ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹಣಕಾಸು ಆಯೋಗಕ್ಕೆ ಅಧ್ಯಕ್ಷರ ನೇಮಕ; ಅರ್ಥಪೂರ್ಣ ಕೆಲಸಕ್ಕೆ ಹಲವು ಸವಾಲು

Published 3 ಜನವರಿ 2024, 23:49 IST
Last Updated 3 ಜನವರಿ 2024, 23:49 IST
ಅಕ್ಷರ ಗಾತ್ರ

ಹಣಕಾಸು ಆಯೋಗವು ಸಬ್ಸಿಡಿಗಳು ಹಾಗೂ ವಿತ್ತೀಯ ಕೊರತೆಯ ವಿಚಾರವಾಗಿ ಕೆಲವು ನಿಯಮಗಳನ್ನು ರೂಪಿಸಬೇಕಿದೆ

ಹದಿನಾರನೆಯ ಹಣಕಾಸು ಆಯೋಗಕ್ಕೆ ಅರವಿಂದ ಪನಗಡಿಯಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಪರಿಣಾಮವಾಗಿ ಆಯೋಗವು ಒಂದು ರೂಪ ಪಡೆದುಕೊಂಡಂತೆ ಆಗಿದೆ. ಪನಗಡಿಯಾ ಅವರು ನೀತಿ ಆಯೋಗದ ಮೊದಲ ಉಪಾಧ್ಯಕ್ಷ ಆಗಿದ್ದವರು. ಅರ್ಥಶಾಸ್ತ್ರಜ್ಞರಾದ ಪನಗಡಿಯಾ ಅವರು ಈಗ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಣಕಾಸು ಆಯೋಗದ ಇತರ ಸದಸ್ಯರನ್ನು ಇನ್ನಷ್ಟೇ ನೇಮಕ ಮಾಡಬೇಕಿದೆ. ಪನಗಡಿಯಾ ಅವರ ನೇಮಕದ ಮೂಲಕವೇ ಕೇಂದ್ರ ಸರ್ಕಾರವು ಕೆಲವು ಸಂದೇಶಗಳನ್ನು ರವಾನಿಸುವ ಯತ್ನ ನಡೆಸಿರಬಹುದು. ಆಯೋಗವು ಕೆಲಸ ಮಾಡುವಾಗ ಹಾಗೂ ಶಿಫಾರಸುಗಳನ್ನು ಸಲ್ಲಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಹಣಕಾಸಿನ ಪರಿಸ್ಥಿತಿ ಹಾಗೂ ರಾಜಕೀಯ ಪರಿಸ್ಥಿತಿಯ ಬಗ್ಗೆ ಪನಗಡಿಯಾ ಅವರಿಗೆ ಅರಿವಿದೆ. ಆಯೋಗಕ್ಕೆ ನಿಗದಿ ಮಾಡಿರುವ ವ್ಯಾಪ್ತಿ ಏನು ಎಂಬುದನ್ನು ಸರ್ಕಾರವು ವಿವರವಾಗಿ ಹೇಳಿಲ್ಲ. ಆದರೆ ಈ ಹಿಂದೆ ಹಣಕಾಸು ಆಯೋಗಗಳಿಗೆ ಕೇಂದ್ರವು ಅವುಗಳ ಕೆಲಸದ ವ್ಯಾಪ್ತಿಯನ್ನು ಸ್ಪಷ್ಟವಾಗಿ ಹೇಳುತ್ತಿತ್ತು. ಈಗ ಈ ಪದ್ಧತಿಯಲ್ಲಿ ತುಸು ಬದಲಾವಣೆಯಾದಂತೆ ಕಾಣುತ್ತಿದೆ. ಇದರಿಂದಾಗಿ ಆಯೋಗಕ್ಕೆ ತನ್ನ ಕೆಲಸಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಬಹುದು. ಅಲ್ಲದೆ, ಆಯೋಗವು ತನ್ನ ವ್ಯಾಪ್ತಿಯನ್ನು ನಿಗದಿ ಮಾಡಿಕೊಳ್ಳುವ ವಿಚಾರದಲ್ಲಿ ಸಮರ್ಥವಾಗಿದೆ ಎಂಬ ವಿಶ್ವಾಸ ಸರ್ಕಾರಕ್ಕೆ ಇದ್ದಿರಬಹುದು.

ಆಯೋಗವು ತೆರಿಗೆ ವರಮಾನವನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಯಾವ ಸೂತ್ರದ ಅಡಿಯಲ್ಲಿ ಹಂಚಿಕೆ ಮಾಡಬೇಕು ಎಂಬುದನ್ನು ತೀರ್ಮಾನಿಸ ಬೇಕಿದೆ. ಅಲ್ಲದೆ, ವಿವಿಧ ರಾಜ್ಯಗಳ ನಡುವೆ ತೆರಿಗೆ ವರಮಾನದ ಹಂಚಿಕೆಗೆ ಕೂಡ ಸೂತ್ರವನ್ನು ರೂಪಿಸಬೇಕಿದೆ. ಆಯೋಗವು 2026ರಿಂದ 2031ರವರೆಗೆ ಅನ್ವಯವಾಗುವಂತೆ ಈ ಸೂತ್ರವನ್ನು ಸಿದ್ಧಪಡಿಸಬೇಕಿದೆ. ಆರ್ಥಿಕ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಸಮಸ್ಯೆಗಳು ಇರುವಾಗ ಈ ಹೊಣೆಯು ಬಹಳ ಸವಾಲಿನದ್ದು.

ಕೇಂದ್ರದಿಂದ ರಾಜ್ಯಗಳಿಗೆ ಸಿಗುವ ತೆರಿಗೆ ವರಮಾನವು ನ್ಯಾಯಸಮ್ಮತವಾಗಿ ಇರುವಂತೆ ಆಯೋಗ ನೋಡಿಕೊಳ್ಳಬೇಕು. ಈಗಿನ ನಿಯಮಗಳ ಅನ್ವಯ, ಕಡಿಮೆ ವರಮಾನ ಇರುವ ರಾಜ್ಯಗಳಿಗೆ ತೆರಿಗೆ ಪಾಲು ಹೆಚ್ಚು ಸಿಗುತ್ತಿದೆ. ತಾವು ಅಭಿವೃದ್ಧಿಯನ್ನು ಸಾಧಿಸಿದ್ದರೂ, ವರಮಾನ ಹಂಚಿಕೆಯಲ್ಲಿ ತಮಗೇ ಅನ್ಯಾಯ ಆಗುತ್ತಿದೆ ಎಂಬ ಅಳಲು ದಕ್ಷಿಣದ ರಾಜ್ಯಗಳದ್ದಾಗಿದೆ. ತೆರಿಗೆ ವರಮಾನದಲ್ಲಿ ತಮಗಿಂತಲೂ ಹೆಚ್ಚಿನ ಪಾಲು ಉತ್ತರ ಭಾರತದ ರಾಜ್ಯಗಳಿಗೆ ಸಿಗುತ್ತಿದೆ ಎಂದು ಕೂಡ ಅವು ಹೇಳುತ್ತಿವೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ವರಮಾನ ಸಂಗ್ರಹದ ವಿಚಾರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಆಯ್ಕೆಗಳು ಉಳಿದಿಲ್ಲ.

ವೆಚ್ಚಗಳ ವಿಚಾರದಲ್ಲಿ ತಮ್ಮ ಸ್ವಾತಂತ್ರ್ಯ ಒಂದೆಡೆ ಕುಗ್ಗುತ್ತಿದೆ, ವರಮಾನ ಸಂಗ್ರಹಿಸುವ ಮಾರ್ಗಗಳು ಕಡಿಮೆ ಆಗಿವೆ ಎಂಬುದು ರಾಜ್ಯಗಳ ಅಳಲು. ಹಣಕಾಸು ಆಯೋಗವು ಸಬ್ಸಿಡಿಗಳು ಹಾಗೂ ವಿತ್ತೀಯ ಕೊರತೆಯ ವಿಚಾರವಾಗಿ ಕೆಲವು ನಿಯಮಗಳನ್ನು ರೂಪಿಸಬೇಕಿದೆ. ಇವು ಮುಂದಿನ ದಿನಗಳಲ್ಲಿ ಬಹಳ ಮಹತ್ವ ಪಡೆಯಲಿವೆ.

ಹಣಕಾಸು ಆಯೋಗವು ದತ್ತಾಂಶದ ಕೊರತೆ ಹಾಗೂ ದೋಷಯುಕ್ತ ದತ್ತಾಂಶದ ಸಮಸ್ಯೆಯನ್ನೂ ನಿಭಾಯಿಸಬೇಕಿದೆ. ವರಮಾನ ಹಂಚಿಕೆಯನ್ನು ತೀರ್ಮಾನಿಸುವಾಗ ಜನಸಂಖ್ಯೆಯ ಬಗ್ಗೆಯೂ ಗಮನ ನೀಡಬೇಕಿದೆ. ಆದರೆ 2021ರಲ್ಲಿ ಜನಗಣತಿ ಆಗದೆ ಇರುವ ಕಾರಣ, ಹಣಕಾಸು ಆಯೋಗವು
ಜನಸಂಖ್ಯೆಯನ್ನು 2011ರ ಜನಗಣತಿಯ ಆಧಾರದಲ್ಲಿ ಲೆಕ್ಕಹಾಕಬೇಕಾಗುತ್ತದೆ. ಇದು ಹಣಕಾಸು ಆಯೋಗಕ್ಕೆ ಕೆಲವು ಅಂದಾಜುಗಳನ್ನು ಮಾಡುವ ಕೆಲಸದಲ್ಲಿ ತೊಡಕಾಗಿ ಪರಿಣಮಿಸಬಹುದು. ತಲಾವಾರು ಆದಾಯಕ್ಕೆ ಸಂಬಂಧಿಸಿದ ದತ್ತಾಂಶ ಕೂಡ ಲಭ್ಯವಿಲ್ಲದೆ ಇರಬಹುದು. ಕೆಲವು ದತ್ತಾಂಶಗಳು ಎಷ್ಟರಮಟ್ಟಿಗೆ ಸರಿ ಇವೆ ಎಂಬ ಪ್ರಶ್ನೆ ಒಂದೆಡೆ ಇದೆ. ಆಯೋಗವು ಅರ್ಥಪೂರ್ಣವಾದ ಕೆಲಸ ಮಾಡಬೇಕು ಎಂದಾದರೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT