ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭರವಸೆಯ ಮಾತು, ಸಾಧನೆಗಳ ಬಣ್ಣನೆ ಹೊರೆಯೂ ಇಲ್ಲ, ಕೊಡುಗೆಯೂ ಇಲ್ಲ

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಅಚ್ಚರಿಯ ಯಾವ ಘೋಷಣೆಗಳೂ ಇಲ್ಲ. ಹಾಗೆಯೇ ಪರೋಕ್ಷ ಅಥವಾ ನೇರ ತೆರಿಗೆ ಹೆಚ್ಚಳದ ಕ್ರಮಗಳೂ ಇಲ್ಲ. ಇನ್ನು ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಹೊತ್ತಿನಲ್ಲಿ ಮಂಡಿಸಿರುವ ಈ ಮಧ್ಯಂತರ ಬಜೆಟ್‌ನಲ್ಲಿ ಭಾರಿ ಘೋಷಣೆಗಳು ಯಾವುವೂ ಇರುವುದಿಲ್ಲ ಎಂದು ಈ ಮೊದಲೇ ಹೇಳಿದ್ದ ನಿರ್ಮಲಾ ಅವರು, ಆ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಇವೇನೇ ಇದ್ದರೂ, ಚುನಾವಣೆ ಕಾಲದ ಈ ಬಜೆಟ್‌ನಲ್ಲಿ ಗಮನಿಸಬೇಕಾದ ಹಾಗೂ ಚಿಕಿತ್ಸಕ ದೃಷ್ಟಿಯಿಂದ ನೋಡಬೇಕಾದ ಹಲವು ಅಂಶಗಳು ಅಡಕವಾಗಿವೆ. ದೇಶದ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಂಡವಾಳ ವೆಚ್ಚವನ್ನು ವರ್ಷದಿಂದ ವರ್ಷಕ್ಕೆ ಜಾಸ್ತಿ ಮಾಡುತ್ತ ಬಂದಿದೆ. ಈ ಕ್ರಮದ ಮೂಲಕ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಚಲನಶೀಲತೆಯನ್ನು ತರುವ ಉದ್ದೇಶವನ್ನು ಅದು ಹೊಂದಿದೆ. ಸರ್ಕಾರದ ಕಡೆಯಿಂದ ಆಗುವ ಬಂಡವಾಳ ವೆಚ್ಚ ಹೆಚ್ಚಾದಂತೆಲ್ಲ, ಮಾರುಕಟ್ಟೆಯ ಶಕ್ತಿ ಹೆಚ್ಚುತ್ತದೆ. ಅದು ಜನರ ಹಣಕಾಸಿನ ಶಕ್ತಿಯನ್ನು ಕೂಡ ಕ್ರಮೇಣ ಜಾಸ್ತಿ ಮಾಡುತ್ತದೆ ಎಂಬ
ತಾತ್ವಿಕತೆಯಲ್ಲಿ ಈ ಸರ್ಕಾರ ನಂಬಿಕೆ ಇರಿಸಿರುವಂತಿದೆ. ಈ ಬಾರಿ (2024–25ನೇ ಸಾಲಿಗೆ) ಬಂಡವಾಳ ವೆಚ್ಚಗಳಿಗಾಗಿ ಕೇಂದ್ರವು ದೇಶದ ಜಿಡಿಪಿಯ ಶೇಕಡ 3.4ರಷ್ಟು ಮೊತ್ತ ತೆಗೆದಿರಿಸಿದೆ. ಅಂದರೆ,
₹ 11.11 ಲಕ್ಷ ಕೋಟಿ. ದೇಶಕ್ಕಾಗಿ ಆಸ್ತಿ ಸೃಷ್ಟಿಸುವ ಇಂತಹ ವೆಚ್ಚಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವುದು ಸ್ವಾಗತಾರ್ಹ.

ಮಧ್ಯಂತರ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ನಿರ್ಮಲಾ ಅವರು ಆಡಿದ ಕೆಲವು ಮಾತುಗಳು ತುಸು ಗಲಿಬಿಲಿ ಸೃಷ್ಟಿಸುವಂತೆಯೂ ಇದ್ದವು. ದೇಶದ ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ವಾಸ್ತವ ಈ ಮಾತಿಗೆ ತಕ್ಕಂತೆ ಇದೆಯೇ? 2023ರ ಏಪ್ರಿಲ್‌, ಮೇ, ಜೂನ್‌ ಮತ್ತು ಅಕ್ಟೋಬರ್ ತಿಂಗಳನ್ನು ಹೊರತುಪಡಿಸಿದರೆ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 5ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಚಿಲ್ಲರೆ ಹಣದುಬ್ಬರ ದರವು ಶೇ 4ರ ಆಸುಪಾಸಿನಲ್ಲಿ ಇರಬೇಕಿತ್ತು. 2023ರ ಹೆಚ್ಚಿನ ತಿಂಗಳುಗಳಲ್ಲಿ ಅದು ಶೇ 5ಕ್ಕಿಂತ ಹೆಚ್ಚಿತ್ತು. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿ ಇದೆ ಎಂಬ ಕಾರಣಕ್ಕಾಗಿಯೇ ರೆಪೊ ದರ ಕಡಿಮೆ ಆಗುತ್ತಿಲ್ಲ. ಹೀಗಾಗಿ, ನಿರ್ಮಲಾ ಅವರ ಈ ಮಾತುಗಳು ವಾಸ್ತವಕ್ಕೆ ಹತ್ತಿರವಾಗಿರು ವಂತೆ ಕಾಣುತ್ತಿಲ್ಲ. ನಿರ್ಮಲಾ ಅವರು ದೇಶದ ಅರ್ಥ ವ್ಯವಸ್ಥೆಯು ಸ್ಥಿರವಾಗಿದೆ ಎಂದು, ಸರ್ವಾಂಗೀಣ ಅಭಿವೃದ್ಧಿಯು ಅನುಭವಕ್ಕೆ ಬರುತ್ತಿದೆ ಎಂದು  ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ, ಭಾರತದಲ್ಲಿ ವರಮಾನ ಹಂಚಿಕೆಯಲ್ಲಿ ಭಾರಿ ಪ್ರಮಾಣದ ಅಸಮಾನತೆ ಕೂಡ ಇದೆ ಎಂಬುದನ್ನು ಹಲವು ವರದಿಗಳು ಹೇಳಿವೆ. ರಾಷ್ಟ್ರೀಯ ವರಮಾನದ ಶೇಕಡ 57ರಷ್ಟು ಪಾಲು, ದೇಶದ ಶೇ 10ರಷ್ಟು ಜನರಲ್ಲಿ ಹಂಚಿಕೆ ಆಗುತ್ತಿದೆ ಎಂದು ಕೂಡ ವರದಿಗಳು ಹೇಳುತ್ತಿವೆ. ಅಲ್ಲದೆ, ದೇಶದಲ್ಲಿ ಈಗಲೂ 80 ಕೋಟಿ ಬಡವರಿಗೆ ಉಚಿತವಾಗಿ ಆಹಾರಧಾನ್ಯವನ್ನು ಕೊಡುತ್ತಿರುವುದಾಗಿ ಈ ಸರ್ಕಾರವೇ ಹೇಳಿದೆ.

ಹೇಳಿಕೊಂಡಿರುವಷ್ಟು ಅಭಿವೃದ್ಧಿ ಸಾಧ್ಯವಾಗಿದ್ದರೆ, 80 ಕೋಟಿ ಮಂದಿಗೆ ಉಚಿತ ಆಹಾರಧಾನ್ಯ ಕೊಡಬೇಕಾದ ಸಂದರ್ಭ ಏಕೆ ಸೃಷ್ಟಿಯಾಯಿತು ಎಂಬುದು ಅರ್ಥವಾಗದ ಸಂಗತಿ. ಮುಂದಿನ ಐದು ವರ್ಷಗಳಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಪ್ರತಿ ಭಾರತೀಯನ ಆಕಾಂಕ್ಷೆಗಳೂ ಈಡೇರುವ ಸಾಧ್ಯತೆ ಇದೆ ಎಂದು ಅವರು ಬಹಳ ರಮ್ಯವಾದ ಚಿತ್ರಣವೊಂದನ್ನು ನೀಡಿದ್ದಾರೆ. ಕೋವಿಡ್‌ ನಂತರದಲ್ಲಿ ದೇಶದ ಶ್ರೀಮಂತ–ಬಡವರ ಪಟ್ಟಿಯಲ್ಲಿನ ಕೆಳಗಿನ ಶೇಕಡ 50ರಷ್ಟು ಮಂದಿಯ ಸಂಪತ್ತಿನ ಪ್ರಮಾಣವು ಕಡಿಮೆ ಆಗಿದೆ ಎಂಬುದನ್ನು ಅಂತರರಾಷ್ಟ್ರೀಯ ಸಂಸ್ಥೆಗಳ ವರದಿಗಳು ಹೇಳಿವೆ. ಮುಂದಿನ ಐದು ವರ್ಷಗಳಲ್ಲಿ ದೇಶವು ಅಭೂತಪೂರ್ವವಾದ ಅಭಿವೃದ್ಧಿಯನ್ನು ಕಾಣಲಿದೆ ಎಂದಾದರೆ, ಆ ಅಭಿವೃದ್ಧಿಯ ಪ್ರಯೋಜನವು ಕುಬೇರನಿಗೂ ಕುಚೇಲನಿಗೂ ಸಮನಾಗಿ ಸಿಗುವಂತಹ ಸನ್ನಿವೇಶ ಸೃಷ್ಟಿಸುವ ಹೊಣೆ ಆಡಳಿತಾರೂಢರ ಮೇಲೆಯೇ ಇರುತ್ತದೆ.

ಕೇಂದ್ರ ಸರ್ಕಾರವು ಹಣಕಾಸಿನ ನಿರ್ವಹಣೆಯಲ್ಲಿ ತನಗೆ ತಾನೇ ವಿಧಿಸಿಕೊಂಡ ಶಿಸ್ತಿನ ಚೌಕಟ್ಟೊಂದನ್ನು ಪಾಲಿಸಿಕೊಂಡು ಬರುತ್ತಿದೆ. ಅದು ಮಧ್ಯಂತರ ಬಜೆಟ್‌ನಲ್ಲಿಯೂ ಕಾಣುತ್ತಿದೆ. ಮುಂಬರುವ ಹಣಕಾಸು ವರ್ಷದಲ್ಲಿ ದೇಶದ ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ 5.1ಕ್ಕೆ ಮಿತಿಗೊಳಿಸಲಾಗುವುದು ಎಂದು ಹೇಳಿರುವುದು ಮೆಚ್ಚುವಂಥದ್ದು. 2021–22ರ ಬಜೆಟ್ ಭಾಷಣದಲ್ಲಿ ನಿರ್ಮಲಾ ಅವರು, 2025–26ರೊಳಗೆ ವಿತ್ತೀಯ ಕೊರತೆಯನ್ನು ದೇಶದ ಜಿಡಿಪಿಯ ಶೇ 4.5ಕ್ಕೆ ಮಿತಿಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆ ಮಾತಿಗೆ ಅನುಗುಣವಾಗಿ ಇದೆ ಈ ಬಾರಿಯ ಮಿತಿ. ಆರ್ಥಿಕ ಶಿಸ್ತಿಗೆ ಬದ್ಧವಾಗಿ ನಡೆದುಕೊಳ್ಳುವುದಾಗಿ ಹೇಳಿರುವ ಈ ಮಾತು ವಿದೇಶಿ ಹೂಡಿಕೆದಾರರಲ್ಲಿ ಭಾರತದ ಬಗ್ಗೆ ಹೆಚ್ಚು ವಿಶ್ವಾಸ ಮೂಡುವಂತೆ ಮಾಡಬಹುದು. ಆದಾಯ ತೆರಿಗೆ ದರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದು ಹೊರೆ ಹೆಚ್ಚಿಸದೆ ಇರುವ ಕೆಲಸ ಅನಿಸಿದರೂ, ಇರುವ ಹೊರೆಯನ್ನು ತಗ್ಗಿಸುವ ಕೆಲಸ ಅಲ್ಲ ಎಂಬುದೂ ನಿಜ. ಜೀವನವೆಚ್ಚವು ಹೆಚ್ಚುತ್ತಲೇ ಇರುವ ಹೊತ್ತಿನಲ್ಲಿ, ಆದಾಯ ತೆರಿಗೆ ದರಗಳಲ್ಲಿ ತುಸು ಸಡಿಲಿಕೆ ನೀಡಿ, ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡುವ ಕೆಲಸವನ್ನು ಮಾಡಬಹುದಿತ್ತು. ಮಧ್ಯಂತರ ಬಜೆಟ್‌ನಲ್ಲಿ ವಾಸ್ತವಕ್ಕೆ ಹತ್ತಿರವಾದ ಮಾತುಗಳಿವೆ; ಹಾಗೆಯೇ, ವಾಸ್ತವಕ್ಕೆ ತಾಳೆಯಾಗದ ಮಾತುಗಳೂ ಇವೆ; ತೀರಾ ರಮ್ಯವಾದ ಚಿತ್ರಣಗಳೂ ಇದರಲ್ಲಿ ಇವೆ. ಈ ಮಧ್ಯಂತರ ಬಜೆಟ್‌ ಇವೆಲ್ಲವುಗಳ ಪಾಕದಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT