ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ತಾರಾಲೋಕದ ಕಪ್ಪುರಂಧ್ರ ಶೋಧನೆಗೆ ಭಾರತದ ವಿಜ್ಞಾನಿಗಳಿಗೆ ಹೊಸ ದೀವಿಗೆ

Published 3 ಜನವರಿ 2024, 0:17 IST
Last Updated 3 ಜನವರಿ 2024, 0:17 IST
ಅಕ್ಷರ ಗಾತ್ರ

ಇಸ್ರೊ ವಿಜ್ಞಾನಿಗಳ ಲೋಕಕಲ್ಯಾಣದ ಧೋರಣೆ ಶ್ಲಾಘನೀಯ

ಹೊಸವರ್ಷದ ಸ್ವಾಗತಕ್ಕೆಂದು ಜಗತ್ತಿನೆಲ್ಲೆಡೆ ಬಣ್ಣಬಣ್ಣದ ರಾಕೆಟ್‌ಗಳು ಆಕಾಶವನ್ನು ಅಲಂಕರಿಸು
ತ್ತಿದ್ದಾಗ, ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭರ್ಜರಿ ಪಿಎಸ್‌ಎಲ್‌ವಿ ರಾಕೆಟ್ಟನ್ನೇ ನಭೋಮಂಡಲಕ್ಕೆ ಚಿಮ್ಮಿಸಿತು. ಭೂಮಿಯಿಂದ 650 ಕಿಲೊಮೀಟರ್‌ ಎತ್ತರದ ಕಕ್ಷೆಗೆ ತನ್ನದೊಂದು ವಿಶೇಷ ಉಪಗ್ರಹವನ್ನು ಎತ್ತೊಯ್ದು ಸ್ಥಾಪಿಸಿತು. ವಿಶೇಷ ಏನೆಂದರೆ, ಇದನ್ನು ನಮ್ಮ ದೇಶದ ಸ್ವಂತದ ಅನುಕೂಲಕ್ಕಾಗಲೀ ನಮ್ಮ ಸಾಧನೆಯನ್ನು ಜಗತ್ತಿಗೆ ಸಾ

ರುವ ಉದ್ದೇಶದಿಂದಾಗಲೀ ಮೇಲಕ್ಕೇರಿಸಿದ್ದಲ್ಲ. ಬದಲಿಗೆ, ನಮ್ಮಾಚಿನ ಬ್ರಹ್ಮಾಂಡದಲ್ಲಿ ಏನೇನಿವೆಯೆಂದು ಅರಿಯುವ ದಿಸೆಯಲ್ಲಿ ಇಡೀ ಮನುಕುಲಕ್ಕಿರುವ ಜ್ಞಾನದ ಹಸಿವೆಯನ್ನು ತುಸುಮಟ್ಟಿಗೆ ತಣಿಸಲೆಂದೇ ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯವರ ಪ್ರಸ್ತಾವದ ಮೇರೆಗೆ ರೂಪುಗೊಂಡ ಯೋಜನೆ ಇದು. ಈಗ ಕಕ್ಷೆಯೇರಿ ಕೂರುತ್ತಿರುವ ‘ಎಕ್ಸ್‌ಪೊಸ್ಯಾಟ್‌’ ಉಪಗ್ರಹ ತನ್ನ ಸುತ್ತಲಿನ ನಕ್ಷತ್ರಗಳ ಮಹಾಸಾಗರದಲ್ಲಿ ಅಲ್ಲಲ್ಲಿ ಹೊಮ್ಮುತ್ತಿರುವ ಎಕ್ಸ್‌ ಕಿರಣಗಳನ್ನು ಹೀರಿಕೊಳ್ಳುತ್ತ ಮುಂದಿನ ಐದು ವರ್ಷಗಳ ಕಾಲ ನಮ್ಮತ್ತ ಆ ಮಾಹಿತಿಗಳನ್ನು ರವಾನಿಸುತ್ತಿರುತ್ತದೆ. ಎಕ್ಸ್‌ ಕಿರಣಗಳು ಹೊಮ್ಮಲು ಕಾರಣವೇನು- ಅಲ್ಲಿ ಯಾವುದೋ ತಾರೆಯೊಂದು ಸ್ಫೋಟಗೊಂಡು ನಿಗಿನಿಗಿ ನ್ಯೂಟ್ರಾನ್‌ ನಕ್ಷತ್ರವಾಯಿತೆ ಅಥವಾ ಎರಡು ನಕ್ಷತ್ರಗಳು ಪರಸ್ಪರ ಪ್ರದಕ್ಷಿಣೆ ಹಾಕುತ್ತ ಯುಗ್ಮತಾರೆಯೊಂದು ಉದ್ಭವವಾಯಿತೆ ಅಥವಾ ಅವೆರಡೂ ತಂತಮ್ಮೊಳಗೆ ಬೆಸುಗೆಗೊಂಡು ಕಪ್ಪುರಂಧ್ರ ವಾಯಿತೆ ಅಥವಾ ಯುಗ್ಮತಾರೆಯೇ ತಾನಾಗಿ ಬೇರೊಂದು ನಿಗೂಢ ಕಪ್ಪುರಂಧ್ರದ ಸೆಳೆತಕ್ಕೆ ಸಿಲುಕಿ ಎಕ್ಸ್‌ ಕಿರಣಗಳ ರೂಪದಲ್ಲಿ ಆಕ್ರಂದನ ಹೊಮ್ಮಿಸು
ತ್ತಿದೆಯೆ ಎಂಬುದು ನಮಗೆ ತಿಳಿಯಬೇಕಿದೆ.

ಕಪ್ಪುರಂಧ್ರ ಎಂದರೆ ತನ್ನ ಬೆಳಕನ್ನೂ ತಾನೇ ನುಂಗುತ್ತಿರುವ ದೈತ್ಯಶಕ್ತಿಯ ತಾಣವಾಗಿದ್ದು ಕೆಲವೊಮ್ಮೆ ಆಚೀಚಿನ ಬೃಹತ್‌ ತಾರೆಗಳನ್ನೂ ನುಂಗಿ ಹಾಕುತ್ತಿರುತ್ತದೆ. ನಾವು ಕಳಿಸಿದ ಎಕ್ಸ್‌ಪೊಸ್ಯಾಟ್‌ ತನ್ನ ಸ್ಕ್ಯಾನಿಂಗ್‌ನಲ್ಲಿ ಕಪ್ಪುರಂಧ್ರದ ಇರವನ್ನೇ ನಿಖರವಾಗಿ ಗುರುತಿಸಿದರಂತೂ ಅದು ಇನ್ನಷ್ಟು ಸಂಶೋಧನೆಗೆ ಹೊಸ ಬೆಳಕನ್ನು ತೋರಿಸಿದಂತಾಗುತ್ತದೆ. ತಾರೆಯೊಂದು ತನ್ನ ಭಾರದಿಂದ ತಾನೇ ಕುಸಿದು ಕಪ್ಪುಕುಳಿ ಆದೀತೆಂದು ಗಣಿತ ತರ್ಕದ ಆಧಾರದಲ್ಲೇ ಮೊದಲು ಸೂಚಿಸಿದ ಕೀರ್ತಿ ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್‌ ಅವರದಾಗಿದ್ದು, ಅವರ ಚಿಕ್ಕಪ್ಪ ಸರ್‌ ಸಿ.ವಿ. ರಾಮನ್‌ ಸ್ಥಾಪಿಸಿದ ಸಂಸ್ಥೆಯ ಮೂಲಕವೇ ಅಂಥ ಕಪ್ಪುರಂಧ್ರವೊಂದು ಖಚಿತವಾಗಿ ಪತ್ತೆಯಾದರೆ ಅದು ಭಾರತದ ಸಾಧನೆಗೆ ವಿಶೇಷ ಮೆರುಗು ಕೊಟ್ಟಂತಾಗುತ್ತದೆ.

ಮೂರು ವರ್ಷಗಳ ಹಿಂದೆ ಅಮೆರಿಕದ ನಾಸಾ ಸಂಸ್ಥೆ ಹಾರಿಬಿಟ್ಟ ‘ಇಕ್ಸ್‌ಪೆ’ ಉಪಗ್ರಹ ವನ್ನು ಹೊರತುಪಡಿಸಿದರೆ ಎಕ್ಸ್‌ ಕಿರಣಗಳ ಅಧ್ಯಯನಕ್ಕೆ ಬೇರೆ ಯಾವ ಸಾಧನವೂ ಬಾಹ್ಯಾಕಾಶದಲ್ಲಿ ಇಲ್ಲ. ನಾಸಾದ ಸಾಧನವೂ ಇನ್ನೆರಡು ವರ್ಷಗಳಲ್ಲಿ ತನ್ನ ಶೋಧಕಾರ್ಯಕ್ಕೆ ವಿರಾಮ ಹೇಳಲಿದ್ದು ನಂತರ ಇಸ್ರೊದ ಎಕ್ಸ್‌ಪೊಸ್ಯಾಟ್‌ ಮಾತ್ರವೇ ಈ ಕೆಲಸವನ್ನು ಮುಂದುವರಿಸುವ ಏಕಮೇವ ಕಾಯವೆನ್ನಿಸಲಿದೆ.

ನೇರ ಫಲಾಪೇಕ್ಷೆ ಇಲ್ಲದೆ ಕೇವಲ ಜ್ಞಾನಪ್ರಾಪ್ತಿಗೆಂದೇ ಖಗೋಲ ಅಧ್ಯಯನ ಕ್ಷೇತ್ರಕ್ಕೆ ಇಸ್ರೊ ತನ್ನ ಕೊಡುಗೆ ನೀಡಲು ಹೊರಟಿದ್ದು ಇದೇ ಮೊದಲೇನಲ್ಲ. 2015ರಲ್ಲೇ ಖಗೋಲ ಕಿರಣಗಳ ಅಧ್ಯಯನಕ್ಕೆಂದು ‘ಆಸ್ಟ್ರೊಸ್ಯಾಟ್‌’ ಎಂಬ ಉಪಗ್ರಹವನ್ನು ಹಾರಿಬಿಟ್ಟಿದ್ದು, ಅದು ತನ್ನ ಐದು ವರ್ಷಗಳ ಸೇವಾಮಿತಿಯನ್ನು ದಾಟಿ ಈಗಲೂ ಕ್ರಿಯಾಶೀಲವಾಗಿದೆ. ಸೂರ್ಯನನ್ನು ಕಣ್ಣಿಟ್ಟು ನೋಡಲೆಂದು ಇಸ್ರೊ ಹಾರಿಬಿಟ್ಟ ‘ಆದಿತ್ಯ- ಎಲ್‌1’ ಉಪಗ್ರಹ ತನ್ನ 15 ಲಕ್ಷ ಕಿಲೊಮೀಟರ್‌ ಪಯಣವನ್ನು ಮುಗಿಸಿ ಇದೇ ತಿಂಗಳ 6ರಂದು ನಿಗದಿತ ಬಿಂದುವಿನಲ್ಲಿ ಕೂರಲಿದೆ. ಇದೀಗ ಕಕ್ಷೆಗೇರಿದ ಎಕ್ಸ್‌ಪೊಸ್ಯಾಟ್‌ ಜೊತೆಗೇ ಸಂಶೋಧಕರ ಬಳಕೆಗೆಂದೇ ಪೊಯೆಮ್‌-3 ಹೆಸರಿನ ಇನ್ನೊಂದು ಕಾಯವನ್ನೂ ಹಾರಿಬಿಡಲಾಗಿದ್ದು ಅದರಲ್ಲಿ ಕೂರಿಸಿದ ಉಪಕರಣಗಳನ್ನು ಜಗತ್ತಿನ ಯಾರು ಬೇಕಾದರೂ ನಭೋಮಂಡಲದ ಅಧ್ಯಯನಕ್ಕೆ ಬಳಸಬಹುದಾಗಿದೆ. ಇಸ್ರೊ ವಿಜ್ಞಾನಿಗಳ ಈ ಲೋಕಕಲ್ಯಾಣದ ಧೋರಣೆಯೂ ಶ್ಲಾಘನೀಯವಾಗಿದೆ.

2024ರ ಇಡೀ ವರ್ಷವನ್ನು ‘ಗಗನಯಾನದ ಸಿದ್ಧತೆಯ ವರ್ಷ’ ಎಂತಲೇ ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಬಣ್ಣಿಸಿದ್ದಾರೆ. ಖಾಲಿ ನೌಕೆಗಳನ್ನು ಕಕ್ಷೆಗೇರಿಸಿ ಇಡಿಯಾಗಿ ಕೆಳಕ್ಕಿಳಿಸುವ ಪ್ರಯೋಗಗಳಿಗೇ ಈ ವರ್ಷ ಶ್ರೀಹರಿಕೋಟದ ರಾಕೆಟ್‌ ಚಟುವಟಿಕೆಗಳೆಲ್ಲ ಮೀಸಲಿರುತ್ತವೆ. 2025ರಲ್ಲಿ ಮಾನವಸಹಿತ ನೌಕೆಯನ್ನು ಅಂತರಿಕ್ಷಕ್ಕೇರಿಸಿ ಸುರಕ್ಷಿತವಾಗಿ ಕರೆತರುವ ಸಾಹಸದ ಪೂರ್ವತಯಾರಿಯಲ್ಲಿ ಇಸ್ರೊ ತೊಡಗಿರುತ್ತದೆ.  ವಿಜ್ಞಾನ, ತಂತ್ರಜ್ಞಾನದ ಅನ್ವೇಷಣೆಗೆ ತಕ್ಕಷ್ಟು ಧನಸಹಾಯ, ಸತತ ತಾಲೀಮು, ತನ್ನ ಕೆಲಸದಲ್ಲಿ ಅಚಲ ನಂಬಿಕೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕು. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದೊಂದೇ ಪಾವಟಿಗೆಯನ್ನು ದೃಢವಿಶ‍್ವಾಸದಿಂದ ಏರುತ್ತಿರುವ ಇಸ್ರೊಕ್ಕೆ ಅವೆಲ್ಲವೂ ಇವೆ; ಜೊತೆಗೆ ಇಡೀ ಭಾರತ ಪ್ರಜಾಸ್ತೋಮದ ಶುಭಹಾರೈಕೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT