ಶನಿವಾರ, ಜೂನ್ 6, 2020
27 °C

ಸಂಪಾದಕೀಯ | ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಬದಲಾಗಬೇಕಿದೆ ಕಾರ್ಯತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಪ್ರದೇಶದ ಸ್ಥಾನಮಾನವನ್ನು ಬದಲಿಸಿದ ಮಾತ್ರಕ್ಕೆ, ಬಹುಕಾಲದಿಂದ ಅಲ್ಲಿ ನೆಲೆಯೂರಿರುವ ಗಂಭೀರ ಸಮಸ್ಯೆ ಹಾಗೂ ಅದರಿಂದ ಒಡಗೂಡಿದ ತೀವ್ರ ಅಸಹನೆಗೆ ತನ್ನಿಂದತಾನೇ ಪರಿಹಾರ ದೊರಕುತ್ತದೆ ಎಂದುಕೊಳ್ಳುವುದು ಅವಾಸ್ತವಿಕ. ಇದಕ್ಕೆ, ಕಾಶ್ಮೀರದಲ್ಲಿ ಮರುಕಳಿಸಿರುವ ಉಗ್ರರ ಅಟ್ಟಹಾಸ ಅತ್ಯುತ್ತಮ ನಿದರ್ಶನ. ಆಡಳಿತದ ಹಿತದೃಷ್ಟಿಯಿಂದ ಒಂದು ಪ್ರದೇಶದ ಸ್ಥಾನಮಾನ ಬದಲಾವಣೆಯಂತಹ ಕ್ರಮ ಸಮಂಜಸ ಆಗಬಹುದು.

ಆದರೆ, ಭಯೋತ್ಪಾದಕರನ್ನು ಹತ್ತಿಕ್ಕಲು ಅದೊಂದೇ ಮಂತ್ರದಂಡವಾಗಲಾರದು. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್‌ನಲ್ಲಿ ರದ್ದುಗೊಳಿಸಿ, ರಾಜ್ಯವನ್ನು ವಿಭಜಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಲಾಯಿತು. ಇದರ ಜೊತೆಗೆ, ಗಡಿ ದಾಟಿ ಬರುವ ಉಗ್ರರ ಅಟ್ಟಹಾಸ ತಡೆಯಲು ವಿಶೇಷ ರಣತಂತ್ರದ ಅಗತ್ಯವೂ ಇದ್ದೇ ಇದೆ ಎಂಬುದನ್ನು, ಒಂದು ತಿಂಗಳಿನಿಂದ ಈಚೆಗೆ ಉಗ್ರರ ವಿರುದ್ಧ ಅಲ್ಲಿ ನಡೆದ ಎರಡು ಪ್ರಮುಖ ಎನ್‌ಕೌಂಟರ್‌ಗಳು ಒತ್ತಿ ಹೇಳುತ್ತಿವೆ.

ಈ ಸಂದರ್ಭದಲ್ಲಿ ಹಲವು ಪ್ರಮುಖ ಉಗ್ರರನ್ನು ಹೊಡೆದುರುಳಿಸಿರುವುದು ಸಮಾಧಾನಕರ ಅಂಶ. ಆದರೂ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿರುವುದಕ್ಕೆ ಸಕಾರಣಗಳಿವೆ. ಇಲ್ಲಿ ಸೇನಾಪಡೆಗೆ ಮುಖಾಮುಖಿಯಾದ ಉಗ್ರರು ಕಠಿಣ ತರಬೇತಿ ಪಡೆದಿದ್ದವರು. ಹತರಾಗುವ ಮುನ್ನ ಭದ್ರತಾ ಪಡೆಗಳೊಟ್ಟಿಗೆ ದೀರ್ಘಕಾಲ ಸೆಣಸುವಷ್ಟು ಶಕ್ತರಾಗಿದ್ದುದು ಮಾತ್ರವಲ್ಲ, ಉನ್ನತ ದರ್ಜೆಯ ಸೇನಾಧಿಕಾರಿಗಳನ್ನೇ ಅವರು ಹತ್ಯೆ ಮಾಡಿರುವುದು ಅತ್ಯಂತ ಕಳವಳಕಾರಿ. ಯೋಧರಿಗೆ ಕೇರನ್‌ ವಲಯದಲ್ಲಿ ಸ್ಥಳೀಯ ಕಾಶ್ಮೀರಿಗರು ಸವಾಲೆಸೆದರೆ, ಹಂದ್ವಾರದಲ್ಲಿ ನಡೆದ ಕಾಳಗದಲ್ಲಿ ಪಾಕಿಸ್ತಾನದ ಉಗ್ರರು ಮುಖಾಮುಖಿಯಾಗಿದ್ದಾರೆ. ಇವರೆಲ್ಲ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದು, ಆಗಷ್ಟೇ ಭಾರತದ ಗಡಿದಾಟಿ ಬಂದವರು ಎಂಬುದು ಸ್ಪಷ್ಟವಾಗಿದೆ. ಇತ್ತೀಚಿನವರೆಗೆ, ಸ್ಥಳೀಯರಿಗೆ ಉಗ್ರರು ತರಬೇತಿ ನೀಡುತ್ತಿದ್ದರು. ಈ ತರಬೇತಿಯು ಅಷ್ಟೊಂದು ಕಠಿಣವಾದುದು ಆಗಿರುತ್ತಿರಲಿಲ್ಲ.

ಅಂತಹವರನ್ನು ಸೇನಾಪಡೆ ಸುಲಭವಾಗಿ ಬಗ್ಗುಬಡಿಯುತ್ತಿತ್ತು. ಆದರೆ, ಇದೀಗ ಈ ವಿಷಯದಲ್ಲಿ ಬದಲಾವಣೆ ಗೋಚರಿಸುತ್ತಿದೆ. ಕುಪಿತರಾದಂತೆ ಕಾಣುತ್ತಿರುವ ಸ್ಥಳೀಯ ಯುವಕರು ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಲು ಸಹ ಸಿದ್ಧರಾಗಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಯಾಗಿರುವ ಉಗ್ರರ ಗುಂಪುಗಳು ಅಂತಹವರನ್ನು ಬರಮಾಡಿಕೊಂಡು, ಅವರಿಗೆ ಉಗ್ರ ತರಬೇತಿ ನೀಡುತ್ತಿವೆ. ಇವರ ಜತೆಗೆ, ಪಾಕಿಸ್ತಾನ ಮೂಲದ ಉಗ್ರರೂ ದೇಶದೊಳಕ್ಕೆ ನುಸುಳುತ್ತಿದ್ದಾರೆ. ಪಾಕಿಸ್ತಾನದ ಸೇನೆಯು ಗಡಿಯಲ್ಲಿ ನಡೆಸುವ ಷೆಲ್‌ ದಾಳಿಯು ಉಗ್ರರ ಒಳನುಸುಳುವಿಕೆಗೆ ನೆರವಾಗುತ್ತಿದೆ. ಏಪ್ರಿಲ್‌ ತಿಂಗಳೊಂದರಲ್ಲೇ ಸುಮಾರು 25– 30 ಉಗ್ರರು ಭಾರತದ ಒಳನುಸುಳಿದ್ದು ವರದಿಯಾಗಿದೆ. ಇದಕ್ಕೆ ಮೇಲಿನ ಎರಡು ಎನ್‌ಕೌಂಟರ್‌ಗಳೇ ಸಾಕ್ಷಿ.

ಲಷ್ಕರ್‌– ಎ– ತಯಬಾ ಉಗ್ರ ಸಂಘಟನೆಯು ಇತ್ತೀಚೆಗಷ್ಟೇ ರಚಿಸಿರುವ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ (ಟಿಆರ್‌ಎಫ್‌) ಎಂಬ ಗುಂಪಿನ ಸದಸ್ಯರು ಈ ಎನ್‌ಕೌಂಟರ್‌ಗಳಲ್ಲಿ ಪಾಲ್ಗೊಂಡಿದ್ದುದಾಗಿ ಹೇಳಲಾಗಿದೆ. ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರನ್ನು ಒಗ್ಗೂಡಿಸುವ ಸಲುವಾಗಿಯೇ ಈ ಗುಂಪನ್ನು ರಚಿಸಿರುವಂತೆ ತೋರುತ್ತಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ಏಕೆಂದರೆ, ಉಗ್ರರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಅದರಿಂದ ಭಾರತಕ್ಕೆ ಹೆಚ್ಚು ಅನುಕೂಲ. ಹಾಗಿದ್ದಾಗ ಅವರು ಪರಸ್ಪರ ಹೊಡೆದಾಡಿಕೊಂಡು ಸಾಯುತ್ತಾರೆ. ಉಗ್ರ ಸಂಘಟನೆಗಳು ಒಗ್ಗಟ್ಟಾಗಿದ್ದರೆ ಅವರನ್ನು ಎದುರಿಸುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲೇ ಸರಿ. ಹಂದ್ವಾರ ಎನ್‌ಕೌಂಟರ್‌ನಲ್ಲಿ ಭದ್ರತಾಪಡೆಯ ಐವರು ಉನ್ನತ ಅಧಿಕಾರಿಗಳನ್ನು ದಾರಿ ತಪ್ಪಿಸುವಲ್ಲಿ ಉಗ್ರರು ಯಶ ಕಂಡಿದ್ದಾರೆ.

ಬೃಹತ್‌ ಕಟ್ಟಡವೊಂದರ ಪಕ್ಕದಲ್ಲಿದ್ದ ದನದ ಕೊಟ್ಟಿಗೆಯಿಂದ ಕಾರ್ಯಾಚರಿಸುತ್ತಿದ್ದ ಉಗ್ರರನ್ನು ಹಣಿಯಲು ಕಟ್ಟಡದ ಮೇಲಂತಸ್ತಿಗೆ ಹೋದ ಅಧಿಕಾರಿಗಳನ್ನು, ಅಲ್ಲಿ ಅಡಗಿದ್ದ ಇತರ ಉಗ್ರರು ಬೇಸ್ತುಬೀಳಿಸಿದ್ದಾರೆ. ಇದು, ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಅದ್ವಿತೀಯ ಕಾರ್ಯತಂತ್ರಗಳನ್ನು ಹೆಣೆಯಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ. ಜೊತೆಗೆ, ಶಸ್ತ್ರಾಸ್ತ್ರಗಳಿಂದಷ್ಟೇ ಈ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಸಹ ಕಾಶ್ಮೀರದ ವಿಷಯದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು, ಉಗ್ರರಿಗೆ ಸ್ಥಳೀಯರ ಬೆಂಬಲ ದೊರೆಯದಂತೆ ಮಾಡುವುದು ಮತ್ತು ಸಶಕ್ತ ರಾಜಕೀಯ ಪ್ರಕ್ರಿಯೆಯೊಂದನ್ನು ರೂಪಿಸುವುದು ಅತ್ಯಗತ್ಯ. ಅದಕ್ಕೆ ಬೇಕಾದ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳು ಇನ್ನಾದರೂ ಆರಂಭವಾಗಲೇಬೇಕು. ಸ್ಥಳೀಯ ಜನರು ಹಾಗೂ ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಕಾರ್ಯ ಕಷ್ಟಸಾಧ್ಯ ಎಂಬ ಕಟು ವಾಸ್ತವವನ್ನು ಸರ್ಕಾರ ಮನಗಾಣಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು