ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಕಾಮರ್ಸ್‌ ಎಫ್‌ಡಿಐನೀತಿ ಪರಾಮರ್ಶೆ ಅಗತ್ಯ

Last Updated 30 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಆನ್‌ಲೈನ್‌ ವಹಿವಾಟಿಗೆ (ಇ–ಕಾಮರ್ಸ್‌) ಸಂಬಂಧಿಸಿದಂತೆ ವಿದೇಶಿ ನೇರ ಬಂಡವಾಳ ಹೂಡಿಕೆ ಇರುವ ಮಾರಾಟ ಸಂಸ್ಥೆಗಳ ವಹಿವಾಟಿನ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಎಫ್‌ಡಿಐ ನೀತಿಗೆ ತಿದ್ದುಪಡಿ ತಂದು ಅನೇಕ ನಿಬಂಧನೆಗಳನ್ನು ವಿಧಿಸಿರುವುದು ದೀರ್ಘಾವಧಿ ಪರಿಣಾಮ ಬೀರಲಿದೆ. ತೀವ್ರ ಸ್ಪರ್ಧೆ ಎದುರಿಸುತ್ತಿರುವ ದೇಶಿ ರಿಟೇಲ್‌ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಬೆಲೆಗಳಲ್ಲಿ ಭಾರಿ ಕಡಿತದ ಕೊಡುಗೆ ನೀಡುವುದರ ವಿರುದ್ಧ ಇವುಗಳು ದನಿ ಎತ್ತಿದ್ದವು.

ಇ–ಕಾಮರ್ಸ್‌ ಸಂಸ್ಥೆಗಳು ಭಾರಿ ಅಗ್ಗದ ಬೆಲೆಗೆ ಸರಕುಗಳನ್ನು ಮಾರಾಟ ಮಾಡುವುದನ್ನು ಈಗ ನಿರ್ಬಂಧಿಸಲಾಗಿದೆ. ನಿರ್ದಿಷ್ಟ ಸಂಸ್ಥೆಯ ಉತ್ಪನ್ನವನ್ನು ತನ್ನ ತಾಣದಲ್ಲಿ ಮಾತ್ರ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸುವುದಕ್ಕೂ ಕಡಿವಾಣ ಹಾಕಲಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳೂ ಸೇರಿದಂತೆ ಎಲ್ಲ ಮಾರಾಟಗಾರರಿಗೆ ಇನ್ನು ಮುಂದೆ ಸಮಾನ ಅವಕಾಶ ದೊರೆಯಲಿದೆ. ಹೊಸ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತಂದರೆ ವಂಚನೆ, ಸುಲಿಗೆ ಸ್ವರೂಪದ ಬೆಲೆ ನೀತಿ, ಭಾರಿ ಬೆಲೆ ಕಡಿತದ ಆಮಿಷಗಳೆಲ್ಲ ಕೊನೆಗೊಳ್ಳಲಿವೆ ಎಂದೂ ನಿರೀಕ್ಷಿಸಲಾಗಿದೆ.

ಹಿಂಬಾಗಿಲ ಮೂಲಕ ಪ್ರವೇಶಿಸಿ, ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ವಿದೇಶಿ ಹೂಡಿಕೆ ಸಂಸ್ಥೆಗಳಿಗೆ ಕಡಿವಾಣ ಬೀಳಲಿದೆ. ಇ–ಕಾಮರ್ಸ್ ಸಂಸ್ಥೆಯು ತನ್ನ ಎಲ್ಲ ಮಾರಾಟಗಾರರಿಗೆ ಸಮಾನ ಅವಕಾಶ ನೀಡಬೇಕು. ಸಾರಿಗೆ, ಉಗ್ರಾಣ, ಜಾಹೀರಾತು, ಮಾರಾಟ, ಹಣ ಪಾವತಿ, ಹಣಕಾಸು ಸೌಲಭ್ಯ ವಿಷಯಗಳಲ್ಲಿ ತಾರತಮ್ಯ ಇರಬಾರದು. ಖರೀದಿದಾರರಿಗೆ ಹಣ ಮರಳಿಸುವ (ಕ್ಯಾಷ್‌ಬ್ಯಾಕ್‌) ಸೌಲಭ್ಯವು ಕೂಡ ನ್ಯಾಯೋಚಿತ ಮತ್ತು ತಾರತಮ್ಯರಹಿತವಾಗಿರಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಆದರೆ ಈಗ ನಿಯಮಗಳಿಗೆ ತಿದ್ದುಪಡಿ ತಂದಿರುವುದು ದೇಶದಲ್ಲಿ ಆನ್‌ಲೈನ್‌ ರಿಟೇಲ್‌ ವಹಿವಾಟಿನ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವುದನ್ನೂ ಅಲ್ಲಗಳೆಯಲಿಕ್ಕಾಗದು.

ರಿಟೇಲ್‌ ವ್ಯಾಪಾರದಲ್ಲಿನ ಬಹುರಾಷ್ಟ್ರೀಯ ಸಂಸ್ಥೆಗಳ ನಿಯಂತ್ರಣ ಮತ್ತು ಮೇಲುಗೈ, ದೇಶಿ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರದ ಮೇಲೆ ಪರಿಣಾಮ ಬೀರಿರುವುದು ನಿಜ. ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಸಂಸ್ಥೆಗಳು ತಾವು ಪಾಲು ಬಂಡವಾಳ ಇಲ್ಲವೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಸಂಸ್ಥೆಗಳ ಉತ್ಪನ್ನಗಳನ್ನು ವಿಶೇಷ ಬೆಲೆಗೆ ತಾವೇ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಕ್ಯಾಷ್‌ಬ್ಯಾಕ್‌, ಬೆಲೆ ಕಡಿತ, ಪ್ರತ್ಯೇಕ ವಿಶೇಷ ಮಾರಾಟ ಮತ್ತಿತರ ಸೌಲಭ್ಯಗಳಿಗೂ ಇನ್ನು ಮುಂದೆ ಕಡಿವಾಣ ಬೀಳಲಿದೆ.

ಈ ಎಲ್ಲ ಪರಿಷ್ಕೃತ ನಿಯಮಗಳು ಮಾರಾಟಗಾರರು, ಗ್ರಾಹಕರು ಮತ್ತು ಬಂಡವಾಳ ಹೂಡಿಕೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿವೆ. ಎಫ್‌ಡಿಐ ನೀತಿಗೆ ಸಂಬಂಧಿಸಿದಂತೆ ಸರ್ಕಾರದ ಧೋರಣೆಯಲ್ಲಿ ಅನಿಶ್ಚಿತತೆ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಸಂಸ್ಥೆಗಳು ಶೇ 25ರಷ್ಟು ಉತ್ಪನ್ನಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಮಾರಾಟ ಮಾಡಬೇಕೆಂಬ ನಿಬಂಧನೆಯು ಚಿಕ್ಕಪುಟ್ಟ ಕರಕುಶಲ ಮಾರಾಟಗಾರರ ಹಿತಾಸಕ್ತಿಗೆ ತೀವ್ರ ಧಕ್ಕೆ ತರಲಿದೆ. ಯಾವುದೇ ಪರಿಷ್ಕೃತ ನೀತಿಯು ಉದ್ದಿಮೆ– ವಹಿವಾಟಿಗೆ ಹೊಸ ದಿಕ್ಕು ನೀಡುವಂತಿರಬೇಕು. ಅಂತಹ ಮುನ್ನೋಟವೇ ಇಲ್ಲಿ ಕಾಣುತ್ತಿಲ್ಲ.

ದೇಶಿ ಆರ್ಥಿಕತೆಯ ಪ್ರಮುಖ ಚಾಲನಾ ಶಕ್ತಿಯಾಗಿರುವ ಮತ್ತು ಭವಿಷ್ಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ರಿಟೇಲ್‌ ಉದ್ದಿಮೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವಿನಲ್ಲಿ ಸ್ಪಷ್ಟತೆಯೇ ಕಂಡು ಬರುತ್ತಿಲ್ಲ. ಹೊಸ ನಿಯಮಗಳ ಜಾರಿಗೆ 2019ರ ಫೆಬ್ರುವರಿ ಗಡುವು ವಿಧಿಸಿರುವುದೂ ಅವಸರದ ತೀರ್ಮಾನವಾಗಿದೆ. ನಿಯಮಗಳನ್ನು ಅರ್ಥೈಸಿಕೊಂಡು ಪಾಲಿಸಲು ಸಮಯಾವಕಾಶ ನೀಡಬೇಕಾಗಿದೆ. ಈ ವಹಿವಾಟು ವಿಸ್ತರಣೆಗೆ ಭಾರತದಲ್ಲಿ ವಿಪುಲ ಅವಕಾಶಗಳಿವೆ. ಇದೇ ಕಾರಣಕ್ಕೆ ಜಾಗತಿಕ ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ ಬಂಡವಾಳ ತೊಡಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ದಿಢೀರನೆ ಇಂತಹ ನಿರ್ಧಾರಕ್ಕೆ ಬರುವುದು ನ್ಯಾಯೋಚಿತ ಎನಿಸಲಾರದು. ಆನ್‌ಲೈನ್‌ ವಹಿವಾಟಿನ ಎಲ್ಲ ಭಾಗಿದಾರರ ಅಭಿಪ್ರಾಯ ಪಡೆಯದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಏಕಪಕ್ಷೀಯ ನಿಲುವಿಗೆ ಬಂದಿರುವುದು ಅಷ್ಟೇನೂ ಸಮಂಜಸ ಎನಿಸದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಹಿತಾಸಕ್ತಿ ರಕ್ಷಿಸುವ ಸಮಗ್ರ ಸ್ವರೂಪದ ಇ–ಕಾಮರ್ಸ್ ನೀತಿ ಮತ್ತು ನಿಯಂತ್ರಣ ಸಂಸ್ಥೆ ಸ್ಥಾಪಿಸುವ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT