ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾಧಕರ ಹೆಸರು ಮುನ್ನೆಲೆಗೆ ಬರಲಿ‍‍, ಪ್ರದರ್ಶನಪ್ರಿಯತೆ ಕೊನೆಗೊಳ್ಳಲಿ

ಕ್ರೀಡಾಂಗಣ ಮಾತ್ರವಲ್ಲ, ಯಾವುದೇ ಕ್ಷೇತ್ರ, ಸಂಸ್ಥೆಗೆ ಸಂಬಂಧಿಸಿದಂತೆ ನಾಮಕರಣ ಮಾಡುವಾಗ, ಆಯಾ ಕ್ಷೇತ್ರದ ಸಾಧಕರ ಹೆಸರುಗಳನ್ನೇ ಪರಿಗಣಿಸುವುದು ಔಚಿತ್ಯಪೂರ್ಣ
Last Updated 25 ಫೆಬ್ರುವರಿ 2021, 21:30 IST
ಅಕ್ಷರ ಗಾತ್ರ

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎನ್ನುವ ಹೆಗ್ಗಳಿಕೆಯ, ಅಹಮದಾಬಾದ್‌ನ ಮೊಟೇರಾದಲ್ಲಿರುವ ಕ್ರೀಡಾಂಗಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಇಟ್ಟಿರುವುದು ಸಾರ್ವಜನಿಕವಾಗಿ ಒಳ್ಳೆಯ ಮಾದರಿಯಲ್ಲ. ಕ್ರಿಕೆಟ್‌ ಸ್ಟೇಡಿಯಂ ಹೆಸರನ್ನಷ್ಟೇ ಬದಲಾಯಿಸಲಾಗಿದ್ದು, ಅಲ್ಲಿನ ಕ್ರೀಡಾ ಸಮುಚ್ಚಯಕ್ಕೆ ವಲ್ಲಭಭಾಯಿ ಪಟೇಲ್‌ ಅವರ ಹೆಸರನ್ನೇ ಮುಂದುವರಿಸಿರುವುದಾಗಿ ಅಧಿಕಾರಸ್ಥರು ಹೇಳಿದ್ದಾರೆ. ಆದರೆ, ಈ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಮೊದಲು ‘ಗುಜರಾತ್‌ ಸ್ಟೇಡಿಯಂ’ ಎಂದು ಕರೆಸಿಕೊಳ್ಳುತ್ತಿದ್ದ ಕ್ರೀಡಾಂಗಣವನ್ನು 1982ರಲ್ಲಿ ‘ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಎಂದು ಹೆಸರಿಸಲಾಯಿತು. ಸಬರಮತಿ ನದಿ ದಂಡೆಯಲ್ಲಿ 100 ಎಕರೆ ಜಮೀನನ್ನು ನೀಡಿ ಕ್ರೀಡಾಂಗಣವನ್ನು ಮರು ನಿರ್ಮಿಸಲಾಗಿತ್ತು. 2015ರಲ್ಲಿ ಮತ್ತೊಮ್ಮೆ ಕ್ರೀಡಾಂಗಣದ ಮರು ನಿರ್ಮಾಣಕ್ಕೆ ಚಾಲನೆ ದೊರೆತು, ಈಗ ಪೂರ್ಣಗೊಂಡಿರುವ ಅಂಗಳಕ್ಕೆ ನರೇಂದ್ರ ಮೋದಿ ಅವರ ಹೆಸರಿಡಲಾಗಿದೆ. ಹೆಸರು ಬದಲಾವಣೆಯ ಈ ಎಲ್ಲ ಹಂತಗಳಲ್ಲಿ ನಡೆದಿರುವುದು ರಾಜಕಾರಣವೇ ವಿನಾ ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುವಂತಹ ವರ್ತನೆಯಲ್ಲ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಹಿರಿಮೆಯ ವಲ್ಲಭಭಾಯಿ ಪಟೇಲರ ಪ್ರತಿಮೆಯನ್ನು ಗುಜರಾತ್‌ನಲ್ಲಿ ‘ಏಕತೆ’ಯ ಹೆಸರಿನಲ್ಲಿ ಸರ್ಕಾರ ನಿರ್ಮಿಸಿದೆ. ಈಗ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಮೋದಿ ಹೆಸರಿನ ಬದಲಿಗೆ ಕ್ರಿಕೆಟ್‌ ಸಾಧಕರೊಬ್ಬರ ಹೆಸರನ್ನು ಇಟ್ಟಿದ್ದರೆ, ಸಂಬಂಧಿಸಿದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಗೌರವ ಹೆಚ್ಚುತ್ತಿತ್ತು. ಇಂತಹ ಅವಕಾಶವನ್ನು ಕೈಚೆಲ್ಲಲಾಗಿದೆ. ದೇಶದಲ್ಲಿ ‘ನಾಮಕರಣ ರಾಜಕೀಯ’ ಮುಂದುವರಿದಿದೆ. ದೇಶದ ಅನೇಕ ಕ್ರೀಡಾ‌ ಅಂಗಳಗಳು ರಾಜಕಾರಣಿಗಳ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆಯೇ ಹೊರತು, ಆಟಗಾರರ ಹೆಸರು–ಸಾಧನೆಯ ನೆನಪುಗಳನ್ನು ಹೊಂದಿಲ್ಲ. ಪಕ್ಷದ ಕೆಲವೇ ಮುಖಂಡರ ಹೆಸರುಗಳನ್ನು ಸರ್ಕಾರದ ವಿವಿಧ ಯೋಜನೆಗಳಿಗೆ, ಕ್ರೀಡಾಂಗಣಗಳಿಗೆ ಇರಿಸುವ ಕಾಂಗ್ರೆಸ್‌ ಪಕ್ಷದ ಚಾಳಿಯನ್ನು ಬಿಜೆಪಿ ಬಲವಾಗಿ ವಿರೋಧಿಸಿಕೊಂಡು ಬಂದಿದೆ. ಈಗ ಆ ಪಕ್ಷವೇ ಕೇಂದ್ರ ಮತ್ತು ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಇಂತಹ ಮಹತ್ವದ ಕ್ರೀಡಾಂಗಣಕ್ಕೆ ಮೋದಿ ಅವರ ಹೆಸರನ್ನು ಇರಿಸುವ ನಿರ್ಧಾರವನ್ನು ಯಾರೇ ಕೈಗೊಂಡಿರಲಿ, ಅದನ್ನು ಬಿಜೆಪಿ ವಿರೋಧಿಸಬೇಕಿತ್ತು. ಈ ಹಿಂದಿನ ರಾಜಕೀಯ ನಾಮಕರಣಗಳನ್ನು ಮುಂದಿರಿಸಿ ಸಮರ್ಥಿಸಿಕೊಳ್ಳುವುದು ಸರಿಯಾದ ನಡೆ ಎನಿಸಿಕೊಳ್ಳುವುದಿಲ್ಲ.

ಕ್ರೀಡಾಂಗಣದ ಮರುನಾಮಕರಣದ ಚರ್ಚೆಯಲ್ಲಿ ಗಮನಿಸಬೇಕಾಗಿರುವುದು ನರೇಂದ್ರ ಮೋದಿ ಅವರ ಅರ್ಹತೆಯ ವಿಷಯವನ್ನಲ್ಲ. ಇಂಥ ನಾಮಕರಣಗಳ ಮೂಲಕ ಸಮಾಜಕ್ಕೆ ಯಾವ ರೀತಿಯ ಸಂದೇಶ ರವಾನೆ ಆಗುತ್ತದೆ ಎನ್ನುವುದನ್ನು ಸಂಬಂಧಿಸಿದವರು ಯೋಚಿಸಬೇಕು. ಮೊಟೇರಾದಲ್ಲಿರುವ ಕ್ರೀಡಾಂಗಣಕ್ಕೆ ಕ್ರಿಕೆಟ್‌ನಲ್ಲಿ ಉನ್ನತ ಸಾಧನೆ ಮಾಡಿರುವ ಸಾಧಕರ ಹೆಸರನ್ನು ಇಡುವುದು ಎಲ್ಲ ರೀತಿಯಿಂದಲೂ ಸರಿಯಾಗಿದ್ದ ಕ್ರಮ. ಕ್ರೀಡಾಂಗಣ ಮಾತ್ರವಲ್ಲ, ಯಾವುದೇ ಕ್ಷೇತ್ರ, ಸಂಸ್ಥೆ ಅಥವಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಮಕರಣ ಮಾಡುವಾಗ, ಆಯಾ ಕ್ಷೇತ್ರದ ಸಾಧಕರ ಹೆಸರುಗಳನ್ನೇ ಪರಿಗಣಿಸುವುದು ಔಚಿತ್ಯಪೂರ್ಣ. ಉನ್ನತ ಸಂಸ್ಥೆಗಳನ್ನು ಹೆಸರಿಸುವ ಸಂದರ್ಭಗಳನ್ನು ಪ್ರಾದೇಶಿಕ ನಾಯಕರನ್ನು ಗೌರವಿಸುವುದಕ್ಕೆ ಬಳಸಿಕೊಳ್ಳುವುದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಅಗತ್ಯವಾದುದು. ಇಡುವ ಹೆಸರುಗಳು ಆ ಕ್ಷೇತ್ರಗಳ ಯುವ ಸಾಧಕರಿಗೆ ಪ್ರೇರಣೆಯ ರೂಪದಲ್ಲಿ ಒದಗಿಬರುವಂತಿರಬೇಕು; ಸಾಧ್ಯವಾದಷ್ಟೂ ಪ್ರಾದೇಶಿಕ ಅನನ್ಯತೆಯನ್ನೂ ಪ್ರತಿನಿಧಿಸಬೇಕು. ಅಧಿಕಾರಬಲದಿಂದ ರಾಜಕಾರಣಿಗಳ ಹೆಸರನ್ನು ಎಲ್ಲೆಡೆ ತೂರಿಸುವುದು ರಾಜಕೀಯ ಪ್ರದರ್ಶನಪ್ರಿಯತೆ ಎನ್ನಿಸಬಹುದೇ ಹೊರತು ರಚನಾತ್ಮಕ ಬೆಳವಣಿಗೆಗೆ ಸಹಕಾರಿ ಆಗುವಂತಹದ್ದಲ್ಲ. ಅಧಿಕಾರದಲ್ಲಿರುವ ಪಕ್ಷ ತನ್ನ ನಾಯಕರ ಹೆಸರುಗಳನ್ನು ಸಂಸ್ಥೆಗಳಿಗೆ ಅಥವಾ ಆಟದ ಮೈದಾನಗಳಿಗೆ ಇಡುವುದು, ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಬದಲಾಯಿಸುವುದು ರಾಜಕೀಯದ ಕ್ಷುಲ್ಲಕ ವರ್ತನೆಗಳೇ ವಿನಾ ಸಾರ್ವಜನಿಕವಾಗಿ ಮಾದರಿ ನಡಾವಳಿಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT