ಮಂಗಳವಾರ, ಅಕ್ಟೋಬರ್ 4, 2022
26 °C

ಸಂಪಾದಕೀಯ: ಜಾಮೀನು ದೊರೆತರೂ ಕಪ್ಪನ್‌ಗೆ ಇಲ್ಲ ಬಿಡುಗಡೆಯ ಭಾಗ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿರುವುದು ‘ಜಾಮೀನು ಕೊಡಬೇಕಿರುವುದು ಸಹಜ’ ಎಂಬ ಸ್ತುತ್ಯರ್ಹ ತತ್ವವನ್ನು ಪುನರುಚ್ಚರಿಸಿದಂತೆ ಆಗಿದೆ. ಅಷ್ಟೇ ಅಲ್ಲ, ಪೊಲೀಸರನ್ನು, ತನಿಖಾ ಸಂಸ್ಥೆಗಳನ್ನು ಮತ್ತು ನ್ಯಾಯದಾನದ ಪ್ರಕ್ರಿಯೆಯನ್ನೇ ವ್ಯಕ್ತಿಯನ್ನು ಶಿಕ್ಷಿಸಲು ಬಳಸಿಕೊಳ್ಳುವ ಹಟಕ್ಕೆ ಬಿದ್ದಿರುವ ಕಾರ್ಯಾಂಗ ವ್ಯವಸ್ಥೆಯ ಅಡಿಯಲ್ಲಿ ಜಾಮೀನಿಗೆ ಸಂಬಂಧಿಸಿದ ಈ ತತ್ವವು ಕ್ರಿಯೆಯಾಗಿ ಪರಿವರ್ತನೆ ಕಾಣುವಲ್ಲಿ ಎಷ್ಟು ಕಷ್ಟಗಳು ಇವೆ ಎಂಬುದನ್ನೂ ಈ ಪ್ರಕರಣವು ತೋರಿಸಿಕೊಟ್ಟಿದೆ. ಕಪ್ಪನ್ ಅವರು 700ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ತಿರಸ್ಕರಿಸಿದವು. ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಆದರೆ ಈ ಷರತ್ತುಗಳು ಕಠಿಣ ಅಲ್ಲ. ಅವು ಒಬ್ಬ ಪ್ರಜೆಯಾಗಿ ಕಪ್ಪನ್ ಹೊಂದಿರುವ ಹಕ್ಕುಗಳನ್ನು ಗೌರವಿಸುವಂತೆಯೇ ಇವೆ. ಕಪ್ಪನ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ಅವು ಗೌರವಿಸುತ್ತವೆ. ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ನಂತರ ನಡೆದ ಆಕೆಯ ಹತ್ಯೆಯ ಬಗ್ಗೆ ವರದಿ ಮಾಡಲು ಕಪ್ಪನ್ ಅವರು ಉತ್ತರಪ್ರದೇಶದ ಹಾಥರಸ್‌ಗೆ
ತೆರಳುತ್ತಿದ್ದಾಗ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ನಂಬಲಿಕ್ಕೇ ಆಗದಂತಹ ಆರೋಪಗಳನ್ನು ಹೊರಿಸಲಾಯಿತು. ಕರಾಳ ಕಾನೂನು ‘ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ’ಯ (ಯುಎಪಿಎ) ಅಡಿಯಲ್ಲಿಯೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇದರಿಂದಾಗಿ ಕಪ್ಪನ್ ಅವರಿಗೆ ಜಾಮೀನು ಪಡೆಯುವುದು ಬಹುತೇಕ ಸಾಧ್ಯವೇ ಇಲ್ಲದಂತಾಗಿತ್ತು. ಅಶಾಂತಿ ಸೃಷ್ಟಿಸಲು ಮತ್ತು ಭಯೋತ್ಪಾದನೆಗೆ ಇವರು ಹಣ ಸಂಗ್ರಹಿಸಿದ್ದಾರೆ, ಪಿತೂರಿ ನಡೆಸುತ್ತಿದ್ದಾರೆ
ಎಂಬ ಆರೋಪಗಳನ್ನು ಕೂಡ ಹೊರಿಸಲಾಯಿತು.

ಯುಎಪಿಎ ಕಾನೂನಿನ ಕಠಿಣ ನಿಯಮಗಳು ಜಾಮೀನು ಕೊಡುವುದಕ್ಕೆ ವಿರುದ್ಧವಾಗಿವೆ. ಜಾಮೀನಿನ ವಿಚಾರದಲ್ಲಿ ಸಹಜ ಕಾನೂನು ಪ್ರಕ್ರಿಯೆಯನ್ನು ಇವು ತಲೆಕೆಳಗು ಮಾಡುವಂಥವು. ಆದರೆ, ಸುಪ್ರೀಂ ಕೋರ್ಟ್‌ಗೆ ಈ ಕಾನೂನಿನ ಕಠಿಣ ನಿಯಮಗಳ ಅಡಿಯಲ್ಲಿಯೇ ತೀರ್ಮಾನ ತೆಗೆದುಕೊಳ್ಳಬೇಕೆಂಬ ನಿಬಂಧನೆಯೇನೂ ಇರಲಿಲ್ಲ. ಸುಪ್ರೀಂ ಕೋರ್ಟ್ ಕೇಳಿದ ಕೆಲವು ಪ್ರಶ್ನೆಗಳು, ಕಪ್ಪನ್ ಅವರ ಬಂಧನದ ಹಿಂದೆ ಚಿತಾವಣೆ ಇತ್ತು ಎಂಬುದನ್ನು ಬಹಿರಂಗಪಡಿಸುವಂತಿದ್ದವು. ಸಂತ್ರಸ್ತೆಯೊಬ್ಬಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುವುದನ್ನು ಅಪರಾಧ ಎಂದು ಕರೆಯಬಹುದೇ ಎಂದು ಕೋರ್ಟ್ ಪ್ರಶ್ನಿಸಿತು. ಅಮೆರಿಕದಲ್ಲಿ ನಡೆದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಕೆಲವು ಕರಪತ್ರಗಳು ಕಪ್ಪನ್ ಅವರ ವಾಹನದಲ್ಲಿ ಇದ್ದವು. ಈ ಕರಪತ್ರಗಳನ್ನು ಬಳಸಿ ಉತ್ತರಪ್ರದೇಶದ ಒಂದು ಹಳ್ಳಿಯಲ್ಲಿ ಅಶಾಂತಿ ಸೃಷ್ಟಿಸಲು ಕಪ್ಪನ್ ಯೋಜಿಸಿದ್ದರೇ ಎಂದೂ ಕೋರ್ಟ್ ಕೇಳಿತು. ಪ್ರತಿಭಟನೆಗಳ ಮೌಲ್ಯ ಏನು ಎಂಬುದನ್ನು ಸರ್ಕಾರ ಗುರುತಿಸಬೇಕಿತ್ತು ಎಂದು ಕೂಡ ಕೋರ್ಟ್ ಹೇಳಿತು. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರದಲ್ಲಿನ ಪ್ರತಿಭಟನೆಗಳ ಕಾರಣದಿಂದಾಗಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ಬಂತು ಎಂಬುದನ್ನು ಕೋರ್ಟ್‌ ನೆನಪಿಸಿಕೊಟ್ಟಿತು.

ಈ ಹಂತದಲ್ಲಿ ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಹಾಗೂ ಪ್ರಾಸಿಕ್ಯೂಷನ್‌ ಕಲೆಹಾಕಿರುವ ದಾಖಲೆಗಳ ಬಗ್ಗೆ ತಾನು ಅಭಿಪ್ರಾಯ ವ್ಯಕ್ತಪಡಿಸಲಾರೆ ಎಂದು ಕೋರ್ಟ್‌ ಹೇಳಿದೆ. ಆದರೂ, ಇತರ ವಿಚಾರಗಳ ಕುರಿತಾಗಿ ಕೋರ್ಟ್ ಹೇಳಿರುವ ಮಾತುಗಳು ಹಾಗೂ ಅದು ಕೇಳಿರುವ ಪ್ರಶ್ನೆಗಳನ್ನು ಗಮನಿಸಿದರೆ, ಕಪ್ಪನ್ ವಿರುದ್ಧದ ಪ್ರಕರಣಗಳು ಗಂಭೀರವಾದುವು ಎಂಬುದು ಕೋರ್ಟ್‌ಗೆ ತೃಪ್ತಿಕರವಾಗಿ ಅನ್ನಿಸುತ್ತಿಲ್ಲ ಎಂದು ಭಾಸವಾಗುತ್ತಿದೆ. ಆದರೆ, ಕೆಳ ಹಂತದ ನ್ಯಾಯಾಲಯಗಳು ಈ ಪ್ರಕರಣದಲ್ಲಿ ಹುರುಳಿದೆ ಎಂದು ಭಾವಿಸಿದ್ದು ಹಾಗೂ ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ್ದು ಕಳವಳಕಾರಿ. ಕಪ್ಪನ್ ಅವರಿಗೆ ತಮ್ಮ ಸ್ವಾತಂತ್ರ್ಯವನ್ನು ಮತ್ತೆ ಪಡೆಯಲು ಎರಡು ವರ್ಷಗಳು ಬೇಕಾದವು. ಜಾಮೀನು ಸಹಜ ಹಕ್ಕು. ಅದನ್ನು ಪಡೆಯಲು ಪ್ರಜೆಗಳು ಜೈಲಿನಲ್ಲಿ 700 ದಿನ ಕಾಯಬೇಕಾದ ಸ್ಥಿತಿ ಇರಬಾರದು. ಜಾಮೀನು ಪಡೆಯಲು ಕೂಡ ಸುಪ್ರೀಂ ಕೋರ್ಟ್‌ ಬಾಗಿಲು ಬಡಿಯಬೇಕಾದ ಪರಿಸ್ಥಿತಿ ಬರಬಾರದು. ಜಾಮೀನು ಸಿಕ್ಕ ನಂತರವೂ ಕಪ್ಪನ್ ಅವರು ಜೈಲಿನಿಂದ ಬಿಡುಗಡೆ ಆಗಿಲ್ಲ. ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಆದರೆ, ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ಮಂದಿ ಇದ್ದಾರೆ ಎಂಬುದನ್ನು ಕೂಡ ಈ ಪ್ರಕರಣವು ನೆನಪಿಸಿಕೊಡುವಂತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು