ಗುರುವಾರ , ಡಿಸೆಂಬರ್ 12, 2019
26 °C

ಕೃಷಿ ಸಂಕಷ್ಟ: ನಿರ್ಲಕ್ಷ್ಯ ಸಲ್ಲದು ರೈತರ ಬೇಡಿಕೆಗಳಿಗೆ ಕಿವಿಗೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೃಷಿ ವಲಯದ ಬಿಕ್ಕಟ್ಟಿನ ಬಗ್ಗೆ ಗಮನ ಸೆಳೆಯಲು ರಾಷ್ಟ್ರದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದ ರೈತರು ಕಳೆದ ವಾರ ಎರಡು ದಿನಗಳ ಕಾಲ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಬಹುತೇಕ ಎಲ್ಲಾ ಪ್ರಮುಖ ಪ್ರತಿಪಕ್ಷಗಳ ನೇತಾರರು ಈ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದ್ದಾರೆ. ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಹಾಗೂ ಕೃಷಿ ಸಂಕಷ್ಟ ಪರಿಹರಿಸಲು ಕ್ರಮಗಳನ್ನು ಸೂಚಿಸಿರುವ ಸ್ವಾಮಿನಾಥನ್ ಆಯೋಗದ ವರದಿ ಜಾರಿ– ರೈತರ ಪ್ರಮುಖ ಬೇಡಿಕೆಗಳು. ಕೃಷಿ ಸಂಕಷ್ಟದ ಒಳ– ಹೊರಗು ಚರ್ಚಿಸಲು ಮೂರು ವಾರಗಳ ಸಂಸತ್‌ನ ವಿಶೇಷ ಅಧಿವೇಶನ ಕರೆದು ಸೂಕ್ತ ನೀತಿ ನಿರೂಪಣೆಗಳ ಬಗ್ಗೆ ಚರ್ಚಿಸಬೇಕು ಎಂದೂ ರೈತರು ಆಗ್ರಹಪಡಿಸಿದ್ದಾರೆ. ಕೃಷಿಲೋಕಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಗಟ್ಟಿಯಾದ ಚರ್ಚೆಗಳೇ ನಡೆದಿಲ್ಲ. ಎಲ್ಲವೂ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗಿವೆ ಎಂಬುದು ಸ್ಪಷ್ಟ. ಇಂತಹ ಸನ್ನಿವೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ನಡೆಸಬೇಕು ಎಂಬಂಥ ರೈತರ ಬೇಡಿಕೆಯಲ್ಲಿ ಅರ್ಥವಿದೆ. ಆಳುವ ಸರ್ಕಾರ, ಈ ಆಗ್ರಹವನ್ನು ಕೇಳಿಸಿಕೊಳ್ಳಬೇಕು. ರೈತರ ಈ ಬೇಡಿಕೆಗಳು ಹೊಸತೇನೂ ಅಲ್ಲ. ಕಳೆದ ಒಂದೂವರೆ ವರ್ಷದಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಗೆ ಬಂದ ಅನೇಕ ರೈತರ ತಂಡಗಳು, ರೈತರ ದಾರುಣ ಬದುಕಿನ ಬಗ್ಗೆ ಕೇಂದ್ರದ ಗಮನ ಸೆಳೆಯಲು ಪ್ರಯತ್ನಿಸುತ್ತಲೇ ಇವೆ. ಕಳೆದ ಮಾರ್ಚ್ ತಿಂಗಳಲ್ಲಿ ನಾಸಿಕ್‌ನಿಂದ 30 ಸಾವಿರಕ್ಕೂ ಹೆಚ್ಚು ರೈತರು ಮುಂಬೈವರೆಗೆ ಸುಮಾರು 180 ಕಿ.ಮೀ. ದೂರ ಬರಿಗಾಲಿನಲ್ಲಿ ನಡೆದು ಬಂದು ಮಹಾರಾಷ್ಟ್ರದ ವಿಧಾನಭವನದ ಮುಂದೆ ಧರಣಿ ನಡೆಸಿ ಬೇಡಿಕೆಗಳಿಗೆ ಆಗ್ರಹಿಸಿದ್ದರು. ದಾರಿಯುದ್ದಕ್ಕೂ ಯಾರಿಗೂ ತೊಂದರೆ ಕೊಡದೆ, ಶಾಂತಿಯುತವಾಗಿ ಬಂದು, ಮುಂಬೈ ಮಹಾನಗರಿಯಲ್ಲೂ ಸಂಚಾರ ದಟ್ಟಣೆ ಉಂಟುಮಾಡದೆ ರೈತರು ನಡೆಸಿದ ಆ ಶಾಂತಿಯುತ ಹೋರಾಟ ಈಗಲೂ ಜನಮಾನಸದಲ್ಲಿದೆ. ಹಾಗೆಯೇ ಕಳೆದ ಜೂನ್‌ನಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆದು ಅನೇಕ ರೈತರ ಸಾವಿಗೆ ಕಾರಣವಾದ ವಿದ್ಯಮಾನವೂ ಜನರ ನೆನಪಿನಲ್ಲಿದೆ. ರೈತರ ಸರಣಿ ಪ್ರತಿಭಟನೆಗಳು, ಬೆಳೆಯುತ್ತಿರುವ ಹತಾಶೆ, ಆಕ್ರೋಶಗಳ ಪ್ರತೀಕ. ಈ ಹತಾಶೆ, ಆಕ್ರೋಶದ ದನಿಗಳಿಗೆ ಸರ್ಕಾರಗಳು ಕಿವಿಗೊಡಬೇಕು.

ಪ್ರತಿವರ್ಷ ಸರಾಸರಿ 15,000 ರೈತ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರದಲ್ಲಿ ವರದಿಯಾಗುತ್ತಿವೆ. ವಿಮೆಗೆ ಒಳಪಟ್ಟ ಅರ್ಧದಷ್ಟು ರೈತರಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಅನ್ವಯ ಹೆಚ್ಚಿನ ಅನುಕೂಲವೇನೂ ಆಗಿಲ್ಲ ಎಂಬುದು ಕಟು ವಾಸ್ತವ. ಬೆಲೆ ಏರಿಳಿತಗಳಷ್ಟೇ ಅಲ್ಲ, ಹವಾಮಾನ ಬದಲಾವಣೆಯ ಅಪಾಯಗಳನ್ನೂ ಕೃಷಿ ವಲಯ ಎದುರಿಸುತ್ತಿದೆ. ಶೇ 70ರಷ್ಟು ಕೃಷಿ ಕುಟುಂಬಗಳಿಗೆ, ಕೃಷಿ ಉತ್ಪನ್ನಗಳಿಂದ ತಾವು ಗಳಿಸುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಕೃಷಿಗಾಗಿ ಹೂಡಬೇಕಾದ ಹಣ ಹೊರೆಯಾಗಿ ಪರಿಣಮಿಸುತ್ತಿದೆ. ನಷ್ಟ ಅನುಭವಿಸುವ ಲಕ್ಷಾಂತರ ರೈತರು, ಭೂಮಿ ಕಳೆದುಕೊಂಡು ಕೃಷಿ ಕೂಲಿಕಾರ್ಮಿಕರಾಗುವ ಸ್ಥಿತಿ ಹೆಚ್ಚುತ್ತಿದೆ. ಶೇ 86ರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ ಎಂಬುದೂ ಗಮನಾರ್ಹ. ಹೀಗಾಗಿ, ಲಾಭದಾಯಕವಲ್ಲದ ಕೃಷಿ ನೆಚ್ಚಿದ ರೈತರು ಸಾಲದ ಚಕ್ರವ್ಯೂಹದೊಳಗೆ ಸಿಲುಕುತ್ತಿದ್ದಾರೆ. ಜನಸಂಖ್ಯೆಯ ಶೇ 60ರಷ್ಟು ಜನರನ್ನು ಒಳಗೊಳ್ಳುವ ರೈತ ಸಮುದಾಯ ಕುರಿತು ನಮ್ಮ ರಾಜಕೀಯ ನಾಯಕರಿಗೆ ನೆನಪಾಗುವುದು ಚುನಾವಣೆ ಸಮಯದಲ್ಲಿ ಮಾತ್ರ ಎಂಬುದು ವಿಷಾದನೀಯ. ರೈತರ ವರಮಾನವನ್ನು 2022ರೊಳಗೆ ದ್ವಿಗುಣಗೊಳಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು.  ಹಾಗೆಯೇ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡುವ ಭರವಸೆಯನ್ನೂ 2014ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮ, ಜಾತಿ, ಜನಾಂಗದಂತಹ ವಿಚಾರಗಳು ಆದ್ಯತೆ ಪಡೆಯುತ್ತಿರುವ ದುರ್ದಿನಗಳನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಚುನಾವಣಾ ರಾಜಕಾರಣದಲ್ಲೂ ರೈತರು ಹಿನ್ನೆಲೆಗೆ ಸರಿದಿದ್ದಾರೆಯೇ? ಎಂಬ ಸಂಶಯ ಉಂಟಾಗುತ್ತದೆ. ‘ಜೈ ಜವಾನ್, ಜೈ ಕಿಸಾನ್’ ಎಂದ ದೇಶ ನಮ್ಮದು. ಅನ್ನದಾತನ ಹಿತರಕ್ಷಣೆಯೂ ಆದ್ಯತೆಯ ಸಂಗತಿಯಾಗಬೇಕು ಎಂಬುದನ್ನು ಆಡಳಿತ ನಡೆಸುವವರು ಮರೆಯದಿರಲಿ.

ಪ್ರತಿಕ್ರಿಯಿಸಿ (+)