ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಬಾರದ ಕೋವಿಡ್: ಮೈಮರೆವು ಸರಿಯಲ್ಲ, ಎಚ್ಚರ ಬೇಕು

Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೋವಿಡ್–19 ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಸಾಂಕ್ರಾಮಿಕವು ನಿಯಂತ್ರಣಕ್ಕೇ ಬರುತ್ತಿಲ್ಲ. ರಾಜ್ಯದಲ್ಲಿ 6.68 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ಪತ್ತೆಯಾದ ರಾಜ್ಯಗಳ ಯಾದಿಯಲ್ಲಿ ಕರ್ನಾಟಕಮೂರನೇ ಸ್ಥಾನದಲ್ಲಿದೆ. ಇದಕ್ಕಿಂತ ಆತಂಕಕಾರಿ ವಿಷಯವೆಂದರೆ, ಅತಿಹೆಚ್ಚು ಸಕ್ರಿಯ ಪ್ರಕರಣಗಳು ಇರುವ ರಾಜ್ಯಗಳ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ. 1.16 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌–19 ಪೀಡಿತರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಅಥವಾ ಮನೆಗಳಲ್ಲಿ ಪ್ರತ್ಯೇಕವಾಸದ ಮೊರೆ ಹೋಗಿದ್ದಾರೆ. 841 ಜನ ಐಸಿಯುನಲ್ಲಿ ಇದ್ದಾರೆ. ಬೆಂಗಳೂರು ನಗರವೊಂದರಲ್ಲೇ 2.62 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 58 ಸಾವಿರ ದಾಟಿದೆ. ಅಕ್ಟೋಬರ್ 6ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್–19 ‘ಹಾಟ್‌ಸ್ಪಾಟ್‌’ಗಳಲ್ಲಿ ಮೈಸೂರು 19ನೇ ಸ್ಥಾನದಲ್ಲಿದೆ. ಇದು, ಕಳವಳ ಮೂಡಿಸುವಂತಹ ಸಂಗತಿ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರವು ಪ್ರಶಂಸೆ ವ್ಯಕ್ತಪಡಿಸಿತ್ತು. ಜೂನ್‌ ನಡುಘಟ್ಟ ದಲ್ಲೂ ಬೆಂಗಳೂರಿನಲ್ಲಿ ದಿನಕ್ಕೆ ಸರಿಸುಮಾರು 300 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆ ಹೊತ್ತಿನಲ್ಲಿ ಮುಂಬೈ, ದೆಹಲಿ ಹಾಗೂ ಚೆನ್ನೈ ನಗರಗಳಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಿರುವಾಗ, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ದಿನವೂ ಸರಾಸರಿ 9 ಸಾವಿರದಿಂದ 10 ಸಾವಿರದಷ್ಟು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ. ಇಂಥದ್ದೊಂದು ಸ್ಥಿತಿಗೆ ರಾಜ್ಯ ತಲುಪಲು ಕಾರಣ ಏನು? ಇದಕ್ಕೆ ಉತ್ತರ ಸೂರ್ಯಸ್ಪಷ್ಟ. ಲಾಕ್‌ಡೌನ್‌ಹಂತಹಂತವಾಗಿ ತೆರವಾಗುತ್ತಾ ಬಂದ ನಂತರ ಹೆಚ್ಚಿನವರು ಕೋವಿಡ್ ಮಾರ್ಗದರ್ಶಿ ಸೂತ್ರಗಳು ಹಾಗೂ ಸುರಕ್ಷಾ ನಿಯಮಗಳನ್ನು ಗಾಳಿಗೆ ತೂರಿದರು. ಪರಸ್ಪರ ಅಂತರ ಕಾಯ್ದುಕೊಳ್ಳುವು
ದನ್ನು ಮರೆತರು. ಕೆಲವರು ಮಾಸ್ಕ್ ಅನ್ನು ದಂಡಕ್ಕೆ ಹೆದರಿಯಷ್ಟೇ ಕುತ್ತಿಗೆಗೋ ಗಲ್ಲಕ್ಕೋ ಸಿಕ್ಕಿಸಿಕೊಂಡು ಓಡಾಡುವುದನ್ನು ಕಾಣುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸ್‌ ಮಾಡುವ ಹಾಗೂ ಜನ ಸೇರುವುದನ್ನು ನಿಯಂತ್ರಿಸುವ ವ್ಯವಸ್ಥೆ ಮಾಯವಾಗಿದೆ. ಕೆಲವು ಬಸ್‌ಗಳಲ್ಲಿ ಜನ ಇಡುಕಿರಿದು ಸಂಚರಿಸತೊಡಗಿದ್ದಾರೆ. ಸ್ಯಾನಿಟೈಸರ್ ನೀಡುವುದು ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲೂ ನಡೆಯುತ್ತಿಲ್ಲ. ಧಾರ್ಮಿಕ ಕ್ಷೇತ್ರಗಳಿಗೆ ಜನ ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಪ್ರತಿಭಟನೆ, ಸಾರ್ವಜನಿಕ ಸಭೆಗಳನ್ನು ನಡೆಸುವವರಿಗೆ ಕೋವಿಡ್‌ನ ಆತಂಕವಿಲ್ಲ. ಆಡಳಿತಯಂತ್ರ ಕೂಡ ಜನರ ಇಂತಹ ವರ್ತನೆಗೆ ಕಡಿವಾಣ ಹಾಕುವ ಯತ್ನ ಕೈಬಿಟ್ಟಿರುವಂತಿದೆ. ಕೋವಿಡ್ ಚಿಕಿತ್ಸೆಯ ವಿಷಯದಲ್ಲಿ ಸರ್ಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ತಿಂಗಳುಗಳಿಂದ ‌ಹೇಳುತ್ತ ಬರಲಾಗಿದೆಯಾದರೂ ರೋಗಿಗಳ ಕಹಿ ಅನುಭವ ಕಥನಗಳು ಬೇರೆಯದನ್ನೇ ಹೇಳುತ್ತಿವೆ. ಇನ್ನು ಒಂದು ವಾರದಲ್ಲಿ ಚಿತ್ರಮಂದಿರಗಳು, ಮಾಲ್‌ಗಳ ಬಾಗಿಲು ತೆರೆಯುವ ನಿರೀಕ್ಷೆಯಿದೆ. ಶಾಲಾ–ಕಾಲೇಜುಗಳನ್ನು ಆರಂಭಿಸುವ ನಿರ್ಧಾರ ಕೈಗೊಳ್ಳಲು ಸಭೆಗಳು ನಡೆಯುತ್ತಿವೆ. ಇದೇ ಉಡಾಫೆಯ ಮನಃಸ್ಥಿತಿಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿದರೆ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ ಮಾಲ್‌ಗಳಲ್ಲಿ ಜಮಾವಣೆಗೊಂಡರೆ ಸೋಂಕು ಇನ್ನಷ್ಟು ಜನರಿಗೆ ವ್ಯಾಪಿಸುವ ಅಪಾಯವಿದೆ. ಕೋವಿಡ್ ಪರೀಕ್ಷಾ ವರದಿ ಸೋಂಕಿತರ ಕೈಸೇರುವುದು ಈಗಲೂ ತಡವಾಗುತ್ತಿದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ವೈದ್ಯಕೀಯ ವ್ಯವಸ್ಥೆಯ ಮೇಲೆ ಇನ್ನಷ್ಟು ಹೊರೆ ಬೀಳುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ಮಾಡಿಕೊಟ್ಟಿರುವುದು ಸರಿ. ಆದರೆ, ಮೈಮರೆತು, ಸುರಕ್ಷಾ ಕ್ರಮಗಳನ್ನು ನಾಗರಿಕರು ಗಾಳಿಗೆ ತೂರುವುದು ಸರಿಯಲ್ಲ. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳದೆ ವಿಧಿಯಿಲ್ಲ. ಎಚ್ಚರ ತಪ್ಪಿದರೆ ಬಾಣಲೆಯಿಂದ ಬೆಂಕಿಗೆ ಬೀಳಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT