ಶನಿವಾರ, ಫೆಬ್ರವರಿ 29, 2020
19 °C

ಮೌಢ್ಯ ನಿವಾರಣೆ: ಕಾನೂನಿನ ಜತೆಗೆ ಜನಜಾಗೃತಿಯೂ ಮುಖ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮಾಟ–ಮಂತ್ರ, ಭಾನಾಮತಿ, ವಶೀಕರಣದಂತಹ ಅನಿಷ್ಟಗಳನ್ನು, ಮೂಢನಂಬಿಕೆಗಳನ್ನು ಬಳಸಿಕೊಂಡು ಜನರನ್ನು ಶೋಷಣೆಗೆ ಒಳಪಡಿಸುವವರನ್ನು ಶಿಕ್ಷಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಅಮಾನವೀಯ, ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಹಾಗೂ ನಿರ್ಮೂಲನಾ ಕಾಯ್ದೆ’ಯು ಸದ್ದಿಲ್ಲದೇ ಜಾರಿಗೆ ಬಂದಿದೆ! ಮೂಢನಂಬಿಕೆಗಳನ್ನು ನಿಷೇಧಿಸಲು ಕಾಯ್ದೆಯೊಂದರ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಅನಿಸಿದ್ದು 2013ರಲ್ಲಿ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ. ಹೀಗೊಂದು ಕಾನೂನು ರೂಪಿಸಲು ಸಲಹೆ ನೀಡುವಂತೆ ಸರ್ಕಾರವು ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಸಾಮಾಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರವನ್ನು ಕೋರಿತು. ಈ ಕೋರಿಕೆ ಆಧರಿಸಿ ಅಧ್ಯಯನ ಕೇಂದ್ರವು ಮಾದರಿ ಕರಡು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿತು.

ಈ ಕರಡು ಪ್ರತಿಯಲ್ಲಿನ ಅಂಶಗಳು ಸಾರ್ವಜನಿಕ ಅವಗಾಹನೆಗೆ ಲಭ್ಯವಾಗುತ್ತಲೇ ಪರ–ವಿರೋಧದ ಚರ್ಚೆ ತೀವ್ರ ಸ್ವರೂಪ ತಳೆಯಿತು. ಅಷ್ಟರಲ್ಲಿ 2014ರ ಲೋಕಸಭಾ ಚುನಾವಣೆ ಸಮೀಪಿಸಿತು. ಇದನ್ನು ಕಾಯ್ದೆಯಾಗಿಸುವ ಸರ್ಕಾರದ ಉತ್ಸಾಹವೂ ತುಸು ತಗ್ಗಿತು. ಆ ಬಳಿಕ, ಸಮಾಜ ಕಲ್ಯಾಣ ಇಲಾಖೆಯು ಸಿದ್ಧಪಡಿಸಿದ ಕರಡು ಮಸೂದೆಯು ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಸಂಪುಟ ಉಪಸಮಿತಿಯ ಪರಿಷ್ಕರಣೆಗೆ ಒಳಗಾಯಿತು.

ಮಾದರಿ ಕರಡುವಿನಲ್ಲಿದ್ದ ಕೆಲವೊಂದು ಅಂಶಗಳನ್ನು ಕೈಬಿಟ್ಟು ಮಸೂದೆಯನ್ನು ಅಂತಿಮಗೊಳಿಸಲಾಯಿತು. 2017ರ ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳ ಅನುಮೋದನೆ ದೊರೆಯಿತು. ರಾಜ್ಯಪಾಲರ ಅಂಕಿತ ಬಿತ್ತು. ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಆದರೆ, ಜಾರಿಯ ಭಾಗ್ಯ ಸಿಗಲಿಲ್ಲ.

‘ಕಾನೂನಿನ ತೊಡಕುಗಳು ಇದ್ದುದರಿಂದ ತಡೆಹಿಡಿಯಲಾಗಿತ್ತು. ಆ ಅಂಶ ತೆಗೆದು ಮತ್ತೆ ರಾಜ್ಯಪಾಲರಿಂದ ಅಂಕಿತ ಪಡೆಯಲಾಗಿದೆ’ ಎಂದು ವರದಿಯಾಗಿದೆ. ಏನೋ ಎಂತೋ ಅಂತೂ ಜಾರಿಗೆ ಬಂದಿದೆ ಎಂಬುದು ಸಮಾಧಾನದ ಸಂಗತಿ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಸದನದ ಅನುಮೋದನೆ ಪಡೆದ ಮಸೂದೆಯು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿ ದಾಟಿ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಾರಿಗೊಂಡಿದೆ. ಇಲ್ಲಿ ದಾಖಲಿಸಬೇಕಾದ ಇನ್ನೂ ಒಂದು ಅಂಶ ಇದೆ.

ಅಂದು, ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕೆಲವರು ಸಚಿವ ಸಂಪುಟ ಸಭೆಯಲ್ಲೇ ಈ ಮಸೂದೆಗೆ ತಕರಾರು ತೆಗೆದಿದ್ದರು ಎಂದು ವರದಿಯಾಗಿತ್ತು. ಬಿಜೆಪಿಯ ಹಲವು ಮುಖಂಡರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ, ಈ ಪಕ್ಷದ ಆಡಳಿತದ ಅವಧಿಯಲ್ಲೇ ತಣ್ಣಗೆ ಜಾರಿಗೆ ಬಂದಿದೆ ಎಂಬುದು ವಿಶೇಷ!

ವ್ಯಕ್ತಿಯ ಘನತೆಗೆ ಕುಂದು ತರುವ, ಹಾನಿಕಾರಕ ಮತ್ತು ಜನರನ್ನು ಶೋಷಣೆಗೆ ಒಳಪಡಿಸುವ ಯಾವುದೇ ಕೃತ್ಯ, ಆಚರಣೆಗಳಿಗೆ ಲಗಾಮು ಹಾಕುವುದು ಅಗತ್ಯ. ಸಂವಿಧಾನದ ಆಶಯಗಳಿಗೆ ಇದು ಪೂರಕವೂ ಹೌದು. ಮೂಢನಂಬಿಕೆಗಳನ್ನೇ ಹೊಟ್ಟೆ ಹೊರೆಯುವ ಸಾಧನೋಪಾಯ ಆಗಿಸಿಕೊಂಡಿದ್ದಾರೆ ಕೆಲವರು. ಅದಕ್ಕೆ ಮುಗ್ಧರು ಬಲಿಪಶು ಆಗುತ್ತಿದ್ದಾರೆ. ಮೌಢ್ಯ, ಕಂದಾಚಾರಗಳನ್ನು ಕಾನೂನು ಮಾತ್ರದಿಂದಲೇ ನಿವಾರಿಸುವುದು ಕಷ್ಟಸಾಧ್ಯವಾದರೂ ದಂಡ ಮತ್ತು ಶಿಕ್ಷೆಯ ಭಯ ಸ್ವಲ್ಪಮಟ್ಟಿಗೆ ತಡೆಕಟ್ಟೆ ಆಗಬಲ್ಲದು.

ಕಾನೂನಿನ ಜತೆಗೆ ಜನಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಈ ಕೆಲಸಕ್ಕೆ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಸ್ವಯಂ ಸೇವಾ ಸಂಸ್ಥೆಗಳೂ ಕೈಜೋಡಿಸಬೇಕು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಕೆಲಸವು ಕುಟುಂಬದಿಂದಲೇ ಆರಂಭ ಆಗಬೇಕು. ಆ ಕೆಲಸ ಪರಿಣಾಮಕಾರಿಯಾಗಿ ನಡೆದರೆ, ಸ್ವಸ್ಥ ಸಮಾಜ ತಾನಾಗಿಯೇ ರೂಪುತಳೆಯುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು