ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅಕ್ರಮ ಗಣಿಗಾರಿಕೆಯಿಂದ ವರಮಾನ; ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಅಕ್ರಮ ಗಣಿಗಾರಿಕೆಯನ್ನು ರಾಜಕೀಯ ಪಕ್ಷಗಳ ತಿಜೋರಿ ತುಂಬಿಸುವುದಕ್ಕೆ ಪೂರಕವಾಗಿ ಬಳಸಿಕೊಳ್ಳುವ ಧೋರಣೆ ಕೈಬಿಡಬೇಕು
Last Updated 25 ಫೆಬ್ರುವರಿ 2023, 1:40 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಉಪ ಖನಿಜಗಳ ಅಕ್ರಮ ಗಣಿಗಾರಿಕೆ ಅಬಾಧಿತವಾಗಿ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹ 18,000 ಕೋಟಿಯಿಂದ ₹ 20,000 ಕೋಟಿಯಷ್ಟು ವರಮಾನ ನಷ್ಟವಾಗುತ್ತಿದೆ ಎಂಬುದನ್ನು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಪತ್ತೆಮಾಡಿದೆ.

ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಕಟ್ಟಡ ಕಲ್ಲು, ಗ್ರಾನೈಟ್‌, ಸಿಲಿಕಾ, ಮರಳು, ಸುಣ್ಣದ ಕಲ್ಲು ಸೇರಿದಂತೆ ಲಭ್ಯವಿರುವ ಉಪ ಖನಿಜಗಳ ಗಣಿ ಪ್ರದೇಶದ ಸಮಗ್ರ ಪಟ್ಟಿಯೇ ರಾಜ್ಯ ಸರ್ಕಾರದ ಬಳಿ ಇಲ್ಲ ಎಂಬುದನ್ನು ಪಿಎಸಿ ವರದಿ ಒತ್ತಿಹೇಳಿದೆ. ರಾಜ್ಯದಲ್ಲಿನ ಉಪ ಖನಿಜಗಳ ಗಣಿಗಾರಿಕೆಯಲ್ಲಿ ವರಮಾನ ಸೋರಿಕೆ ಆಗುತ್ತಿರುವ ಕುರಿತು ಮಹಾಲೇಖಪಾಲರು (ಸಿಎಜಿ) ಈ ಹಿಂದೆ ಲೆಕ್ಕಪರಿಶೋಧನೆ ನಡೆಸಿದ್ದರು.

ಆಗ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕಟ್ಟಡ ಕಲ್ಲು ಮತ್ತು ಗ್ರಾನೈಟ್‌ ಗಣಿಗಾರಿಕೆ ಕುರಿತು ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದ್ದರು. ಉಪಗ್ರಹ ಚಿತ್ರಗಳು ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಆಧಾರದಲ್ಲಿ ಅಲ್ಲಿನ 292 ಗಣಿ ಗುತ್ತಿಗೆಗಳ ಕುರಿತು ಮಹಾಲೇಖಪಾಲರು ತನಿಖೆ ನಡೆಸಿದ್ದರು. ಗುತ್ತಿಗೆ ಪ್ರದೇಶದ ಹೊರಗೆ ನಡೆಯುವ ಅಕ್ರಮ ಗಣಿಗಾರಿಕೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹ 2,324 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ವರದಿ ನೀಡಿದ್ದರು. ಆ ಕುರಿತು ಪರಿಶೀಲನೆ ನಡೆಸಿರುವ ಪಿಎಸಿ, ಸಿಎಜಿ ವರದಿಯ ಆಧಾರದಲ್ಲಿ ಇಡೀ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಮಾಣವನ್ನು ಅಂದಾಜು ಮಾಡಿ ನಷ್ಟದ ಲೆಕ್ಕಾಚಾರ ಹಾಕಿದೆ.

ಪ್ರಸ್ತುತ ರಾಜ್ಯ ಸರ್ಕಾರವು ಉಪ ಖನಿಜಗಳ ಗಣಿಗಾರಿಕೆಯಿಂದ ತೆರಿಗೆಯೇತರ ರಾಜಸ್ವದ ರೂಪದಲ್ಲಿ ವಾರ್ಷಿಕ ₹ 6,300 ಕೋಟಿ ವರಮಾನ ಪಡೆಯುತ್ತಿದೆ. ಉಪ ಖನಿಜಗಳ ಗುತ್ತಿಗೆ ಪ್ರದೇಶಗಳ ಗಡಿಯ ಹೊರಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಉಪಗ್ರಹ ಚಿತ್ರಗಳೂ ಸೇರಿದಂತೆ ತಂತ್ರಜ್ಞಾನದ ಆಧಾರದಲ್ಲಿ ನಿಖರವಾಗಿ ಅಂದಾಜು ಮಾಡಿ ರಾಜಧನ ಮತ್ತು ಇತರ ಶುಲ್ಕಗಳನ್ನು ಸಂಗ್ರಹಿಸಿದರೆ ಈ ಮೂಲದಿಂದ ಸಂಗ್ರಹವಾಗುವ ವರಮಾನವು ಮೂರು ಪಟ್ಟಿಗಿಂತಲೂ ಹೆಚ್ಚಾಗುತ್ತದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಹೇಳಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವು ಗಣಿಗಾರಿಕೆ ಪ್ರದೇಶವನ್ನು ಗುರುತಿಸಲು ಅತ್ಯಂತ ಹಳೆಯದಾದ ವಿಧಾನಗಳನ್ನು ಅನುಸರಿಸುತ್ತಿದೆ. ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಮಿತಿ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಶಿಫಾರಸು ಮಾಡಿದೆ.

ಅಕ್ರಮ ಗಣಿಗಾರಿಕೆ ಹಗರಣಗಳು ಕರ್ನಾಟಕಕ್ಕೆ ಹೊಸವೇನೂ ಅಲ್ಲ. ಆದರೆ, ಅಕ್ರಮ ಗಣಿಗಾರಿಕೆ ತಡೆಯುವ ದಿಸೆಯಲ್ಲಿ ರಾಜ್ಯ ಸರ್ಕಾರದ ಧೋರಣೆ ಕಿಂಚಿತ್ತೂ ಬದಲಾಗಿಲ್ಲ ಎಂಬುದಕ್ಕೆ ಉಪ ಖನಿಜಗಳ ಗಣಿಗಾರಿಕೆಯಲ್ಲಿ ವರಮಾನ ಸೋರಿಕೆ ಕುರಿತು ಪಿಎಸಿ ನೀಡಿರುವ ವರದಿಯೇ ಸಾಕ್ಷಿ. 2006ರಿಂದ 2010ರ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ, 2011ರಲ್ಲಿ 25,000ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ವರದಿಯ ಪರಿಣಾಮವಾಗಿ ಸಿಬಿಐ ತನಿಖೆ ನಡೆದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಸೇರಿದಂತೆ ಬಳ್ಳಾರಿಯ ಕೆಲವು ರಾಜಕೀಯ ಮುಖಂಡರು, ಉದ್ಯಮಿಗಳು ಜೈಲು ಸೇರಿದ್ದರು. ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಹಲವು ರಾಜಕಾರಣಿಗಳು ಮತ್ತು 600ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ವರದಿಯಲ್ಲಿ ಆರೋಪಗಳಿದ್ದವು.

2006–2010ರ ಅವಧಿಯಲ್ಲಿ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ₹ 16,000 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತರು ಅಂದಾಜು ಮಾಡಿದ್ದರು. ನಷ್ಟದ ಐದು ಪಟ್ಟು ದಂಡ ವಸೂಲಿಗೆ ಶಿಫಾರಸು ಮಾಡಿದ್ದರು. ಲೋಕಾಯುಕ್ತರ ವರದಿ ಪರಿಶೀಲನೆಗಾಗಿ ನೇಮಿಸಿದ್ದ ಸಂಪುಟ ಉಪ ಸಮಿತಿಯು ಅಕ್ರಮ ಗಣಿಗಾರಿಕೆಯಿಂದ ಆದ ನಷ್ಟದ ಪ್ರಮಾಣ ₹ 1.43 ಲಕ್ಷ ಕೋಟಿ ಎಂದು ಅಂದಾಜಿಸಿತ್ತು. ಸರ್ಕಾರವು ಅಕ್ರಮ ಚಟುವಟಿಕೆ ಮತ್ತು ಕಾನೂನು ಉಲ್ಲಂಘನೆ ತಡೆಯಲು ವಿಫಲವಾಗಿದ್ದ ಕಾರಣದಿಂದಲೇ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿತ್ತು ಎಂದು ಲೋಕಾಯುಕ್ತರು ವರದಿಯಲ್ಲಿ
ಉಲ್ಲೇಖಿಸಿದ್ದರು. ಉಪ ಖನಿಜಗಳ ಅಕ್ರಮ ಗಣಿಗಾರಿಕೆಯಿಂದ ದೊಡ್ಡ ಪ್ರಮಾಣದ ವರಮಾನ ಸೋರಿಕೆಗೂ ಇದೇ ಕಾರಣ. ಈ ಚಟುವಟಿಕೆಗಳಲ್ಲಿ ನಿರತರಾಗಿರುವವರಲ್ಲಿ ಹೆಚ್ಚಿನವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಥವಾ ಅವರ ಹಿಂಬಾಲಕರೇ ಆಗಿದ್ದಾರೆ.

ಈ ಕಾರಣದಿಂದಾಗಿಯೇ ಕ್ರಮಕ್ಕೆ ಹಿಂದೇಟು ಹಾಕುತ್ತಿರುವ ಸಾಧ್ಯತೆ ಇದೆ. ಉಪ ಖನಿಜಗಳ ಗುತ್ತಿಗೆ ಪ್ರದೇಶಗಳು ಕಬ್ಬಿಣದ ಅದಿರಿನ ಗಣಿಗಳಂತೆ ಹೆಚ್ಚು ವಿಸ್ತಾರವಾಗಿರುವುದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದಲ್ಲಿ ಲಭ್ಯವಿರುವ ಉಪ ಖನಿಜಗಳ ನಿಕ್ಷೇಪಗಳನ್ನು ನಿಖರವಾಗಿ ಗುರುತಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಬೇಕು. ಅಕ್ರಮ ಗಣಿಗಾರಿಕೆ ಮತ್ತು ಗುತ್ತಿಗೆ ಪ್ರದೇಶದ ಹೊರ ಭಾಗದಲ್ಲಿ ನಡೆಯುವ ಗಣಿಗಾರಿಕೆ ಪತ್ತೆಹಚ್ಚಲು ಜಿಲ್ಲಾ ಮಟ್ಟದಲ್ಲಿ ಪರಿಶೋಧನೆ ನಡೆಸಬೇಕು. ಅಕ್ರಮ ಗಣಿಗಾರಿಕೆಯನ್ನು ರಾಜಕೀಯ ಪಕ್ಷಗಳ ತಿಜೋರಿ ತುಂಬಿಸುವುದಕ್ಕೆ ಪೂರಕವಾಗಿ ಬಳಸಿಕೊಳ್ಳುವ ಧೋರಣೆ ಕೈಬಿಡಬೇಕು. ಅದನ್ನು ಮಟ್ಟಹಾಕಿ, ಗಣಿಗಾರಿಕೆಯನ್ನು ಸರ್ಕಾರದ ಬೊಕ್ಕಸ ಭರ್ತಿ ಮಾಡುವ ಆದಾಯದ ಮೂಲವನ್ನಾಗಿ ಪರಿವರ್ತಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT