ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೊರೊನಾ ಸೋಂಕು ನಿಯಂತ್ರಣ ಕೇರಳದ ಮಾದರಿ ನಡೆ

Last Updated 13 ಏಪ್ರಿಲ್ 2020, 21:19 IST
ಅಕ್ಷರ ಗಾತ್ರ

ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಾಣು ಸೋಂಕು ಜಗತ್ತಿನ ಎಲ್ಲ ದೇಶಗಳಿಗೂ ಆತಂಕ ತಂದೊಡ್ಡಿದೆ. ವಿಶ್ವದಾದ್ಯಂತ 18.70 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗಲಿದ್ದು, 1.15 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಭಾರತದಲ್ಲಿ 9,500ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದ್ದು, 330ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆಯಾದದ್ದು ಕೇರಳದಲ್ಲಿ. ವುಹಾನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಜನವರಿ 30ರಂದು ಕೇರಳಕ್ಕೆ ವಾಪಸಾದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿತ್ತು. ವಿದೇಶದಲ್ಲಿ ನೆಲೆಸಿರುವ ಕೇರಳೀಯರ ಸಂಖ್ಯೆ ದೊಡ್ಡದು. ಅದರಲ್ಲೂ ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಮಲಯಾಳಿಗಳ ಸಂಖ್ಯೆ ಹೆಚ್ಚಾಗಿದೆ. ಕೇರಳದ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಜನವರಿಯಿಂದ ಸಾವಿರಾರು ಜನರು ವಿದೇಶಗಳಿಂದ ಬಂದಿಳಿದಿದ್ದಾರೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಆರಂಭದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈ ರಾಜ್ಯಗಳ ಪೈಕಿ ಕೇರಳದಲ್ಲಿ ಗುಣಮುಖರಾದವರ ಪ್ರಮಾಣವೂ ಹೆಚ್ಚಿರುವುದು ವಿಶೇಷ. ಕೊರೊನಾ ಸೋಂಕಿನ ಪ್ರಕರಣಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ, ಸೋಂಕು ವ್ಯಾಪಕವಾಗಿ ಹರಡದಂತೆ ಕೇರಳದ ಆರೋಗ್ಯ ಇಲಾಖೆ ಕೈಗೊಂಡಿರುವಕ್ರಮಗಳ ಬಗ್ಗೆ ಈಗ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರಂಭಿಕ ವಾರದಲ್ಲಿ ಸೋಂಕುಪೀಡಿತರರಾಜ್ಯವಾರು ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡ ಕೇರಳ,ಆನಂತರ ಕೈಗೊಂಡಕ್ಷಿಪ್ರ ಕ್ರಮಗಳಿಂದಾಗಿ ಪಟ್ಟಿಯಲ್ಲಿ ಹತ್ತನೇ ಸ್ಥಾನದ ಆಸುಪಾಸಿಗೆ ಇಳಿಯಿತು. ಈ ಬೆಳವಣಿಗೆಯು ಕೇರಳದ ವೈರಾಣು ವಿರುದ್ಧದ ಹೋರಾಟದತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಮಾರ್ಚ್‌ 9ರಿಂದ 20ರ ಒಳಗೆ ಕೊರೊನಾಸೋಂಕಿನಿಂದ ಗುಣಮುಖರಾದವರ ಪ್ರಮಾಣ ಕೇರಳದಲ್ಲಿ ಶೇ 84ರಷ್ಟಿದ್ದು, ಇದು ದೇಶದಲ್ಲೇ ಅತ್ಯಧಿಕ. ಈವರೆಗಿನ ಒಟ್ಟು ಸಂಖ್ಯೆಯನ್ನು ಅವಲೋಕಿಸಿದರೂ ಕೇರಳದಲ್ಲಿ ಗುಣಮುಖರಾದವರ ಪ್ರಮಾಣ (ಶೇ 52) ಅತಿಹೆಚ್ಚು. ಮಹಾರಾಷ್ಟ್ರದಲ್ಲಿ ಶೇ 5.5 ಮತ್ತು ದೆಹಲಿಯಲ್ಲಿ ಶೇ 4.04ರಷ್ಟಿದೆ. ದೇಶದಲ್ಲಿ ಸ್ಯಾಂಪಲ್ ಸಂಗ್ರಹದಲ್ಲೂ ರಾಜಸ್ಥಾನ ಬಿಟ್ಟರೆ ಕೇರಳವೇ ಮುಂದಿದೆ.

ಕೇರಳದ ಈ ಯಶಸ್ಸಿನಲ್ಲಿ ಆಡಳಿತದ ಮುಂದಾಲೋಚನೆ, ಆರೋಗ್ಯ ಇಲಾಖೆಯ ಸಮನ್ವಯ ಸೂತ್ರ ಮತ್ತು ಆರೋಗ್ಯ ಕಾರ್ಯಪಡೆಯ ಕ್ಷಿಪ್ರ ಅನುಷ್ಠಾನ ಕ್ರಮಗಳು ಮುಖ್ಯ ಪಾತ್ರ ವಹಿಸಿವೆ. ರಾಜ್ಯಕ್ಕೆ ಸೋಂಕು ಪ್ರವೇಶಿಸಿದ್ದನ್ನು ಆರಂಭದಲ್ಲೇ ಪತ್ತೆಹಚ್ಚಿದ ಆರೋಗ್ಯ ಇಲಾಖೆಯು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿತು. ಈ ಮಧ್ಯೆ, ಫೆ. 29ರಂದು ಇಟಲಿಯಿಂದ ಬಂದ ಮೂವರು ಸದಸ್ಯರ ಒಂದು ಕುಟುಂಬ, ತನ್ನ ಪ್ರಯಾಣದ ವಿವರ ಬಚ್ಚಿಟ್ಟು ಸಂಬಂಧಿಕರ ಮನೆಗಳಿಗೆ ಮತ್ತು ಹಲವು ಊರುಗಳಿಗೆ ಭೇಟಿ ನೀಡಿದ್ದು ಪತ್ತೆಯಾಯಿತು. ಈ ಮೂವರಿಗೆ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರಿಗೆ ಸೋಂಕು ತಗಲಿರುವುದು ಖಚಿತವಾದ ತಕ್ಷಣ 17 ವಿಶೇಷ ವೈದ್ಯಕೀಯ ತಂಡಗಳನ್ನು ರಚಿಸಿ, ಅವರ ಸಂಪರ್ಕಕ್ಕೆ ಬಂದ ಎಲ್ಲ 900 ಜನರನ್ನೂ ಕ್ಷಿಪ್ರಗತಿಯಲ್ಲಿ ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದ ಪತ್ತನಂತಿಟ್ಟ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತಲಾ ಇಬ್ಬರು ವೈದ್ಯ ಸಿಬ್ಬಂದಿ ಜೊತೆಗಿದ್ದ ಒಟ್ಟು 17 ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಪ್ರಾಥಮಿಕ ಸಂಪರ್ಕದಿಂದ ಸೋಂಕು ಹೆಚ್ಚು ಜನರಿಗೆ ತಲುಪುವುದನ್ನು ತಡೆದಿರುವುದು ಕೇರಳದ ಕಾರ್ಯಾಚರಣೆಯಲ್ಲಿ ಗಮನಿಸಬೇಕಾದ ಅಂಶ. ಕ್ವಾರಂಟೈನ್ ಸ್ಥಳದ ಜಿಪಿಎಸ್ ಕಣ್ಗಾವಲು, ಜನರ ಚಲನವಲನದ ಮೇಲೆ ನಿಗಾ, ದೂರವಾಣಿ ಕರೆ ದಾಖಲೆ ಪರಿಶೀಲನೆ ಹಾಗೂ ಕ್ವಾರಂಟೈನ್ ಕೇಂದ್ರಗಳ ನಿಕಟ ಮೇಲ್ವಿಚಾರಣೆ... ಹೀಗೆ ಅಲ್ಲಿನ ಆರೋಗ್ಯ ಕಾರ್ಯಪಡೆಯು ಪರಿಣಾಮಕಾರಿ ಕ್ರಮಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿದೆ.

ಈ ಹಿಂದೆ ನಿಫಾ ಜ್ವರ ಹಬ್ಬಿದ್ದನ್ನು ನಿಯಂತ್ರಿಸಿದ ಹಾಗೂ ಭಾರಿ ಪ್ರವಾಹದಲ್ಲಿ ಕೈಗೊಂಡ ಕ್ಷಿಪ್ರ ಪರಿಹಾರ ಕಾರ್ಯಾಚರಣೆಯ ಅನುಭವವೂ ಕೇರಳದ ಆರೋಗ್ಯ ಇಲಾಖೆಗೆ ಈಗ ನೆರವಾದಂತಿದೆ. ಹಾಗಾಗಿಯೇ ಆರೋಗ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡಗಳ ರಚನೆಗೆ ಹಾಗೂ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರಿಗೆ ಶೀಘ್ರ ತರಬೇತಿ ನೀಡಲು ಸಾಧ್ಯವಾಯಿತು. ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು ಕ್ಷಿಪ್ರ ಕ್ರಮಕ್ಕೆ ನೆರವಾಯಿತು. ಇದರ ಜತೆಗೆ ರಾಜ್ಯದಾದ್ಯಂತ ಜನರಿಗೆ ಕೋವಿಡ್– 19 ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಪ್ರಚಾರಾಂದೋಲನವೂ ನಡೆಯಿತು. ಕೇರಳದ ಆರೋಗ್ಯ ಇಲಾಖೆಯ ಕಾರ್ಯಾಚರಣೆಯ ಬಗ್ಗೆ ರಾಷ್ಟ್ರಪತಿಯವರೂ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ. ಕೇರಳದ ಈ ಮಾದರಿ ಅನುಕರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT