ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗಲಿ

Last Updated 30 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಪ್ರಸರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹದಿನೈದು ದಿನಗಳ ಕಾಲ ಕಟ್ಟೆಚ್ಚರ ವಹಿಸುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಅಗತ್ಯವಾಗಿದ್ದ ಕ್ರಮ. ಕೋವಿಡ್–‌ 19 ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿರುವುದರಿಂದ, ಸೋಂಕಿನ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಬೇಕಾದ ಅನಿವಾರ್ಯ ರಾಜ್ಯ ಸರ್ಕಾರದ್ದಾಗಿದೆ. ದಿನದ ದುಡಿಮೆಯನ್ನು ನೆಚ್ಚಿಕೊಂಡ ಜನಸಾಮಾನ್ಯರನ್ನು ಸಂಕಟಕ್ಕೆ ದೂಡುವ ಲಾಕ್‌ಡೌನ್‌ ಅಥವಾ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಕಠಿಣ ನಿರ್ಧಾರದ ಬದಲಿಗೆ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ.ಲಾಕ್‌ಡೌನ್‌ನಿಂದ ವೈರಾಣು ಪ್ರಸರಣದ ನಿಯಂತ್ರಣದ ಸಾಧನೆಗಿಂತಲೂ ಜನಸಾಮಾನ್ಯರ ಬದುಕುಗಳ ಮೇಲೆ ಉಂಟಾಗುವ ದುಷ್ಪರಿಣಾಮವೇ ದೊಡ್ಡದಾಗಿರುತ್ತದೆ. ಲಾಕ್‌ಡೌನ್‌ ಇಲ್ಲ ಎಂದು ಮುಖ್ಯಮಂತ್ರಿ ಹೇಳಿರುವುದು ಸಮಾಜದ ಹಲವು ವರ್ಗಗಳಲ್ಲಿ ನೆಮ್ಮದಿ ಮೂಡಿಸುವಂತಹ ಮಾತು. ನೂತನ ಮಾರ್ಗಸೂಚಿಯ ಪ್ರಕಾರ, ಮುಂದಿನ ಹದಿನೈದು ದಿನಗಳ ಕಾಲ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ, ಧರಣಿಗಳಿಗೆ ಅವಕಾಶವಿಲ್ಲ ಹಾಗೂ ಮದುವೆ ಸೇರಿದಂತೆ ಯಾವುದೇ ಸಮಾರಂಭದಲ್ಲಿ 500ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಮದುವೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾದರೆ ಕಲ್ಯಾಣಮಂಟಪಗಳ ಮಾಲೀಕರನ್ನೇ ಹೊಣೆಯಾಗಿಸುವ ಎಚ್ಚರಿಕೆ ನೀಡಲಾಗಿದೆ. ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಜನರು ಒಂದೆಡೆ ಸೇರದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ವಿವಿಧ ಇಲಾಖೆಗಳ ಮೂಲಕ ಪ್ರತ್ಯೇಕವಾಗಿ ಆದೇಶಗಳು ಹೊರಡುವುದರಿಂದ ಆಡಳಿತದಲ್ಲಿ ಸಮನ್ವಯದ ಕೊರತೆ ಎದುರಾಗುವುದಲ್ಲದೆ, ಜನಸಾಮಾನ್ಯರಲ್ಲೂ ಗೊಂದಲ ಉಂಟಾಗುತ್ತದೆ. ಇಂಥ ಗೊಂದಲ ತಪ್ಪಿಸಲು, ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಆದೇಶ ಮತ್ತು ಸುತ್ತೋಲೆಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಹೊರಡಿಸುವ ನಿರ್ಧಾರ ಸಮರ್ಪಕವಾಗಿದೆ.

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಪುನರುಚ್ಚರಿಸಿದೆ. ಆದರೆ, ಈ ಎಚ್ಚರ ಬಾಯಿಮಾತಿಗೆ ಸೀಮಿತವಾಗಬಾರದು ಹಾಗೂ ಮಾರ್ಗಸೂಚಿಯನ್ನು ಜನಸಾಮಾನ್ಯರು ಮಾತ್ರ ಪಾಲಿಸಿದರೆ ಸಾಕು ಎನ್ನುವಂತಾಗಬಾರದು. ಪ್ರತಿಭಟನೆ, ಸಮಾವೇಶಗಳನ್ನು ನಿರ್ಬಂಧಿಸಿರುವುದು ಅಗತ್ಯವಾಗಿದ್ದ ಕ್ರಮವಾದರೂ, ಇಂಥ ಸಮಾವೇಶಗಳ ಮುಂಚೂಣಿಯಲ್ಲಿ ರಾಜಕಾರಣಿಗಳೇ ಇರುವುದನ್ನು ಮರೆಯಬಾರದು. ವಿವಿಧ ಸಂದರ್ಭಗಳಲ್ಲಿ ಶಾಸಕರು ಹಾಗೂ ಸಚಿವರು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿರುವ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಿರುವ ಉದಾಹರಣೆಗಳಿಲ್ಲ. ಕೋವಿಡ್‌ ಮಾರ್ಗಸೂಚಿಗಳ ಪಾಲನೆಗೆ ರಾಜಕಾರಣಿಗಳು ಅತೀತರೆನ್ನುವ ರೀತಿ ಸರ್ಕಾರ ವರ್ತಿಸಬಾರದು. ನಿಯಮಗಳನ್ನು ಮುರಿದಾಗ ಜನಸಾಮಾನ್ಯ ಅಥವಾ ಜನಪ್ರತಿನಿಧಿ ಎನ್ನುವ ತಾರತಮ್ಯ ಮಾಡದೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಕೊರೊನಾ ಉಲ್ಬಣಗೊಳ್ಳದಂತೆ ವರ್ತಿಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಶಾಲೆಗಳಿಗೆ ಸಂಬಂಧಿಸಿದಂತೆಯೂ ಸರ್ಕಾರ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ. ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಲು ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು, ಶಾಲೆಗಳಿಗೆ ಅಲ್ಪಕಾಲದ ಬೇಸಿಗೆ ರಜೆ ನೀಡುವುದು ಅಗತ್ಯ. ಮಕ್ಕಳು ಮತ್ತು ಶಿಕ್ಷಕರಿಗೆ ಸಂಬಂಧಿಸಿದಂತೆ ಕಾದುನೋಡುವ ವಿಳಂಬ ನೀತಿ ಸಲ್ಲದು. ಕೊರೊನಾ ಸೋಂಕು ನಿಯಂತ್ರಣದ ನಿರ್ಣಾಯಕ ಹೋರಾಟದಲ್ಲಿ ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಬೇಕಾಗಿದೆ. ರೋಗ ಲಕ್ಷಣಗಳುಳ್ಳ ಕೆಲವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಇಂಥ ಹಿಂಜರಿಕೆ ವೈಯಕ್ತಿಕವಾಗಿ ಮಾತ್ರವಲ್ಲದೆ ಸಮಾಜದ ಹಿತಕ್ಕೂ ಅಪಾಯ ಉಂಟುಮಾಡಬಲ್ಲದು. ಸೋಂಕಿಗೊಳಗಾಗಿ ಪ್ರತ್ಯೇಕ ವಾಸದಲ್ಲಿ ಇರುವವರು ಮನೆ ಆರೈಕೆ ವೇಳೆ ಸಮಸ್ಯೆ ಎದುರಿಸುತ್ತಿರುವುದು ಆರೋಗ್ಯ ಇಲಾಖೆಯ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ ಸದ್ಯದ ಕೋವಿಡ್‌ ವಿರುದ್ಧದ ಹೋರಾಟದ ಅತ್ಯುತ್ತಮ ಮಾರ್ಗವಾಗಿದೆ. ಕೋವಿಡ್‌ ಮಾರ್ಗಸೂಚಿ ಅನುಷ್ಠಾನದ ಜೊತೆಜೊತೆಗೆ ಲಸಿಕೆ ಅಭಿಯಾನಕ್ಕೂ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT