ಶನಿವಾರ, ಜೂನ್ 19, 2021
21 °C

ಸಂಪಾದಕೀಯ | ಕಾರ್ಮಿಕರಲ್ಲಿ ವಿಶ್ವಾಸ ತುಂಬಿ, ವಲಸೆ ಧಾವಂತ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದು ಇದೀಗ ಕಾರ್ಮಿಕರ ಮತ್ತೊಂದು ಸುತ್ತಿನ ವಲಸೆಗೆ ದಾರಿ ಮಾಡಿಕೊಟ್ಟಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಎದುರಿಸಿದ ತೀವ್ರ ಆರ್ಥಿಕ ಸಂಕಷ್ಟದಿಂದ, ಅದಾದ ಬಳಿಕ ಸ್ವಂತ ಊರುಗಳಿಗೆ ತೆರಳಿದಾಗ ಕಾಡಿದ ನಿರುದ್ಯೋಗದಿಂದ ವಲಸೆ ಕಾರ್ಮಿಕರು ಕಂಗೆಟ್ಟಿದ್ದರು. ಹೀಗಾಗಿ ಬದುಕು ಅರಸಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಅವರು ಮತ್ತೆ ರಾಜಧಾನಿಗೆ ಬಂದಿದ್ದರು. ಕೆಲಸ ಮಾಡುವವರಿಲ್ಲದೆ ಭಣಗುಡುತ್ತಿದ್ದ ಕೈಗಾರಿಕಾ ಘಟಕಗಳು, ಉದ್ದಿಮೆಗಳು, ಹೋಟೆಲ್‌ಗಳು ಕಾರ್ಮಿಕರ ಮರು ವಲಸೆಯಿಂದ ಚೇತರಿಕೆಯನ್ನು ಕಂಡಿದ್ದವು. ಆರ್ಥಿಕ ಚಟುವಟಿಕೆಗಳೂ ಗರಿಗೆದರಿದ್ದವು. ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳು ಸಹ ನಿಧಾನವಾಗಿ ಚುರುಕು ಪಡೆದುಕೊಂಡಿದ್ದವು. ಆದರೆ, ಬೆಂಗಳೂರು ನಗರದಲ್ಲಿ ಸೋಂಕುಪೀಡಿತರ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗುತ್ತಿರುವುದು ವಲಸೆ ಕಾರ್ಮಿಕರಲ್ಲಿ ಆತಂಕವನ್ನು ಮೂಡಿಸಿದೆ. ಅದರಲ್ಲೂ, ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಪ್ರಮೇಯ ಎದುರಾಗಿರುವುದು, ಸರ್ಕಾರಿ ಆಸ್ಪತ್ರೆಗಳೆಲ್ಲ ತುಂಬಿ ತುಳುಕುತ್ತಿರುವುದು, ಬಡವರು ಚಿಕಿತ್ಸೆ ಪಡೆಯುವುದೇ ಕಷ್ಟಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅವರಲ್ಲಿ ಅಭದ್ರ ಭಾವ ಮೂಡಿಸಿ, ಮತ್ತೆ ಊರುಗಳತ್ತ ಮುಖ ಮಾಡುವಂತೆ ಮಾಡಿರಬಹುದು.

ಸೋಂಕು ಇದೇ ರೀತಿ ಕ್ಷಿಪ್ರಗತಿಯಲ್ಲಿ ಹರಡುತ್ತಾ ಹೋದರೆ ಕೆಲಸವೂ ಇಲ್ಲದೆ, ಊರಿಗೂ ಹೋಗಲಾಗದೆ ಮತ್ತೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ದುಗುಡ ಕಾರ್ಮಿಕರನ್ನು ಕಾಡಿದ್ದರೆ ಅದರಲ್ಲಿ ಅಸಹಜವಾದುದು ಏನೂ ಇಲ್ಲ. ಸಂಕಷ್ಟದ ಸಂದರ್ಭದಲ್ಲಿ ಸ್ವಂತ ಊರಲ್ಲಿ ಇರಬೇಕೆಂಬುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾನ್ಯ ತುಡಿತ. ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಅಂತಹ ತುಡಿತದಿಂದಲೇ ಸಾವಿರಾರು ಜನ ನಡೆದುಕೊಂಡೇ ತಮ್ಮ ಊರುಗಳಿಗೆ ಮರಳಿದ್ದರು. ಮಾರ್ಗಮಧ್ಯದಲ್ಲಿ ಹಲವರು ಹಸಿವಿನಿಂದ, ಅನಾರೋಗ್ಯದಿಂದ ಮೃತಪಟ್ಟ ಘಟನೆಗಳೂ ನಡೆದಿದ್ದವು. ಅಪಘಾತಗಳಲ್ಲಿಯೂ ಕೆಲವರು ಜೀವ ಕಳೆದುಕೊಂಡಿದ್ದರು. ಕಾರ್ಮಿಕರು ಸುರಕ್ಷಿತವಾಗಿ ಊರು ತಲುಪುವಂತೆ ನೋಡಿಕೊಳ್ಳುವಲ್ಲಿ ವಿಫಲವಾದ ಸರ್ಕಾರಗಳ ಮೇಲೆ ಸುಪ್ರೀಂ ಕೋರ್ಟ್‌ ಚಾಟಿಯನ್ನೂ ಬೀಸಿತ್ತು. ಅಂದಿನ ಕಹಿ ಅನುಭವಗಳು ದುಡಿಯುವ ವರ್ಗದವರ ಮನದಂಗಳದಲ್ಲಿ ಇನ್ನೂ ನಿಚ್ಚಳವಾಗಿ ಇದ್ದಿರಬಹುದು.

‘ಸೋಂಕು ನಿಯಂತ್ರಣದಲ್ಲಿದೆ; ಯಾರೂ ನಗರವನ್ನು ತೊರೆಯಬಾರದು’ ಎಂದು ಮುಖ್ಯಮಂತ್ರಿಯವರಾಗಲೀ ಗೃಹ ಸಚಿವರಾಗಲೀ ಮನವಿ ಮಾಡಿದ ಮಾತ್ರಕ್ಕೆ ವಲಸೆ ಕಾರ್ಮಿಕರಲ್ಲಿ ವಿಶ್ವಾಸ ಮೂಡಲಾರದು. ಏಕೆಂದರೆ, ಅವರ ಸುತ್ತಮುತ್ತಲೂ ನಡೆಯುತ್ತಿರುವ ವಿದ್ಯಮಾನಗಳು ಬೇರೆಯದೇ ಕಥೆಯನ್ನು ಹೇಳುತ್ತಿವೆ. ರಾಜಧಾನಿಯ ಆರ್ಥಿಕ ಚಟುವಟಿಕೆಗಳ ಬಂಡಿಯನ್ನು ಎಳೆಯಲು ಕಾರ್ಮಿಕರು ಎಷ್ಟು ಅನಿವಾರ್ಯವೋ ಕಾರ್ಮಿಕರ ಬದುಕಿನ ಬಂಡಿ ಮುನ್ನಡೆಯಲು ಅವರಿಗೆ ಕೆಲಸವೂ ಅಷ್ಟೇ ಅಗತ್ಯ. ಕಾರ್ಮಿಕರು ನಗರದಲ್ಲೇ ಇದ್ದು, ಕೆಲಸಕ್ಕೆ ಬರುವಂತಾಗಲು ಮೊದಲು ಅವರಲ್ಲಿ ವಿಶ್ವಾಸ ಮೂಡಿಸುವಂತಹ ಪ್ರಯತ್ನಗಳು ಬೇರೆ ಬೇರೆ ನೆಲೆಯಲ್ಲಿ ನಡೆಯಬೇಕು. ಊಟ, ವಸತಿ, ಆರೋಗ್ಯಸೇವೆ– ಇವು ಮೂರೂ ಪ್ರತಿಯೊಬ್ಬ ಮನುಷ್ಯನ ಮೂಲ ಅಗತ್ಯಗಳು. ಅವು ಸಿಗುತ್ತವೆ ಎಂಬ ಖಚಿತ ಭರವಸೆ ದೊರೆತರೆ ಕಾರ್ಮಿಕರಲ್ಲಿನ ಆತಂಕ ತಾನಾಗಿಯೇ ನಿವಾರಣೆಯಾಗುತ್ತದೆ. ಮಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಮೇಸ್ತ್ರಿಗಳನ್ನು ಕೋಲ್ಕತ್ತದಿಂದ ವಿಮಾನದಲ್ಲಿ ಕರೆಸಿಕೊಂಡಿದ್ದು, ಕಾರ್ಮಿಕರನ್ನೂ ವಿಶೇಷ ವಿಮಾನದಲ್ಲಿ ಕರೆಸಲು ಸಿದ್ಧತೆ ನಡೆಸಿರುವುದು, ಅವರ ಎಲ್ಲ ಖರ್ಚು ಭರಿಸುವ ಭರವಸೆ ನೀಡಿರುವುದು ಅಂತಹ ವಿಶ್ವಾಸ ಮೂಡಿಸುವ ಪ್ರಯತ್ನಗಳಲ್ಲಿ ಒಂದು. ಕೊರೊನಾ ಸೋಂಕಿನ ತೀವ್ರತೆ ಬೇಗ ನಿವಾರಣೆ ಆಗುವಂಥದ್ದಲ್ಲ ಎನ್ನುವುದು ತಜ್ಞರ ಮಾತು. ಅದರೊಟ್ಟಿಗೇ ಬದುಕುವುದನ್ನು ನಾವು ರೂಢಿಸಿಕೊಳ್ಳುವುದು ಅನಿವಾರ್ಯ. ಇಂತಹ ಸನ್ನಿವೇಶದಲ್ಲಿ ‘ಏನೇ ತೊಂದರೆಯಾದರೂ ತಕ್ಷಣ ಚಿಕಿತ್ಸಾ ಸೌಲಭ್ಯ ಸಿಗಲಿದೆ’ ಎಂಬ ಭರವಸೆ ಸರ್ಕಾರದ ಕಡೆಯಿಂದ ಸಿಗಬೇಕು. ವೈದ್ಯಕೀಯ ವ್ಯವಸ್ಥೆಯ ಸುಧಾರಣೆಗೆ ಅದು ಕೈಗೊಳ್ಳುವ ಕ್ರಮಗಳು ಹಾಗಿರಬೇಕು. ಆಗಷ್ಟೇ ಕಾರ್ಮಿಕರ ವಲಸೆಯ ಧಾವಂತವು ತಪ್ಪಿ, ರಾಜ್ಯದ ಆರ್ಥಿಕ ಚಟುವಟಿಕೆಗಳು ಸಹ ವೇಗವನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ‘ಸೋಂಕು ನಿಯಂತ್ರಣದಲ್ಲಿದೆ, ಯಾವುದೇ ಭಯ ಬೇಡ’ ಎನ್ನುವ ಅಧಿಕಾರಸ್ಥರ ಹೇಳಿಕೆಯು ಬರೀ ಬಾಯಿ ಉಪಚಾರದ ಮಾತಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು