ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಫೇಸ್‌ಬುಕ್‌ ಮತ್ತು ದ್ವೇಷದ ಮಾತು ವಾಗ್ಯುದ್ಧ ಬೇಡ, ತನಿಖೆ ಆಗಲಿ

Last Updated 23 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳುಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ಅಗಾಧ.‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೆಚ್ಚೆಚ್ಚು ಪ್ರಜಾಸತ್ತಾತ್ಮಕ ಆಗಿಸಿದ್ದೇವೆ’ ಎಂದು ಈ ಜಾಲತಾಣ ಸಂಸ್ಥೆಗಳು ಹೇಳಿಕೊಳ್ಳುತ್ತಿವೆ. ಈ ಮಾತಿನಲ್ಲಿ ಸತ್ಯಾಂಶವೂ ಇದೆ. ಸಾಂಪ್ರದಾಯಿಕ ಮಾಧ್ಯಮಗಳು ಸಾಂಸ್ಥಿಕ ಚೌಕಟ್ಟಿಗೆ ಒಳಪಟ್ಟು ಅಭಿಪ್ರಾಯಗಳನ್ನು ಪ್ರಕಟಿಸುವ, ಪ್ರಸಾರ ಮಾಡುವ ಕೆಲಸ ಮಾಡುತ್ತವೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರು ಇಂತಹ ಚೌಕಟ್ಟಿಗೆ ಒಳಪಟ್ಟಿರುವುದಿಲ್ಲ. ಜಗತ್ತಿನ ಸಮಸ್ತ ಆಗುಹೋಗುಗಳ ಬಗ್ಗೆ ತಮಗೆ ಅನಿಸಿದ್ದನ್ನು ತಕ್ಷಣಕ್ಕೆ ಹೇಳುವ ಅವಕಾಶವನ್ನು ನವಮಾಧ್ಯಮಗಳು ನೀಡಿವೆ. ಅದು, ಅವುಗಳ ಶಕ್ತಿ ಹಾಗೂ ಮಿತಿ. ಫೇಸ್‌ಬುಕ್‌ನಂತಹ ಮಾಧ್ಯಮ ಗಳು ತಮ್ಮದೇ ಆದ ಯಾವುದೇ ಬರಹ, ದೃಶ್ಯಾವಳಿ ಅಥವಾ ಮಾಹಿತಿ–ಮನರಂಜನೆ ಆಧರಿಸಿದ ಕಾರ್ಯಕ್ರಮವನ್ನು ಬಳಕೆದಾರರಿಗೆ ಒದಗಿಸುವುದಿಲ್ಲ. ಸಾಮಾನ್ಯ ಬಳಕೆದಾರರ ಪಾಲಿಗೆ ಉಚಿತವಾಗಿ ಸೇವೆಗಳನ್ನು ನೀಡುವ ಈ ವೇದಿಕೆಯು ತನ್ನಲ್ಲಿನ ವಸ್ತುವಿಷಯವನ್ನು ಬಳಕೆದಾರರ ಮೂಲಕವೇ ಸೃಷ್ಟಿ ಮಾಡಿಕೊಂಡಿದೆ. ಇದು ಸಹ ಈ ಮಾಧ್ಯಮದ ಶಕ್ತಿ; ಹಾಗೆಯೇ, ಅಪಾಯ ಸೃಷ್ಟಿಸುವ ಸಾಧ್ಯತೆಯನ್ನೂ ಒಳಗೊಂಡಿರುವ ಒಂದು ಮಿತಿ. ಇಂತಹ ಫೇಸ್‌ಬುಕ್‌ ಪಾಲಿಗೆ ಭಾರತ ಅತಿದೊಡ್ಡ ಮಾರುಕಟ್ಟೆ, ಭಾರತದ ಪಾಲಿಗೆ ಫೇಸ್‌ಬುಕ್‌ ಎಂಬುದು ಬೃಹತ್ತಾದ ಸಾಮಾಜಿಕ ಜಾಲತಾಣ. ಇಂತಹ ವೇದಿಕೆಗಳ ಮೂಲಕ ವ್ಯಕ್ತವಾಗುವ ಅಭಿಪ್ರಾಯಗಳು ಎಷ್ಟು ದೊಡ್ಡ ಸಮೂಹವನ್ನು ತಲುಪಬಹುದು ಎಂಬುದನ್ನು ಈ ನೆಲೆಯಲ್ಲಿ ಊಹಿಸಿಕೊಳ್ಳಬಹುದು. ‘ದ್ವೇಷದ’ ಮಾತುಗಳ ವಿರುದ್ಧ ಫೇಸ್‌ಬುಕ್‌ ತನ್ನ ನಿಯಮಗಳ ಅನ್ವಯ ಕ್ರಮ ಜರುಗಿಸಲು ಮುಂದಾಗಲಿಲ್ಲ ಎಂದು ‘ದಿ ವಾಲ್‌ಸ್ಟ್ರೀಟ್‌ ಜರ್ನಲ್’‌ ಈಚೆಗೆವರದಿ ಮಾಡಿದೆ. ರೋಹಿಂಗ್ಯಾ ಸಮುದಾಯದ ಮುಸ್ಲಿಮರನ್ನು ಉದ್ದೇಶಿಸಿ ಬಿಜೆಪಿ ಮುಖಂಡ, ತೆಲಂಗಾಣ ವಿಧಾನಸಭಾ ಸದಸ್ಯ ಟಿ. ರಾಜಾ ಸಿಂಗ್ ಅವರು ಆಡಿದ್ದ ದ್ವೇಷದ ಮಾತುಗಳ ವಿಚಾರದಲ್ಲಿ ಫೇಸ್‌ಬುಕ್ ತನ್ನ ನಿಯಮಗಳ ಅನ್ವಯ ಕ್ರಮ ಜರುಗಿಸಲಿಲ್ಲ, ಸಿಂಗ್ ಅವರು ತನ್ನ ವೇದಿಕೆ ಬಳಸುವುದನ್ನು ನಿರ್ಬಂಧಿಸಲೂ ಇಲ್ಲ, ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಸೇರಿದವರ ವಿರುದ್ಧ ಕ್ರಮ ಜರುಗಿಸುವುದರಿಂದ ಭಾರತದಲ್ಲಿ ಕಂಪನಿಯ ವಾಣಿಜ್ಯ ಹಿತಾಸಕ್ತಿಗಳಿಗೆ ಧಕ್ಕೆ ಆಗಬಹುದು ಎಂದು ಫೇಸ್‌ಬುಕ್‌ನ ಹಿರಿಯ ಅಧಿಕಾರಿ ಆಂಖಿ ದಾಸ್ ಅವರು ಹೇಳಿದ್ದರು ಎಂದು ಕೂಡ ವರದಿಯಾಗಿದೆ.

ಆಂಖಿ ದಾಸ್ ಅವರು ಹೇಳಿರುವುದಾಗಿ ವರದಿಯಾಗಿರುವ ಮಾತುಗಳು ಒಂದಿಷ್ಟು ಅಹಿತಕರ ಪ್ರಶ್ನೆಗಳನ್ನು ಎತ್ತಿವೆ. ಒಬ್ಬರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೂ ಹಾಗೆ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣ ವಾಣಿಜ್ಯ ಹಿತಾಸಕ್ತಿಗಳು ಎನ್ನುವುದಕ್ಕೂ ಸೂಕ್ಷ್ಮ ವ್ಯತ್ಯಾಸಗಳಿವೆ. ಯಾವುದೋ ಒಂದು ದ್ವೇಷದ ಮಾತಿನ ವಿರುದ್ಧವಾಗಿ ಫೇಸ್‌ಬುಕ್‌ ಕ್ರಮ ಕೈಗೊಳ್ಳದಿದ್ದರೆ, ಅದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬೇಕಿರಲಿಲ್ಲವೇನೋ. ಆದರೆ, ‘ವಾಣಿಜ್ಯ ಹಿತಾಸಕ್ತಿಯ ಕಾರಣಕ್ಕಾಗಿ ಕ್ರಮ ಕೈಗೊಳ್ಳಬಾರದು’ ಎಂದಿದ್ದರೆ, ಅದು ತೀರಾ ಕಳವಳಕಾರಿ. ಹಾಗೆ ನೋಡಿದರೆ, ಫೇಸ್‌ಬುಕ್‌ ವಿರುದ್ಧ ಆರೋಪ ಹೊಸದೇನೂ ಅಲ್ಲ. ತಪ್ಪು ಮಾಹಿತಿ ನೀಡುವ ಪೋಸ್ಟ್‌ಗಳನ್ನು ಅಳಿಸಿಹಾಕಿಲ್ಲ ಎಂಬ ಆರೋಪಗಳು ಅಮೆರಿಕದಲ್ಲಿ ಕೂಡ ಫೇಸ್‌ಬುಕ್‌ ವಿರುದ್ಧ ದಾಖಲಾಗಿವೆ ಎಂಬುದನ್ನು ಗಮನಿಸ ಬೇಕು. ಎಲ್ಲ ಬಗೆಯ ಅಭಿಪ್ರಾಯಗಳಿಗೆ ಸಮಾನ ಅವಕಾಶ ಒದಗಿಸುವ ವಿಚಾರದಲ್ಲಿ ಫೇಸ್‌ಬುಕ್‌ ಪ್ರಶ್ನಾತೀತವೇನೂ ಅಲ್ಲ ಎಂಬುದನ್ನು ಭಾರತದಲ್ಲಿ ನಡೆದ ಕೆಲವು ಪ್ರಸಂಗಗಳನ್ನು ನೋಡಿಯೂ ಹೇಳಬಹುದು. ಈಗ, ಪತ್ರಿಕಾ ವರದಿಯಲ್ಲಿ ತನ್ನ ವಿರುದ್ಧ ವ್ಯಕ್ತವಾಗಿರುವ ಆರೋಪಕ್ಕೆ ಉತ್ತರವಾಗಿ ಫೇಸ್‌ಬುಕ್‌, ‘ದ್ವೇಷದ ಮಾತುಗಳನ್ನು ನಿರ್ಬಂಧಿಸುತ್ತೇವೆ. ವ್ಯಕ್ತಿಯ ರಾಜಕೀಯ ಒಲವು, ನಿಲುವು ಗಳು ಏನೇ ಇದ್ದರೂ ಈ ನಿಯಮವನ್ನು ನಾವು ವಿಶ್ವದ ಎಲ್ಲೆಡೆ ಜಾರಿಯಲ್ಲಿ ಇರಿಸಿದ್ದೇವೆ’ ಎಂದು ಹೇಳಿದೆ. ಆರೋಪದ ಕುರಿತು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಫೇಸ್‌ಬುಕ್‌ಗೆ ನೋಟಿಸ್ ಜಾರಿಗೊಳಿಸಿದೆ. ಪತ್ರಿಕಾ ವರದಿಯು ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದ್ದು, ಈ ವಾಗ್ಯುದ್ಧವನ್ನು ಮುಂದುವರಿಸುವುದಕ್ಕಿಂತಲೂ ಫೇಸ್‌ ಬುಕ್‌ ವಿರುದ್ಧದ ಆರೋಪವನ್ನು ಸೂಕ್ತ ಸಂಸ್ಥೆಯ ಮೂಲಕ ತನಿಖೆಗೆ ಒಳಪಡಿಸುವುದು, ಫೇಸ್‌ಬುಕ್‌ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಮಾಡುವುದು ಹೆಚ್ಚು ವಿವೇಕದ ಕೆಲಸವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT