ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚುನಾವಣೆ ಸಮಯದಲ್ಲಿ ಬಾಯಿಚಪಲ; ಕೂಗುಮಾರಿಗಳ ಬಗ್ಗೆ ಇರಲಿ ಎಚ್ಚರ

Published 16 ಜನವರಿ 2024, 23:02 IST
Last Updated 16 ಜನವರಿ 2024, 23:02 IST
ಅಕ್ಷರ ಗಾತ್ರ

ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಕೆಡವಿದಂತೆ ರಾಜ್ಯದ ಕೆಲವು ಕಡೆಗಳಲ್ಲಿನ ಮಸೀದಿಗಳನ್ನು ನೆಲಸಮ ಮಾಡಬೇಕು ಎಂದು ಹೇಳಿರುವ ಸಂಸದ ಅನಂತಕುಮಾರ ಹೆಗಡೆ ಅವರ ಮಾತು
ಕಿಡಿಗೇಡಿತನದ್ದು ಹಾಗೂ ಕೋಮುದ್ವೇಷಕ್ಕೆ ಕುಮ್ಮಕ್ಕು ಕೊಡುವಂತಹದ್ದು. ಬಿಜೆಪಿ ಕಾರ್ಯಕರ್ತ
ರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಮಸೀದಿಗಳನ್ನು ಕೆಡವಿಹಾಕುವ ಮೂಲಕ ಹಿಂದೂಗಳಿಗೆ ಆಗಿರುವ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ದೇಶದ ಸಂವಿಧಾನದ ಬಗ್ಗೆ ಗೌರವವಿರುವ ಯಾವುದೇ ವ್ಯಕ್ತಿ ಇಂಥ ಮಾತುಗಳನ್ನು ಆಡಬಹುದೆಂದು ಕಲ್ಪಿಸಿಕೊಳ್ಳುವುದೂ ಕಷ್ಟ. ಕೋಮು ಸಾಮರಸ್ಯವನ್ನು ಕಾಪಾಡುವ ದಿಸೆಯಲ್ಲಿ ಕೆಲಸ ಮಾಡಬೇಕಾದ ಪ್ರಜಾಪ್ರತಿನಿಧಿ, ಸಮಾಜದಲ್ಲಿ ಒಡಕು ಉಂಟುಮಾಡುವ ರೀತಿ ಮಾತನಾಡಿರುವುದು ದುರದೃಷ್ಟಕರ. ಮಸೀದಿಗಳನ್ನು ಒಡೆದುಹಾಕುವವರೆಗೂ ಸುಮ್ಮನೆ ಕೂರಬಾರದು ಎಂದು ಕರೆ ಕೊಟ್ಟಿರುವ ಸಂಸದರು, ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿನ ಮಸೀದಿಗಳು ಒಂದು ಕಾಲದಲ್ಲಿ ಹಿಂದೂ ದೇವಾಲಯಗಳಾಗಿದ್ದವು ಎಂದು ಹೇಳಿದ್ದಾರೆ. ಈ ಹೇಳಿಕೆ ಹೊಸ ವಿವಾದಗಳನ್ನು ಸೃಷ್ಟಿಮಾಡುವ ಕಿಡಿಗೇಡಿತನ ಮಾತ್ರವಲ್ಲದೆ, ಜನಸಾಮಾನ್ಯರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಚೋದನೆ ನೀಡುವಂತಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವಂತೆ ಮಾತನಾಡುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆಯೂ ಸಂಸದರು ಅಸಭ್ಯವಾಗಿ ಮಾತನಾಡಿದ್ದಾರೆ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಮುರುಕುರಾಮಯ್ಯನಂಥವರು
ಒಡೆಯುತ್ತಿದ್ದಾರೆ ಎಂದು ನಿಂದಿಸಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ಕುರಿತು ಪ್ರಜಾಪ್ರತಿನಿಧಿಯೊಬ್ಬರು ಬೈಗುಳದ ಭಾಷೆಯಲ್ಲಿ ಮಾತನಾಡುವುದು ಅವರು ಪ್ರತಿನಿಧಿಸುವ ಸ್ಥಾನಕ್ಕೆ ಮಾಡುವ ಅವಮಾನ ಹಾಗೂ ಮತದಾರರಿಗೆ ತೋರುವ ಅಗೌರವ. ಯಾವುದೇ ಪಕ್ಷದ ಜನಪ್ರತಿನಿಧಿ ಹೀಗೆ ವರ್ತಿಸಿದರೂ ಅದು ಖಂಡನೀಯ.

ಹಿಂದುತ್ವದ ಹೆಸರಿನಲ್ಲಿ ಪ‍್ರಚೋದನಕಾರಿ ಮಾತುಗಳನ್ನಾಡುವುದರಲ್ಲಿ ಕುಖ್ಯಾತಿ ಪಡೆದಿರುವ
ರಾಜಕೀಯ ಮುಖಂಡರಲ್ಲಿ ಅನಂತಕುಮಾರ ಹೆಗಡೆ ಅವರೂ ಒಬ್ಬರು. ನಾಲ್ಕೂವರೆ ವರ್ಷಗಳಿಂದ ನೇಪಥ್ಯದಲ್ಲಿ ಇದ್ದಂತಿದ್ದ ಅವರು ಇದ್ದಕ್ಕಿದ್ದಂತೆ ಪ್ರಚೋದನಕಾರಿ ಮಾತುಗಳ ಮೂಲಕ ಸುದ್ದಿಗೆ ಬರಲು ಹವಣಿಸುತ್ತಿದ್ದಾರೆ; ಮತದಾರರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದವರು ಒಮ್ಮಿಂದೊಮ್ಮೆಗೆ ಕಾರ್ಯಕರ್ತರನ್ನು ನೆನಪಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಸಂಸದರಿಗೆ ತಮ್ಮ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರ ನೆನಪಾದಂತಿದೆ. ಚುನಾವಣೆ ಸಂದರ್ಭದಲ್ಲಿ ಪ್ರಜಾಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ನಾಗರಿಕರ ನೆನಪಾಗುವುದು ಸಹಜ. ಆದರೆ, ಜನರಿಗೆ ತಮ್ಮ ನೆನಪು ಮರುಕಳಿಸುವಂತೆ ಮಾಡಲು ಅನಂತಕುಮಾರ ಹೆಗಡೆ ಆರಿಸಿಕೊಂಡಿರುವ ದಾರಿ ಪ್ರಜಾಸತ್ತಾತ್ಮಕವಾದುದಲ್ಲ. ತನ್ನ ರಾಜಕೀಯ ಅಸ್ತಿತ್ವವನ್ನು ಸಮಾಜಕ್ಕೆ ನೆನಪಿಸಲು ಜನಪರ ಕೆಲಸಗಳು ಇಲ್ಲದೆ ಹೋದಾಗ ರಾಜಕಾರಣಿಯೊಬ್ಬ ಅಡ್ಡದಾರಿ ಹಿಡಿಯಲು ಪ್ರಯತ್ನಿಸುವಂತೆ, ಚುನಾವಣೆ ಸಂದರ್ಭದಲ್ಲಿ ಕೋಮು ರಾಜಕಾರಣದ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿರುವಂತಿದೆ. ಹಿಂದುತ್ವದ ಹೆಸರಿನಲ್ಲಿ ಎಷ್ಟು ಬೇಕಾದರೂ ಬಾಯಿ ಹರಿಯಬಿಡಬಹುದೆಂದು ಭಾವಿಸಿರುವ ಕೆಲವು ರಾಜಕಾರಣಿಗಳ ಸಾಲಿಗೆ ಅವರು ಸೇರಿದ್ದಾರೆ.
ದುರದೃಷ್ಟವಶಾತ್‌, ಅಂಥ ರಾಜಕಾರಣಿಗಳ ನಾಲಿಗೆಗೆ ಲಗಾಮು ಹಾಕುವ ಕೆಲಸವನ್ನು ಅವರು ಪ್ರತಿನಿಧಿಸುವ ಪಕ್ಷ ಮಾಡುತ್ತಿಲ್ಲ. ಪ್ರಚೋದನಕಾರಿಯಾಗಿ ಮಾತನಾಡುವವರಿಗೆ ಬುದ್ಧಿ ಹೇಳಬೇಕಾದ ನಾಯಕರು, ಕೂಗುಮಾರಿಗಳನ್ನು ಅವರ ಪಾಡಿಗೆ ಕೂಗಲು ಬಿಟ್ಟು, ಸಂಸ್ಕೃತಿ–ಪರಂಪರೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ಅನಂತಕುಮಾರ ಹೆಗಡೆ ಅವರ ಮಾತುಗಳಿಗೆ ಪ್ರತಿಕ್ರಿಯೆ ಎನ್ನುವಂತೆ ಕಾಂಗ್ರೆಸ್‌ ನಾಯಕರು ಕೂಡ ಬೀದಿಜಗಳದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಕ್ಷುಲ್ಲಕ ಪೈಪೋಟಿಯ ಪ್ರದರ್ಶನಗಳಂತೆ ಕಾಣಿಸುವ ಇಂಥ ರಾಜಕೀಯ ಪ್ರಹಸನಗಳು ನಾಡಿನ ಘನತೆ ಹಾಗೂ ಬಹುತ್ವ ಪರಂಪರೆಯ ಹಿರಿಮೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸುವಂತಿವೆ. ಜವಾಬ್ದಾರಿಯುತ
ಸ್ಥಾನದಲ್ಲಿ ಇರುವವರು ಆಡುವ ಬೇಜವಾಬ್ದಾರಿಯ ಮಾತುಗಳು ಸಮಾಜದಲ್ಲಿ ಆತಂಕವನ್ನು ಹುಟ್ಟು
ಹಾಕುತ್ತವೆ. ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತೆ ಮಾತನಾಡುವ ವ್ಯಕ್ತಿ ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂಜರಿಯಬಾರದು. ಕೋಮು ರಾಜಕಾರಣದ ಷಡ್ಯಂತ್ರಗಳನ್ನು ಅರಿಯುವ ವಿವೇಚನಾಶಕ್ತಿಯನ್ನು ಪ್ರಕಟಪಡಿಸುವ ಮೂಲಕ, ಕೋಮು ರಾಜಕಾರಣದ ವಿರುದ್ಧದ ಪ್ರತಿರೋಧವನ್ನು ವ್ಯಕ್ತಪಡಿಸುವ ಇಚ್ಛಾಶಕ್ತಿಯನ್ನು ಜನಸಾಮಾನ್ಯರೂ ತೋರಿಸಬೇಕಾಗಿದೆ. ಜನಪರ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡವರಿಗೆ ಕೂಗುಮಾರಿಗಳಂತೆ ವರ್ತಿಸುವ ಅಗತ್ಯವಿರುವುದಿಲ್ಲ, ನಾಲಿಗೆ ಹರಿಯಬಿಡುವುದಕ್ಕೆ ವ್ಯವಧಾನವೂ ಇರುವುದಿಲ್ಲ ಎನ್ನುವುದನ್ನು ಮತದಾರರು ಅರಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT