ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | SSLC ಫಲಿತಾಂಶ ಕುಸಿತ; ಶಿಕ್ಷಣ ಕ್ಷೇತ್ರದ ಆತ್ಮಾವಲೋಕನ ಅಗತ್ಯ

Published 10 ಮೇ 2024, 23:59 IST
Last Updated 10 ಮೇ 2024, 23:59 IST
ಅಕ್ಷರ ಗಾತ್ರ

ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರ ಕೌಶಲ ಮತ್ತು ಬೋಧನೆಯ ಗುಣಮಟ್ಟ ಸುಧಾರಣೆಯ ಕಡೆ ಗಮನಹರಿಸಬೇಕಾದ ಜರೂರು ಇದೆ

ಬಾಲಕಿಯರೊಂದಿಗೆ ಗ್ರಾಮೀಣ ಮಕ್ಕಳ ಮೇಲುಗೈ ಹಾಗೂ ಶೇಕಡ 100ರಷ್ಟು ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೊದಲಿಗಳಾಗಿರುವ ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ ಅವರ ವಿಶಿಷ್ಟ ಸಾಧನೆಯಂತಹ ಸಮಾಧಾನಕರ ಸಂಗತಿಗಳ ನಡುವೆಯೂ 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ‍ಫಲಿತಾಂಶ ನಿರಾಶಾದಾಯಕವಾಗಿದೆ. 8.59 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ 73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ 83.89ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದರು. ಅದಕ್ಕೆ ಹೋಲಿಸಿದರೆ ಶೇ 10.49ರಷ್ಟು ಫಲಿತಾಂಶ ಕುಸಿತ ಕಂಡಿದೆ. ಮೌಲ್ಯಮಾಪನ ನಂತರದ ಫಲಿತಾಂಶದ ಪ್ರಮಾಣ ಶೇ 53ರಷ್ಟು ಇತ್ತು. ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ನಿಯಮವನ್ನು ಸಡಿಲಿಸಿ ಗರಿಷ್ಠ 20 ಕೃಪಾಂಕಗಳನ್ನು ನೀಡಿದ ನಂತರ ಫಲಿತಾಂಶದ ಪ್ರಮಾಣ ಶೇ 73.40ರಷ್ಟಾಗಿದೆ. ಕೃಪಾಂಕ ನಿಯಮ ಬದಲಾಗದೇ ಹೋಗಿದ್ದಲ್ಲಿ ಫಲಿತಾಂಶ ಕುಸಿತದ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30ರಷ್ಟಾಗುತ್ತಿತ್ತು. ಕೃಪಾಂಕಗಳ ಆಧಾರದಲ್ಲಿಯೇ 1.69 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಪ್ರಾಥಮಿಕ ಶಿಕ್ಷಣದ ಬುನಾದಿ ಭದ್ರಪಡಿಸಬೇಕಾದ ಅಗತ್ಯವನ್ನು ಹೇಳುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಮೂಲಕ ವೆಬ್‌ಕಾಸ್ಟಿಂಗ್ ಅಳವಡಿ ಸಿದ್ದುದನ್ನು ಫಲಿತಾಂಶ ಕುಸಿತಕ್ಕೆ ಕಾರಣವನ್ನಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿದೆ. ಪರೀಕ್ಷೆಯಲ್ಲಿ ಅಕ್ರಮಗಳು ನುಸುಳದಂತೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ಎಲ್ಲ ಪರೀಕ್ಷೆಗಳನ್ನು ಹೀಗೆ ಕಟ್ಟುನಿಟ್ಟಾಗಿ ನಡೆಸಬಹುದು ಎಂಬುದಕ್ಕೆ ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿದರ್ಶನವಾಗಿದೆ. ಆದರೆ, ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಿರುವುದರಿಂದ ಫಲಿತಾಂಶ ವ್ಯತ್ಯಯಗೊಂಡಿದೆ ಎನ್ನುವ ವಾದವನ್ನು ಒಪ್ಪುವುದಾದಲ್ಲಿ, ಹಿಂದಿನ ವರ್ಷಗಳ ಉತ್ತಮ ಫಲಿತಾಂಶ ಪ್ರಶ್ನಾರ್ಹ ಆಗುತ್ತದೆ ಹಾಗೂ ಶಿಕ್ಷಣ ವ್ಯವಸ್ಥೆಯ ಟೊಳ್ಳುತನ ವನ್ನು ಸೂಚಿಸುತ್ತದೆ. ಫಲಿತಾಂಶ ಪಟ್ಟಿಯಲ್ಲಿನ ಜಿಲ್ಲೆಗಳ ಸಾಧನೆಯ ಕ್ರಮಾಂಕದಲ್ಲಿ ಆಗಿರುವ ಬದಲಾವಣೆಯೂ ಈವರೆಗಿನ ಪರೀಕ್ಷಾ ಫಲಿತಾಂಶಗಳನ್ನು ಅನುಮಾನದಿಂದ ನೋಡಲು ಒತ್ತಾಯಿಸುವಂತಿದೆ.

ಕಳೆದ ವರ್ಷದ ಫಲಿತಾಂಶ ಪಟ್ಟಿಯಲ್ಲಿ 1 ಹಾಗೂ 2ನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆ ಈ ಬಾರಿ 21 ಹಾಗೂ 19ನೇ ಸ್ಥಾನಕ್ಕೆ ಕುಸಿದಿದ್ದರೆ, 14ನೇ ಸ್ಥಾನದಲ್ಲಿದ್ದ ಉಡುಪಿ ಮೊದಲ ಸ್ಥಾನಕ್ಕೆ ಜಿಗಿದಿದೆ. 17 ಹಾಗೂ 28ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಶೂನ್ಯ ಫಲಿತಾಂಶ ದಾಖಲಿಸಿರುವ 78 ಶಾಲೆಗಳಲ್ಲಿ 44 ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಸೇರಿವೆ. ಕಲಬುರಗಿ ಜಿಲ್ಲೆಯಲ್ಲಿಯೇ 18 ಶಾಲೆಗಳು ಸೊನ್ನೆ ಸುತ್ತಿವೆ. ಒಂದೇ ವರ್ಷದಲ್ಲಿ ಇಷ್ಟೊಂದು ಏರುಪೇರು ಉಂಟಾಗಿದ್ದೇಕೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಬೇಕಾಗಿದೆ.

ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳಲು ಮತ್ತೂ ಎರಡು ಪರೀಕ್ಷೆಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಮೊದಲ ಪರೀಕ್ಷೆಗೆ ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದವರು ಹಾಗೂ ಪರೀಕ್ಷೆ ಬರೆದೂ ಅನುತ್ತೀರ್ಣರಾದವರಿಗೆ ಈ ಎರಡು ಅವಕಾಶಗಳು ಜೀವದಾನದಂತೆಯೂ
ಪರಿಣಮಿಸಬಹುದು. ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಿದ್ದರಿಂದ ಫಲಿತಾಂಶ ಕುಸಿದಿದೆ ಎನ್ನುವ ಕಾರಣ ಮೇಲ್ನೋಟಕ್ಕೆ ಸರಿಯೆನ್ನಿಸಿದರೂ, ವಿದ್ಯಾರ್ಥಿಗಳ ಕಳಪೆ ಸಾಧನೆಗೆ ಬೇರೆ ಕಾರಣಗಳೂ ಇವೆ. ಕಳೆದ ಕೆಲವು ವರ್ಷಗಳಿಂದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರಿ ಶಾಲೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ್ದರ ಫಲವಾಗಿ ಪ್ರಸಕ್ತ ಫಲಿತಾಂಶವನ್ನು ಗಮನಿಸಬಹುದು. ಒಂದೆಡೆ, ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ವ್ಯವಸ್ಥೆಗಳ ಕೊರತೆ ಹೆಚ್ಚುತ್ತಲೇ ಇದ್ದರೆ, ಇನ್ನೊಂದೆಡೆ, ಶಿಕ್ಷಕರ ಮೇಲಿನ ಪಠ್ಯೇತರ ಹೊರೆಯೂ ಹೆಚ್ಚಾಗುತ್ತಿದೆ. ಶಿಕ್ಷಕರ ಸಂಪೂರ್ಣ ಸಾಮರ್ಥ್ಯವನ್ನು ಮಕ್ಕಳಿಗೆ ದೊರಕಿಸಿಕೊಡುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.

ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಮಕ್ಕಳ ನಡುವಿನ ಸಾಧನೆಯ ಅಂತರ ಹೆಚ್ಚುತ್ತಿರುವುದಕ್ಕೂ ಸವಲತ್ತುಗಳ ಕೊರತೆ ಹಾಗೂ ಶಿಕ್ಷಕರ ಕೊರತೆಯೇ ಪ್ರಮುಖ ಕಾರಣಗಳಾಗಿವ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದಿಸೆಯಲ್ಲಿ ಅಗತ್ಯ ಉಪಕ್ರಮ
ಗಳನ್ನು ಕೈಗೊಳ್ಳಬೇಕು. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರ ಕೌಶಲ ಮತ್ತು ಬೋಧನೆಯ ಗುಣಮಟ್ಟ ಸುಧಾರಣೆಯ ಕಡೆಗೆ ಗಂಭೀರವಾಗಿ ಗಮನಹರಿಸಬೇಕಾದ ಜರೂರು ಇದೆ. ಈ ದಿಸೆಯಲ್ಲಿ ಎಚ್ಚರಿಕೆಯ ಕರೆಗಂಟೆಯಾಗಿಯೂ ಈ ಬಾರಿಯ ಫಲಿತಾಂಶವನ್ನು ನೋಡಬೇಕಾಗಿದೆ. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಆತ್ಮಾವಲೋಕನಕ್ಕೆ ಕಾರಣವಾಗಬೇಕು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT