ಶನಿವಾರ, ಆಗಸ್ಟ್ 13, 2022
22 °C
ಹಳ್ಳಿಗಳಲ್ಲಿ ಮೊಬೈಲ್‌ಗಳಿಗೆ ಸಿಗ್ನಲ್‌ ಸರಿಯಾಗಿ ಸಿಗುವಂತಹ ವ್ಯವಸ್ಥೆ ರೂಪಿಸದ ವಿನಾ ಕೃಷಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ಆಧಾರಿತ ಯಾವ ಯೋಜನೆಯೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದು

ಬೆಳೆ ಸಮೀಕ್ಷೆಗೆ ಕೇವಲ ಆ್ಯಪ್‌ ಅಭಿವೃದ್ಧಿಪಡಿಸಿದರೆ ಸಾಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಕುರಿತು ನಿಖರ ಮಾಹಿತಿಯನ್ನು ಕಲೆಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿವೆ. ಈ ಆ್ಯಪ್‌ ಮೂಲಕ ನಡೆಸಲಾಗುತ್ತಿರುವ ಸಮೀಕ್ಷೆ ಹೇಗಿದೆ ಎಂದರೆ, ತಮ್ಮ ಹೊಲಗಳಲ್ಲಿ ತಾವು ಬೆಳೆಯುತ್ತಿರುವುದು ಏನನ್ನು ಎಂಬುದರ ಪೂರ್ಣ ಮಾಹಿತಿಯನ್ನು ರೈತರೇ ಒದಗಿಸಬೇಕು. ಇಂಟರ್ನೆಟ್‌ ಸಂಪರ್ಕ ಲಭ್ಯವಿರುವ ಮೊಬೈಲ್‌ ಅನ್ನು ಹೊಲಕ್ಕೆ ಒಯ್ದು, ಆ್ಯಪ್‌ನಲ್ಲಿ ಕೇಳಲಾಗುವ ಮಾಹಿತಿಯನ್ನು ಭರ್ತಿ ಮಾಡುವ ಜತೆಗೆ ಬೆಳೆಯ ಚಿತ್ರವನ್ನೂ ಅಲ್ಲಿಂದಲೇ ಅಪ್‌ಲೋಡ್‌ ಮಾಡಬೇಕು.

ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಪಿಎಸ್‌) ಮೂಲಕ ಹೋಬಳಿ, ಗ್ರಾಮ, ಸರ್ವೇ ಸಂಖ್ಯೆ ಇತ್ಯಾದಿ ವಿವರಗಳನ್ನು ತಾಳೆಮಾಡಿ ನೋಡಬೇಕಾದ ಕಾರಣ ಆಯಾ ಸರ್ವೇ ಸಂಖ್ಯೆಗೆ ಸಂಬಂಧಿಸಿದ ಹೊಲದಿಂದಲೇ ಎಲ್ಲ ವಿವರವನ್ನು ಅಪ್‌ಲೋಡ್‌ ಮಾಡುವುದು ಅತ್ಯಗತ್ಯ. ಒಮ್ಮೆ ಗಡುವು ಮುಗಿದು, ವಿಸ್ತರಣೆ ಮಾಡಲಾಗಿದ್ದ ಗಡುವಿನ ಅವಧಿ ಕೂಡ ಮುಗಿಯುತ್ತಾ ಬಂದರೂ ಸಮೀಕ್ಷೆಯಲ್ಲಿ ಶೇ 33ರಷ್ಟು ಪ್ರಗತಿಯನ್ನು ಮಾತ್ರ ಸಾಧಿಸಲಾಗಿದೆ. ಹೊಲದಲ್ಲಿ ಏನು ಬೆಳೆಯಲಾಗುತ್ತಿದೆ ಎನ್ನುವುದು ರೈತರ ಪಹಣಿಗಳಲ್ಲಿ ಸರಿಯಾಗಿ ನಮೂದಾಗದಿದ್ದರೆ ಪ್ರವಾಹ, ಬರಗಾಲದ  ಸಂದರ್ಭಗಳಲ್ಲಿ ಪರಿಹಾರವಾಗಲೀ ಬೆಳೆ ವಿಮೆಯಾಗಲೀ ಅವರಿಗೆ ಸಿಗುವುದಿಲ್ಲ.

ಸಮೀಕ್ಷೆಯು ನಿರೀಕ್ಷಿತ ಪ್ರಗತಿಯನ್ನು ಕಾಣದಿರಲು ಕಾರಣಗಳು ಹಲವು. ಮೊಬೈಲ್‌ ಆ್ಯಪ್‌ಗಳನ್ನು ಬಳಸುವಷ್ಟು ತಾಂತ್ರಿಕ ಅರಿವು ರೈತರಲ್ಲಿ ಇಲ್ಲದಿರುವುದು ಒಂದು ಕಾರಣವಾದರೆ, ಹಳ್ಳಿಗಳಲ್ಲಿ ಮಾಹಿತಿ ಅಪ್‌ಲೋಡ್‌ ಮಾಡುವಷ್ಟು ಗುಣಮಟ್ಟದ ಇಂಟರ್ನೆಟ್‌ ಸಿಗದಿರುವುದು ಇನ್ನೊಂದು ಅಡೆತಡೆ. ಬೆಳೆ ಸಮೀಕ್ಷೆಯ ಈ ಆ್ಯಪ್‌ ತುಸು ಸಂಕೀರ್ಣವಾಗಿದ್ದು, ರೈತರು ಸುಲಭವಾಗಿ ಬಳಸಲು ಅನುವಾಗುವಂತೆ ಅದನ್ನು ಇನ್ನಷ್ಟು ಸರಳಗೊಳಿಸಬಹುದಿತ್ತು ಎಂಬ ಮಾತೂ ಕೇಳಿಬರುತ್ತಿದೆ.  

ಲಾಗಾಯ್ತಿನಿಂದ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಎಂದರೆ, ರೈತರ ಮಾತಿನಲ್ಲೇ ಹೇಳುವುದಾದರೆ, ‘ದೇವರ ಅಂಕಿ’ಯನ್ನು ಬರೆಯುವ ಕೆಲಸ. ಪ್ರತೀ ಜಿಲ್ಲೆಯಿಂದ ಬರುವ ಅಂದಾಜು ವಿವರವನ್ನೇ ಒಟ್ಟುಗೂಡಿಸಿ ಈ ವರ್ಷ ಇಂತಿಂತಹ ಬೆಳೆ, ಇಷ್ಟಿಷ್ಟು ಬಿತ್ತನೆಯಾಗಿದೆ ಎಂದು ‘ನಿಖರ’ವಾಗಿ ಲೆಕ್ಕ ಬರೆಯುವ ಸಂಪ್ರದಾಯವನ್ನು ಆ ಇಲಾಖೆ ರೂಢಿಸಿಕೊಂಡು ಬಂದಿದೆ. ಖುದ್ದು ಸಮೀಕ್ಷೆ ನಡೆಸದೆ ಒಂದೊಂದು ಹೋಬಳಿಯ ‘ಇಂತಿಷ್ಟು’ ಸರ್ವೇ ಸಂಖ್ಯೆಗಳಲ್ಲಿ ‘ಈ’ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದು ದಾಖಲಿಸುವ ಅದರ ಪರಿಪಾಟದ ಕುರಿತೂ ದೂರುಗಳಿವೆ.

ಇಲಾಖೆಯ ಸಿಬ್ಬಂದಿಯು ಈ ರೀತಿ ಅಡ್ಡಹಾದಿ ಹಿಡಿದು, ತಪ್ಪು ಮಾಹಿತಿಯನ್ನು ನೀಡುವುದಕ್ಕೆ ಕಡಿವಾಣ ಹಾಕಲು ಬೆಳೆ ಸಮೀಕ್ಷೆಯಲ್ಲಿ ಸ್ವತಃ ರೈತರನ್ನು ಒಳಗೊಳ್ಳುವ ಯತ್ನವೇನೋ ಒಳ್ಳೆಯ ನಡೆ. ಆದರೆ, ಅದರಲ್ಲಿನ ಲೋಪಗಳನ್ನು ಮೊದಲು ಸರಿಪಡಿಸಬೇಕು. ಜಿಪಿಎಸ್‌ ಆಧಾರದ ಮೇಲೆ ಈ ಸಮೀಕ್ಷೆ ನಡೆಯುವುದರಿಂದ ಹೋಬಳಿ, ಗ್ರಾಮ, ಸರ್ವೇ ಸಂಖ್ಯೆ, ರೈತನ ಹೆಸರು ಇತ್ಯಾದಿ ವಿವರಗಳು ಮೊದಲೇ ಆ್ಯಪ್‌ನಲ್ಲಿ  ದಾಖಲಾಗಿರುವಂತಹ ವ್ಯವಸ್ಥೆ ರೂಪಿಸಬೇಕು. ಆಸ್ತಿಗಳ ವಿವರ ಒದಗಿಸಲು ಈ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ‘ದಿಶಾಂಕ್’‌ ಆ್ಯಪ್‌ನಲ್ಲಿ ಅಂತಹ ಸೌಲಭ್ಯವಿತ್ತು. ಅದರ ದತ್ತಾಂಶವನ್ನೇ ಈ ಆ್ಯಪ್‌ನಲ್ಲಿಯೂ ಬಳಸಬಹುದಿತ್ತು.

ಆಗ ಎಲ್ಲ ವಿವರವನ್ನು ಅನಗತ್ಯವಾಗಿ ಭರ್ತಿ ಮಾಡುವ ಹೊರೆ ರೈತನಿಗೆ ಇರುತ್ತಿರಲಿಲ್ಲ. ಬರೀ ಬೆಳೆಯ ಹೆಸರು ನಮೂದಿಸಿ, ಚಿತ್ರ ತೆಗೆದು ಅಪ್‌ಲೋಡ್‌ ಮಾಡಿದ್ದರೆ ಸಾಕಾಗಿರುತ್ತಿತ್ತು. ಹಳ್ಳಿಗಳಲ್ಲಿ ಮೊಬೈಲ್‌ಗಳಿಗೆ ಸಿಗ್ನಲ್‌ ಸರಿಯಾಗಿ ಸಿಗುವಂತಹ ವ್ಯವಸ್ಥೆ ರೂಪಿಸದ ವಿನಾ ತಂತ್ರಜ್ಞಾನ ಆಧಾರಿತ ಯಾವ ಯೋಜನೆಯೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುವುದಿಲ್ಲ. ಈ ದಿಸೆಯಲ್ಲಿ ಗಮನಹರಿಸಬೇಕು. ಆ್ಯಪ್‌ ಬಳಕೆ ಗೊತ್ತಿಲ್ಲದ ರೈತರ ಹೊಲಗಳನ್ನು ಸಿಬ್ಬಂದಿಯಿಂದಲೇ ಸಮೀಕ್ಷೆ ಮಾಡಿಸಬೇಕು. ರೈತರು ಮೊದಲು ಬಿತ್ತಿದ ಬೆಳೆ ಹಾಳಾಗುವ ಲಕ್ಷಣ ಕಾಣಿಸಿ, ಬೇರೊಂದು ಬೆಳೆಯನ್ನು ಬಿತ್ತಿದರೆ ಮಾಹಿತಿ ಪರಿಷ್ಕರಿಸುವ ಅವಕಾಶವನ್ನೂ ಕಲ್ಪಿಸಬೇಕು. ಈ ಸಮೀಕ್ಷೆಯನ್ನು ಸರಿಯಾಗಿ ಬಳಸಿಕೊಂಡರೆ ರಾಜ್ಯದಲ್ಲಿ ಯಾವ ಬೆಳೆಯನ್ನು, ಎಷ್ಟು ಪ್ರದೇಶದಲ್ಲಿ ಬೆಳೆಯಲಾಗಿದೆ ಎಂಬ ನಿಖರ ವಿವರ ಸಿಗಲಿದ್ದು, ಅದಕ್ಕೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆಯನ್ನೂ ಸನ್ನದ್ಧಗೊಳಿಸಲು ಸಾಧ್ಯ. ಆದ್ದರಿಂದ ‘ನಿಮ್ಮ ಬೆಳೆ– ನಿಮ್ಮ ಹಕ್ಕು’ ಎಂದು ಹೊರೆಯನ್ನೆಲ್ಲ ರೈತರ ಮೇಲೆ ಹಾಕಿ, ಕೃಷಿ ಇಲಾಖೆಯು ತನ್ನ ಹೊಣೆಯಿಂದ ನುಣುಚಿಕೊಳ್ಳುವಂತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು