ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಮಿಷನ್‌ ಆರೋಪ: ಮರೆಮಾಚಲು ಆಗದು, ತನಿಖೆಗೆ ಆದೇಶಿಸಲೇಬೇಕು

Last Updated 29 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕಾಮಗಾರಿಗಳ ಗುತ್ತಿಗೆಯ ಬಿಲ್ ಪಡೆಯಲು ಶೇಕಡ 40ರಷ್ಟು ಕಮಿಷನ್ ನೀಡಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಆರೋಪಿಸಿತು. ಇದಾಗಿ ಒಂದು ವರ್ಷ ಕಳೆದಿದ್ದರೂ ಈ ಆರೋಪದ ಬಗ್ಗೆ ತನಿಖೆ ನಡೆದಿಲ್ಲ ಎಂಬುದು ಒಪ್ಪಬಹುದಾದ ವಿಚಾರ ಅಲ್ಲ. ರಾಜ್ಯದಲ್ಲಿ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಮೊತ್ತದ ಶೇ 40ರವರೆಗಿನ ಮೊತ್ತವನ್ನು ಕಮಿಷನ್ ರೂಪದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಬೇಕು,ಇಲ್ಲದಿದ್ದರೆ ಗುತ್ತಿಗೆದಾರರಿಗೆ ಹಣ ಪಾವತಿ ಆಗುವುದಿಲ್ಲ ಎಂದು ಸಂಘವು ಹಿಂದಿನ ವರ್ಷದ ಜುಲೈನಲ್ಲಿ ಆರೋಪಿಸಿತ್ತು.

ಕಮಿಷನ್ ಎಂಬ ಪದವನ್ನು ಸರಳ ವಾಗಿ‘ಲಂಚ’ ಎನ್ನಬಹುದು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಸಂಘವು ಮೊದಲಿಗೆ ತನ್ನ ದೂರನ್ನು ಪ್ರಧಾನಿ ಕಚೇರಿಗೆ ಸಲ್ಲಿಸಿತ್ತು. ಆ ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಲ್ಲಿಗೆ ದೂರನ್ನು ಒಯ್ದಿತ್ತು. ನಂತರ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿತ್ತು. ಸರಿಸುಮಾರು ಒಂದು ವರ್ಷದವರೆಗೆ ಈ ವಿಚಾರವಾಗಿ ಮೌನ ವಹಿಸಿದ ಪ್ರಧಾನಿ ಮೋದಿ ಅವರು,ನಂತರ ಅಸ್ಪಷ್ಟವಾಗಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಗುತ್ತಿಗೆಗಳ ಟೆಂಡರ್‌ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಆಗಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಆದರೆ ವಾಸ್ತವದಲ್ಲಿ ಯಾವ ಬದಲಾವಣೆಯೂ ಜಾರಿಗೆ ಬಂದಿಲ್ಲ ಎಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಆರೋಪಿಸಿದ್ದಾರೆ. ಒಟ್ಟು₹22ಸಾವಿರ ಕೋಟಿ ಮೊತ್ತದ ಬಿಲ್‌ ಪಾವತಿಗಳನ್ನು ಈಗಲೂ ತಡೆಹಿಡಿಯಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಂಘವು ಇದೇ ಮೊದಲ ಬಾರಿಗೆ,ಗುತ್ತಿಗೆದಾರರಿಗೆ ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವರೊಬ್ಬರ ಮೇಲೆ ಬೊಟ್ಟು ಮಾಡಿದೆ. ಬೊಮ್ಮಾಯಿ ಅವರು ಈ ಪ್ರಕರಣದ ಬಗ್ಗೆ ತನಿಖೆಗೆ ಈ ವೇಳೆಗೆ ಆದೇಶ ಹೊರಡಿಸಿ,ಪ್ರಕರಣದ ಆಳಕ್ಕೆ ಇಳಿಯುವ ಕೆಲಸ ಮಾಡಿರಬೇಕಿತ್ತು. ಆದರೆ ಅವರು ಗುತ್ತಿಗೆದಾರರ ಕಡೆಯಿಂದ ದಾಖಲೆಗಳು ಬೇಕು,ಆಧಾರ ಬೇಕು ಎಂದು ಕೇಳುತ್ತಿದ್ದಾರೆ. ಆರೋಪಕ್ಕೆ ಗುರಿಯಾಗಿರುವ ಸಚಿವ ಮುನಿರತ್ನ ಅವರು ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರತಿಕ್ರಿಯೆಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಲಂಚಕ್ಕೆ ಬೇಡಿಕೆ ಇರಿಸುವ ಯಾವುದೇ ವ್ಯಕ್ತಿ ಅದನ್ನು ಮುಕ್ತವಾಗಿ ಮಾಡುವುದಿಲ್ಲ,ಲಂಚ ಕೇಳಿದ್ದಕ್ಕೆ ದಾಖಲೆಗಳನ್ನು ಉಳಿಸಿರುವುದಿಲ್ಲ ಕೂಡ. ಲಂಚ ಪಡೆದುಕೊಂಡಿದ್ದಕ್ಕೆ ರಸೀದಿ ನೀಡುವುದಿಲ್ಲ. ಗುತ್ತಿಗೆದಾರರ ಸಂಘವು ಮಾಡಿರುವ ಆರೋಪಗಳು ನಿಜವೋ ಅಲ್ಲವೋ ಎಂಬುದನ್ನು ವಿಸ್ತೃತ ತನಿಖೆಯ ಮೂಲಕ ಮಾತ್ರವೇ ಕಂಡುಕೊಳ್ಳಬಹುದು, ಆ ತನಿಖೆಯು ಹಣದ ಹರಿವು ಹೇಗಾಗಿದೆ ಎಂಬುದರ ಪರಿಶೀಲನೆ ನಡೆಸಬೇಕಾಗುತ್ತದೆ. ಸಂಘವು ಆರೋಪ ಮಾಡಿ ಒಂದು ವರ್ಷ ಕಳೆದಿದ್ದರೂ ಸರ್ಕಾರವು ತನಿಖೆಗೆ ಮುಂದಾಗುತ್ತಿಲ್ಲದಿರುವುದನ್ನು ಗಮನಿಸಿದರೆ,ಸತ್ಯವು ಹೊರ ಬರುವುದು ಅದಕ್ಕೆ ಬೇಕಾಗಿಲ್ಲ ಎಂದು ಅನ್ನಿಸುತ್ತಿದೆ.

ಕೆಂಪಣ್ಣ ಅವರು ಹಿಂದಿನ ವಾರ ಆರೋಪವನ್ನು ಪುನರುಚ್ಚರಿಸುವ ಮೊದಲು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು,ಹೀಗಾಗಿ ಇಡೀ ಪ್ರಕರಣವು ಈಗ ಕಾಂಗ್ರೆಸ್‌ಪ್ರೇರಿತ ಆಗಿದೆ ಎಂದು ಮುಖ್ಯ ಮಂತ್ರಿ ಹೇಳಿರುವುದು ವಿವೇಕದ ಮಾತಲ್ಲ. ಇದು, ಪ್ರಕರಣದ ವಿಚಾರವಾಗಿ ಯಾವುದೇ ತನಿಖೆ ಸಾಧ್ಯವಿಲ್ಲ ಎನ್ನುವಂಥ ಯತ್ನ. ಸಂಘವು ಮೊದಲಿಗೆ ಪ್ರಧಾನಿ ಹಾಗೂ ಬೊಮ್ಮಾಯಿ ಅವರಲ್ಲಿ ತನ್ನ ದೂರನ್ನು ಒಯ್ದಿತ್ತು. ಆದರೆ ಆ ದೂರಿನ ಆಧಾರದಲ್ಲಿ ಇಬ್ಬರೂ ಯಾವುದೇ ಕ್ರಮ ಕೈಗೊಳ್ಳದೆ ಇದ್ದಾಗ ಸಂಘವು ವಿರೋಧ ಪಕ್ಷದ ಮೊರೆ ಹೋದಂತೆ ಕಾಣುತ್ತಿದೆ. ಸಂಘವು ಆರೋಪ ಹೊರಿಸಿರುವ ಸಚಿವರನ್ನು ಪಾರುಮಾಡಲು ಯತ್ನಿಸುವುದು ಕೂಡ ಬಿಜೆಪಿಗೆ ಶೋಭೆ ತರುವುದಿಲ್ಲ. ವಾಸ್ತವದಲ್ಲಿ ಈ ಸಚಿವರು ಕಾಂಗ್ರೆಸ್ಸಿನಲ್ಲಿ ಇದ್ದಾಗ ‘ಅವರು ಭ್ರಷ್ಟ’ ಎಂದು ಬಿಜೆಪಿಯೇ ದೂರಿತ್ತು. ಅವರು ಬಿಜೆಪಿ ಸೇರಿದ ತಕ್ಷಣ ಪರಿಶುದ್ಧರಾದರೇ?ಗುತ್ತಿಗೆದಾರರು ಲೋಕಾಯುಕ್ತದ ಮೊರೆ ಹೋಗಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಇಲ್ಲಿ ಆರೋಪ ಇರುವುದು ಇಡೀ ಸರ್ಕಾರ ಹಾಗೂ ಸಚಿವರ ಮೇಲೆ. ತನಿಖೆಗೆ ಆದೇಶಿಸಿ,ತಮ್ಮದೇ ನೇತೃತ್ವದ ಸರ್ಕಾರದ ಮೇಲಿನ ಆರೋಪದ ಸತ್ಯಾಸತ್ಯತೆಯನ್ನು ಜಾಹೀರುಪಡಿಸಬೇಕಿರುವುದು ಅವರ ಕರ್ತವ್ಯ.

ಸರ್ಕಾರದ ಗುತ್ತಿಗೆಗಳನ್ನು ನೀಡುವಲ್ಲಿ ಭ್ರಷ್ಟಾಚಾರ ಇದೆ,ಲಂಚಗುಳಿತನ ಇದೆ ಎಂಬುದು ಹಲವರಿಗೆ ಗೊತ್ತಿರುವ ಸಂಗತಿ. ಭ್ರಷ್ಟಾ
ಚಾರಕ್ಕೆ ಆಸ್ಪದವೇ ಇಲ್ಲ ಎಂದು ಅರೆಕ್ಷಣ ಭಾವಿಸುವುದಾದರೆ,ನಮ್ಮ ರಸ್ತೆಗಳು ದಶಕಗಳಿಂದ ಇರುವ ಕೆಟ್ಟ ಸ್ಥಿತಿಯಲ್ಲಿ ಇರುತ್ತಿದ್ದವೇ?ನಗರದ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಇಷ್ಟು ನಿಷ್ಕ್ರಿಯವಾಗಿರುತ್ತಿತ್ತೇ?ಈ ವೇಳೆಗೆ ನಗರಗಳಲ್ಲಿ ಒಳ್ಳೆಯ ವಾಹನ ನಿಲುಗಡೆ ವ್ಯವಸ್ಥೆ ಇಲ್ಲವಾಗಿರುತ್ತಿತ್ತೇ?ಲಂಚವಾಗಿ ಪಡೆಯುವ ಹಣವನ್ನು ಅಧಿಕಾರಿಶಾಹಿ ವ್ಯವಸ್ಥೆಯಲ್ಲಿ ಹಾಗೂ ರಾಜಕಾರಣಿಗಳ ನಡುವೆ ಹಂಚಿಕೊಳ್ಳುವ ಸಾಂಸ್ಥಿಕ ವ್ಯವಸ್ಥೆಯೊಂದು ಇದೆ ಎಂಬುದೂ ಬಹುತೇಕರಿಗೆ ಗೊತ್ತಿದೆ. ಈ ರೀತಿ ಲಂಚದ ಹಣ ಹಂಚಿಕೊಳ್ಳುವುದನ್ನು ದಶಕಗಳಿಂದ ಕರಗತ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರು ಈ ವ್ಯವಸ್ಥೆಯಲ್ಲಿ ಸ್ವಇಚ್ಛೆಯಿಂದ ಪಾಲುದಾರರೂ ಆಗಿದ್ದರು. ಲಂಚಕ್ಕಾಗಿನ ಬೇಡಿಕೆಯು ನಿಭಾಯಿಸುವ ಮಟ್ಟದಲ್ಲಿ ಇದ್ದಷ್ಟು ಕಾಲ,ತಮ್ಮನ್ನು ದಶಕಗಳಿಂದ ಬೆಳೆಸಿದ್ದ ಈ ವ್ಯವಸ್ಥೆಯನ್ನು ಇಲ್ಲವಾಗಿಸುವ ಬಯಕೆ ಅವರಿಗೂ ಇರಲಿಲ್ಲ ಎಂಬಂತೆ ಕಾಣುತ್ತದೆ. ವ್ಯವಸ್ಥೆಯು ತೀರಾ ದುರಾಸೆಗೆ ತಿರುಗದೆ ಇದ್ದಿದ್ದರೆ,ಗುತ್ತಿಗೆದಾರರ ವಹಿವಾಟಿನ ಜೀವ ಹಿಂಡುವ ಸ್ಥಿತಿಗೆ ತಲುಪದೆ ಇದ್ದಿದ್ದರೆ ಅವರು ದೂರು ಹೇಳುವ ಮಟ್ಟಕ್ಕೆ ಬಹುಶಃ ಬರುತ್ತಿರಲಿಲ್ಲವೇನೋ.

ಸರ್ಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ದೂರು ಇರುವುದು ಗುತ್ತಿಗೆದಾರರಲ್ಲಿ ಮಾತ್ರವೇ ಅಲ್ಲ ಎಂಬುದನ್ನು ಗಮನಿಸಬೇಕು. ಸರ್ಕಾರವು ಅನುದಾನ ಬಿಡುಗಡೆ ಮಾಡುವ ಹಲವು ಸಂಸ್ಥೆಗಳಿಂದಲೂ ಇಂತಹ ಆರೋಪಗಳು ಕೇಳಿಬಂದಿವೆ. ಅಂದರೆ, ಅನುದಾನದ ಒಟ್ಟು ಮೊತ್ತದಲ್ಲಿ ಶೇಕಡ 30ರಿಂದ ಶೇ 40ರವರೆಗೆ ಕಡಿತಕ್ಕೆ ಒಪ್ಪಿಗೆ ನೀಡದಿದ್ದರೆ ಅನುದಾನದ ಮೊತ್ತ ಬಿಡುಗಡೆ ಆಗುವುದೇ ಇಲ್ಲ ಎಂಬ ಆರೋಪಗಳು ಇವೆ. ಸಹಾಯಕ ಪ್ರಾಧ್ಯಾಪಕರು ಹಾಗೂ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದಾಗ ಸರ್ಕಾರವು ಆರಂಭದಲ್ಲಿ ಅದನ್ನು ಅಲ್ಲಗಳೆಯಿತು,ತನಿಖೆಗೆ ಆದೇಶಿಸುವುದನ್ನು ಸಾಧ್ಯವಾದಷ್ಟು ಕಾಲ ವಿಳಂಬ ಮಾಡಿತು. ನಂತರ ಹೆಜ್ಜೆ ಹಿಂದೆ ಸರಿಸಿ,ಒಲ್ಲದ ಮನಸ್ಸಿನಿಂದ ತನಿಖೆಗೆ ಆದೇಶಿಸಿತು. ಈಗ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು 13 ಸಾವಿರಕ್ಕೂ ಹೆಚ್ಚಿನ ಶಾಲೆಗಳ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸುವ ಸಂಘಟನೆಯು ಪ್ರಧಾನಿಯವರಿಗೆ ದೂರು ನೀಡಿದೆ.

ಇವನ್ನೆಲ್ಲ ಉಪೇಕ್ಷೆ ಮಾಡುವ ಸರ್ಕಾರವು ಯಾವುದನ್ನು ಇನ್ನು ಮುಂದೆ ಮುಚ್ಚಿಡಲು ಸಾಧ್ಯ ಇಲ್ಲವೋ ಅದನ್ನು ಮುಚ್ಚಿಡಲು ಯತ್ನಿಸುತ್ತಿದೆ. ಹೀಗೆ ಮಾಡುವ ಮೂಲಕ ಬೊಮ್ಮಾಯಿ ಅವರು ತಾವು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಮರೆಮಾಚಬಹುದು. ಅಲ್ಲದೆ,ತಮ್ಮ ಹಿಂದಿನ ಅವಧಿಯಲ್ಲಿನ ಭ್ರಷ್ಟಾಚಾರವನ್ನೂ ಮರೆಮಾಚಬಹುದು. ಈ ಮೂಲಕ ಅವರು ಭ್ರಷ್ಟಾಚಾರ ಹಾಗೂ ಅದನ್ನು ಪೋಷಿಸುವ ಈ ವ್ಯವಸ್ಥೆಯನ್ನು ಮುಂದೊಂದು ದಿನ ಕೊನೆಗೊಳಿಸುವ ಯಾವುದೇ ಪ್ರಯತ್ನವನ್ನು ಮುಗಿಸಿಹಾಕುತ್ತಿರಬಹುದು. ಆದರೆ,ಈ ರೀತಿ ಮಾಡದೆ ಆರೋಪಗಳ ಬಗ್ಗೆ ಸಿಬಿಐ,ಇ.ಡಿ.,ಐ.ಟಿ. ಜಂಟಿ ತನಿಖೆಗೆ ಅವರು ಆದೇಶ ಮಾಡಿದರೆ ಅದು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾಡುವ ದೊಡ್ಡ ಸೇವೆ ಆಗುತ್ತದೆ.

ಪ್ರಧಾನಿ ಮೋದಿ ಅವರು ಆಗಸ್ಟ್‌ 15ರಂದು ಕೆಂಪುಕೋಟೆಯಲ್ಲಿ ನಿಂತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಆದರೆ ಇದುವರೆಗೆ ನಾವು ಕಂಡಿರುವ ವಿದ್ಯಮಾನಗಳು ಅವರ ಮಾತುಗಳಲ್ಲಿ ಭರವಸೆ ಮೂಡಿಸುವಂತೆ ಇಲ್ಲ. ಇ.ಡಿ., ಸಿಬಿಐ, ಐ.ಟಿ.ಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರ ವಿರುದ್ಧ ಬಹಳ ಮುಕ್ತವಾಗಿ ತನಿಖೆ ನಡೆಸುತ್ತವೆ,ಕೆಲವೊಮ್ಮೆ ಆಧಾ ರವೇ ಇಲ್ಲದಿದ್ದರೂ ತನಿಖೆ ನಡೆಸುತ್ತವೆ,ಯಾವುದಾದರೂ ಒಂದು ಕಳಂಕವನ್ನು ಹುಡುಕುವ ದುರು ದ್ದೇಶದಿಂದ ತನಿಖೆ ನಡೆಸುತ್ತವೆ. ಆದರೆ ಪ್ರಧಾನಿಯವರು ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರದ ಅರೋಪದ ಬಗ್ಗೆ ತನಿಖೆಗೆ ಆದೇಶಿಸಿಲ್ಲ. ಇದು ರವಾನೆ ಮಾಡುವ ಸಂದೇಶ ಒಂದೇ. ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವುದಾಗಿ ಮತ್ತೆ ಮತ್ತೆ ಮಾಡುವ ಘೋಷಣೆಗಳು ದೊಡ್ಡ ದನಿಯ ಮಾತುಗಳು ಮಾತ್ರ. ಅದರ ಹಿಂದೆ ಇರುವ ನಿಜವಾದ ಗುರಿ ತಮ್ಮ ನೇತೃತ್ವದ ಸರ್ಕಾರ ಹಾಗೂ ಪಕ್ಷಕ್ಕೆ ವ್ಯಕ್ತವಾಗುವ ಎಲ್ಲ ಟೀಕೆಗಳನ್ನು,ರಾಜಕೀಯ ವಿರೋಧಗಳನ್ನು ನಿರ್ಮೂಲಗೊಳಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT