ಶುಕ್ರವಾರ, ಆಗಸ್ಟ್ 23, 2019
26 °C
ಪಾಕಿಸ್ತಾನದ ವಿರುದ್ಧ ಘೋಷಣೆ

ಪಕ್ಷಾಂತರ ನಿಷೇಧ ಕಾಯ್ದೆಯ ವೈರುಧ್ಯಗಳ ವಿಶ್ಲೇಷಣೆಗೆ ಸಕಾಲ

Published:
Updated:
Prajavani

ರಾಜ್ಯ ವಿಧಾನಸಭೆಯ ಮೂವರು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಸದಸ್ಯತ್ವದಿಂದ ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷ  ಕೆ.ಆರ್‌.ರಮೇಶ್‌ ಕುಮಾರ್‌ ಆದೇಶ ಹೊರಡಿಸಿರುವುದು ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದ ಕುರಿತು ಹೊಸ ಜಿಜ್ಞಾಸೆಯನ್ನು ಹುಟ್ಟುಹಾಕಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿರುವ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ ಮತ್ತು ಕೆಪಿಜೆಪಿ ಪಕ್ಷದಿಂದ ಗೆದ್ದು, ಬಳಿಕ ಆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವುದಾಗಿ ಪತ್ರ ನೀಡಿದ್ದ ಆರ್‌.ಶಂಕರ್‌ ಅವರು ಪಕ್ಷಾಂತರದ ಆರೋಪಕ್ಕೆ ಒಳಗಾಗಿ ಅನರ್ಹಗೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅನರ್ಹತೆಯ ಭೀತಿಯನ್ನು ಎದುರಿಸುತ್ತಿರುವ ಇನ್ನೂ 13 ಶಾಸಕರ ಪ್ರಕರಣ ಕುರಿತು ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರು ಪ್ರಕಟಿಸಿದ್ದಾರೆ. ಇವರೊಂದಿಗೆ ವಿಪ್‌ ಉಲ್ಲಂಘನೆಯ ದೂರನ್ನು ಮತ್ತೊಬ್ಬ ಶಾಸಕರು ಎದುರಿಸುತ್ತಿದ್ದಾರೆ. ಈ ಪ್ರಕರಣವೂ ಸಭಾಧ್ಯಕ್ಷರ ಮುಂದಿದೆ. ‘ಈಗ ಅನರ್ಹಗೊಂಡಿರುವ ಮೂವರು ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಯಾವುದೇ ಲಾಭದಾಯಕ ಹುದ್ದೆಯನ್ನು ಪಡೆಯುವಂತಿಲ್ಲ’ ಎಂದು ಸಭಾಧ್ಯಕ್ಷರು ಆದೇಶ ನೀಡಿರುವುದು ಮಹತ್ವದ ಅಂಶ. ಅನರ್ಹಗೊಂಡ ಶಾಸಕರು, ಈ ತೀರ್ಮಾನವನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆಯೆಂದೂ ಅವರು ಹೇಳಿದ್ದಾರೆ. ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸೂಚಿಸಬೇಕು ಎಂದು ಕೋರಿ ಈಗಾಗಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿರುವ ಶಾಸಕರು, ಈಗ ಅನರ್ಹತೆಯನ್ನು ಪ್ರಶ್ನಿಸಿ ಇನ್ನೊಂದು ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದು, ರಾಜ್ಯದ ರಾಜಕೀಯ ವಿದ್ಯಮಾನವು  ಮತ್ತೊಂದು ಕಾನೂನು ಸಮರಕ್ಕೆ ದಾರಿ ಮಾಡಿಕೊಡುವುದು ನಿಶ್ಚಿತ. ಹಲವು ರಾಜ್ಯಗಳಲ್ಲಿ, ಅಧಿಕಾರವಿಲ್ಲದ ಪಕ್ಷದಿಂದ ಅಧಿಕಾರ ಇರುವ ಪಕ್ಷಕ್ಕೆ ಶಾಸಕರು ಜಿಗಿಯುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಒಂದು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು, ಅಧಿಕಾರ ಮತ್ತು ಸ್ಥಾನಮಾನದ ಆಸೆಗಾಗಿ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುವುದು ಮತದಾರರ ವಿಶ್ವಾಸಕ್ಕೆ ಬಗೆಯುವ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳ ಕೆಲವು ಶಾಸಕರು ಬಂಡಾಯವೆದ್ದು ವಿಧಾನ ಸಭೆಯ ಅಧಿವೇಶನದಿಂದ ದೂರ ಉಳಿದು, ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ. ತಾವು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇವೆಯೇ ವಿನಾ ಪಕ್ಷ ತ್ಯಜಿಸಿಲ್ಲ ಎಂದು ಬಂಡಾಯ ಶಾಸಕರು ಹೇಳುತ್ತಿರುವುದು ತಾಂತ್ರಿಕವಾಗಿ ಸರಿ ಎನ್ನಬಹುದಾದರೂ, ಈ ರಾಜೀನಾಮೆಯ ಹಿಂದೆ ಹಣ, ಅಧಿಕಾರದ ಆಮಿಷಗಳಿವೆ ಎಂಬ ಆರೋಪಗಳನ್ನು ಅಲ್ಲಗಳೆಯಲಾಗದು. ಈ ಶಾಸಕರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವುದೂ ರಹಸ್ಯ ಸಂಗತಿಯೇನಲ್ಲ. ವಿಧಾನಸಭಾಧ್ಯಕ್ಷರು ತಮ್ಮ ಆದೇಶದಲ್ಲಿ ‘ಶಾಸಕರು ಗುಂಪುಗೂಡಿ ವಿಶೇಷ ವಿಮಾನದಲ್ಲಿ ತೆರಳುವುದು, ಬೇರೆ ರಾಜ್ಯದ ಹೋಟೆಲ್‌ನಲ್ಲಿ ಗುಂಪುಗೂಡುವುದು, ಬೇರೆ ಪಕ್ಷಗಳ ನಾಯಕರ ಜೊತೆಗೆ ಬಹಿರಂಗವಾಗಿ ಗುರುತಿಸಿ ಕೊಳ್ಳುವುದು ಪಕ್ಷಾಂತರ ಹುನ್ನಾರದ ನಡೆಗಳಾಗುತ್ತವೆ’ ಎಂದಿದ್ದಾರೆ. ಶರದ್‌ ಯಾದವ್‌ ಪ್ರಕರಣ ಮತ್ತು ತಮಿಳುನಾಡು ವಿಧಾನಸಭೆಯ ಶಾಸಕರ ಅನರ್ಹತೆಯ ಇತ್ತೀಚಿನ ಪ್ರಕರಣವನ್ನು ತಮ್ಮ ತೀರ್ಪಿಗೆ ಸಮರ್ಥನೆಯಾಗಿ ಅವರು ಬಳಸಿಕೊಂಡಿದ್ದಾರೆ.

ಸಂವಿಧಾನದ 10ನೇ ಶೆಡ್ಯೂಲ್‌ನ 2 (1) (ಎ) ಕಲಂ (191(2)ನೇ ವಿಧಿ) ಅನ್ನು ಉಲ್ಲೇಖಿಸಿ ಈ ಅನರ್ಹತೆಯ ಆದೇಶ ಹೊರಬಿದ್ದಿದೆ. ಆದರೆ, ಇದನ್ನು ಕೆಲವು ಸಂವಿಧಾನ ತಜ್ಞರು ವಿಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸುತ್ತಿದ್ದು, ಈ ವಿಧಿಯು ಶಾಸಕರ ಆಯ್ಕೆಗೆ ಸಂಬಂಧಿಸಿ ಇದೆಯೇ ಹೊರತು ಅನರ್ಹತೆಯ ಪ್ರಶ್ನೆಗೆ ಅನ್ವಯ ಆಗುವುದಿಲ್ಲ ಎನ್ನುತ್ತಿದ್ದಾರೆ. ಬಂಡಾಯ ಶಾಸಕರು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದೇ ಇರುವ ತಮ್ಮ ಹಕ್ಕಿನ ಕುರಿತು ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆಗೆ ಸುಪ್ರೀಂ ಕೋರ್ಟ್‌, 10ನೇ ಶೆಡ್ಯೂಲ್‌ನ ಪಕ್ಷಾಂತರ ನಿಷೇಧ ನಿಯಮಗಳ ಕುರಿತು ವಿವರವಾದ ವಿಶ್ಲೇಷಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು. ಶಾಸಕರ ಅನರ್ಹತೆಯನ್ನು ಪ್ರಶ್ನಿಸಿ ಈಗ ಅರ್ಜಿ ಸಲ್ಲಿಕೆಯಾದರೆ, ಕೋರ್ಟ್‌ ಈ ಕುರಿತು ವಿಸ್ತೃತವಾಗಿ ಪರಿಶೀಲನೆ ನಡೆಸಿ, ವಿಶ್ಲೇಷಿಸಲು ಇದು ಸಕಾಲ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಇರಬಹುದಾದ ವೈರುಧ್ಯಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕಾದ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಅಧಿಕಾರ ಮತ್ತು ಸ್ಥಾನಮಾನದ ಆಸೆಗಾಗಿ ಪಕ್ಷಕ್ಕೆ ಮತ್ತು ಮತದಾರರಿಗೆ ದ್ರೋಹ ಬಗೆಯುವ ಶಾಸಕರ ಹುನ್ನಾರಗಳನ್ನು ವಿಫಲಗೊಳಿಸಲು ಪಕ್ಷಾಂತರ ನಿಷೇಧ ಕಾಯ್ದೆಯ ಹಲ್ಲುಗಳನ್ನು ಇನ್ನಷ್ಟು ಹರಿತಗೊಳಿಸಬೇಕಿದೆ. ಸಾರ್ವಜನಿಕ ವಲಯದಲ್ಲೂ ಈ ಕುರಿತು ವ್ಯಾಪಕ ಚರ್ಚೆ ನಡೆದು, ಜನಾಭಿಪ್ರಾಯ ರೂಪಿಸುವ ಕೆಲಸ ಆಗಬೇಕಿದೆ.

Post Comments (+)