ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿದ್ದಾರೆ. ಇದು ರಾಜ್ಯದಲ್ಲಿ ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಒಂದೆಡೆ ರಾಜ್ಯಪಾಲ ಮತ್ತು ಬಿಜೆಪಿ ಇದ್ದರೆ, ಮತ್ತೊಂದೆಡೆ ಸರ್ಕಾರ ಮತ್ತು ಕಾಂಗ್ರೆಸ್ ಇವೆ. ರಾಜ್ಯ ಸಚಿವ ಸಂಪುಟವು ರಾಜ್ಯಪಾಲರ ನಿರ್ಧಾರವನ್ನು ಖಂಡಿಸಿದೆ. ಈ ನಿರ್ಧಾರವನ್ನು ರಾಜಕೀಯವಾಗಿ ಮತ್ತು ಕಾನೂನು ರೀತಿಯಲ್ಲಿ ಎದುರಿಸಲು ಮುಂದಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎದುರಿಸುತ್ತಿರುವ ಅತಿ ದೊಡ್ಡ ರಾಜಕೀಯ ಸವಾಲು ಇದಾಗಿದೆ. ರಾಜ್ಯಪಾಲರು ತಮ್ಮ ವಿರುದ್ಧ ತನಿಖೆಗೆ ನೀಡಿರುವ ಒಪ್ಪಿಗೆಯು ‘ಅಸಾಂವಿಧಾನಿಕ ಮತ್ತು ಕಾನೂನುಬಾಹಿರ’, ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು, ತಮ್ಮ ನೇತೃತ್ವದ ಸರ್ಕಾರವನ್ನು ಉರುಳಿಸುವುದಕ್ಕಾಗಿ ಮಾಡಿದ ಷಡ್ಯಂತ್ರ ಎಂದೂ ಅವರು ಆರೋಪಿಸಿದ್ದಾರೆ. ತಮ್ಮದು ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಎಂದು ಸಿದ್ದರಾಮಯ್ಯ ಹೇಳಿಕೊಂಡು ಬಂದಿದ್ದಾರೆ. ಒಂದು ವೇಳೆ, ಅವರ ವಿರುದ್ಧ ತನಿಖೆ ಆರಂಭವಾದರೆ, ವೈಯಕ್ತಿಕವಾಗಿ ಅವರ ಮೇಲೆ ಮತ್ತು ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ. ಆದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷವನ್ನು ಒಗ್ಗೂಡಿಸಲು ಇದು ನೆರವಾಗಬಹುದು. ಬಿಜೆಪಿ ರಾಜ್ಯ ಘಟಕದ ನಾಯಕತ್ವದ ಕುರಿತು ಪಕ್ಷದೊಳಗೆ ತೀವ್ರ ಅಸಮಾಧಾನ ಇದೆ. ಈಗಿನ ಸಂದರ್ಭವು ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ಬಿಜೆಪಿಗೂ ಸಹಕರಿಸಬಹುದು.
ತನಿಖೆಗೆ ಅನುಮತಿ ನೀಡಬಾರದು ಎಂದು ಸಚಿವ ಸಂಪುಟ ನೀಡಿದ ಸಲಹೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಅಗತ್ಯ ಇದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ, ರಾಜ್ಯಪಾಲರನ್ನು ಈವರೆಗೆ ದುರ್ಬಳಕೆ ಮಾಡಿಕೊಂಡಿರುವ ರೀತಿಯನ್ನು ಗಮನಿಸಿದರೆ, ಈ ಒಪ್ಪಿಗೆಯಲ್ಲಿ ರಾಜಕೀಯ ತಂತ್ರಗಾರಿಕೆಯೇ ಎದ್ದು ಕಾಣುತ್ತಿದೆ. ಇದು ಸರ್ಕಾರವನ್ನು ಉರುಳಿಸುವ ಕಾರ್ಯತಂತ್ರದ ಭಾಗ ಎಂಬ ಆರೋಪವನ್ನು ಕೂಡ ತಳ್ಳಿಹಾಕಲಾಗದು. ಬಿಜೆಪಿ ಈ ಹಿಂದೆ ನಡೆಸಿದಂತೆ ‘ಆಪರೇಷನ್ ಕಮಲ’ ನಡೆಸುವುದು ಹೆಚ್ಚು ದುಬಾರಿಯಾದ ಕಾರ್ಯಾಚರಣೆ. ಆದರೆ, ರಾಜ್ಯಪಾಲರನ್ನು ಬಳಸಿಕೊಂಡು ದಿಢೀರ್ ಕಾರ್ಯಾಚರಣೆ ನಡೆಸುವುದು ಅಗ್ಗದ ದಾರಿ. ಪಕ್ಷಾಂತರದಿಂದ ಸರ್ಕಾರವನ್ನು ಉರುಳಿಸಿದರೆ, ರಾಜಕೀಯವಾಗಿ ಸೋಲಾದರೂ ಅಧಿಕಾರ ಕಳೆದುಕೊಂಡ ಪಕ್ಷ ಅನುಕಂಪಕ್ಕೆ ಪಾತ್ರವಾಗುತ್ತದೆ. ಬಿಜೆಪಿ ಮುಖಂಡರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಕುರಿತ ತನಿಖೆಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರು ಇದೇ ಮಟ್ಟದ ಉತ್ಸಾಹ ತೋರುತ್ತಾರೆಯೇ ಎಂಬ ಪ್ರಶ್ನೆ ಈಗ ಇದೆ. ಒಂದು ವೇಳೆ ರಾಜ್ಯಪಾಲರು ಹಾಗೆ ಮಾಡದಿದ್ದರೆ ಅವರು ಪಕ್ಷಪಾತಿಯಾಗಿದ್ದಾರೆ ಎಂಬುದು ಬಹಿರಂಗವಾಗುತ್ತದೆ. ಅದೇನೇ ಇದ್ದರೂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆಯಲ್ಲಿ ಅದು ಯಾವ ಬದಲಾವಣೆಯನ್ನೂ ಉಂಟುಮಾಡದು.
ಸಿದ್ದರಾಮಯ್ಯ ಅವರ ವಾದವು ಬಹಳ ಸ್ಪಷ್ಟವಾಗಿ ಮನದಟ್ಟಾಗುವಂತೆ ಇಲ್ಲ. ಅವರ ಪತ್ನಿಗೆ ಮುಡಾ ನೀಡಿರುವ ಬದಲಿ ನಿವೇಶನಗಳ ಕುರಿತಾಗಿ ಇರುವ ಎಲ್ಲ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರವನ್ನು ಅವರು ಕೊಟ್ಟಿಲ್ಲ. ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಲು ಸರ್ಕಾರವು ಸಿದ್ಧವಿರಲಿಲ್ಲ. ಸರ್ಕಾರ ನೇಮಕ ಮಾಡಿರುವ ತನಿಖಾ ಆಯೋಗದಿಂದ ಯಾವ ಪ್ರಯೋಜನವೂ ಆಗದು. ಆದರೆ, ಈಗಿನ ಸಂಘರ್ಷದಲ್ಲಿ ಭ್ರಷ್ಟಾಚಾರ ಎಂಬುದು ಒಂದು ವಿಷಯವೇ ಆಗಿ ಉಳಿದಿಲ್ಲ. ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಗ್ರಹಿಕೆಯನ್ನು ಮೂಡಿಸಿ, ಸರ್ಕಾರದ ಮೇಲೆ ಯುದ್ಧ ಸಾರುವುದಷ್ಟೇ ಇಲ್ಲಿನ ಉದ್ದೇಶ. ರಾಜಕೀಯ ಕ್ಷೇತ್ರದಲ್ಲಿ ಇರುವ ಯಾರು ಕೂಡ ಅವರಿಗಿಂತ ಇವರು ಉತ್ತಮ ಎಂದು ಹೇಳುವಂತೇನೂ ಇಲ್ಲ. ಒಬ್ಬರ ಮೇಲೊಬ್ಬರು ಆರೋಪ–ಪ್ರತ್ಯಾರೋಪ ಮಾಡುತ್ತಿರುವ ಈ ಸಂದರ್ಭದಲ್ಲಿ ಗೆಲುವು ಯಾರಿಗೆ– ರಾಜಕೀಯಕ್ಕೆ, ನೈತಿಕತೆಗೆ, ಸಾರ್ವಜನಿಕ ಹಿತಾಸಕ್ತಿಗೆ ಅಥವಾ ಹೊಂದಾಣಿಕೆ ರಾಜಕಾರಣಕ್ಕೆ? ಸತ್ಯ ಏನು ಎಂಬುದನ್ನು ತಿಳಿಯುವ ಹಕ್ಕು ಜನರಿಗೆ ಇದೆ. ಆದರೆ ಸತ್ಯ ಎಂದಾದರೂ ಹೊರಗೆ ಬಂದೀತೇ? ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲದ ಸಂಸ್ಥೆಯೊಂದರಿಂದ ನಿಷ್ಪಕ್ಷಪಾತವಾದ ತನಿಖೆಯ ಅಗತ್ಯವಿದೆ; ಅದು ಸಾಧ್ಯವಾದರೆ ಸ್ವಾಗತಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.