ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯ ಹಕ್ಕನ್ನು ಗೌರವಿಸಿ; ಪೊಲೀಸ್ ಬಲಪ್ರಯೋಗ ಸಲ್ಲದು

Last Updated 20 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ದೇಶದಾದ್ಯಂತ ಜನರ ಆಕ್ರೋಶ ಭುಗಿಲೆದ್ದಿದೆ. ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದ ಪ್ರತಿಭಟನೆಯು ಉತ್ತರದ ರಾಜ್ಯಗಳಿಗೂ ಹಬ್ಬಿ ಈಗ ದಕ್ಷಿಣಕ್ಕೂ ವ್ಯಾಪಿಸಿದೆ. ಕರ್ನಾಟಕದಲ್ಲೂ ಬೆಂಗಳೂರು ಸಹಿತ ಹಲವು ನಗರಗಳಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಈ ಕಾಯ್ದೆಯ ಬಗ್ಗೆ ತಮಗೆ ಸಹಮತವಿಲ್ಲ ಎಂದು ವಿವಿಧ ಸಂಘಟನೆಗಳ ಜನರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪ್ರತಿಭಟನೆಯನ್ನು ತಡೆಯಲು ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ವಿಧಿಸಿದೆ. ಸರ್ಕಾರದ ನೀತಿಗಳ ವಿರುದ್ಧ ಅಸಮಾಧಾನ ಇರುವ ಜನರು ಪ್ರತಿಭಟನೆ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದಲ್ಲಿ ಅವರಿಗಿರುವ ಸಾಂವಿಧಾನಿಕ ಹಕ್ಕು. ಅದನ್ನು ಮೊಟಕುಗೊಳಿಸಲು ಪೊಲೀಸ್‌ ಬಲಪ್ರಯೋಗ ಮಾಡುವುದು, ಪ್ರಜೆಗಳ ಮತದ ಮೂಲಕವೇ ಆಯ್ಕೆಯಾಗಿರುವ ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ.

ಪ್ರತಿಭಟನೆಯ ವೇಳೆ ಶಾಂತಿಗೆ ಭಂಗ ಉಂಟಾದಲ್ಲಿ ಅದನ್ನು ನಿಯಂತ್ರಿಸಲು ಪೊಲೀಸರಿಗೆ ಎಲ್ಲ ಅಧಿಕಾರವೂ ಇದೆ, ಸೂಕ್ತ ದಾರಿಗಳೂ ಇವೆ. ಆದರೆ ಜನರ ಪ್ರತಿಭಟನೆಯ ಹಕ್ಕನ್ನು ಗೌರವಿಸುವುದಿಲ್ಲ ಎಂಬ ಭಾವನೆ ಬರುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳಬಾರದು. ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಜನಸಾಮಾನ್ಯರಲ್ಲಿ ಕೆಲವು ಗೊಂದಲಗಳಿರುವುದು ನಿಜ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಅಥವಾ ಅಧಿಕಾರಿಗಳ ಮೂಲಕ ಸರಿಯಾದ ಮಾಹಿತಿ ನೀಡಿ, ಕಾಯ್ದೆಯ ಕುರಿತು ಇರುವ ಸಂಶಯಗಳನ್ನು ನಿವಾರಿಸುವುದು ಸರ್ಕಾರ ಮಾಡಬೇಕಾಗಿರುವ ಮೊದಲ ಕೆಲಸ. ಆ ಕರ್ತವ್ಯವನ್ನು ನಿರ್ವಹಿಸುವ ಬದಲು ರಾಜ್ಯದ ಮತ್ತು ಕೇಂದ್ರದ ಸಚಿವರೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ಪಕ್ಷದ ಕೆಲವು ನಾಯಕರ ಇಂತಹ ಸಂಯಮರಹಿತ ನಡೆಯ ಬಗ್ಗೆ ಮುಖ್ಯಮಂತ್ರಿ ಗಮನಹರಿಸಿ ನಿಯಂತ್ರಿಸಬೇಕಾದ ಅಗತ್ಯವಿದೆ.

ಮಂಗಳೂರಿನಲ್ಲಿ ಕಲ್ಲುತೂರಾಟ ನಡೆಸಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಇನ್ನೊಬ್ಬ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ. ಲಾಠಿಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ್ದಕ್ಕೆ ಪ್ರತಿಭಟನಕಾರರು ಬಗ್ಗದಿದ್ದಾಗ ಗೋಲಿಬಾರ್‌ ಮಾಡಲಾಗಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿ
ದ್ದಾರೆ. ಆದರೆ ಪೊಲೀಸರು ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿರ್ವಹಿಸುವಲ್ಲಿ ಎಡವಿದ್ದಾರೆ ಎನ್ನುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಮುಂಬೈ, ಕಲಬುರ್ಗಿ ಮುಂತಾದ ಕಡೆ ಸೇರಿದ್ದ ಪ್ರತಿಭಟನಕಾರರ ದೊಡ್ಡ ಸಮೂಹವನ್ನು ಗಮನಿಸಿದರೆ, ಮಂಗಳೂರಿನಲ್ಲಿ ಕಲ್ಲುತೂರಾಟದಲ್ಲಿ ತೊಡಗಿದ್ದ ಜನರ ಗುಂಪು ಸಣ್ಣದು. ಮೈಕ್‌ ಮೂಲಕ ಮುನ್ಸೂಚನೆ ನೀಡದೆ, ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಹೆದರಿಕೆ ಹುಟ್ಟಿಸದೆ, ನೇರವಾಗಿ ಜನರ ಮೇಲೆ ಗುಂಡು ಹಾರಿಸಿರುವುದು ಪೊಲೀಸರ ವೈಫಲ್ಯವನ್ನು ಎತ್ತಿತೋರುತ್ತಿದೆ.

ಮುಂಬೈಯಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದ ಕಲಬುರ್ಗಿಯಲ್ಲಿಯೂ ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನರು ಸೇರಿದ್ದರೂ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅದಕ್ಕೆ ಪೊಲೀಸರ ದಕ್ಷ ಕಾರ್ಯನಿರ್ವಹಣೆಯೂ ಕಾರಣವಾಗಿರಬಹುದು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ಪೊಲೀಸರು ಪರಿಸ್ಥಿತಿಯನ್ನು ಸಂಯಮದಿಂದ ಮತ್ತು ನಾಜೂಕಾಗಿ ನಿರ್ವಹಿಸಬಹುದಾಗಿತ್ತು. ಅದನ್ನು ಬಿಟ್ಟು ಪೊಲೀಸರೇ ಉದ್ರೇಕಕ್ಕೆ ಒಳಗಾದಂತೆ ವರ್ತಿಸಿರುವುದೇಕೆ? ಗೋಲಿಬಾರ್‌ನಲ್ಲಿ ಸತ್ತಿರುವವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಅಮಾಯಕರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದಕಾರಣ, ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಿ ಸತ್ಯವನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಜನರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವೂ ಹೌದು. ಶಾಂತಿಯುತ ಪ್ರತಿಭಟನೆಗೆ ಮುಕ್ತ ಅವಕಾಶ ನೀಡಿ; ಹಿಂಸಾಚಾರಕ್ಕೆ ಇಳಿದರೆ ಮಾತ್ರ ನಿರ್ದಾಕ್ಷಿಣ್ಯವಾಗಿ ಬಂಧಿಸಿ, ಮೊಕದ್ದಮೆ ದಾಖಲಿಸಿ. ರಾಜ್ಯದಲ್ಲಿ ಶಾಂತಿ ಕಾಪಾಡಲು ಸಾರ್ವಜನಿಕರು ಕೂಡ ಕೈಜೋಡಿಸಬೇಕು. ಇದಕ್ಕಾಗಿ, ಅಗತ್ಯಬಿದ್ದರೆ ಸರ್ಕಾರವು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರ ನೆರವನ್ನೂ ಪಡೆದುಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT