ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಿಎಸ್‌ಟಿ: ರಾಜ್ಯಗಳಿಗೆ ಪರಿಹಾರ ತ್ವರಿತವಾಗಿ ವಿತರಣೆಯಾಗಲಿ

Last Updated 15 ಜೂನ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19 ಪಿಡುಗಿನಿಂದಾಗಿ ದೇಶಿ ಆರ್ಥಿಕತೆಯು ತೀವ್ರವಾಗಿ ಬಾಧಿತವಾಗಿದೆ. ಮಾರ್ಚ್‌ನಿಂದ ಈಚೆಗೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸಂಗ್ರಹವೂ ಕುಸಿದಿದೆ. ಇದರಿಂದಾಗಿ ಎಲ್ಲ ರಾಜ್ಯಗಳೂ ಗಂಭೀರ ಸ್ವರೂಪದ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿವೆ. ಸರ್ಕಾರಗಳ ಬೊಕ್ಕಸ ಬರಿದಾಗಿದೆ. ಸಂಪನ್ಮೂಲ ಸಂಗ್ರಹದ ಮೂಲಗಳು ಬತ್ತಿವೆ. ಅಭಿವೃದ್ಧಿ ಕಾರ್ಯಗಳು ಒತ್ತಟ್ಟಿಗೆ ಇರಲಿ, ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣ ಸೇರಿದಂತೆ ದಿನನಿತ್ಯದ ಖರ್ಚುವೆಚ್ಚಗಳಿಗೂ ಹಣ ಹೊಂದಿಸುವುದು ಕಷ್ಟವಾಗಿದೆ.

ಜಿಎಸ್‌ಟಿ ನಷ್ಟ ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಕೊಡಬೇಕಾದ ಮೊತ್ತ ತಲುಪಿಸುವಲ್ಲೂ ವಿಳಂಬವಾಗುತ್ತಿದೆ. ಕರ್ನಾಟಕಕ್ಕೆ ಮಾರ್ಚ್‌ನಿಂದ ಈಚೆಗೆ ಪರಿಹಾರದ ರೂಪದಲ್ಲಿ ₹ 10,208 ಕೋಟಿ ಮೊತ್ತ ಬರಬೇಕಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಏಪ್ರಿಲ್‌ ಮತ್ತು ಮೇ ತಿಂಗಳ ಜಿಎಸ್‌ಟಿ ಸಂಗ್ರಹವು ನಿಗದಿತ ಗುರಿಯ ಕೇವಲ ಶೇ 45ರಷ್ಟು ಆಗಿದೆ. ಪರಿಹಾರ ಸೆಸ್ ಸಂಗ್ರಹವೂ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಿದೆ. ಇದರಿಂದಾಗಿ ರಾಜ್ಯಗಳ ಪಾಲಿನ ಪರಿಹಾರ ಹಂಚಿಕೆಯಲ್ಲಿ ವಿಳಂಬ ಆಗಿದೆ. ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ.

ಜಿಎಸ್‌ಟಿ ಕಾಯ್ದೆಯಡಿ, ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಮೊದಲ ಐದು ವರ್ಷಗಳಲ್ಲಿ (2022ರವರೆಗೆ) ರಾಜ್ಯಗಳ ವರಮಾನ ನಷ್ಟವನ್ನು ಕೇಂದ್ರವೇ ಭರಿಸಿಕೊಡುವ ಖಾತರಿ ನೀಡಲಾಗಿದೆ. ವಿಲಾಸಿ ಸರಕು ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾದ ಉತ್ಪನ್ನಗಳ ಮೇಲೆ ವಿಧಿಸುವ ಸೆಸ್‌ನಿಂದ ಬರುವ ವರಮಾನವನ್ನು ರಾಜ್ಯಗಳ ಪರಿಹಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಉತ್ಪನ್ನಗಳ ಮೇಲಿನ ತೆರಿಗೆ ಸಂಗ್ರಹವೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ತೆರಿಗೆ ಸಂಗ್ರಹವು ಏರಿಕೆ ಆಗದಿದ್ದರೆ ರಾಜ್ಯಗಳಿಗೆ ಪರಿಹಾರ ಒದಗಿಸುವುದು ಕಷ್ಟವಾಗಲಿದೆ ಎಂಬುದು ಕೇಂದ್ರದ ಧೋರಣೆ ಇದ್ದಂತಿದೆ.

ಜಿಡಿಪಿ ಪ್ರಗತಿಯೇ ಕುಂಠಿತ ವಾಗಿರುವಾಗ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸಾಧಿಸುವುದು ಸುಲಭದ ಮಾತಲ್ಲ. ಅದನ್ನು ಸ್ವಲ್ಪಮಟ್ಟಿಗೆ ತುಂಬಿಕೊಳ್ಳಲು, ಅಗತ್ಯವಲ್ಲದ ಸರಕುಗಳ ಮೇಲೆ ತೆರಿಗೆ ಹೆಚ್ಚಿಸುವ ಮಾರ್ಗ ಇದೆಯಾದರೂ ಆ ಬಗ್ಗೆ ಮಂಡಳಿಯು ಒಲವು ಹೊಂದಿಲ್ಲ ಎನ್ನಲಾಗಿದೆ. ನೈಸರ್ಗಿಕ ವಿಕೋಪ ಸೆಸ್‌ ವಿಧಿಸುವುದೂ ಸದ್ಯಕ್ಕೆ ಕಾರ್ಯಸಾಧುವಲ್ಲ. ದರ ಹೆಚ್ಚಳ ಮತ್ತು ಸೆಸ್ ವಿಧಿಸುವುದರಿಂದ ಬೆಲೆಗಳು ದುಬಾರಿಯಾಗಿ, ಬೇಡಿಕೆಯನ್ನು ಇನ್ನಷ್ಟು ತಗ್ಗಿಸಲಿವೆ.

ಈ ಬಿಕ್ಕಟ್ಟಿಗೆ ಕಾರ್ಯಸಾಧ್ಯವಾದ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಮಂಡಳಿಯೇ ಮಾರುಕಟ್ಟೆಯಿಂದ ಸಾಲ ಸಂಗ್ರಹಿಸಿ ರಾಜ್ಯಗಳಿಗೆ ಪರಿಹಾರ ನೀಡುವುದರ ಕಾನೂನುಬದ್ಧತೆಯನ್ನು ಕೇಂದ್ರವು ಪರಿಶೀಲಿಸಲಿದೆ ಎಂದು ಮಾರ್ಚ್‌ನಲ್ಲಿ ನಡೆದ ಸಭೆಗೆ ತಿಳಿಸಲಾಗಿತ್ತು. ಎರಡು ತಿಂಗಳು ಕಳೆದರೂ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸದ್ಯದ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂತಹ ವಿಳಂಬ ಧೋರಣೆ ಸಮರ್ಥನೀಯವಲ್ಲ.

ರಾಜ್ಯಗಳು ಮಾರುಕಟ್ಟೆಯಿಂದ ಪಡೆಯಬಹುದಾದ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಆದರೆ, ಅದೊಂದರಿಂದಲೇ ರಾಜ್ಯಗಳ ಕಷ್ಟ ಪರಿಹಾರ ಆಗಲಾರದು. ಕೇಂದ್ರವು ಅನ್ಯ ಮೂಲಗಳಿಂದ ಹಣ ಸಂಗ್ರಹಿಸಿ ರಾಜ್ಯಗಳ ಪರಿಹಾರದ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ
ಮಾಡಲು ಕಾರ್ಯೋನ್ಮುಖವಾಗಬೇಕು. ಜುಲೈನಲ್ಲಿ ನಡೆಯಲಿರುವ ಮಂಡಳಿ ಸಭೆಯ ಕಾರ್ಯಸೂಚಿಯಲ್ಲಿ ರಾಜ್ಯಗಳಿಗೆ ನೀಡುವ ಪರಿಹಾರದ ವಿಚಾರ ಮಾತ್ರ ಇರುವುದು ಸದ್ಯಕ್ಕೆ ಆಶಾದಾಯಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT