ಗುರುವಾರ , ಜೂನ್ 17, 2021
22 °C

ಸಂಪಾದಕೀಯ: ರಾಷ್ಟ್ರೀಯ ನೇಮಕಾತಿ ಸಂಸ್ಥೆ; ಪಾರದರ್ಶಕ ವ್ಯವಸ್ಥೆಗೆ ತಳಹದಿ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಗೆಜೆಟೆಡ್‌ ಅಲ್ಲದ ಹುದ್ದೆಗಳನ್ನು ಭರ್ತಿ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವುದಕ್ಕಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ತಾಂತ್ರಿಕೇತರ, ಬಿ ಮತ್ತು ಸಿ ಗುಂಪಿನ ಉದ್ಯೋಗಗಳು ಈ ವ್ಯಾಪ್ತಿಗೆ ಬರಲಿವೆ. ಉದ್ಯೋಗದ ಆಕಾಂಕ್ಷಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಇದು ಕುತೂಹಲ ಮೂಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸೇರಲು ಬಯಸುವವರು ಇನ್ನು ಮುಂದೆ ಪೂರ್ವಭಾವಿ ಹಂತದಲ್ಲಿ ಒಂದು ಪರೀಕ್ಷೆಯನ್ನಷ್ಟೇ ಬರೆದರೆ ಸಾಕು ಎಂಬುದು ಎನ್‌ಆರ್‌ಎ ರಚನೆಯ ಹಿಂದಿನ ಉದ್ದೇಶ.

 ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಬಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮತ್ತು ಬ್ಯಾಂಕ್‌ ಸಿಬ್ಬಂದಿ ಆಯ್ಕೆ ಸಂಸ್ಥೆಯು (ಐಬಿಪಿಎಸ್‌) ಎನ್‌ಆರ್‌ಎಯಲ್ಲಿ ಸದಸ್ಯತ್ವ ಹೊಂದಿರಲಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ನೇಮಕಾತಿ ಸಂಸ್ಥೆಗಳು. ಈ ಮೂರೂ ಸಂಸ್ಥೆಗಳು ಎನ್‌ಆರ್‌ಎಯ ಭಾಗವಾಗುವುದರಿಂದ, ಎನ್‌ಆರ್‌ಎ ಸ್ಥಾಪನೆಯಾದ ಬಳಿಕ ಅವು ಪೂರ್ವಭಾವಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುವುದಿಲ್ಲ. ಎನ್‌ಆರ್‌ಎ ನಡೆಸಿದ ಸಿಇಟಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ನೇಮಕಾತಿಯ ಮುಂದಿನ ಪ್ರಕ್ರಿಯೆಯನ್ನು ನಡೆಸಲಿವೆ. ಈಗ ಒಬ್ಬ ಉದ್ಯೋಗ ಆಕಾಂಕ್ಷಿಯು ಎಸ್‌ಎಸ್‌ಬಿ, ಆರ್‌ಆರ್‌ಬಿ ಮತ್ತು ಐಬಿಪಿಎಸ್‌ ವ್ಯಾಪ್ತಿಯಲ್ಲಿ ಬರುವ ಉದ್ಯೋಗಕ್ಕೆ ಸೇರುವ ಇಚ್ಛೆ ಹೊಂದಿದ್ದರೆ, ಪೂರ್ವಭಾವಿ ಹಂತದಲ್ಲಿ ಮೂರು ಪ್ರತ್ಯೇಕ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಮೂರು ಬಾರಿ ಶುಲ್ಕ ಕಟ್ಟಬೇಕಾಗುತ್ತದೆ, ಮೂರು ಬಾರಿ ಪ್ರತ್ಯೇಕವಾಗಿ ಸಿದ್ಧತೆ ನಡೆಸಬೇಕಾಗುತ್ತದೆ ಮತ್ತು ಮೂರು ಬಾರಿ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ನಿರುದ್ಯೋಗಿ ಯುವಜನರ ಮೇಲೆ ಇದು ಅನಗತ್ಯ ಹಣಕಾಸಿನ ಹೊರೆ ಹೇರುವುದಲ್ಲದೆ, ಸಿದ್ಧತೆಗಾಗಿ ಹೆಚ್ಚು ಸಮಯ ವ್ಯರ್ಥವಾಗುವಂತೆಯೂ ಮಾಡುತ್ತದೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ನಿರುದ್ಯೋಗಿ ಯುವಜನರ ಮೇಲಿನ ಹೊರೆ ಕಡಿಮೆ ಮಾಡುವ ಎನ್‌ಆರ್‌ಎ ಸ್ಥಾಪನೆ ಯತ್ನ ಸ್ವಾಗತಾರ್ಹ.

ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ಪ‍್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಮ್ಮಲ್ಲಿ ವಿರಳ ಏನಲ್ಲ. ಪರೀಕ್ಷೆಯ ಬಳಿಕ ಅಥವಾ ನೇಮಕಾತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಏರಿ ಇಡೀ ಪ್ರಕ್ರಿಯೆಗೆ ತಡೆ ದೊರೆತ, ನೇಮಕಾತಿ ನಡೆಸಿದ ಸಂಸ್ಥೆಗಳನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಂಡ ಉದಾಹರಣೆಗಳು ಹಲವು ಇವೆ. ಪರೀಕ್ಷೆ, ಸಂದರ್ಶನಗಳೆಲ್ಲ ನಡೆದು ವರ್ಷಗಳೇ ಕಳೆದರೂ ನೇಮಕಾತಿ ಆಗದ ನಿದರ್ಶನಗಳೂ ಕಡಿಮೆ ಏನಲ್ಲ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಫಲವಾಗಿ ಸರ್ಕಾರಿ ಕೆಲಸಕ್ಕೆ ನುಸುಳುವವರು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ. ಎನ್‌ಆರ್‌ಎ ಮೂಲಕ ನೇಮಕಾತಿ ಪ್ರಕ್ರಿಯೆಗೆ ಪಾರದರ್ಶಕತೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ನೇಮಕಾತಿಯಲ್ಲಿ ಪಾರದರ್ಶಕತೆ ತಂದು ಪ್ರತಿಭಾವಂತರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳುವುದು ಜರೂರಾಗಿ ಆಗಬೇಕಾದ ಕೆಲಸ. ಪ್ರತೀ ಜಿಲ್ಲೆಯಲ್ಲಿಯೂ ಎನ್‌ಆರ್‌ಎ ಪರೀಕ್ಷಾ ಕೇಂದ್ರ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಆಗಬಹುದು. ಆದರೆ, ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ಉದ್ಯೋಗ ಆಕಾಂಕ್ಷಿಗಳಿಗೆ ಹಿನ್ನಡೆ ಆಗದಂತೆ ಎಚ್ಚರ ವಹಿಸಬೇಕು. ಆರಂಭದಲ್ಲಿ 12 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂಬ ಮಾಹಿತಿ ಇದೆ. ಪ್ರತೀ ರಾಜ್ಯದ ಆಡಳಿತ ಭಾಷೆಯಲ್ಲಿಯೂ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಬೇಕು. ಭಾಷೆಯ ಕಾರಣಕ್ಕೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯದಂತೆ ಆಗಬಾರದು. ಸಿಇಟಿಯಲ್ಲಿ ಉತ್ತೀರ್ಣರಾದವರಿಗೆ ಮತ್ತೆ ಪರೀಕ್ಷೆ ಮತ್ತು ಸಂದರ್ಶನಗಳನ್ನು ನಡೆಸಲು ನೇಮಕಾತಿ ಸಂಸ್ಥೆಗಳು ಮುಂದಾಗಬಹುದು. ಈ ಹಂತದಲ್ಲಿ ಭ್ರಷ್ಟಾಚಾರ ನುಸುಳುವ ಅಪಾಯ ಇದೆ. ಸಂದರ್ಶನಕ್ಕೆ ಹೆಚ್ಚು ಅಂಕ ನಿಗದಿ ಮಾಡಿ ಸಿಇಟಿಯ ಉದ್ದೇಶವನ್ನೇ ವಿಫಲಗೊಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಎನ್‌ಆರ್‌ಎ ಸ್ಥಾ‍ಪನೆಯು ನೇಮಕಾತಿ ಪ್ರಕ್ರಿಯೆ ಸುಧಾರಣೆಯ ಮೊದಲ ಹಂತ. ಇದು, ಸಂಪೂರ್ಣ ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ನೇಮಕಾತಿ ವ್ಯವಸ್ಥೆ ರೂಪುಗೊಳ್ಳಲು ತಳಹದಿಯಾಗಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು