ಗುರುವಾರ , ಮೇ 26, 2022
23 °C

ಸಂಪಾದಕೀಯ: ಸರ್ಕಾರಿ ಬಾಂಡ್‌ಗಳಲ್ಲಿ ನೇರ ಹೂಡಿಕೆ- ಉಳಿತಾಯದ ಹಣಕ್ಕೆ ಹೊಸ ವೇದಿಕೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸರ್ಕಾರವು ಹೊರಡಿಸುವ ಸಾಲಪತ್ರಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಸಣ್ಣ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ಆರ್‌ಬಿಐ ರಿಟೇಲ್ ಡೈರೆಕ್ಟ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಮೂಲಕ, ಇಂತಹ ಅವಕಾಶವನ್ನು ಸಣ್ಣ ಹೂಡಿಕೆದಾರರಿಗೆ ಕಲ್ಪಿಸಿರುವ ಕೆಲವೇ ದೇಶಗಳ ಸಾಲಿಗೆ ಭಾರತ ಕೂಡ ಸೇರಿಕೊಂಡಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆರಂಭಿಸಿರುವ ವೆಬ್ ಪೋರ್ಟಲ್‌ ಮೂಲಕ, ಕೆಲವು ಅಗತ್ಯ ವಿವರಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸಿ ಸಣ್ಣ ಹೂಡಿಕೆದಾರರು ಆರ್‌ಡಿಜಿ ಖಾತೆ ತೆರೆಯಬಹುದು. ಈ ಖಾತೆಯ ಮೂಲಕ ಸರ್ಕಾರಿ ಸಾಲಪತ್ರಗಳನ್ನು ಸಣ್ಣ ಹೂಡಿಕೆದಾರರು ಖರೀದಿಸಬಹುದು. ಈ ಪ್ರಕ್ರಿಯೆಗೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಆರ್‌ಬಿಐ ಹೇಳಿದೆ. ರಾಜ್ಯ ಸರ್ಕಾರಗಳು ಹೊರಡಿಸುವ ‘ರಾಜ್ಯ ಅಭಿವೃದ್ಧಿ ಸಾಲ’ (ಎಸ್‌ಡಿಎಲ್‌) ಹೆಸರಿನ ಬಾಂಡ್‌ಗಳಲ್ಲಿಯೂ ಹಣ ತೊಡಗಿಸಲು ಹೊಸ ವ್ಯವಸ್ಥೆಯು ಅವಕಾಶ ಕಲ್ಪಿಸಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ದೂರವಾಣಿ ಸಂಖ್ಯೆಯ ಜೋಡಣೆ, ಜನಧನ ಖಾತೆಗಳ ಆರಂಭ, ಸ್ಮಾರ್ಟ್‌ಫೋನ್‌ ಮೂಲಕ ಹಣದ ವರ್ಗಾವಣೆಯನ್ನು ಸುಲಭವಾಗಿ ನಡೆಸುವ ಅವಕಾಶ ಕಲ್ಪಿಸಿರುವ ಯುಪಿಐ ವ್ಯವಸ್ಥೆಗೆ ಚಾಲನೆ, ಹಣ ಠೇವಣಿ ಇರಿಸುವ ಅವಕಾಶ ಕಲ್ಪಿಸುವ ಪೇಮೆಂಟ್ಸ್‌ ಬ್ಯಾಂಕ್‌ಗಳ ಆರಂಭದ ನಂತರದಲ್ಲಿ ಆಗಿರುವ ಮಹತ್ವದ ಬೆಳವಣಿಗೆ ಆರ್‌ಬಿಐ ರಿಟೇಲ್ ಡೈರೆಕ್ಟ್‌ ಯೋಜನೆ. ಸರ್ಕಾರದ ಸಾಲಪತ್ರಗಳಲ್ಲಿ ಸಣ್ಣ ಹೂಡಿಕೆದಾರರ ಹಣವು ಇದುವರೆಗೆ ಹೂಡಿಕೆ ಆಗಿರಲೇ ಇಲ್ಲ ಎಂದಲ್ಲ; ಸಣ್ಣ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಕಂಪನಿಗಳ ಮೂಲಕ ಅಲ್ಲಿ ಹಣ ತೊಡಗಿಸಲು ಅವಕಾಶ ಈಗಾಗಲೇ ಇತ್ತು. ಸಾಲಪತ್ರ ಆಧಾರಿತ ಮ್ಯೂಚುವಲ್‌ ಫಂಡ್‌ಗಳು ಅಲ್ಲಿ ಹಣ ತೊಡಗಿಸಿ, ಹೂಡಿಕೆದಾರರಿಗೆ ಸ್ಥಿರವಾದ ಲಾಭಾಂಶವನ್ನು ತಂದುಕೊಟ್ಟಿವೆ. ಆದರೆ ಇಂತಹ ಫಂಡ್‌ಗಳ ಪ್ರಮಾಣ ಹೆಚ್ಚೇನೂ ಇರಲಿಲ್ಲ. ಇನ್ನು ಮುಂದೆ ಸಣ್ಣ ಹೂಡಿಕೆದಾರರು ಆನ್‌ಲೈನ್‌ ಮೂಲಕ ತಾವೇ ಆರ್‌ಡಿಜಿ ಖಾತೆ ತೆರೆದು, ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಈ ಕ್ರಮವು ಸರ್ಕಾರಕ್ಕೂ, ಸಣ್ಣ ಹೂಡಿಕೆ ದಾರರಿಗೂ ಪ್ರಯೋಜನಕರ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಹಣಕಾಸು ಮಾರುಕಟ್ಟೆಯಿಂದ ಒಟ್ಟು ₹ 12 ಲಕ್ಷ ಕೋಟಿ ಸಾಲ ಸಂಗ್ರಹಿಸುವ ಗುರಿ ಹೊಂದಿದೆ. ಈಗ ಆರಂಭ ಆಗಿರುವ ಈ ಯೋಜನೆಯು ಸರ್ಕಾರಕ್ಕೆ ನೇರವಾಗಿ ಸಣ್ಣ ಹೂಡಿಕೆದಾರರಿಂದ ಸಂಪನ್ಮೂಲ ಸಂಗ್ರಹಿಸಲು ಅವಕಾಶ ಮಾಡಿಕೊಡಲಿದೆ. ಸರ್ಕಾರದ ಬಾಂಡ್‌ಗಳಲ್ಲಿನ ಹೂಡಿಕೆಯು ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲು ಅಡ್ಡಿಯಿಲ್ಲ. ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇರಿಸುವ ಹಣಕ್ಕೆ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ’ದ ಮೂಲಕ ₹ 5 ಲಕ್ಷದವರೆಗೆ ಭದ್ರತೆ ಇದೆ. ಠೇವಣಿ ಹಣವನ್ನು ಹಿಂದಿರುಗಿಸಲು ಬ್ಯಾಂಕ್‌ ಯಾವುದಾದರೂ ಕಾರಣದಿಂದ ವಿಫಲವಾದಲ್ಲಿ, ₹ 5 ಲಕ್ಷದವರೆಗಿನ ಮೊತ್ತಕ್ಕೆ ಠೇವಣಿದಾರರು ಆತಂಕಪಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪೂರ್ಣ ಪ್ರಮಾಣದ ಖಾತರಿ ಇಲ್ಲ. ಆದರೆ, ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯ ಬಗ್ಗೆ ಸಣ್ಣ ಹೂಡಿಕೆದಾರರಿಗೆ ಆತಂಕ ಇರಬೇಕಾಗಿಲ್ಲ. ಬಾಂಡ್‌ಗಳಲ್ಲಿನ ಹೂಡಿಕೆಗೆ ಸರ್ಕಾರದ ಸಾರ್ವಭೌಮ ಖಾತರಿ ಇದ್ದೇ ಇರುತ್ತದೆ. ನಿಶ್ಚಿತ ಠೇವಣಿಗಿಂತ ತುಸು ಹೆಚ್ಚಿನ ಲಾಭವನ್ನು ತಂದುಕೊಡುವ ಶಕ್ತಿ ಇರುವ ಬಾಂಡ್‌ಗಳು, ಭದ್ರತೆಯ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಹೀಗಾಗಿ, ಹಣಕಾಸಿನ ವಿಚಾರದಲ್ಲಿ ರಿಸ್ಕ್‌ ಬೇಡವೇ ಬೇಡ ಎನ್ನುವ ಸಣ್ಣ ಹೂಡಿಕೆದಾರರಿಗೆ ಇವು ಬಹಳ ಹತ್ತಿರವಾಗಬಹುದು. ಷೇರುಗಳ ಮೇಲಿನ ಹೂಡಿಕೆಯ ಮೂಲಕ ಅತಿಹೆಚ್ಚಿನ ಲಾಭ ಪಡೆದುಕೊಳ್ಳುವ ಅವಕಾಶ ಇದ್ದರೂ, ಷೇರು ಮಾರುಕಟ್ಟೆಯ ಏರುಗತಿ ಎಷ್ಟು ದಿನ ಎಂಬುದನ್ನು ಖಚಿತವಾಗಿ ಹೇಳಲು ಯಾರಿಂದಲೂ ಆಗದು. ನಕಾರಾತ್ಮಕವಾದ ತೀರಾ ಸಣ್ಣ ಸುದ್ದಿ ಕೂಡ ಷೇರು ಸೂಚ್ಯಂಕಗಳನ್ನು ಇಳಿಕೆಯ ಹಾದಿಗೆ ಹೊರಳಿಸಬಲ್ಲದು. ಭಾರತದಲ್ಲಿ ಈಗ ಹಣಕಾಸು ತಂತ್ರಜ್ಞಾನ ವಲಯದ ಹತ್ತುಹಲವು ಕಂಪನಿಗಳು ಷೇರುಗಳಲ್ಲಿನ ಹೂಡಿಕೆಯನ್ನು ತೀರಾ ಸುಲಭಗೊಳಿಸಿದ್ದರೂ, ಅಲ್ಲಿನ ಹೂಡಿಕೆಯು ‘ಭದ್ರ’ ಎಂದು ಹೇಳಲಾಗದು. ಹಾಗಾಗಿ, ಸಣ್ಣ ಹೂಡಿಕೆದಾರರಿಗೆ ಈಗ ಹೊಸದಾಗಿ ಸಿಕ್ಕಿರುವ, ಗರಿಷ್ಠ ಮಟ್ಟದ ಭದ್ರತೆ ಇರುವ ಈ ಅವಕಾಶವು ಅವರ ಉಳಿತಾಯದ ಒಂದು ಪಾಲನ್ನು ತನ್ನತ್ತ ಆಕರ್ಷಿಸುವ ಶಕ್ತಿಯನ್ನು ಹೊಂದಿದೆ.

ದೇಶದಲ್ಲಿ ನಲವತ್ತಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್ ಕಂಪನಿಗಳು ಇವೆ. ಅವುಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಿದವರು ಹಾಗೂ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿ ದವರ ‍ಪ್ರಮಾಣವು ಈಗಲೂ ಕಡಿಮೆ ಮಟ್ಟದಲ್ಲಿಯೇ ಇದೆ. ಇದಕ್ಕೆ ಒಂದು ಕಾರಣ ಈ ಹೂಡಿಕೆಗಳ ಬಗ್ಗೆ ಇರುವ ಅರಿವಿನ ಕೊರತೆ. ಇದೇ ಮಾತು ಸರ್ಕಾರದ ಬಾಂಡ್‌ಗಳ ವಿಚಾರದಲ್ಲಿಯೂ ಅನ್ವಯ ಆಗುತ್ತದೆ. ಬಾಂಡ್‌ನಲ್ಲಿನ ಹೂಡಿಕೆ ಬಗ್ಗೆ ತಿಳಿದಿರುವವರ ಪ್ರಮಾಣ ಕಡಿಮೆ ಎಂದು ಹಿಂದೆ ನಡೆದ ಸಮೀಕ್ಷೆಯೊಂದು ಕಂಡುಕೊಂಡಿತ್ತು. ಈಗ ಇಲ್ಲಿ ಹೂಡಿಕೆ ಮಾಡುವುದರಲ್ಲಿ ಇರುವ ಪ್ರಯೋಜನಗಳ ಬಗ್ಗೆ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರವು ವ್ಯಾಪಕ ಪ್ರಚಾರ ಆಂದೋಲನವನ್ನು ಬೇರೆ ಬೇರೆ ಭಾಷೆಗಳಲ್ಲಿ ಹಮ್ಮಿಕೊಂಡರೆ, ಜನರಿಗೂ ಸರ್ಕಾರಕ್ಕೂ ಹೆಚ್ಚು ಪ್ರಯೋಜನ ಆದೀತು. ಸಣ್ಣ ಹೂಡಿಕೆದಾರರು ಬಾಂಡ್‌ಗಳ ಕಡೆ ಮುಖ ಮಾಡಿದರೆ, ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ ಪ್ರಮಾಣ ಕಡಿಮೆ ಆಗುವುದೇ, ಆಗ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಕುಂದುವುದೇ ಎಂಬ ಬಗ್ಗೆಯೂ ಗಮನ ಇರಿಸುವುದು ಸೂಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು