ಭಾನುವಾರ, ಜೂನ್ 7, 2020
22 °C

ಸಂಪಾದಕೀಯ | ವಲಸಿಗರ ಸಂಚಾರಕ್ಕೆ ಅನುಮತಿ ಕ್ರಿಯೆ ಚುರುಕಿನಿಂದ ನಡೆಯಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ ನಾನಾ ಭಾಗಗಳಲ್ಲಿ ಸಿಲುಕಿಕೊಂಡು ತವರು ನೆಲೆಗಳಿಗೆ ಮರಳಲು ತುದಿಗಾಲ ಮೇಲೆ ಕಾದುನಿಂತಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಆ ಅವಕಾಶವು ಇದೀಗ ಕೂಡಿಬಂದಿದೆ. ವಿವಿಧ ಕಾರಣಗಳಿಂದಾಗಿ ಹೊರ ರಾಜ್ಯಗಳಲ್ಲಿದ್ದ ಅವರಿಗೆ ಊರು ಸೇರಿಕೊಳ್ಳಲು ಅಗತ್ಯ ಸಂಚಾರದ ವ್ಯವಸ್ಥೆಯನ್ನು ಮಾಡುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಸಂತ್ರಸ್ತರೆಲ್ಲರೂ ಸುಸೂತ್ರವಾಗಿ ತವರು ಸೇರುವಂತಾಗಲು ರಾಜ್ಯ, ರಾಜ್ಯಗಳ ನಡುವಿನ ಸಮನ್ವಯಕ್ಕಾಗಿ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದಾಗ ಜನಸಂಚಾರಕ್ಕೂ ನಿರ್ಬಂಧವನ್ನು ವಿಧಿಸಲಾಗಿತ್ತು. ಕೋಟ್ಯಂತರ ಮಂದಿ ತಮ್ಮ ಊರುಗಳನ್ನು ಸೇರಲಾಗದೆ, ಇದ್ದ ಸ್ಥಳದಲ್ಲೂ ಆರಾಮವಾಗಿ ಉಳಿಯಲಾಗದೆ ಭಾರಿ ಸಂಕಷ್ಟಕ್ಕೆ ಸಿಲುಕಿದ್ದರು.

ಮೊದಲ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಸಾವಿರಾರು ಜನ ನಡೆದುಕೊಂಡೇ ತಮ್ಮ ಊರುಗಳಿಗೆ ಮರಳಿದ್ದರು. ಪುಟ್ಟ ಕಂದಮ್ಮಗಳನ್ನು, ಸಾಮಾನು ಸರಂಜಾಮುಗಳನ್ನು, ಕೆಲವು ಪ್ರಸಂಗಗಳಲ್ಲಿ ವಯೋವೃದ್ಧರನ್ನೂ ಹೊತ್ತ ಕಾರ್ಮಿಕರು ನಡೆದು ಹೋಗುತ್ತಿದ್ದ ದೃಶ್ಯಗಳು ಮನ ಮಿಡಿಯುವಂತಿದ್ದವು. ದಾರಿ ಬುತ್ತಿ ಇಲ್ಲದಿದ್ದರೂ ನೆತ್ತಿ ಸುಡುವ ಬಿಸಿಲಿದ್ದರೂ ಲೆಕ್ಕಿಸದೇ ಅವರೆಲ್ಲ ಹೆಜ್ಜೆ ಹಾಕಿದ್ದರು. ಮಾರ್ಗಮಧ್ಯದಲ್ಲಿ ಹಲವರು ಹಸಿವಿನಿಂದ ಇಲ್ಲವೆ ಅನಾರೋಗ್ಯದಿಂದ ಮೃತಪಟ್ಟ ಘಟನೆಗಳೂ ನಡೆದಿದ್ದವು.

ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಜನಸಂಚಾರದ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿದ ಬಳಿಕವೂ ಊರು ಸೇರುವ ಧಾವಂತ ನಿಂತಿರಲಿಲ್ಲ. ವಲಸಿಗರ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸರ್ಕಾರ ಈಗ ಕೈಗೊಂಡಿರುವ ನಿರ್ಧಾರ, ಅನ್ಯ ರಾಜ್ಯಗಳಲ್ಲಿ ಸಿಲುಕಿಕೊಂಡವರು ಹಾಗೂ ಅವರ ಬರುವಿಗಾಗಿ ಕಾದಿರುವ ಅವರ ಸಂಬಂಧಿಕರಲ್ಲಿ ಒಂದು ವಿಧದ ನಿರಾಳಭಾವ ಮೂಡಿಸಿದೆ.

ಕೇಂದ್ರ ಹೊರಡಿಸಿರುವ ಆದೇಶದ ಪ್ರಕಾರ, ಮೇ 4ರಿಂದ ವಲಸಿಗರನ್ನು ಕರೆದೊಯ್ಯುವ ಪ್ರಕ್ರಿಯೆಯು ಶುರುವಾಗಲಿದೆ. ರಾಜ್ಯ– ರಾಜ್ಯಗಳ ಮತ್ತು ಬೇರೆ ಬೇರೆ ಜಿಲ್ಲೆಗಳ ನಡುವೆ ವಲಸಿಗರು ಮತ್ತು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸುತ್ತಿದೆ.

ರಾಜ್ಯದ ಎಷ್ಟು ವಲಸಿಗರು, ಯಾವ್ಯಾವ ರಾಜ್ಯದಲ್ಲಿ ಇದ್ದಾರೆ ಎಂಬುದರ ಮಾಹಿತಿಯನ್ನು ಉಳಿದಿರುವ 2–3 ದಿನಗಳ ಕಾಲಾವಕಾಶದಲ್ಲಿ ರಾಜ್ಯ ಸರ್ಕಾರ ಕಲೆಹಾಕಬೇಕು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಗೋವಾದಲ್ಲಿ ರಾಜ್ಯದ ಹೆಚ್ಚಿನ ಸಂಖ್ಯೆಯ ವಲಸಿಗರು ಇದ್ದಾರೆ ಎನ್ನುವುದೊಂದು ಅಂದಾಜು. ಆಯಾ ರಾಜ್ಯದ ಜತೆ ಸಮನ್ವಯ ಸಾಧಿಸಿ ತ್ವರಿತವಾಗಿ ವಲಸಿಗರನ್ನು ಕರೆತರಲು ನೋಡಲ್‌ ಅಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕು.

ಅಗತ್ಯ ಸಂಖ್ಯೆಯ ಬಸ್‌ಗಳ ವ್ಯವಸ್ಥೆಯನ್ನೂ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯನ್ನೂ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಬೇಕು. ಹಾಗೆ ಕರೆತಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕು ಎನ್ನುವ ಕೇಂದ್ರದ ಸೂಚನೆಯನ್ನು ತಪ್ಪದೇ ಪಾಲಿಸಬೇಕು. ಏಕೆಂದರೆ, ಬೇರೆ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಕರೆತರುವುದು ಎಷ್ಟು ಮುಖ್ಯವೋ ರಾಜ್ಯದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸುವುದು ಕೂಡ ಅಷ್ಟೇ ಮುಖ್ಯ.

ಹೊರರಾಜ್ಯಗಳಿಂದ ಹೀಗೆ ಉದ್ಯೋಗ ಕಳೆದುಕೊಂಡು ಬಂದವರಿಗೆ ಕೆಲಸ ಒದಗಿಸಿಕೊಡುವ, ಅವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಹೊಣೆಯೂ ರಾಜ್ಯ ಸರ್ಕಾರದ ಮೇಲಿದೆ. ಇದರ ಜೊತೆಯಲ್ಲೇ, ಕರ್ನಾಟಕದ ಒಳಗೇ ಬೇರೆ ಬೇರೆ ಜಿಲ್ಲೆಗಳಿಗೆ ಕೆಲಸಕ್ಕೆ ಹೋಗಿದ್ದ, ಈಗ ಅಲ್ಲೇ ಸಿಲುಕಿಕೊಂಡಿರುವ ರಾಜ್ಯದೊಳಗಿನ ವಲಸೆ ಕಾರ್ಮಿಕರನ್ನೂ ಅವರ ಊರುಗಳಿಗೆ ತಲುಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.

ಅನ್ಯ ರಾಜ್ಯಗಳ ವಲಸೆ ಕಾರ್ಮಿಕರನ್ನು ಮತ್ತೆ ಅವರ ಊರುಗಳಿಗೆ ಸೇರಿಸುವುದು ಎಷ್ಟು ಮುಖ್ಯವೋ, ನಮ್ಮದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸುವುದೂ ಅಷ್ಟೇ ಮುಖ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು