ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಅಗತ್ಯ

7

ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಅಗತ್ಯ

Published:
Updated:
Deccan Herald

ರಾಜ್ಯವನ್ನು ಕಾಡುತ್ತಿರುವ ಬರಗಾಲವು ಮಂದಗತಿಯ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಹಣಕಾಸು ಮಧ್ಯ ವಾರ್ಷಿಕ ಪರಿಶೀಲನಾ ವರದಿ ವ್ಯಕ್ತಪಡಿಸಿರುವ ಆತಂಕವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಮುಂಗಾರು ಕೊರತೆಯಿಂದ ಸುಮಾರು 24 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಜೊತೆಗೆ, ಇದರಿಂದಾಗಿ ಸುಮಾರು ₹ 20 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿತ್ತು. ಇದರ ಹಿಂದೆಯೇ ಹಿಂಗಾರೂ ಕೈಕೊಟ್ಟಿದ್ದು, ಶೇ 50ರಷ್ಟು ಮಳೆ ಕೊರತೆಯಾಗಿದೆ ಎಂದರೆ ಪರಿಸ್ಥಿತಿ ಎಷ್ಟೊಂದು ಕಳವಳಕಾರಿಯಾಗಿದೆ ಎಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದು.

2017–18ನೇ ಆರ್ಥಿಕ ವರ್ಷದಲ್ಲಿ ರಾ‌ಜ್ಯದ ಆರ್ಥಿಕ ಬೆಳವಣಿಗೆ ಶೇ 8.5 ರಷ್ಟಿದ್ದು, ಈ ವರ್ಷ ಕೃಷಿ ಉತ್ಪಾದನೆ ಇಳಿಮುಖವಾಗಿರುವುದರಿಂದ ಕುಸಿತ ಕಾಣಬಹುದು. ಹಣದುಬ್ಬರದಲ್ಲಿನ ವ್ಯತ್ಯಯ, ತೈಲ ದರಗಳಲ್ಲಿನ ಅನಿಶ್ಚಯತೆ ಮತ್ತು ಹೂಡಿಕೆಯಲ್ಲಿನ ಹಿನ್ನಡೆಗಳಿಂದಾಗಿ ಅರ್ಥ ವ್ಯವಸ್ಥೆ ಇನ್ನಷ್ಟು ಬಿಗಡಾಯಿಸುವುದು ನಿಶ್ಚಿತ. ಈ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರ ರೈತರ ₹ 45 ಸಾವಿರ ಕೋಟಿ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದೆ. ಈಗಾಗಲೇ  ಋಣ ಮುಕ್ತ ಪ್ರಮಾಣ ಪತ್ರಗಳನ್ನೂ ವಿತರಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಚುನಾವಣೆಗೆ ಮುನ್ನ ಅಗ್ಗದ ಯೋಜನೆಗಳನ್ನು ರಾಜಕೀಯ ಪಕ್ಷಗಳು ಘೋಷಿಸುತ್ತವೆ. ಆ ನಂತರ ತೀವ್ರ ತೊಂದರೆಗೆ ಸಿಕ್ಕಿಕೊಳ್ಳುತ್ತವೆ.

ಕೃಷಿಕರಿಗೆ ತಾತ್ಕಾಲಿಕ ಲಾಭ ಮಾಡಿಕೊಡುವುದಕ್ಕಿಂತಲೂ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ಗುಣಮಟ್ಟದ ಬೀಜ– ಗೊಬ್ಬರ, ಕ್ರಿಮಿನಾಶಕ ಪೂರೈಸುವ ಮೂಲಕ ಬದುಕು ಕಟ್ಟಿಕೊಡುವ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳದೇ ಇರುವುದು ವಿಷಾದನೀಯ. ಕೃಷಿ ಬಿಕ್ಕಟ್ಟು ಪರಿಹಾರದ ವಿಚಾರ, ಆದ್ಯತೆಯ ಸಂಗತಿ ಆಗುತ್ತಿಲ್ಲ ಎಂಬುದು ನೀತಿನಿರೂ‍ಪಕರ ವೈಫಲ್ಯ. ಇಂತಹ ಸನ್ನಿವೇಶದಲ್ಲಿ ಪದೇ ಪದೇ ಸಾಲ ಮನ್ನಾದಂಥ ಬೇಡಿಕೆಗೆ ರೈತರು ಜೋತುಬೀಳುತ್ತಾರೆ. ಕರ್ನಾಟಕವೂ ಸೇರಿದಂತೆ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಬೇರೆ ಬೇರೆ ರಾಜ್ಯಗಳು ಕೇಂದ್ರ ಸರ್ಕಾರದ ಮುಂದೆ ಸಾಲ ಮನ್ನಾ ಬೇಡಿಕೆ ಇಟ್ಟಿವೆ.

ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸುತಾರಾಂ ಒಪ್ಪುತ್ತಿಲ್ಲ. ದೇಶದಾದ್ಯಂತ ಒಟ್ಟು ₹ 4ಲಕ್ಷ ಕೋಟಿ ಕೃಷಿ ಸಾಲವಿದೆ ಎಂದು ಅಂದಾಜಿಸಲಾಗಿದೆ. ಸಾಲ ಮನ್ನಾದಿಂದಾಗುವ ಹಣಕಾಸು ಹೊರೆಯನ್ನು ರಾಜ್ಯ ಸರ್ಕಾರವೇ ನಿಭಾಯಿಸಬೇಕೆಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಒಟ್ಟು ಬಜೆಟ್‌ ಗಾತ್ರದಲ್ಲಿ ಶೇ 25ರಷ್ಟಾಗುವ ಈ ಆರ್ಥಿಕ ಹೊರೆಯನ್ನು ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ನಿಭಾಯಿಸಬೇಕಿದೆ. ಇದಲ್ಲದೆ, ಹಲವಾರು ಹೊಸ ಯೋಜನೆಗಳನ್ನು ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಇವಕ್ಕೂ ಹಣ ಒದಗಿಸಬೇಕು.

ಕೇಂದ್ರದಿಂದ ಬರಬೇಕಿರುವ ಅನುದಾನಗಳು ವಿಳಂಬವಾಗುತ್ತಿರುವುದರಿಂದ ಹೆಚ್ಚುವರಿ ಹಣಕಾಸು ವೆಚ್ಚದ ಹೊರೆಯನ್ನೂ ರಾಜ್ಯ ಹೊತ್ತುಕೊಳ್ಳಬೇಕಿದೆ ಎಂಬುದನ್ನೂ ಈ ವರದಿ ಎತ್ತಿಹೇಳಿದೆ. ರಾಜ್ಯದ ಅನೇಕ ಭಾಗಗಳು ಬರಗಾಲದಿಂದ ತತ್ತರಿಸುತ್ತಿದ್ದರೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹಣಕಾಸು ನೆರವು ಈವರೆಗೆ  ರಾಜ್ಯಕ್ಕೆ ಬಂದಿಲ್ಲ ಎಂಬುದನ್ನೂ ಪ್ರಸ್ತಾಪಿಸಲಾಗಿದೆ. ಪಂಚಾಯತ್ ರಾಜ್‌ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ 14ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದಿಂದಲೂ ಪ್ರತಿಕೂಲ ಪರಿಣಾಮಗಳಾಗುತ್ತಿವೆ.

ಇದನ್ನು ನಿರ್ಲಕ್ಷಿಸಲಾಗದು. ಇಂಥದೊಂದು ಸಂಕಷ್ಟದಿಂದ ಪಾರಾಗಲು ಖರ್ಚು ಮತ್ತು ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಅನಗತ್ಯ ವೆಚ್ಚಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು. ಸರ್ಕಾರಕ್ಕೆ ದುಬಾರಿಯಾಗುವ ರಾಜಕೀಯ ಹುದ್ದೆಗಳ ಸೃಷ್ಟಿಗೂ ಕೈಹಾಕಬಾರದು. ಈ ನಿಟ್ಟಿನಲ್ಲಿ ಇದು ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯ ಕಾಲ.       

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !