ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಚಟುವಟಿಕೆ ಪುನರಾರಂಭ: ಮುನ್ನೆಚ್ಚರಿಕೆ ಪಾಲನೆ, ಸ್ವಯಂಶಿಸ್ತು ಅಗತ್ಯ

Last Updated 28 ಸೆಪ್ಟೆಂಬರ್ 2021, 19:17 IST
ಅಕ್ಷರ ಗಾತ್ರ

ಕೊರೊನಾ ನಿಯಂತ್ರಣಕ್ಕಾಗಿ ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ ಆಸನ ಮಿತಿ ನಿರ್ಬಂಧವನ್ನು ಸರ್ಕಾರ ಅ.1ರಿಂದ ಹಿಂತೆಗೆದುಕೊಂಡಿರುವುದು ಚಿತ್ರೋದ್ಯಮದ ಹಿತದೃಷ್ಟಿಯಿಂದ ಅಗತ್ಯವಾಗಿದ್ದ ಕ್ರಮ. ಕೊರೊನಾ ಕಾರಣದಿಂದಾಗಿ ಸಿನಿಮಾ ಪ್ರದರ್ಶನ, ಚಿತ್ರೀಕರಣ ಸೇರಿದಂತೆ ಚಿತ್ರೋದ್ಯಮದ ಬಹುತೇಕ ಚಟುವಟಿಕೆಗಳು ಕುಂಟತೊಡಗಿ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಚಿತ್ರೋದ್ಯಮದೊಂದಿಗೆ ರಂಗಭೂಮಿ ಕೂಡ ಕೊರೊನಾದ ಹಾವಳಿಯಿಂದ ತತ್ತರಿಸಿತ್ತು. ಚಲನಚಿತ್ರ ಮತ್ತು ರಂಗಭೂಮಿಯ ಕಲಾವಿದರು ಹಾಗೂ ತಂತ್ರಜ್ಞರು ಜೀವನೋಪಾಯದ ದಾರಿ ಕಾಣದೆ ಕಂಗಾಲಾಗಿದ್ದರು. ಕೊರೊನಾ ನಿರ್ಬಂಧಗಳು ಸಡಿಲಗೊಂಡು ವಿವಿಧ ಕ್ಷೇತ್ರಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದರೂ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಪೂರ್ಣ ಪ್ರಮಾಣದ ಅವಕಾಶ ದೊರೆತಿರಲಿಲ್ಲ. ಶಾಲೆ–ಕಾಲೇಜುಗಳ ಆರಂಭ ಸೇರಿದಂತೆ, ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಹಾಗೂ ರಂಗಮಂದಿರಗಳು ಪೂರ್ಣ ಪ್ರಮಾಣದ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಹಿರಿಯ ಕಲಾವಿದರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆ ಕೋರಿಕೆಗೆ ಸ್ಪಂದಿಸಿರುವ ಸರ್ಕಾರವು ಚಿತ್ರಮಂದಿರಗಳು ಹಾಗೂ ರಂಗಮಂದಿರ ಗಳಿಗೆ ವಿಧಿಸಲಾಗಿದ್ದ ಶೇ 50ರ ಆಸನ ಮಿತಿಯನ್ನು ಅ. 1ರಿಂದ ಅನ್ವಯವಾಗುವಂತೆ ತೆಗೆದುಹಾಕಿದೆ. ಅಕ್ಟೋಬರ್‌ 3ರಿಂದ ಪಬ್‌ಗಳನ್ನು ತೆರೆಯುವುದಕ್ಕೂ ಅವಕಾಶ ದೊರೆತಿದೆ. 6ನೇ ತರಗತಿಯಿಂದ ಶಾಲಾಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಕೊರೊನಾ ನಿಯಂತ್ರಣದ ಕಾರಣದಿಂದಾಗಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಬಹುಮಟ್ಟಿಗೆ ಹಿಂತೆಗೆದುಕೊಂಡಿ ದ್ದರೂ, ಕೋವಿಡ್‌ ಪ್ರಕರಣಗಳ ಸಂಖ್ಯೆ ದಿಢೀರ್‌ ಏರಿಕೆ ಆಗಬಾರದೆನ್ನುವ ಉದ್ದೇಶದಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.

ಶೇ 50ರಷ್ಟು ಸೀಟು ಭರ್ತಿಗೆ ಅವಕಾಶವಿ ದ್ದರೂ ಕೆಲವೇ ಚಿತ್ರಮಂದಿರಗಳು ಮಾತ್ರ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ನಿರ್ವಹಣಾ ವೆಚ್ಚವೂ ಸಂಗ್ರಹವಾಗುವುದಿಲ್ಲ ಎನ್ನುವ ಕಾರಣಕ್ಕೆ ಏಕತೆರೆಯ ಅನೇಕ ಚಿತ್ರಮಂದಿರಗಳು ಬಾಗಿಲು ತೆರೆಯಲು ಹಿಂಜರಿದಿದ್ದವು. ಹೆಚ್ಚಿನ ಬಂಡವಾಳ ಹೂಡಿ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೆಮುಂದೆ ನೋಡುತ್ತಿದ್ದರು. ರಂಗಮಂದಿರಗಳಲ್ಲಿ ಕೂಡ ಉತ್ಸಾಹದ ವಾತಾವರಣ ಇರಲಿಲ್ಲ. ಕೆಲವೆಡೆ ವಾರಾಂತ್ಯದ ರಂಗ ಪ್ರದರ್ಶನಗಳಷ್ಟೇ ನಡೆಯು ತ್ತಿದ್ದವು. ಈಗ ಪೂರ್ಣ ಆಸನ ಸಾಮರ್ಥ್ಯ ದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ದೊರೆತಿ ರುವುದರಿಂದ ಅಕ್ಟೋಬರ್‌ 1ರಿಂದ ಪ್ರದರ್ಶನ ಪುನರಾರಂಭಿಸಲು ಎಲ್ಲ ಚಿತ್ರಮಂದಿರಗಳು ಹಾಗೂ ರಂಗಮಂದಿರಗಳು ಸಿದ್ಧತೆ ನಡೆಸುತ್ತಿವೆ. ಸಿನಿಮಾ ಮತ್ತು ರಂಗಭೂಮಿ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಿಧಾನವಾಗಿ ಚುರುಕಾಗಲಿವೆ. ಸ್ಟಾರ್‌ ನಟರ ದೊಡ್ಡ ಬಜೆಟ್‌ನ ಸಿನಿಮಾಗಳು ತೆರೆಕಾಣಲು ದಿನಗಣನೆ ನಡೆಸುತ್ತಿವೆ. ಹೊಸ ಸಿನಿಮಾಗಳ ಬಿಡುಗಡೆಯೊಂದಿಗೆ ನವರಾತ್ರಿ ಹಬ್ಬದ ಆಸುಪಾಸಿನಲ್ಲಿ ಚಿತ್ರಮಂದಿರಗಳಲ್ಲಿ ಉಲ್ಲಾಸದ ವಾತಾವರಣ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಸಂಭ್ರಮ ಅಪಾಯಕ್ಕೆ ಎಡೆಕೊಡದಂತೆ ಚಿತ್ರಮಂದಿರಗಳ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಾಗಿದೆ. ಚಿತ್ರಮಂದಿರಗಳಿಗೆ ಬರುವವರು ಸಂಯಮದಿಂದ ನಡೆದುಕೊಳ್ಳುವುದರ ಜೊತೆಗೆ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಿನಿಮಾ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜನಪ್ರಿಯ ಕಲಾವಿದರು ಮಾಡಬೇಕಾಗಿದೆ. ಒಂದೂವರೆ ವರ್ಷದಿಂದ ಮನರಂಜನೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಎದುರಿಸಿದ ಸಂಕಷ್ಟಗಳನ್ನು ನೆನಪಿನಲ್ಲಿರಿಸಿಕೊಂಡು, ಆ ದುಃಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಪ್ರಸ್ತುತ ಕರ್ನಾಟಕದಲ್ಲಿ ಕೋವಿಡ್ ದೃಢ ಪ್ರಮಾಣ ಶೇ 0.66ರ ಆಸುಪಾಸಿನಲ್ಲಿದೆ. ಈ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಸಂಪೂರ್ಣ ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ಗಳು ಕಾರ್ಯ ನಿರ್ವಹಿಸಬಹುದಾಗಿದೆ. ಕೋವಿಡ್ ದೃಢ ಪ್ರಮಾಣ ಶೇ 1ಕ್ಕಿಂತ ಹೆಚ್ಚಾದರೆ ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗುವುದು ಹಾಗೂ ಸೋಂಕು ದೃಢ ಪ್ರಮಾಣ ಶೇ 2ಕ್ಕೂ ಹೆಚ್ಚಾಗಿದ್ದರೆ ಚಿತ್ರಮಂದಿರಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಚಿತ್ರಮಂದಿರಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಗೊತ್ತುಪಡಿಸಿದೆ ಪ್ರತೀ ಪ್ರದರ್ಶನಕ್ಕೆ ಮೊದಲು ಸಂಪೂರ್ಣ ಚಿತ್ರಮಂದಿರವನ್ನು ಸ್ವಚ್ಛ ಗೊಳಿಸಬೇಕಾಗಿದೆ. ಕನಿಷ್ಠ 1 ಡೋಸ್‌ ಲಸಿಕೆ ಹಾಕಿಸಿಕೊಂಡವರಿಗಷ್ಟೇ ಚಿತ್ರಮಂದಿರಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಗರ್ಭಿಣಿ ಮತ್ತು ಮಕ್ಕಳಿಗೆ ಸಿನಿಮಾಮಂದಿರಗಳಿಗೆ ಅವಕಾಶವಿಲ್ಲ. ಈ ಎಲ್ಲ ನಿಯಮಗಳನ್ನು ಚಿತ್ರಮಂದಿರಗಳ ಮಾಲೀಕರು ಚಾಚೂ ತಪ್ಪದೆ ಅನುಸರಿಸಬೇಕಾಗಿದೆ. ಸ್ವಲ್ಪ ಹೆಚ್ಚೂಕಡಿಮೆಯಾದರೆ ಚಿತ್ರಮಂದಿರಗಳನ್ನು ಮತ್ತೆ ಮುಚ್ಚುವ ಪರಿಸ್ಥಿತಿ ಎದುರಾಗುವುದರಿಂದ, ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ. ಅಕ್ಟೋಬರ್‌ ತಿಂಗಳಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುವುದರಿಂದ ಜನರ ಓಡಾಟವೂ ಹೆಚ್ಚಲಿದೆ. ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಹಾಗಾಗಿ, ಸರ್ಕಾರ ಗೊತ್ತುಪಡಿಸಿರುವ ಕೋವಿಡ್‌ ಮಾರ್ಗಸೂಚಿಯನ್ನು ಅನುಸರಿಸುವುದರ ಜೊತೆಗೆ ನಾಗರಿಕರು ಸ್ವಯಂ ಶಿಸ್ತನ್ನು ಅನುಸರಿಸದೆ ಹೋದರೆ ಬೂದಿ ಮುಚ್ಚಿದ ಕೆಂಡದಂತಿರುವ ಕೊರೊನಾ ಸೋಂಕು ಮತ್ತೆ ಯಾವಾಗ ಬೇಕಾದರೂ ಉಲ್ಬಣಿಸುವ ಸಾಧ್ಯತೆಯಿದ್ದೇ ಇದೆ. ಅದಕ್ಕೆ ಅವಕಾಶ ಕಲ್ಪಿಸದಿರುವ ಹೊಣೆಗಾರಿಕೆಯನ್ನು ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಪ್ರದರ್ಶಿಸ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT