ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಕೈಗೊಂಡ ಕೆಲವು ಕ್ರಮಗಳು ಸುಪ್ರೀಂ ಕೋರ್ಟ್ನ ತೀವ್ರ ಟೀಕೆಗೆ ಗುರಿಯಾಗಿವೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರಿದ್ದ ಪೀಠ, ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ ಇ.ಡಿ.ಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಕೀಯ ಹೋರಾಟಕ್ಕಾಗಿ ನೀವು ಬಳಕೆಯಾಗುತ್ತಿರುವುದು ಏಕೆ ಎಂದು ಕಟುವಾಗಿ ಪ್ರಶ್ನಿಸಿದೆ. ‘ಇ.ಡಿ.ಯೇ ತಪ್ಪಿತಸ್ಥ’ ಎನ್ನುವಂತಿವೆ ಕೋರ್ಟ್ ಆಡಿರುವ ಮಾತುಗಳು. ಆ ಮಾತುಗಳನ್ನು ಒಂದು ಎಚ್ಚರಿಕೆಯಾಗಿ ಪರಿಗಣಿಸದೇ ಹೋದರೆ ಈ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಗೆ ಇನ್ನಷ್ಟು ಮಸಿ ಮೆತ್ತಿಕೊಳ್ಳಲಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ತಾನು ನೀಡಿದ್ದ ಸಮನ್ಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವ ಕ್ರಮವನ್ನು ಇ.ಡಿ.ಯು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಆದರೆ, ಮೇಲ್ಮನವಿಯನ್ನು ರದ್ದುಗೊಳಿಸಿರುವ ಕೋರ್ಟ್, ‘ಜಾರಿ ನಿರ್ದೇಶನಾಲಯದ ಬಗ್ಗೆ ನಾವು ತುಂಬಾ ಕಟುವಾದ ಟೀಕೆಗಳನ್ನು ಮಾಡಬೇಕಾಗುತ್ತದೆ. ರಾಜಕೀಯ ಹೋರಾಟಗಳು ಚುನಾವಣೆ ಸಂದರ್ಭದಲ್ಲಿ ನಡೆಯಲಿ. ಅದಕ್ಕಾಗಿ ನಿಮ್ಮನ್ನು ಏಕೆ ಬಳಸಲಾಗುತ್ತಿದೆ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ. ಕೋರ್ಟ್ ಎತ್ತಿರುವ ಗಂಭೀರ ಪ್ರಶ್ನೆಗೆ ಕೇಂದ್ರ ಸರ್ಕಾರದ ಈ ತನಿಖಾ ಏಜೆನ್ಸಿಯ ಬಳಿ ಯಾವುದೇ ಉತ್ತರ ಇಲ್ಲ. ಆಡಳಿತಾರೂಢ ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿನ ಕೆಲವು ಸಂಸ್ಥೆಗಳನ್ನು ಮತ್ತು ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನಾಯಕರನ್ನು ಗುರಿಯಾಗಿಸಲು ಇ.ಡಿ ಹೊಂದಿರುವ ಉತ್ಸಾಹಕ್ಕೆ ಮುಡಾ ಪ್ರಕರಣವು ಮತ್ತೊಂದು ನಿದರ್ಶನ.

ಅಕ್ರಮ ವರ್ಗಾವಣೆಗೆ ಬಳಸಲಾದ ಹಣವನ್ನು ಸೃಷ್ಟಿಸಿ ಕೊಡುವ ಅಪರಾಧವನ್ನು ‘ಮೂಲ ಅಪರಾಧ’ ಎಂದು ಗುರುತಿಸಲಾಗುತ್ತದೆ. ಆಗ ಇ.ಡಿ.ಯ ಪಾತ್ರದ ಪ್ರಶ್ನೆ ಬರುತ್ತದೆ. ಆದರೆ, ಮುಡಾ ಪ್ರಕರಣದ ಪಾರ್ವತಿ ಮತ್ತು ಸುರೇಶ್ ಅವರಿಗೆ ಸಂಬಂಧಿಸಿದ ಆರೋಪಗಳಲ್ಲಿ ಅಂತಹ ಅಕ್ರಮಗಳು ನಡೆದ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂಬುದು ಕರ್ನಾಟಕ ಹೈಕೋರ್ಟ್ನ ಅಭಿಮತ. ನಿವೇಶನಗಳ ಅಕ್ರಮ ಹಂಚಿಕೆಯೇ ಈ ಪ್ರಕರಣದಲ್ಲಿ ಕೇಳಿ ಬಂದಿರುವ ಮುಖ್ಯ ಆರೋಪವಾಗಿದ್ದು, ಈ ಸಂಬಂಧ ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಇ.ಡಿ.ಯು ಪ್ರಕರಣದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎನ್ನುವುದು ಕೋರ್ಟ್ನ ಸಂದೇಶವಾಗಿದೆ. ಈ ಕಾರಣದಿಂದಲೇ ಇ.ಡಿ ಕೂಡ ಮೇಲ್ಮನವಿಯಿಂದ ಹಿಂದೆ ಸರಿದು, ಪೀಠದ ಕೆಂಗಣ್ಣಿಗೆ ಮತ್ತಷ್ಟು ಗುರಿಯಾಗುವುದನ್ನು ತಪ್ಪಿಸಿಕೊಂಡಿದೆ. ಈ ಹಿಂದೆಯೂ ಕೆಲವು ಪ್ರಕರಣಗಳಲ್ಲಿ ಇ.ಡಿ ನಡೆಯನ್ನು ಕೋರ್ಟ್ ಕಟುವಾಗಿ ಟೀಕಿಸಿದೆ. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ (ಟಾಸ್ಮಾಕ್) ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಹೀಗೆಯೇ ‘ರಾಜಕೀಯ ಆತುರ’ದ ಕ್ರಮಕ್ಕೆ ಮುಂದಾಗಿದ್ದ ಇ.ಡಿ, ಆಗಲೂ ಛೀಮಾರಿಗೆ ಒಳಗಾಗಿತ್ತು. ‘ನೀವು ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೀರಿ’ ಎಂದು ಕೋರ್ಟ್ ಖಾರವಾಗಿ ಹೇಳಿತ್ತು. ಕೇಂದ್ರದ ಈ ತನಿಖಾ ಏಜೆನ್ಸಿಯನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಮೂಲಕ ಜನರಿಗೆ ಕಿರುಕುಳ ನೀಡಲು, ಆರೋಪಿಗಳನ್ನು ಜೈಲಿನಲ್ಲಿ ಇರಿಸಲು ಬಳಸಿಕೊಳ್ಳಲಾಗುತ್ತಿದೆ, ಏಜೆನ್ಸಿಯು ಅತಿಯಾಗಿ ವರ್ತಿಸುತ್ತಿದೆ, ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ ಎಂಬ ಟೀಕೆಯೂ ಈ ಹಿಂದೆ ಕೋರ್ಟ್ನಿಂದ ಬಂದಿತ್ತು. ಹಲವು ಬಾರಿ ಕೋರ್ಟ್ನಿಂದ ಕಿವಿ ಹಿಂಡಿಸಿಕೊಂಡರೂ ಇ.ಡಿ.ಯು ಇನ್ನೂ ಪಾಠ ಕಲಿತಂತಿಲ್ಲ. ರಾಷ್ಟ್ರಮಟ್ಟದ ತನಿಖಾ ಸಂಸ್ಥೆಗಳು ರಾಷ್ಟ್ರಕ್ಕೆ ಬೇಕಾಗಿರುವ ವಿಚಾರಗಳಿಗಾಗಿ ಕೆಲಸ ಮಾಡಬೇಕೇ ವಿನಾ ಆಡಳಿತಾರೂಢ ಪಕ್ಷದ ರಾಜಕೀಯ ಗುರಿಗಳನ್ನು ಈಡೇರಿಸುವುದಕ್ಕೆ ಅಲ್ಲ. ಕೇಂದ್ರದಲ್ಲಿ ಬಿಜೆಪಿಯು ಆಡಳಿತದ ಚುಕ್ಕಾಣಿ ಹಿಡಿದ ನಂತರದಲ್ಲಿ, ಇ.ಡಿ.ಯು ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಹಲವು ಪಟ್ಟು ಹೆಚ್ಚಾಗಿದೆ. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಮುಖಂಡರನ್ನು ಕಿರುಕುಳಕ್ಕೆ ಗುರಿಪಡಿಸಲು ಇರುವ ಅಸ್ತ್ರವಾಗಿ ಇ.ಡಿ ಪರಿವರ್ತನೆ ಕಂಡಿದೆ. ಸರ್ಕಾರದ ಏಜೆನ್ಸಿಗಳನ್ನು ರಾಜಕೀಯ ವಿರೋಧಿಗಳ ವಿರುದ್ಧ ಬಳಕೆ ಮಾಡುವುದು ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡಿದಂತೆ. ಈ ನಿಟ್ಟಿನಲ್ಲಿ, ಕೋರ್ಟ್ನ ಮಾತುಗಳು ಎಚ್ಚರಿಕೆಯಾಗಿ ನಿಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.