ಗುರುವಾರ , ಮಾರ್ಚ್ 4, 2021
23 °C

ಸಂಪಾದಕೀಯ- ಕೋವಿಡ್‌ ಮಾರ್ಗಸೂಚಿ ಪಾಲನೆ: ಮೈಮರೆವು, ನಿರ್ಲಕ್ಷ್ಯ ಸಲ್ಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿರುವುದು ಕೊರೊನಾ ನಿಯಂತ್ರಣದ ಪ್ರಯತ್ನದಲ್ಲಿ ಅಗತ್ಯವಾಗಿದ್ದ ಕ್ರಮ. ಕೊರೊನಾ ಸೋಂಕಿನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಲೇ ಇವೆ. ಆ ಕಾರಣದಿಂದಾಗಿ ಅಲ್ಲಿಂದ ರಾಜ್ಯಕ್ಕೆ ಬರುವವರು, ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್‌ ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಮಹಾರಾಷ್ಟ್ರದಿಂದ ಬಂದಿರುವವರಿಗೆ ಪ್ರವೇಶ ನೀಡುವ ಮುನ್ನ ‘ಕೋವಿಡ್‌ ನೆಗೆಟಿವ್‌’ ವರದಿಯನ್ನು ಖಾತರಿಪಡಿಸಿಕೊಳ್ಳುವಂತೆ ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇ ಮತ್ತು ಹಾಸ್ಟೆಲ್‌ಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ದೇಶದಲ್ಲಿನ ಸುಮಾರು ಶೇ 75ರಷ್ಟು ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳದಿಂದ ವರದಿಯಾಗುತ್ತಿವೆ. ಸಕ್ರಿಯವಾಗಿರುವ ಪ್ರಕರಣಗಳೂ ಈ ರಾಜ್ಯಗಳಲ್ಲೇ ಹೆಚ್ಚು. ಹಾಗಾಗಿ, ಆ ಎರಡು ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ನಿರ್ಬಂಧಗಳಿಗೆ ಒಳಪಡಿಸುವ ಕಟ್ಟುನಿಟ್ಟಿನ ಕ್ರಮಗಳು ಅನಿವಾರ್ಯ. ಆದರೆ, ಹೊರ ರಾಜ್ಯಗಳಿಂದ ಬರಬಹುದಾದ ಕೊರೊನಾ ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗರೂಕವಾಗಿರುವ ಸರ್ಕಾರವು ರಾಜ್ಯದೊಳಗೆ ಮಾತ್ರ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಬಗ್ಗೆ ಹೆಚ್ಚಿನ ಉತ್ಸಾಹ ವ್ಯಕ್ತಪಡಿಸಿಲ್ಲ. ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದಾರೆ. ಜಾತಿ ಸಂಘಟನೆಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ. ಇಂಥ ಕಾರ್ಯಕ್ರಮಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪರಿಣಾಮಕಾರಿಯಾಗಿ ಪಾಲನೆಯಾಗುತ್ತದೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಜನರ ನಿರ್ಲಕ್ಷ್ಯವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಕೂಡ ಕೋವಿಡ್‌ ಮಾರ್ಗಸೂಚಿಗಳ ಪಾಲನೆ ತೃಪ್ತಿಕರವಾಗಿಲ್ಲ. ಸಾರ್ವಜನಿಕ ಸಾರಿಗೆಗಳಾದ ಬಸ್‌, ಮೆಟ್ರೊದಲ್ಲಿ ಸಾಮಾಜಿಕ ಅಂತರ ಕಂಡುಬರುತ್ತಿಲ್ಲ. ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದುವೆ, ಮೋಜುಕೂಟಗಳ ಹೆಸರಲ್ಲಿ ಜನ ಒಟ್ಟುಗೂಡುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆಸಿದ ಪಾರ್ಟಿಯ ಫಲಶ್ರುತಿಯಾಗಿ, ನೂರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದರೂ ವಾಸ್ತವ ಬೇರೆಯದೇ ಇದೆ. ಸಾರ್ವಜನಿಕವಾಗಿ ಮಾರ್ಗಸೂಚಿ ಪಾಲನೆಯ ಬಗ್ಗೆ ಜನ ನಿರ್ಲಕ್ಷ್ಯ ತೋರಿಸುತ್ತಿರುವುದರಲ್ಲಿ ಸರ್ಕಾರದ ಪಾತ್ರವೂ ಇದೆ. ಉಪಚುನಾವಣೆಗಳ ಸಂದರ್ಭದಲ್ಲಿ ಸಾವಿರಾರು ಜನರ ಸಮಾವೇಶಗಳನ್ನು ಆಡಳಿತ ಪಕ್ಷವೇ ನಡೆಸಿದೆ. ಮೀಸಲಾತಿಗಾಗಿ ಒತ್ತಾಯಿಸಿ ವಿವಿಧ ಸಮುದಾಯಗಳು ನಡೆಸುತ್ತಿರುವ ಬೀದಿ ಹೋರಾಟದಲ್ಲಿ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದಾರೆ. ಸಂಸದರೊಬ್ಬರು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದರ ಹಿನ್ನೆಲೆಯಲ್ಲಿ, ಮಾರ್ಗಸೂಚಿ ಉಲ್ಲಂಘಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಪ್ರಕರಣವನ್ನು ದಾಖಲಿಸಬಾರದೇಕೆ ಎಂದು ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿತ್ತು. ಆದರೂ, ಕೊರೊನಾ ಮಾರ್ಗಸೂಚಿಗೆ ತಾವು ಅತೀತರೆನ್ನುವಂತೆ ರಾಜಕಾರಣಿಗಳು ನಡೆದುಕೊಳ್ಳುತ್ತಲೇ ಇದ್ದಾರೆ. ಜನಜಾಗೃತಿ ಮೂಡಿಸಬೇಕಾದ ರಾಜಕೀಯ ನಾಯಕರೇ ವಿವೇಕ ಮರೆತು ವರ್ತಿಸುವುದು ಸರಿಯಲ್ಲ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸುವ ಸರ್ಕಾರದ ಕ್ರಮ ಕೊರೊನಾ ನಿಯಂತ್ರಣದಲ್ಲಿ ಒಂದು ಸಣ್ಣ ಹೆಜ್ಜೆಯಷ್ಟೇ ಆಗಿದೆ. ಹೊರಗಿನಿಂದ ಬರುವವರು ಸೋಂಕುಮುಕ್ತರಾಗಿದ್ದರಷ್ಟೇ ಸಾಲದು, ಒಳಗಿನಿಂದಲೂ ಸೋಂಕು ತಡೆಯುವ ಪ್ರಯತ್ನಗಳು ಚುರುಕುಗೊಳ್ಳಬೇಕಾಗಿದೆ. ಜನಜೀವನ ನಿಧಾನವಾಗಿ ಹಳಿಗೆ ಮರಳುತ್ತಿರುವ ಸಂದರ್ಭದಲ್ಲಿ ಯಾವುದೇ ಬಗೆಯ ನಿರ್ಲಕ್ಷ್ಯಕ್ಕೆ ಸರ್ಕಾರ ಅವಕಾಶ ಕಲ್ಪಿಸಬಾರದು. ವಿವೇಚನಾ ರಹಿತವಾದ ಸಣ್ಣಪುಟ್ಟ ಎಡವಟ್ಟುಗಳೂ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಬಹುದು ಎನ್ನುವುದನ್ನು ಸರ್ಕಾರ ಅರಿಯಬೇಕು; ಕೊರೊನಾ ನಿಯಂತ್ರಣ ಸಾಮೂಹಿಕ ಜವಾಬ್ದಾರಿ ಎನ್ನುವುದನ್ನು ಜನರೂ ಅರ್ಥ ಮಾಡಿಕೊಳ್ಳಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು