ಗುರುವಾರ , ಫೆಬ್ರವರಿ 25, 2021
30 °C

ಅಧಿಕಾರ ಇರುವುದು ಜನಸೇವೆಗೆದಬ್ಬಾಳಿಕೆ–ದೌರ್ಜನ್ಯ ನಡೆಸಲಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಂಗಾಣದ ಟಿಆರ್‌ಎಸ್‌ ಶಾಸಕ ಕೋನೇರು ಕೋನಪ್ಪ ಅವರ ಸಹೋದರ ಕೋನೇರು ಕೃಷ್ಣಾರಾವ್‌ ಹಾಗೂ ಅವರ ಬೆಂಬಲಿಗರು ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗ ಥಳಿಸಿರುವುದು ಅನಾಗರಿಕ ಘಟನೆ ಹಾಗೂ ಅಧಿಕಾರದ ಮದ ನೆತ್ತಿಗೇರಿದರೆ ಉಂಟಾಗುವ ಪರಿಣಾಮಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಸಿ. ಅನಿತಾ ಎನ್ನುವ ಅರಣ್ಯಾಧಿಕಾರಿಯನ್ನು, ಮಹಿಳೆ ಎನ್ನುವುದನ್ನೂ ಪರಿಗಣಿಸದೆ ಬಿದಿರಿನ ಬೊಂಬುಗಳಿಂದ ಥಳಿಸಲಾಗಿದೆ. ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಹಲ್ಲೆ ನಡೆಸಿದವರ ಮೇಲೆ ಬಲಪ್ರಯೋಗ ಮಾಡದೆ ಅಸಹಾಯಕರಂತೆ ವರ್ತಿಸಿರುವುದು ಅಚ್ಚರಿ ಹುಟ್ಟಿಸುವ ಸಂಗತಿ. ರಾಜಕಾರಣಿಗಳ ಅಧಿಕಾರಬಲದ ಎದುರು ಪೊಲೀಸ್‌ ವ್ಯವಸ್ಥೆ ಮಂಡಿಯೂರಿ ಕುಳಿತಿರುವುದನ್ನೂ ಈ ಪ್ರಸಂಗ ಸೂಚಿಸುವಂತಿದೆ. ರಿಯಲ್‌ ಎಸ್ಟೇಟ್‌, ಭೂಮಿ ಕಬಳಿಕೆ ಸೇರಿದಂತೆ ಕೋನೇರು ಸಹೋದರರು ಹಲವು ಆರೋಪಗಳನ್ನು ಎದುರಿಸುತ್ತಿರುವುದರ ಹಿನ್ನೆಲೆಯಲ್ಲಿ ಪ್ರಸಕ್ತ ಪ್ರಕರಣವು ರಾಜಕಾರಣದ ರಂಗು ಬಳಿದುಕೊಂಡಿದೆ. ದೀನ–ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಲೇ ಇವೆ. ಈ ಪ್ರಕರಣಗಳ ಸಾಲಿಗೆ ಇದೀಗ ಅಧಿಕಾರಿಗಳ ಮೇಲೆ ಪ್ರಜಾಪ್ರತಿನಿಧಿಗಳು ನಡೆಸುತ್ತಿರುವ ಹಲ್ಲೆಯ ಘಟನೆಗಳನ್ನೂ ಸೇರಿಸಬೇಕಾಗಿದೆ. ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಯುವುದಾದರೆ, ಜನಸಾಮಾನ್ಯರ ಪಾಡೇನು? ತೆಲಂಗಾಣದ ಪ್ರಸಕ್ತ ಘಟನೆಯ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕ ಆಕಾಶ್‌ ವಿಜಯ್‌ವರ್ಗೀಯ ಎನ್ನುವವರು ಮಾಧ್ಯಮ ಪ್ರತಿನಿಧಿಗಳ ಎದುರೇ ಕ್ರಿಕೆಟ್‌ ಬ್ಯಾಟ್‌ನಿಂದ ಅಧಿಕಾರಿಯೊಬ್ಬರನ್ನು ಹೊಡೆದ ಘಟನೆಯನ್ನು ನೆನಪಿಸಿಕೊಳ್ಳಬಹುದು. ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದ ಎನ್‌ಸಿಪಿ ನಾಯಕಿಗೆ ಬಿಜೆಪಿ ಶಾಸಕ ಕಪಾಳಮೋಕ್ಷ ಮಾಡಿದ್ದಲ್ಲದೆ, ಕಾಲಿನಿಂದ ಒದ್ದಿದ್ದ ಘಟನೆ ಗುಜರಾತ್‌ನಿಂದ ವರದಿಯಾಗಿತ್ತು.

ಅಧಿಕಾರಿಗಳು ಅಥವಾ ಸಾರ್ವಜನಿಕರ ಮೇಲೆ ಶಾಸಕರು–ಸಂಸದರು ಹಲ್ಲೆ ನಡೆಸಿದ ಪ್ರಕರಣಗಳು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾದವುಗಳಲ್ಲ. ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳನ್ನು ದೆಹಲಿಯ ಎಎಪಿ ಶಾಸಕರು ಎದುರಿಸುತ್ತಿದ್ದಾರೆ. ವಿದ್ವತ್‌ ಎನ್ನುವ ವ್ಯಕ್ತಿಯ ಮೇಲೆ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಅವರ ಪುತ್ರ ಮೊಹಮದ್‌ ನಲಪಾಡ್‌ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಅಪಕೀರ್ತಿ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರ ಮೇಲಿದೆ. ಇವೆಲ್ಲ ಘಟನೆಗಳು ನಮ್ಮ ಜನಪ್ರತಿನಿಧಿಗಳಿಗೆ ಆವರಿಸಿರುವ ಅಧಿಕಾರದ ಪಿತ್ತಕ್ಕೆ ಉದಾಹರಣೆಗಳಾಗಿವೆ. ಪ್ರಜಾ
ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳು ಕಾನೂನು ವ್ಯವಸ್ಥೆಯ ಗೌರವ ಹೆಚ್ಚಿಸುವಂತೆ ಕಾರ್ಯ ನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು. ಆದರೆ, ನಮ್ಮಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ನೆಲದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವ ಪ್ರಜಾಪ್ರತಿನಿಧಿಗಳು, ಗೂಂಡಾ ರಾಜಕಾರಣದ ಪರಿಕಲ್ಪನೆ ರೂಪುಗೊಳ್ಳಲು ಕಾರಣರಾಗುತ್ತಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬಹುದೇ ಹೊರತು, ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ತಾವಿರುವುದು ಜನಸೇವೆಗೆ ಎನ್ನುವ ವಿನಯ ಹಾಗೂ ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿವೇಕವನ್ನು ಕೆಲವು ಶಾಸಕರು ಕಳೆದುಕೊಂಡಂತಿದೆ. ವಿರೋಧ ಪಕ್ಷಗಳ ಧ್ವನಿ ಕ್ಷೀಣವಾದಾಗ ಕೂಡ ಇಂಥ ಸರ್ವಾಧಿಕಾರಿ ಮನೋಭಾವ ಆಡಳಿತ ಪಕ್ಷದ ಪ್ರತಿನಿಧಿಗಳಲ್ಲಿ ಕಾಣಿಸಿಕೊಳ್ಳುವುದಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಅಪಾಯ ಒಡ್ಡುವಂತಹ ಬೆಳವಣಿಗೆ. ತೆಲಂಗಾಣದಲ್ಲಂತೂ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿರುವ ಟಿಆರ್‌ಎಸ್‌, ಕಾಂಗ್ರೆಸ್‌ನ 12 ಶಾಸಕರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಸಂಪೂರ್ಣವಾಗಿ ದಮನಗೊಳಿಸಿದೆ. ವಿರೋಧ ಪಕ್ಷವೇ ಇಲ್ಲದ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರತಿನಿಧಿಗಳಲ್ಲಿ ಸರ್ವಾಧಿಕಾರದ ಮನೋಭಾವ ತಲೆದೋರಿದಲ್ಲಿ ಆಶ್ಚರ್ಯವೇನೂ ಇಲ್ಲ. ಶಾಸಕಾಂಗದ ಘನತೆಯನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳದ್ದಾಗಿದೆ. ಅಧಿಕಾರ ಇರುವುದು ಜನಸೇವೆಗೇ ವಿನಾ ದಬ್ಬಾಳಿಕೆಗಲ್ಲ ಎನ್ನುವ
ಪ್ರಜಾಪ್ರಭುತ್ವದ ಪ್ರಾಥಮಿಕ ಪಾಠವನ್ನು ನಮ್ಮ ಪ್ರತಿನಿಧಿಗಳು ಕಲಿಯಬೇಕು. ಇಲ್ಲದೇ ಹೋದರೆ, ಆ ಪಾಠವನ್ನು ಜನರೇ ಕಲಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು