ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಿಎಸ್‌ಟಿ ಪರಿಹಾರಕ್ಕೆ ಸಾಲ: ಶಮನವಾಗುವುದೇ ಬಿಕ್ಕಟ್ಟು?

Last Updated 18 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಜಾರಿಯಿಂದ ರಾಜ್ಯಗಳಿಗೆ ಆಗಿರುವ ಆದಾಯ ನಷ್ಟದ ಮೊತ್ತ ಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರವು ತಾನೇ ಸಾಲ ಮಾಡುವುದಾಗಿ ತಿಳಿಸಿದೆ. ವಿಶೇಷ ವ್ಯವಸ್ಥೆಯೊಂದರ ಮೂಲಕ ಕೇಂದ್ರ ಸರ್ಕಾರವು ₹ 1.1 ಲಕ್ಷ ಕೋಟಿಯವರೆಗೆ ಸಾಲ ಮಾಡಿ, ಆ ಸಾಲವನ್ನು ಜಿಎಸ್‌ಟಿ ಪರಿಹಾರ ಮೊತ್ತದ ರೂಪದಲ್ಲಿ ರಾಜ್ಯಗಳಿಗೆ ವರ್ಗಾವಣೆ ಮಾಡಲಿದೆ. ಜಿಎಸ್‌ಟಿ ವ್ಯವಸ್ಥೆಯ ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆಗಬಹುದಾದ ತೆರಿಗೆ ಆದಾಯ ನಷ್ಟವನ್ನು ಐದು ವರ್ಷಗಳವರೆಗೆ ಭರ್ತಿ ಮಾಡಿಕೊಡಬೇಕಿರುವ ಕಾನೂನು ಹೊಣೆ ಇರುವುದು ಕೇಂದ್ರ ಸರ್ಕಾರದ ಮೇಲೆ. ಈ ಆದಾಯ ನಷ್ಟದ ಭರ್ತಿಗೆ ಅದು ಜಿಎಸ್‌ಟಿ ವ್ಯವಸ್ಥೆಯ ಅಡಿ ಕೆಲವು ವಸ್ತುಗಳ ಮೇಲೆ ಹೇರಿರುವ ಸೆಸ್‌ ಮೂಲಕ ಸಂಗ್ರಹವಾಗುವ ಮೊತ್ತವನ್ನು ಬಳಸಿಕೊಳ್ಳಬೇಕು. ಆದರೆ, ಕೋವಿಡ್–19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ಪರಿಣಾಮವಾಗಿ ಸೆಸ್‌ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಹಾಗಾಗಿ, ಜಿಎಸ್‌ಟಿ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ನೀಡಲು ಅಗತ್ಯವಿದ್ದ ಹಣ ಸಂಗ್ರಹ ಆಗಲಿಲ್ಲ. ಹೀಗಿದ್ದರೂ, ಪರಿಹಾರ ಕೊಡಬೇಕಿರುವ ಹೊಣೆಯನ್ನು ವರ್ಗಾಯಿಸಲು ಅವಕಾಶವಿರಲಿಲ್ಲ. ಆದರೆ, ತೆರಿಗೆ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ರಾಜ್ಯಗಳು ಸಾಲ ಮಾಡಿ ಭರ್ತಿ ಮಾಡಿಕೊಳ್ಳಲಿ ಎಂದು ಕೇಂದ್ರ ಹೇಳಿತ್ತು. ಇದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾತಾಗಿತ್ತು. ಆ ಹೊತ್ತಿನಲ್ಲಿ ಕರ್ನಾಟಕವು ಕೇಂದ್ರವೇ ಸಾಲ ತಂದು ರಾಜ್ಯಗಳಿಗೆ ಪರಿಹಾರ ಕೊಡಲಿ ಎಂಬ ಸಲಹೆಯನ್ನು ಮುಂದಿಟ್ಟಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ರಾಜ್ಯಗಳೇ ಸಾಲ ಪಡೆದುಕೊಳ್ಳಬೇಕು ಎಂದು ಕೇಂದ್ರ ನೀಡಿದ್ದ ಸಲಹೆಯನ್ನು ಕೇರಳ, ಪಶ್ಚಿಮ ಬಂಗಾಳ ಹಾಗೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಡಳಿತ ಇಲ್ಲದ ರಾಜ್ಯಗಳು ತೀವ್ರವಾಗಿ ವಿರೋಧಿಸಿದ್ದವು. ಕೇಂದ್ರದ ನಿಲುವು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಮಾತನ್ನೂ ಆಡಿದ್ದವು.

ಈಗ ಕೇಂದ್ರವು ತಾನೇ ಸಾಲ ಪಡೆಯುವುದಾಗಿ ಹೇಳಿರುವುದರಿಂದ ಜಿಎಸ್‌ಟಿ ಪರಿಹಾರ ಮೊತ್ತವನ್ನು ನೀಡುವ ಸಮಸ್ಯೆ ಬಗೆಹರಿಯಲಿದೆ ಎಂದು ನಿರೀಕ್ಷಿಸಬಹುದು. ಈ ಸಾಲವನ್ನು ಕೇಂದ್ರವು ಏಕರೂಪದ ಬಡ್ಡಿ ದರದಲ್ಲಿ ರಾಜ್ಯಗಳ ಪರವಾಗಿ ತರಲಿದೆ. ಇದು, ಕೇಂದ್ರ ಸರ್ಕಾರದ ಸಾಲ ಆಗಿರುವುದಿಲ್ಲ. ಈ ಸಾಲದ ಮೊತ್ತವು ರಾಜ್ಯ ಸರ್ಕಾರಗಳ ಲೆಕ್ಕಪತ್ರದಲ್ಲೇ ಉಲ್ಲೇಖವಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಏಕರೂಪದ ಬಡ್ಡಿ ದರದಲ್ಲಿ ರಾಜ್ಯಗಳಿಗೆ ಸಾಲ ತಂದುಕೊಡುವ ಪಾತ್ರವನ್ನು ನಿಭಾಯಿಸುತ್ತಿರುವಂತೆ ಕಾಣಿಸುತ್ತಿದೆ. ರಾಜ್ಯಗಳ ಪಾಲಿಗೆ ಇದು ‘ಜಿಎಸ್‌ಟಿ ಪರಿಹಾರ ಮೊತ್ತ’ ಅಲ್ಲ. ಇದು ಅವುಗಳ ಪಾಲಿಗೆ ಸಾಲ, ಅಷ್ಟೇ. ಈ ಸಾಲವನ್ನು ಮುಂದೆ, ಜಿಎಸ್‌ಟಿ ಪರಿಹಾರ ಮೊತ್ತಕ್ಕಾಗಿ ಸಂಗ್ರಹಿಸುವ ಸೆಸ್‌ನಿಂದಲೇ ಮರುಪಾವತಿ ಮಾಡಲಾಗುತ್ತದೆ ಎಂಬ ವರದಿಗಳು ಇವೆ. ರಾಜ್ಯಗಳೇ ಸಾಲ ಮಾಡಬೇಕು ಎಂಬ ಪ್ರಸ್ತಾವವನ್ನು ವಿರೋಧಿಸಿದ್ದ ರಾಜ್ಯಗಳು, ಕೇಂದ್ರವೇ ಸಾಲ ತಂದುಕೊಡುವುದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಅವು ಇದನ್ನು ಒಪ್ಪಿಕೊಂಡರೆ, ದೊಡ್ಡ ಬಿಕ್ಕಟ್ಟೊಂದಕ್ಕೆ ಪರಿಹಾರ ಕಂಡುಕೊಂಡಂತೆ ಆಗುತ್ತದೆ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಬಹುದಾದ ನಷ್ಟವನ್ನು ಭರ್ತಿ ಮಾಡಿಕೊಡುವುದು ಐದು ವರ್ಷಗಳಿಗೆ ಸೀಮಿತವಾಗಿರುವ ವಚನ ಎಂಬುದು ನಿಜ. ಹೀಗಿದ್ದರೂ, ಈ ವಚನ ಪಾಲನೆ ಇಷ್ಟೊಂದು ಕಷ್ಟದ್ದಾಗಿರುತ್ತದೆ ಎಂಬುದನ್ನು ಜಿಎಸ್‌ಟಿ ಕಾನೂನು ರೂಪಿಸುವಾಗ ಯಾರೂ ಊಹಿಸಿರಲಿಕ್ಕಿಲ್ಲ. ಆದರೆ, ಜಿಎಸ್‌ಟಿ ವ್ಯವಸ್ಥೆಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಆಗಬಹುದಾದ ಕೊರತೆಯನ್ನು ಕೇಂದ್ರವು ಭರ್ತಿ ಮಾಡಿಕೊಡುತ್ತದೆ ಎಂಬ ಭರವಸೆಯನ್ನು ನಂಬಿಯೇ ರಾಜ್ಯಗಳು ತೆರಿಗೆ ಸಂಗ್ರಹಿಸುವ ತಮ್ಮ ಹಕ್ಕನ್ನು ಬಿಟ್ಟುಕೊಟ್ಟಿದ್ದು. ಇಂಥದ್ದೊಂದು ಭರವಸೆಗೆ ಚ್ಯುತಿ ಬರುವಂತೆ ಯಾರೇ ನಡೆದುಕೊಂಡರೂ, ಅದು ಕೇಂದ್ರ–ರಾಜ್ಯಗಳ ನಡುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಬಿಕ್ಕಟ್ಟುಗಳು ಮುಂದೆ ಎದುರಾಗದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೆಯೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT