ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಜಕೀಯ ಪಕ್ಷಗಳ ರ್‍ಯಾಲಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ?

Last Updated 19 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಕೋವಿಡ್‌ ನಿಯಂತ್ರಣಕ್ಕಾಗಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಪಕ್ಷಗಳು ಸಭೆ– ಸಮಾರಂಭಗಳನ್ನು ನಡೆಸುತ್ತಿರುವುದು ಕೊರೊನಾ ಮೂರನೇ ಅಲೆಗೆ ನೀಡುತ್ತಿರುವ ಆಹ್ವಾನದಂತಿದೆ. ಕೊರೊನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದಿಸೆಯಲ್ಲಿ ಜನಸಾಮಾನ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ರಾಜಕಾರಣಿಗಳು ತಾವೇ ಕಾನೂನು ಉಲ್ಲಂಘಿಸುವ ಮೂಲಕ ಬೇಜವಾಬ್ದಾರಿ ನಡೆ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಕೋವಿಡ್‌ ನಿಯಮಾವಳಿ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಕಲಬುರ್ಗಿ ಮತ್ತು ರಾಯಚೂರಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಸಭೆ– ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಯರಗೋಳದಲ್ಲಿ ಕೆಲವರು ಬಂದೂಕುಗಳಿಂದ ಸಿಡಿಮದ್ದು ಹಾರಿಸಿ ಸಚಿವರನ್ನು ಸ್ವಾಗತಿಸಿರುವ ಅತಿರೇಕದ ಘಟನೆಯೂ ನಡೆದಿದೆ. ನಾಡಬಂದೂಕುಗಳಿಂದ ಸಿಡಿಮದ್ದು ಹಾರಿಸಿ ಅಭಿನಂದಿಸಿರುವುದನ್ನು ಸಚಿವರು ಸಮರ್ಥಿಸಿಕೊಂಡಿರುವುದನ್ನು ಅಸೂಕ್ಷ್ಮ ನಡವಳಿಕೆ ಎಂದೇ ಹೇಳಬೇಕಾಗಿದೆ. ಅನುಮತಿ ಪಡೆಯದೆ ಜನಾಶೀರ್ವಾದ ಯಾತ್ರೆ ಹಾಗೂ ಬೈಕ್‌ ರ‍್ಯಾಲಿ ನಡೆಸಿರುವುದಲ್ಲದೆ, ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಗಂಭೀರ ಲೋಪ.

ಬಂದೂಕಿನಿಂದ ಸಿಡಿಮದ್ದು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ; ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ, ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರ ಮೇಲಾಗಲೀ ಕರ್ಫ್ಯೂ ಉಲ್ಲಂಘಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ ಸಚಿವರ ಮೇಲಾಗಲೀ ಯಾವುದೇ ಪ್ರಕರಣ ದಾಖಲಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕಠಿಣವಾಗುವ ಕಾನೂನು, ಅಧಿಕಾರದಲ್ಲಿ ಇರುವವರ ತಂಟೆಗೆ ಹೋಗುವುದಿಲ್ಲ ಎನ್ನುವ ಸಮಾಜದಲ್ಲಿನ ನಂಬಿಕೆಯನ್ನು ಈ ಪ್ರಕರಣ ಪುಷ್ಟೀಕರಿಸುವಂತಿದೆ.

ಆಡಳಿತಾರೂಢ ಬಿಜೆಪಿ ಮಾತ್ರವಲ್ಲ, ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಜನರನ್ನು ಗುಂಪುಗೂಡಿಸುವಲ್ಲಿ ವಿರೋಧ ಪಕ್ಷಗಳೂ ಹಿಂದೆಬಿದ್ದಿಲ್ಲ. ರಾಯಚೂರಿನಲ್ಲಿ ನಡೆದ ಕಾಂಗ್ರೆಸ್‌ನ ವಿಭಾಗ ಮಟ್ಟದ ಸಂಘಟನಾ ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ನೇತೃತ್ವದಲ್ಲಿ ಕನಕಪುರದಲ್ಲಿ ನಡೆದ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ಸಲ್ಲಿಸಿದ್ದಾರೆ.

ಹಬ್ಬಗಳ ಋತು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಹಜವಾಗಿಯೇ ಜನಸಂದಣಿ ಕಾಣಿಸಿಕೊಳ್ಳುತ್ತಿದೆ. ಜನಸಂದಣಿಯ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಆದರೆ, ಹಬ್ಬ, ಜಾತ್ರೆ, ಜಾಥಾಗಳಿಗೆ ನಿರ್ಬಂಧ ವಿಧಿಸಿ, ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿರುವುದಕ್ಕೆ ಯಾವ ಸಮರ್ಥನೆಯೂ ಇಲ್ಲ.

ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರ್ಕಾರ ಹಿಂದೆಮುಂದೆ ನೋಡುತ್ತಿದೆ. ಪ್ರವಾಸಕ್ಕೆ ಹೋಗುವವರಿಗೆ ಕಠಿಣ ನಿಯಮಗಳನ್ನು ವಿಧಿಸಿದೆ. ಆದರೆ, ರಾಜಕೀಯ ಸಭೆ– ಸಮಾರಂಭಗಳನ್ನು ನಡೆಸುವುದಕ್ಕೆ ಮಾತ್ರ ಮೌನವಾಗಿ ಅವಕಾಶ ಕಲ್ಪಿಸಿದೆ. ಈ ದ್ವಂದ್ವವನ್ನು ಗಮನಿಸಿದರೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕೊರೊನಾ ವೈರಾಣು ತಟಸ್ಥವಾಗಿರುತ್ತದೆಂದು ಸರ್ಕಾರ ಭಾವಿಸಿರಬೇಕು ಎನ್ನುವ ಅನುಮಾನ ಉಂಟಾಗುತ್ತದೆ. ಕೊರೊನಾ ಎರಡನೇ ಅಲೆಯ ಆರಂಭಕ್ಕೆ ಮೊದಲೂ ರಾಜಕೀಯ ಪಕ್ಷಗಳು ಎಗ್ಗಿಲ್ಲದೆ ಸಭೆ– ಸಮಾರಂಭಗಳನ್ನು ನಡೆಸಿದ್ದವು. ಚುನಾವಣಾ ರ‍್ಯಾಲಿಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಶಕ್ತಿಪ್ರದರ್ಶನ ನಡೆಸಿದ್ದವು.

ಕೊರೊನಾ ವೈರಾಣುವಿನ ಸಾಮರ್ಥ್ಯ ಪರೀಕ್ಷಿಸುವಂತೆ ಕುಂಭಮೇಳವನ್ನು ನಡೆಸಲಾಯಿತು. ಇವೆಲ್ಲದರ ಪರಿಣಾಮ ಎನ್ನುವಂತೆ ದೇಶದಾದ್ಯಂತ ಕಾಣಿಸಿಕೊಂಡ ಕೊರೊನಾ ಎರಡನೇ ಅಲೆಯು ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿ, ಅಪಾರ ಸಾವುನೋವಿಗೆ ಕಾರಣವಾಯಿತು. ಆ ಸಂಕಟದಿಂದ ಹೊರಬರುವುದು ಇನ್ನೂ ಸಾಧ್ಯವಾಗಿಲ್ಲ. ಆಗಲೇ ರಾಜಕಾರಣಿಗಳ ಹುಚ್ಚಾಟ ಮತ್ತೆ ಶುರುವಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಅಧಿಕವಾಗಿದೆ. ಈ ಬೆಳವಣಿಗೆಯನ್ನು ನೋಡಿದರೆ, ಕೊರೊನಾದ ಮೂರನೇ ಅಲೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದೆಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಈ ಎಚ್ಚರಿಕೆಗಳಿಗೆ ಕಿವುಡಾದಂತೆ ರಾಜಕೀಯ ಪಕ್ಷಗಳು ಸಭೆ–ಸಮಾರಂಭಗಳನ್ನು ನಡೆಸುವ ಮೂಲಕ ಜನರ ಜೀವದೊಂದಿಗೆ ಆಟವಾಡುತ್ತಿವೆ.

ಎರಡನೇ ಅಲೆಯಿಂದ ಸರ್ಕಾರವಾಗಲೀ ಜನಪ್ರತಿನಿಧಿಗಳಾಗಲೀ ಯಾವುದೇ ಪಾಠ ಕಲಿತಂತಿಲ್ಲ. ಕೋವಿಡ್‌ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಜನಸಾಮಾನ್ಯರಿಗೆ ಮಾತ್ರ ಸಂಬಂಧಿಸಿದ್ದೆಂದು ರಾಜಕೀಯ ಪಕ್ಷಗಳು ಭಾವಿಸಿದಂತಿವೆ. ಕೊರೊನಾ ಸೋಂಕು ಹರಡುವ ಆತಂಕದ ಸನ್ನಿವೇಶದಲ್ಲೂ ರಾಜಕೀಯ ಸಭೆಗಳಿಗೆ ಜನಸಾಮಾನ್ಯರನ್ನು ಸೇರಿಸುವ ಧುರೀಣರು, ಜನಸಾಮಾನ್ಯರಿಗೆ ಸೋಂಕು ತಗುಲಿದಾಗ ನೆರವಿಗೆ ಬಾರದೆ ಮನೆ ಸೇರಿಕೊಳ್ಳುತ್ತಾರೆ.

ಇನ್ನಾದರೂ ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ತಮ್ಮ ಪಕ್ಷದ ಪ್ರತಿನಿಧಿಗಳ ಕಿವಿಹಿಂಡುವ ಕೆಲಸವನ್ನು ಹಿರಿಯ ನಾಯಕರು ಮಾಡಬೇಕು. ಬೇಜವಾಬ್ದಾರಿ ರಾಜಕಾರಣಿಗಳ ಬಗ್ಗೆ ಜನರೂ ಎಚ್ಚರದಿಂದ ಇರಬೇಕು ಹಾಗೂ ಕೋವಿಡ್‌ ಮಾರ್ಗಸೂಚಿಯನ್ನು ಸ್ವಯಂಪ್ರೇರಣೆಯಿಂದ ಅನುಸರಿಸಬೇಕು. ಕೊರೊನಾ ನಿಯಮಾವಳಿಯನ್ನು ಉಲ್ಲಂಘಿಸುವವರು ಎಷ್ಟೇ ಪ್ರಭಾವಿಗಳಾದರೂ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎರಡು ಬಗೆಯ ನ್ಯಾಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT