ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮತದಾನದ ನಿಖರ ಸಂಖ್ಯೆಯನ್ನು ಪ್ರಕಟಿಸದಿರುವುದು ಸರಿಯಲ್ಲ

Published 5 ಮೇ 2024, 23:59 IST
Last Updated 5 ಮೇ 2024, 23:59 IST
ಅಕ್ಷರ ಗಾತ್ರ

ಚುನಾವಣೆ ನಡೆಯುವ ಪ್ರತಿಯೊಂದು ಹಂತದಲ್ಲಿಯೂ ಚುನಾವಣಾ ಆಯೋಗವು ಯಾವುದೇ ಸಂದೇಹಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಸಮರ್ಪಕವಾಗಿ ನಡೆದುಕೊಳ್ಳಬೇಕು

ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಪ್ರಮಾಣದ ದತ್ತಾಂಶವನ್ನು
ಪ್ರಕಟಿಸುವಲ್ಲಿ ಚುನಾವಣಾ ಆಯೋಗವು ವಿಳಂಬ ಮಾಡಿರುವುದರ ಕುರಿತು ಪ್ರಶ್ನೆಗಳು ಎದ್ದಿವೆ. ಆಯೋಗವು ಪ್ರಕಟಿಸಿರುವ ಮಾಹಿತಿ ಮತ್ತು ಅದರ ಸತ್ಯಾಸತ್ಯತೆಯ ಕುರಿತು ಕೂಡ ಸಂದೇಹಗಳು ವ್ಯಕ್ತವಾಗಿವೆ. ಏಪ್ರಿಲ್‌ 19ರಂದು ನಡೆದ ಮೊದಲ ಹಂತದ ಮತದಾನ ಪ್ರಮಾಣದ ಮಾಹಿತಿಯನ್ನು ಆಯೋಗವು 11 ದಿನಗಳ ಬಳಿಕ ಪ್ರಕಟಿಸಿದೆ. ಏಪ್ರಿಲ್‌ 26ರಂದು ನಡೆದ ಎರಡನೇ ಹಂತದ ಮತದಾನದ ಪ್ರಮಾಣ ನಾಲ್ಕು ದಿನಗಳ ಬಳಿಕ ಪ್ರಕಟವಾಯಿತು. ಕಂಪ‍್ಯೂಟರ್‌ಗಳ ಬಳಕೆ ಇಲ್ಲದ ಕಾಲದಲ್ಲಿ ಕೂಡ ಮತದಾನ ನಡೆದ ಒಂದೆರಡು ದಿನಗಳಲ್ಲಿ ಮತದಾನ ಪ್ರಮಾಣವನ್ನು ‍‍ಪ್ರಕಟಿಸಲಾಗುತ್ತಿತ್ತು. ಹಾಗಾಗಿ, ಈ ಬಾರಿ ಆಗಿರುವ ವಿಳಂಬವು ಅಸಹಜವೇ ಆಗಿದೆ. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಮತದಾನದ ನಿಖರ ಪ್ರಮಾಣವನ್ನು ಮತದಾನ ನಡೆದ ಎರಡು ದಿನಗಳಲ್ಲಿಯೇ ಪ್ರಕಟಿಸಲಾಗಿತ್ತು. ಮತದಾನದ ಪ್ರಮಾಣವನ್ನು ಪ್ರಕಟಿಸುವಲ್ಲಿ ಆಗಿರುವ ವಿಳಂಬದ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಈ ವಿಳಂಬಕ್ಕೆ ನಂಬಬಹುದಾದ ಯಾವ ಕಾರಣವೂ ಇಲ್ಲ ಎಂದು ಈ ಪಕ್ಷಗಳು ಹೇಳಿವೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ತಾಸುಗಳಲ್ಲಿ ಮತಚಲಾವಣೆ ಪ್ರಮಾಣವನ್ನು ಸಂಗ್ರಹಿಸಿ, ಪ್ರಕಟಿಸಬಹುದಾದ ತಂತ್ರಜ್ಞಾನ ಈಗ ನಮ್ಮಲ್ಲಿ ಇದೆ. 

ಚುನಾವಣಾ ಆಯೋಗ ಪ್ರಕಟಿಸಿರುವ ದತ್ತಾಂಶವು ಪರಿ‍ಪೂರ್ಣವೂ ಅಲ್ಲ. ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಮತದಾನದ ಶೇಕಡಾವಾರು ಪ್ರಮಾಣವನ್ನು ಮಾತ್ರ ಆಯೋಗವು ನೀಡಿದೆ; ಎಷ್ಟು ಸಂಖ್ಯೆಯ ಮತ ಚಲಾವಣೆಯಾಗಿದೆ ಎಂಬ ವಿವರವನ್ನು ನೀಡಿಲ್ಲ. ಈ ಹಿಂದೆ, ಎಷ್ಟು ಮತಗಳು ಚಲಾವಣೆ ಆಗಿವೆ ಎಂಬುದನ್ನು ಪ್ರಕಟಿಸುವ ಸಂಪ್ರದಾಯ ಇತ್ತು. ದತ್ತಾಂಶವನ್ನು ಅರ್ಥ ಮಾಡಿಕೊಳ್ಳಲು ಮತ್ತು ವ್ಯಾಖ್ಯಾನಿಸಲು ಶೇಕಡಾವಾರು ಪ್ರಮಾಣ ಸಾಕಾಗುವುದಿಲ್ಲ. ಚಲಾವಣೆಯಾದ ಮತಗಳ ಒಟ್ಟು ಸಂಖ್ಯೆಯ ಆಧಾರದಲ್ಲಿ ಶೇಕಡಾ ವಾರು ಪ್ರಮಾಣವನ್ನು ಕಂಡುಕೊಳ್ಳಲಾಗುತ್ತದೆ. ಮತದಾನವನ್ನು ಅರ್ಥ ಮಾಡಿಕೊಳ್ಳಲು ಮತ್ತು ವಿಶ್ಲೇಷಣೆಗೆ ಒಳಪಡಿಸಲು ನಿಖರವಾದ ಸಂಖ್ಯೆಯನ್ನೇ ಕೊಡಬೇಕು. ಮತದಾನ ಮಾಡಿದ ಜನರ ಸಂಖ್ಯೆಯು ದೊಡ್ಡದಿರುವ ಕಾರಣ ಶೇಕಡಾವಾರು ಪ್ರಮಾಣವು ಸತ್ಯವನ್ನು ಮರೆಮಾಚಬಹುದು. ಕೆಲವು ಸಂದರ್ಭ ಗಳಲ್ಲಿ ಕೆಲವೇ ಕೆಲವು ಮತಗಳ ವ್ಯತ್ಯಾಸ ಕೂಡ ಬಹುದೊಡ್ಡ ಪರಿಣಾಮಕ್ಕೆ ಕಾರಣ ಆಗಬಹುದು. ಶೇಕಡಾವಾರು ಪ್ರಮಾಣದಲ್ಲಿ ಕೂಡ ಆರಂಭದಲ್ಲಿ ಕೊಟ್ಟ ದತ್ತಾಂಶ ಹಾಗೂ ಅಂತಿಮ ದತ್ತಾಂಶದ ನಡುವೆ ದೊಡ್ಡ ಅಂತರ ಇರುವುದರ ಕುರಿತು ಕೂಡ ಕೆಲವು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಆರಂಭದಲ್ಲಿ ಕೊಟ್ಟ ದತ್ತಾಂಶ ಮತ್ತು ಅಂತಿಮ ದತ್ತಾಂಶದ ನಡುವೆ ಶೇ 5ರಿಂದ ಶೇ 6ರಷ್ಟು ವ್ಯತ್ಯಾಸ ಕಂಡುಬಂದಿದೆ. ಇದು ಕೂಡ ಅಸಹಜವೇ ಆಗಿದೆ. 

ಚುನಾವಣೆ ನಡೆಯುವ ಪ್ರತಿಯೊಂದು ಹಂತದಲ್ಲಿಯೂ ಚುನಾವಣಾ ಆಯೋಗವು ಯಾವುದೇ ಸಂದೇಹಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಸಮರ್ಪಕವಾಗಿ ನಡೆದುಕೊಳ್ಳಬೇಕು. ಆದರೆ, ಚುನಾವಣಾ ಆಯೋಗವು ಹಲವು ವಿಚಾರಗಳಲ್ಲಿ ಟೀಕೆಗೆ ಒಳಗಾಗಿದೆ. ಆಯೋಗವು ಸಿದ್ಧಪಡಿಸಿದ ಚುನಾವಣಾ ವೇಳಾಪಟ್ಟಿಯ ಕುರಿತೇ ಟೀಕೆಗಳು ಕೇಳಿಬಂದಿದ್ದವು. ಬಿಜೆಪಿಯ ಮುಖಂಡರು ಮತ್ತು ಕೇಂದ್ರದ ಸಚಿವರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣಗಳ ಕುರಿತು ಆಯೋಗವು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ದ್ವೇಷ ಭಾಷಣದ ಕುರಿತೂ ಆಯೋಗವು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಎಷ್ಟು ಜನರು ಮತದಾನ ಮಾಡಿದ್ದಾರೆ ಎಂಬ ಸಂಖ್ಯೆಯು ಬಹಳ ಮುಖ್ಯವಾದುದು. ಚುನಾವಣಾ ಆಯೋಗವು ನೀಡಿರುವ ಅಪೂರ್ಣ ಅಂಕಿ ಅಂಶವನ್ನು ಫಲಿತಾಂಶವನ್ನು ತಿರುಚಲು ಬಳಸಿಕೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಚುನಾವಣಾ ಆಯೋಗದ ಅಸಹಜ ನಡವಳಿಕೆಯೇ ಇಂತಹ ಆತಂಕಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗದ ನಡವಳಿಕೆಯಲ್ಲಿ ರಹಸ್ಯ ಇರಬಾರದು; ಎಲ್ಲ ಹಂತಗಳಲ್ಲಿಯೂ ಪಾರದರ್ಶಕತೆ ಇರಬೇಕು; ಅದಕ್ಷವಾದ ನಡವಳಿಕೆ ಇರಲೇಬಾರದು. ಆಯೋಗವು ಮತದಾನಕ್ಕೆ ಸಂಬಂಧಿಸಿದ ಅಪೂರ್ಣ ಮತ್ತು ಅಸಮರ್ಪಕ ದತ್ತಾಂಶವನ್ನು ಪ್ರಕಟಿಸಿರುವುದು ಸರಿಯಲ್ಲ. ಒಂದು ವೇಳೆ ದತ್ತಾಂಶ ಪ್ರಕಟಣೆಯಲ್ಲಿ ಆಗಿರುವ ವಿಳಂಬ ಮತ್ತು ಮತದಾನದ ಸಂಖ್ಯೆಯನ್ನು ನೀಡದಿರುವುದಕ್ಕೆ ಕಾರಣಗಳಿದ್ದರೆ ಅವುಗಳನ್ನು ವಿವರಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT