ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಖರ್ಗೆ ಪತ್ರಕ್ಕೆ ಆಯೋಗದ ಉತ್ತರ: ಬೆದರಿಕೆಯ ಧಾಟಿ ಸರಿಯಲ್ಲ

Published 14 ಮೇ 2024, 23:26 IST
Last Updated 14 ಮೇ 2024, 23:26 IST
ಅಕ್ಷರ ಗಾತ್ರ

ಕೇಂದ್ರ ಚುನಾವಣಾ ಆಯೋಗ ಹಾಗೂ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಚೆಗೆ ಪತ್ರ ವ್ಯವಹಾರವೊಂದು ನಡೆದಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಕೆಲವು ಸಂಗತಿಗಳು, ಅವುಗಳನ್ನು ಆಯೋಗವು ನಿಭಾಯಿಸಿದ ಬಗೆಯ ಕುರಿತು ವಿರೋಧ ಪಕ್ಷಗಳು ಹೊಂದಿರುವ ಕಳವಳಗಳ ಬಗ್ಗೆ ಈ ಪತ್ರಗಳು ಜನರ ಗಮನ ಸೆಳೆಯವ ಕೆಲಸ ಮಾಡಿವೆ. ವಾಸ್ತವದಲ್ಲಿ, ಕೆಲವು ವಿಷಯಗಳು ಸೃಷ್ಟಿಯಾಗಲು ಆಯೋಗವೇ ಕಾರಣವಾಗಿದೆ. ಅವುಗಳನ್ನು ಖರ್ಗೆ ಅವರು ಕೆಲವು ವಿರೋಧ ಪಕ್ಷಗಳ ನಾಯಕರಿಗೆ ಬರೆದ ಪತ್ರವೊಂದರಲ್ಲಿ ಉಲ್ಲೇಖಿಸಿದ್ದಾರೆ. ಮೊದಲ ಹಾಗೂ ಎರಡನೆಯ ಹಂತದಲ್ಲಿ ತಮ್ಮ ಮತದ ಹಕ್ಕು ಚಲಾಯಿಸಿದವರ ನಿಖರ ಪ್ರಮಾಣವನ್ನು ಆಯೋಗವು ಸಕಾಲದಲ್ಲಿ ಬಹಿರಂಗಪಡಿಸದೇ ಇರುವುದಕ್ಕೆ ಸಂಬಂಧಿಸಿದಂತೆ ಹಾಗೂ ಅವುಗಳನ್ನು
ಬಹಿರಂಗಪಡಿಸಿದ ಬಗೆಯ ಕುರಿತಂತೆ ಖರ್ಗೆ ಅವರು ಆಕ್ಷೇಪ ಎತ್ತಿದ್ದಾರೆ. ಖರ್ಗೆ ಅವರು ಈ ವಿಚಾರವನ್ನು ಉಲ್ಲೇಖಿಸಿದ ಪತ್ರವು ಆಯೋಗವನ್ನು ಉದ್ದೇಶಿಸಿರಲಿಲ್ಲ. ಆದರೂ ಆಯೋಗವು ಆ ಪತ್ರದಲ್ಲಿನ ವಿಚಾರಗಳಿಗೆ ಉತ್ತರಿಸಿತು. ಆಯೋಗಕ್ಕೆ ಉತ್ತರ ನೀಡಿದ ಖರ್ಗೆ ಅವರು, ಪತ್ರದಲ್ಲಿ ಆಯೋಗವು ಪ್ರತಿಪಾದಿಸಿರುವ ಅಂಶಗಳನ್ನು ಪ್ರಶ್ನಿಸಿದರು, ಆ ಅಂಶಗಳ ಬಗ್ಗೆ ತಮ್ಮ ಕಳವಳ ದಾಖಲಿಸಿದರು.

ಮತದಾನದ ಪ್ರಮಾಣಕ್ಕೆ ಸಂಬಂಧಿಸಿದ ದತ್ತಾಂಶದಲ್ಲಿನ ಲೋಪಗಳ ಬಗ್ಗೆ ಖರ್ಗೆ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದ ವಿಷಯಗಳು ‘ಸ್ಪಷ್ಟನೆಯನ್ನು ಕೋರುವ ನೆಪದಲ್ಲಿ ಪಕ್ಷಪಾತಿಯಾದ ಸಂಕಥನಗಳನ್ನು ರೂಪಿಸುವ ಪ್ರಯತ್ನ’ ಎಂದು ಆಯೋಗವು ಹೇಳಿತ್ತು. ‘ಎಚ್ಚರಿಕೆ ವಹಿಸಬೇಕು ಮತ್ತು ಇಂತಹ ಹೇಳಿಕೆಗಳನ್ನು ನೀಡಬಾರದು’ ಎಂದೂ ಖರ್ಗೆ ಅವರಿಗೆ ಹೇಳಿತ್ತು. ರಾಜಕೀಯ ನಾಯಕರನ್ನು ಉದ್ದೇಶಿಸಿ ಬರೆದ ಪತ್ರವನ್ನು ಬಹಿರಂಗಪಡಿಸಿದ್ದು ‘ಅಪೇಕ್ಷಣೀಯ ಅಲ್ಲವೇ ಅಲ್ಲ’ ಎಂದು ಹೇಳಿದ್ದ ಆಯೋಗ, ಈ ಕ್ರಮವು ‘ಸುಗಮ, ಮುಕ್ತ ಹಾಗೂ
ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಹಾದಿಯಲ್ಲಿ ಗೊಂದಲ ಸೃಷ್ಟಿಸುವ, ಅಡ್ಡಿಗಳನ್ನು ಸೃಷ್ಟಿಸುವ ನಡೆ’ ಎಂದು ಕೋಪ ತೋರಿಸಿತ್ತು. ಖರ್ಗೆ ಅವರ ಪತ್ರವು ಅರಾಜಕ ವಾತಾವರಣವನ್ನು ಸೃಷ್ಟಿಸಬಹುದು, ಕಾಂಗ್ರೆಸ್ ಅಧ್ಯಕ್ಷರು ವ್ಯಂಗ್ಯದ ಮಾತುಗಳು ಹಾಗೂ ನಾಜೂಕಿನ ಆರೋಪಗಳ ಮೂಲಕ ತಪ್ಪು ಸಂಕಥನವನ್ನು ಸೃಷ್ಟಿಸುವ ಯತ್ನ ನಡೆಸಿದ್ದಾರೆ ಎಂದು ಹೇಳಿತ್ತು. ಖರ್ಗೆ ಅವರನ್ನು ಉದ್ದೇಶಿಸಿದ ಈ ಆರೋಪಗಳು ಬಹಳ ಗಂಭೀರ ಸ್ವರೂಪದವು. ಅಲ್ಲದೆ, ಚುನಾವಣಾ ಆಯೋಗವು ಇಂತಹ ಮಾತುಗಳನ್ನು ಆಡಿರುವುದು ಸರಿಯಲ್ಲ. ಚುನಾವಣೆಗಳಿಗೆ ಸಂಬಂಧಿಸಿದ ಹತ್ತು ಹಲವು ಸಂಗತಿಗಳನ್ನು ರಾಜಕೀಯ ಪಕ್ಷಗಳು ಆಯೋಗದ ಗಮನಕ್ಕೂ ಸಾರ್ವಜನಿಕರ ಗಮನಕ್ಕೂ ತರುತ್ತವೆ. ಅಲ್ಲದೆ, ಚುನಾವಣೆಯನ್ನು ನಡೆಸಿದ ಬಗೆಯನ್ನು ರಾಜಕೀಯ ಪಕ್ಷಗಳು ಟೀಕಿಸುತ್ತವೆ ಕೂಡ. ಇಂತಹ ಕಳವಳಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಏಕೆಂದರೆ, ಚುನಾವಣೆ ಎನ್ನುವುದೇ ಸಾರ್ವಜನಿಕವಾಗಿ ನಡೆಯುವ ಒಂದು ಕ್ರಿಯೆ, ಪ್ರಕ್ರಿಯೆ. ಖರ್ಗೆ ಅವರು ಕೆಲ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಇರುವ ಅಂಶಗಳನ್ನು ಆಯೋಗಕ್ಕೆ ಆ ಮೊದಲೇ ತಿಳಿಸಲಾಗಿತ್ತು. ದತ್ತಾಂಶಗಳನ್ನು ಆಯೋಗವು ನಿರ್ವಹಿಸುತ್ತಿರುವ ಬಗೆಯ ಕುರಿತು ಸಾರ್ವಜನಿಕ ಟೀಕೆಗಳು ಕೂಡ ಇವೆ.

ಆಯೋಗಕ್ಕೆ ಉತ್ತರ ನೀಡಿರುವ ಖರ್ಗೆ ಅವರು, ಆಯೋಗವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಬಗ್ಗೆ ಮಾತನಾಡಿದ್ದರೂ, ಆಡಳಿತಾರೂಢ ಪಕ್ಷದ ನಾಯಕರು ಆಡಿರುವ ಕೋಮುವಾದಿ ಮಾತುಗಳ ವಿಚಾರವಾಗಿ ಆಯೋಗವು ತ್ವರಿತವಾಗಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಆಯೋಗವು ಆಡಳಿತಾರೂಢ ಪಕ್ಷದ ಪರವಾಗಿ ವರ್ತಿಸಿದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ನಾಯಕರ ವಿರುದ್ಧದ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಟೀಕೆಗೆ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಆಯೋಗವು ಅತಿದೊಡ್ಡ ವಿರೋಧ ಪಕ್ಷದ ನಾಯಕನಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದೆ! ಆಯೋಗವು ಟೀಕೆಗಳ ವಿಚಾರದಲ್ಲಿ ಅಸಹಿಷ್ಣು ಆಗಬಾರದು. ಎಲ್ಲ ಪಕ್ಷಗಳ ಮಾತುಗಳಿಗೆ ಹಾಗೂ ಅವು ವ್ಯಕ್ತಪಡಿಸುವ ಕಳವಳಗಳಿಗೆ ಆಯೋಗವು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಬೆದರಿಸುವ ಧಾಟಿಯ ಮಾತುಗಳನ್ನು ಆಡುವುದರಿಂದ ಆಯೋಗದ ವಿಶ್ವಾಸಾರ್ಹತೆಗೆ ಇನ್ನಷ್ಟು ಪೆಟ್ಟು ಬೀಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT