ಸಂಸ್ಥೆಗಳ ಜತೆಗೆ ರಾಜಕಾರಣಿಗಳ ಹೆಸರೂ ತಳಕು ಹಾಕಿಕೊಂಡಿದೆ. 2016ರಿಂದ ಈಚೆಗೆ ಚಿಟ್‌ ಫಂಡ್‌ ಹಗರಣಗಳ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಐದು ಸಾವಿರಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಪ್ರಭಾವಿಗಳ ಕೈವಾಡದಿಂದಾಗಿ ಇಂತಹ ಹಗರಣಗಳು ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ.

ಚಿಟ್‌ ಫಂಡ್‌ ಹೆಸರಿನಲ್ಲಿ ಗರಿಷ್ಠ ಲಾಭದ ಆಮಿಷ ಒಡ್ಡಿ ಜನರನ್ನು ಮರುಳು ಮಾಡುವ ದಂಧೆ ಇಂದು ನಿನ್ನೆಯದಲ್ಲ. ಈ ಬಗೆಯ ವಂಚನೆಯನ್ನು ಬಹಳ ಹಿಂದಿನಿಂದಲೂ ಎಸಗಿರುವುದಕ್ಕೆ ನಿದರ್ಶನಗಳು ಸಿಗುತ್ತವೆ. ಆದರೂ ಜನ ಎಚ್ಚೆತ್ತುಕೊಂಡಿಲ್ಲ. ದೇಶದಲ್ಲಿ 30 ಸಾವಿರದಷ್ಟು ನೋಂದಾಯಿತ ಚಿಟ್‌ ಫಂಡ್‌ಗಳು ಇವೆ. ಆದರೆ ನೋಂದಣಿಯಾಗದ, ಅದೇ ಕಾರಣಕ್ಕೆ ನಿಯಂತ್ರಣಕ್ಕೆ ಒಳಪಡದ ಚಿಟ್‌ ಫಂಡ್‌ಗಳ ಸಂಖ್ಯೆ 30 ಲಕ್ಷದಷ್ಟು ಇರುವ ಅಂದಾಜಿದೆ. ಕಾಯ್ದೆಗಳ ಅಂಕೆಗೆ ನಿಲುಕದ ಚಿಟ್‌ ಫಂಡ್‌ಗಳಿಂದಲೇ ಜನರು ಹೆಚ್ಚಾಗಿ ಮೋಸ ಹೋಗುತ್ತಿದ್ದಾರೆ. ಸುಲಭವಾಗಿ ಮೋಸ ಹೋಗುವವರು ಇರುವವರೆಗೆ ವಂಚಿಸುವವರೂ ಇರುತ್ತಾರೆ. ನಿಯಂತ್ರಣ ಕ್ರಮಗಳು ಬಿಗಿಯಾದರೆ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಹಣಕಾಸು ಸಾಕ್ಷರತೆ ಹೆಚ್ಚಿದರೆ, ಬ್ಯಾಂಕಿಂಗ್‌ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಣೆಯಾಗಿ, ಸುಲಭವಾಗಿ ಹಣಕಾಸು ನೆರವು ದೊರೆಯುವಂತಾದರೆ ಮಾತ್ರ ಹಣಕಾಸು ವಂಚನೆ ಪ್ರಕರಣಗಳಿಗೆ ಮೂಗುದಾರ ಹಾಕಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT