ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಮಠಾಧೀಶರಿಗೆ ರಾಜಕೀಯ ಉಸಾಬರಿ ಏಕೆ?

Last Updated 16 ಜನವರಿ 2020, 2:56 IST
ಅಕ್ಷರ ಗಾತ್ರ

ಲೌಕಿಕ ಜೀವನದಲ್ಲಿ ಧರ್ಮ ಮತ್ತು ರಾಜಕೀಯ ಬೇರೆ ಬೇರೆ. ಅವೆರಡೂ ಬೇರೆಯಾಗಿ ಇರುವುದೇ ಚೆನ್ನ. ರಾಜಕೀಯದಲ್ಲಿ ಧರ್ಮವು ಹಸ್ತಕ್ಷೇಪ ನಡೆಸಲು ಮುಂದಾದರೆ ಅಥವಾ ಧರ್ಮದಲ್ಲಿ ರಾಜಕೀಯವು ಮೂಗು ತೂರಿಸಲು ಯತ್ನಿಸಿದರೆ ಒಳಿತಾಗುತ್ತದೆ ಎಂದು ನಿರೀಕ್ಷಿಸಲಾಗದು. ಈ ತಾತ್ವಿಕ ನೆಲೆಯಿಂದ ನೋಡಿದಾಗ, ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮಿಯವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಾತಿ ಹೆಸರಿನಲ್ಲಿ ಒಡ್ಡಿದ ಬೆದರಿಕೆ ಎಷ್ಟು ಅಪಾಯಕಾರಿ ಎಂಬುದು ಅರ್ಥವಾಗುತ್ತದೆ. ಹರಿಹರದಲ್ಲಿ ಮಂಗಳವಾರ ನಡೆದ ಹರ ಜಾತ್ರೆ ಸಂದರ್ಭದಲ್ಲಿ ವಚನಾನಂದ ಸ್ವಾಮಿಯವರು ಯಡಿಯೂರಪ್ಪ ಅವರನ್ನು ಉದ್ದೇಶಿಸಿ, ‘ನಮ್ಮ ಸಮಾಜದ 13 ಶಾಸಕರಿದ್ದಾರೆ. ಅವರ ಪೈಕಿ ಕನಿಷ್ಠ ಮೂವರನ್ನಾದರೂ ಸಚಿವರನ್ನಾಗಿ ಮಾಡಬೇಕು. ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮಾಜ ನಿಮ್ಮನ್ನು (ಯಡಿಯೂರಪ್ಪ ಅವರನ್ನು) ಕೈಬಿಡಲಿದೆ’ ಎಂದು ಬೆದರಿಕೆ ಹಾಕಿದ್ದರು. ಈ ಮಾತಿಗೆ ಅವರು ನಂತರ ಕ್ಷಮೆ ಕೇಳಿದ್ದಾರೆ ಎಂಬ ವರದಿಗಳು ಇವೆ. ಆದರೂ, ಸ್ವಾಮೀಜಿ ಆಡಿದ ಮಾತು ವಿವೇಕಯುತವಾದುದಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ. ‘ನಮ್ಮ ಸಮಾಜದಿಂದಾಗಿಯೇ ತಾವು (ಯಡಿಯೂರಪ್ಪ) ಮುಖ್ಯಮಂತ್ರಿ ಆಗಿದ್ದೀರಿ’ ಎಂಬ ಮಾತನ್ನೂ ಸ್ವಾಮೀಜಿ ಆಡಿದ್ದಾರೆ ಎಂದು ವರದಿಯಾಗಿದೆ. ಈ ಮಾತು ರಾಜ್ಯದ ಮತದಾರರಿಗೆ ಮಾಡುವ ಅವಮಾನವಲ್ಲದೆ ಇನ್ನೇನೂ ಅಲ್ಲ.

ರಾಜ್ಯದ ಜಾತಿ ಸಮೀಕರಣವನ್ನು ಗಮನಿಸಿದರೆ, ಯಾವುದೇ ಒಂದು ಜಾತಿಯ ಬೆಂಬಲದಿಂದ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಮಠಾಧೀಶರೊಬ್ಬರು ಮುಖ್ಯಮಂತ್ರಿಯೊಬ್ಬರಿಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಅವರೂ ಈಚೆಗೆ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದರು. ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಇರಬೇಕಾ ಅಥವಾ ಮನೆಯಲ್ಲಿ ಇರಬೇಕಾ ಎನ್ನುವುದನ್ನು ನಾವು ನಿರ್ಧರಿಸುತ್ತೇವೆ’ ಎಂದು ಹೇಳಿದ್ದರು. ವಾಲ್ಮೀಕಿ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದೂ ಅವರು ಒತ್ತಡ ಹೇರಿದ್ದರು. ಸಮಾಜವನ್ನು ಆಧ್ಯಾತ್ಮಿಕವಾಗಿ ಮೇಲೆತ್ತುವ, ಅರಿವು ಮೂಡಿಸುವ ಕೆಲಸವನ್ನು ‘ಜಗದ್ಗುರು’ಗಳು ಮಾಡಬೇಕು. ಆ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿಂದಲೇ ಮಠಾಧೀಶರ ಬಗ್ಗೆ ಭಕ್ತರು ಶ್ರದ್ಧೆ ಹೊಂದಿರುತ್ತಾರೆ. ಆದರೆ, ಹೀಗೆ ಬಿಡುಬೀಸಾಗಿ ರಾಜಕೀಯ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ.

ಕಾವಿ ಧರಿಸುವ ಮಠಾಧೀಶರು ಈ ಬಗೆಯ ಪ್ರವೃತ್ತಿಯನ್ನು ಮುಂದುವರಿಸುವ ಬದಲು ನೇರವಾಗಿ ರಾಜಕೀಯ ರಂಗಕ್ಕೇ ಧುಮುಕುವುದು ಒಳಿತು. ಯಡಿಯೂರಪ್ಪ ಅವರು ಹರಿಹರದಲ್ಲಿ ತಕ್ಷಣವೇ ಪ್ರತಿಕ್ರಿಯೆ ನೀಡಿ, ‘ಸಮಾಜದ ಒಳಿತಿನ ದೃಷ್ಟಿಯಿಂದ ಸ್ವಾಮೀಜಿಗಳು ಸಲಹೆ ನೀಡಬಹುದು. ಆದರೆ ಬೆದರಿಕೆ ಹಾಕಬಾರದು’ ಎಂದು ಹೇಳಿದ್ದಾರೆ. ಅಷ್ಟಾದರೂ ಧೈರ್ಯ ತೋರಿದ್ದಾರೆ ಎನ್ನುವುದು ಸಮಾಧಾನದ ವಿಷಯ! ಹೀಗೆ ಬೇರೆ ಬೇರೆ ಸಮುದಾಯದ ಮಠಾಧೀಶರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದರೆ, ಮುಖ್ಯಮಂತ್ರಿಯಾದವರಿಗೆ ಮುಕ್ತವಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿಗೆ ಒಂದು ರೀತಿಯಲ್ಲಿ ಅವರೂ ಕಾರಣ. ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಠಾಧೀಶರನ್ನು ಓಲೈಸುವ ಕಾರ್ಯ ಮಾಡಿದ್ದರು. ವಿವಿಧ ಮಠಗಳಿಗೆ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಅನುದಾನವನ್ನು ಹಂಚಿದ್ದರು. ಅದರಿಂದಾಗಿ ಒಂದಿಷ್ಟು ರಾಜಕೀಯ ಲಾಭ ಕೂಡ ಯಡಿಯೂರಪ್ಪ ಅವರಿಗೆ ಸಿಕ್ಕಿರಬಹುದು. ಆನಂತರ ಬಂದ ಮುಖ್ಯಮಂತ್ರಿಗಳೂ ಮಠಗಳಿಗೆ ಅನುದಾನ ಹಂಚುವ ಕೆಲಸ ಮುಂದುವರಿಸಿದರು. ಓಲೈಕೆ ರಾಜಕಾರಣವು ಇಂದು ಯಡಿಯೂರಪ್ಪ ಅವರಿಗೆ ಮಗ್ಗುಲ ಮುಳ್ಳು ಆದಂತಿದೆ. ಇದನ್ನು, ಒಬ್ಬ ರಾಜಕಾರಣಿಗೆ ಕಾಲ ಕಲಿಸುವ ಪಾಠ ಎಂದೂ ಗ್ರಹಿಸಬಹುದು. ಮಠಾಧೀಶರನ್ನು ಓಲೈಸುವ ಚಾಳಿಯನ್ನು ರಾಜಕಾರಣಿಗಳು ಬಿಡಬೇಕು. ಸರ್ವಸಂಗ ಪರಿತ್ಯಾಗಿಗಳಾದ ಮಠಾಧೀಶರಿಂದ ತಕ್ಷಣದ ರಾಜಕೀಯ ಲಾಭ ಬಯಸುವ ಪ್ರವೃತ್ತಿಗೆ ಕೊನೆ ಹಾಡಬೇಕು. ಮಠಾಧೀಶರಿಂದ ರಾಜಕೀಯ ಲಾಭ ಪಡೆದರೆ, ಅವರು ಅದಕ್ಕೆ ಪ್ರತಿಫಲವನ್ನು ಅಪೇಕ್ಷಿಸಬಹುದು. ತಮ್ಮ ಸಮುದಾಯದ ಇಷ್ಟು ಮಂದಿ ಶಾಸಕರನ್ನು ಮತ್ತು ಇಂಥವರನ್ನೇ ಮಂತ್ರಿ ಮಾಡಿ ಎಂಬಂತಹ ಬೇಡಿಕೆಯು ಇದನ್ನೇ ಧ್ವನಿಸುತ್ತದೆ. ಧರ್ಮ ಮತ್ತು ರಾಜಕೀಯವನ್ನು ಪರಸ್ಪರ ಬೆರೆಯಲು ಬಿಡಬಾರದು ಎನ್ನುವ ಪ್ರಜಾತಾಂತ್ರಿಕ ತಾತ್ವಿಕತೆಯೇ ಈ ಸಮಸ್ಯೆಗೆ ಪರಿಹಾರ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT